ಜನ ಓಲೈಕೆಯ ನೀತಿ ಅಪಾಯಕಾರಿ : ಪೋಪ್

Update: 2017-01-22 18:04 GMT

ವ್ಯಾಟಿಕನ್,ಜ.22: ‘ಜನಮರುಳು’ ರಾಜಕೀಯವು, ಅಡಾಲ್ಫ್ ಹಿಟ್ಲರ್‌ನಂತಹ ‘ಉದ್ಧಾರಕರ’ ಆಯ್ಕೆಗೆ ಕಾರಣವಾಗುವುದೆಂದು ಕ್ರೈಸ್ತರ ಪರಮೋಚ್ಛ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಸ್ಪಾನಿಶ್ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ವಿದೇಶಿಯರರು, ನಿರಾಶ್ರಿತರು ವಲಸೆಯನ್ನು ತಡೆಯಲು ಗೋಡೆಗಳನ್ನು ನಿರ್ಮಿಸುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿಂತನೆಯನ್ನು ಖಂಡಿಸಿದರು.ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವನ್ನು ಅವರು 1933ರಲ್ಲಿ ಜರ್ಮನಿಯಲ್ಲಿ ಹಿಟ್ಲರ್‌ನ ಗೆಲುವಿಗೆ ಹೋಲಿಸಿದರು.

‘‘ಆ ಕಾಲದಲ್ಲಿ ಜರ್ಮನಿಯು ತನಗೆ ಅಸ್ತಿತ್ವವನ್ನು ಮರಳಿ ತಂದುಕೊಡಬಲ್ಲ ನಾಯಕನಿಗಾಗಿ ಎದುರುನೋಡುತ್ತಿತ್ತು. ಆಗ ಅವರಿಗೆ ನಾನದನ್ನು ಸಾಧಿಸಬಲ್ಲೆ ಎನ್ನುವ ಹಿಟ್ಲರ್ ಎಂಬಾತ ಸಿಕ್ಕಿದ’’ ಎಂದರು. ಹಿಟ್ಲರ್ ಅಧಿಕಾರವನ್ನು ಕಸಿಯಲಿಲ್ಲ. ಆತ ಜನರಿಂದಲೇ ಆಯ್ಕೆಯಾದ. ಆನಂತರ ಆತ ತನ್ನ ಜನರನ್ನೇ ನಾಶಪಡಿಸಿದನೆಂದು ಅವರು ಹೇಳಿದರು.

‘‘ಆ ಸಮಯದಲ್ಲಿ ಜರ್ಮನರು ಕೂಡಾ ಇತರರು ತಮ್ಮ ಅಸ್ತಿತ್ವವನ್ನು ಕಸಿಯಕೊಳ್ಳಬಾರದೆಂಬ ಆತಂಕದಿಂದ ಗೋಡೆಗಳನ್ನು ಹಾಗೂ ತಂತಿಬೇಲಿಗಳನ್ನು ನಿರ್ಮಿಸಿದ್ದರು. ಹಿಟ್ಲರ್ ಜರ್ಮನರಿಗೆ ವಿರೂಪಗೊಂಡ ‘ಗುರುತನ್ನು’ ತೋರಿಸಿಕೊಟ್ಟ. ಇದರಿಂದ ಏನೇನಾಯಿತೆಂದು ನಮಗೆಲ್ಲರಿಗೂ ಗೊತ್ತಿದೆಯೆಂದು ಪೋಪ್ ಫ್ರಾನ್ಸಿಸ್ ಮಾರ್ಮಿಕವಾಗಿ ಹೇಳಿದರು.

ಟ್ರಂಪ್ ಅವರ ವಿವಾದಾತ್ಮಕ ನೀತಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘‘ಆತ ಏನು ಮಾಡಲಿದ್ದಾನೆಂದು ನೋಡೋಣ. ಆನಂತರ ನಾವು ವೌಲ್ಯಮಾಪನ ಮಾಡೋಣು’’ ಎಂದರು.

ತಾನು ಅಧ್ಯಕ್ಷನಾದಲ್ಲಿ ಮೆಕ್ಸಿಕೊ ವಲಸಿಗರ ವಲಸೆಯನ್ನು ತಡೆಯುವುದಾಗಿ ಟ್ರಂಪ್ ಕಳೆದ ಫೆಬ್ರವರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಘೋಷಿಸಿದಾಗ, ಪೋಪ್ ಅದನ್ನು ಬಲವಾಗಿ ಖಂಡಿಸಿದ್ದರು. ‘‘ ಯಾವ ವ್ಯಕ್ತಿಯು ಸೇತುವೆಯ ಬದಲು ಗೋಡೆಗಳನ್ನು ನಿರ್ಮಿಸುವ ಯೋಚಿಸುತ್ತಾನೋ, ಆತ ಕ್ರೈಸ್ತನಲ್ಲ’’ ಎಂದು ಅವರು, ಟ್ರಂಪ್ ವಿರುದ್ಧ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News