ಸಾಮಾಜಿಕ ಕಾರ್ಯಕರ್ತೆಯ ಮೇಲೆ ಹಲ್ಲೆ

Update: 2017-01-23 15:25 GMT

ಬಸ್ತಾರ್, ಜ.23: ಸಾಮಾಜಿಕ ಕಾರ್ಯರ್ತೆಯ ಮನೆಗೆ ನುಗ್ಗಿದ ಸುಮಾರು 30 ಮಂದಿಯ ತಂಡವೊಂದು ಆಕೆಯ ಮೇಲೆ ಹಲ್ಲೆ ನಡೆಸಿ, 24 ಗಂಟೆಯೊಳಗೆ ಮನೆ ಖಾಲಿ ಮಾಡಿ ತೆರಳುವಂತೆ ಬೆದರಿಕೆ ಒಡ್ಡಿದ ಘಟನೆ ಛತ್ತೀಸ್‌ಗಡದ ಬಸ್ತಾರ್ ಎಂಬಲ್ಲಿ ನಡೆದಿದೆ.

 ಸಂಶೋಧಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿರುವ ಬೇಲ ಭಾಟಿಯಾ ಎಂಬವರ ಮನೆಗೆ ನುಗ್ಗಿದ ತಂಡ, ಆಕೆಯ ಮೇಲೆ ದಾಳಿ ನಡೆಸಿದೆ. ಅಲ್ಲದೆ ತಕ್ಷಣ ಮನೆ ಖಾಲಿ ಮಾಡದಿದ್ದರೆ ಮನೆಗೆ ಬೆಂಕಿ ಇಡುವುದಾಗಿ ಬೆದರಿಸಿದೆ. ಅಲ್ಲದೆ ಮನೆಯ ಒಡತಿಗೂ ಬೆದರಿಕೆ ಹಾಕಿದೆ. ಈ ವೇಳೆ ತನಗೆ ಕೆಲ ದಿನಗಳ ಅವಕಾಶ ನೀಡುವಂತೆ ಬೇಲಾ ವಿನಂತಿಸಿದರೂ ಕೇಳದ ದುಷ್ಕರ್ಮಿಗಳು, ತಕ್ಷಣ ಮನೆ ಬಿಟ್ಟು ತೆರಳುವಂತೆ ಗದರಿಸಿದರು. ಆಕೆ ಮತ್ತಷ್ಟು ವಿನಂತಿಸಿದಾಗ 24 ಗಂಟೆಯ ಅವಕಾಶ ನೀಡಿದರು ಎಂದು ಬೇಲಾ ಅವರ ಸಹವರ್ತಿ , ಖ್ಯಾತ ಆರ್ಥಿಕತಜ್ಞ ಜೇನ್ ಡ್ರೇಝ್ ತಿಳಿಸಿದ್ದಾರೆ.

 ಬೇಲಾ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ಸ್ಥಳ್ಕಕೆ ಬಂದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದವರು ದೂರಿದ್ದಾರೆ. ನಕ್ಸಲ್‌ಪೀಡಿತ ಬಸ್ತಾರ್ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬೇಲಾ, 2015ರಲ್ಲಿ ಭದ್ರತಾ ಸಿಬ್ಬಂದಿಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಬುಡಕಟ್ಟು ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಕಾರಣಕ್ಕೆ ಜೀವ ಬೆದರಿಕೆಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News