ಹೂಡಿಕೆಯ ಬಿಕ್ಕಟ್ಟುಗಳನ್ನು ನಿವಾರಿಸಿ: ಭಾರತಕ್ಕೆ ಯುಎಇ ಕರೆ

Update: 2017-01-23 15:26 GMT

ಹೊಸದಿಲ್ಲಿ,ಜ.23: ಯುಎಇ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಯಲಿರುವ ಹಿನ್ನೆಲೆಯಲ್ಲಿ, ಅಬುದಾಭಿಯು ಸೋಮವಾರ ಹೇಳಿಕೆಯೊಂದನ್ನು ನೀಡಿ, ತನ್ನ ಕೆಲವು ಕಂಪೆನಿಗಳಲ್ಲಿ ಭಾರತದಲ್ಲಿ ಮಾಡಿರುವ ದೊಡ್ಡ ಮೊತ್ತದ ಹೂಡಿಕೆಗಳಿಗೆ ಸಂಬಂಧಿಸಿದ ವಿತ್ತೀಯ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಬಂದರು ಹಾಗೂ ರಿಯಲ್‌ಎಸ್ಟೇಟ್‌ನಂತಹ ವಲಯಗಳಲ್ಲಿ ವಿದೇಶಿ ನೇರಹೂಡಿಕೆ ನಿಯಮಾವಳಿಗಳಲ್ಲಿ ಸಡಿಲಿಕೆಯನ್ನು ಮಾಡುವಂತೆ ಭಾರತವನ್ನು ಆಗ್ರಹಿಸಿದೆ.

 ಮಂಗಳವಾರ ಭಾರತಕ್ಕೆ ಆಗಮಿಸಲಿರುವ ಅಲ್‌ನಹ್ಯಾನ್ ಗುರುವಾರ ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇಂಧನ, ರಕ್ಷಣೆ, ಭದ್ರತೆ ಹಾಗೂ ವ್ಯಾಪಾರ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಉಭಯದೇಶಗಳು ವ್ಯೆಹಾತ್ಮಕವಾದ ಸಹಕಾರ ಒಪ್ಪಂದಕ್ಕೆ ಸಹಿಹಾಕಲಿವೆ.

  ಭಾರತದ ಜೊತೆ ಯುಎಇ ಉತ್ತಮ ಹಾಗೂ ಸದೃಢವಾದ ಆರ್ಥಿಕ ಸಂಬಂಧವನ್ನು ಹೊಂದಲು ಬಯಸುತ್ತಿದೆಯೆಂದು  ಯುಎಇನಲ್ಲಿನ ಭಾರತೀಯ ರಾಯಭಾರಿ ಅಹ್ಮದ್ ಅಲ್ ಬನ್ನಾ ತಿಳಿಸಿದ್ದಾರೆ. ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಿದ್ದ ಅವರು ‘‘ಯುಎಇ ಕಂಪೆನಿಗಳು ಭಾರತದಲ್ಲಿ ಮಾಡಿರುವ ಬೃಹತ್ ಹೂಡಿಕೆಗಳಿಗೆ ಸಂಬಂಧಿಸಿದ ಹಣಕಾಸು ವಿವಾದಗಳನ್ನು ಬಗೆಹರಿಸಬೇಕಾಗಿದೆ ಹಾಗೂ ಬಂದರು, ರಿಯಲ್ ಎಸ್ಟೇಟ್,ಮಾಹಿತಿ ತಂತ್ರಜ್ಞಾನ ಹಾಗೂ ದೂರಸಂಪರ್ಕ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆಯ ನಿಯಮಾವಳಿಗಳು ಸಡಿಲಗೊಳ್ಳುವುದನ್ನು ಯುಎಇ ಬಯಸುತ್ತಿದೆ’’ ಎಂದು ಹೇಳಿದ್ದಾರೆ.

ಟೆಲಿಕಾಂ ಸಂಸ್ಥೆ ಎಟಿಸಲಾಟ್, ಹಡಗುಯಾನ ಟರ್ಮಿನಲ್ ನಿರ್ಮಾಣ ಸಂಸ್ಥೆ ಡಿಪಿ ವರ್ಲ್ಡ್, ಎಮಾರ್ (ರಿಯಲ್‌ಎಸ್ಟೇಟ್) ಹಾಗೂ ಟಾಖಾ ( ಇಂಧನ) ಸೇರಿದಂತೆ ಯುಎಇನ ವಿವಿಧ ಕಂಪೆನಿಗಳು ಭಾರತದಲ್ಲಿ ಹೂಡಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿವೆ.

ಸುಪ್ರೀಂಕೋರ್ಟ್ 13 ಟೆಲಿಕಾಂ ಸಂಸ್ಥೆಗಳ ಪರವಾನಗಿಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಎಟಿಸಲಾಟ್ ಭಾರತದಲ್ಲಿ ಕಾರ್ಯನಿರ್ವಹಣೆಯನ್ನು ರದ್ದುಪಡಿಸಿದ್ದು, ತನ್ನ ಲೈಸನ್ಸ್ ಶುಲ್ಕ ಹಾಗೂ ಬ್ಯಾಂಕ್ ಖಾತರಿ ಮೊತ್ತವನ್ನು ಹಿಂತಿರುಗಿಸುವಂತೆ ಅದು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

 ವ್ಯಾಪಾರ , ವಾಣಿಜ್ಯ ರಂಗದಲ್ಲಿ ಉಭಯದೇಶಗಳು ಪರಸ್ಪರರ ಉನ್ನತ ಮಟ್ಟದ ವಾಣಿಜ್ಯ ಪಾಲುದಾರರಾಗಿದ್ದು, 2015-16ನೆ ಸಾಲಿನಲ್ಲಿ ಸುಮಾರು 50 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರವನ್ನು ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News