ಜಲ್ಲಿಕಟ್ಟು 'ಕಾಳಗ' : ತಮಿಳುನಾಡಿನಲ್ಲಿ ಚಿಂತಾಜನಕ ಸ್ಥಿತಿಗೆ ತಲುಪಿತೆ ಬಿಜೆಪಿ ?

Update: 2017-01-23 07:33 GMT

ಚೆನ್ನೈ, ಜ.23: ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧದಿಂದ ಉದ್ಭವಿಸಿದ ಇತ್ತೀಚಿಗಿನ ಬಿಕ್ಕಟ್ಟು, ಯುವಜನತೆ ಒಗ್ಗೂಡಿದ ರೀತಿ ಹಾಗೂ ಈ ನಿಷೇಧ ತೆರವುಗೊಳಿಸಲು ಸರಕಾರಗಳ ಮೇಲೆ ಒತ್ತಡ ಹೇರಿದ ಬಗ್ಗೆ ಅದೆಷ್ಟು ಅಭೂತಪೂರ್ವವಾಗಿತ್ತೆಂದರೆ ಅದು ಆಡಳಿತ ಪಕ್ಷ ಸಹಿತ ಎಲ್ಲ ರಾಜಕೀಯ ಪಕ್ಷಗಳನ್ನು ಧೃತಿಗೆಡಿಸಿತ್ತು. ಈ 'ಜಲ್ಲಿಕಟ್ಟು' ಕಾಳಗದಲ್ಲಿ ಎಲ್ಲ ಪಕ್ಷಗಳಿಗಿಂತ ಹೆಚ್ಚು ಬಾಧಿತವಾದ ಪಕ್ಷವೆಂದರೆ ಬಿಜೆಪಿ.

ಕೇಂದ್ರದಲ್ಲಿ ತನ್ನದೇ ಪಕ್ಷವಿರುವ ಹೊರತಾಗಿಯೂ ಪೊಂಗಲ್ ಹಬ್ಬಕ್ಕೆ ಮುಂಚಿತವಾಗಿ ಅದು ಜಲ್ಲಿಕಟ್ಟು ಮೇಲಿನ ನಿಷೇಧ ಹಿಂಪಡೆಯಲು ಯಾವುದೇ ಪ್ರಯತ್ನ ಮಾಡದೇ ಇರುವುದು ತಮಿಳರ ಆಕ್ರೋಶಕ್ಕೆ ಕಾರಣವಾಗಿದೆ. ಮೇಲಾಗಿ ತಮಿಳುನಾಡಿನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿಗೆ ಈ ಜಲ್ಲಿಕಟ್ಟು ವಿವಾದ ಮತ್ತಷ್ಟು ಹಾನಿಯುಂಟು ಮಾಡಿದೆ.

ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ನಂತರದ ಪರಿಸ್ಥಿತಿಯನ್ನು ತನ್ನ ಪ್ರಯೋಜನಕ್ಕೆ ತಿರುಗುವಂತೆ ಮಾಡಲು ಬಿಜೆಪಿ ಪ್ರಯತ್ನಿಸಿತ್ತಾದರೂ ಇನ್ನೂ 'ಹಿಂದಿ' ಪಕ್ಷವೆಂದೇ ಅದು ತಮಿಳುನಾಡಿನಲ್ಲಿ ಕರೆಯಲ್ಪಡುತ್ತಿದ್ದು, ದ್ರಾವಿಡ ಸಂಸ್ಕೃತಿಯನ್ನೇ ನೆಚ್ಚಿಕೊಂಡಿರುವ ಅಲ್ಲಿನ ಜನರು ಇನ್ನೂ ಈ ಪಕ್ಷವನ್ನು ಸ್ವೀಕರಿಸಲು ಮನಸ್ಸು ಮಾಡಿಲ್ಲ.

ಜಲ್ಲಿಕಟ್ಟು ವಿವಾದದಿಂದಾಗಿ ತಮಿಳುನಾಡಿನ ಮೇಲೆ ತನಗಿದ್ದ ಅಲ್ಪಸ್ವಲ್ಪ ಹಿಡಿತವನ್ನೂ ಬಿಜೆಪಿ ಕಳೆದುಕೊಂಡಿದ್ದು, ಈ ವಿವಾದ ತಮಿಳುನಾಡಿನಲ್ಲಿ ಹಿಂದಿ-ವಿರೋಧಿ ಅಲೆಯನ್ನು ಮತ್ತಷ್ಟು ಹೆಚ್ಚಿಸಿದೆಯೆನ್ನುತ್ತವೆ ಹಲವು ವರದಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News