ಮಾನವ ಹಕ್ಕು ಆಯೋಗದ ಸದಸ್ಯರ ಶೀಘ್ರ ನೇಮಕ : ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2017-01-23 15:27 GMT

ಹೊಸದಿಲ್ಲಿ, ಜ.23: ರಾಷ್ಟ್ರೀಯ ಮಾನವ ಹಕ್ಕು ಆಯೋಗ(ಎನ್‌ಎಚ್‌ಆರ್‌ಸಿ)ದ ಮಹಾ ನಿರ್ದೇಶಕರನ್ನು ಒಂದು ವಾರದೊಳಗೆ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಅಲ್ಲದೆ ಆಯೋಗದ ಸದಸ್ಯರನ್ನು ನಾಲ್ಕು ವಾರದೊಳಗೆ ನೇಮಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

 ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದರೆ ಆಗ ನೀವು(ಕೇಂದ್ರ ಸರಕಾರ) ತೊಂದರೆಯಲ್ಲಿ ಸಿಲುಕುತ್ತೀರಿ. ಸದಸ್ಯರನ್ನು ನೇಮಿಸಲು ನಿಮಗೆ ನಾಲ್ಕು ವಾರಗಳ ಅವಕಾಶ ನೀಡುತ್ತಿದ್ದೇವೆ. ಈ ಅವಧಿಯಲ್ಲಿ ಸದಸ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಶಿಸುತ್ತಿದ್ದೇವೆ ಎಂದು ಪೀಠವು ತಿಳಿಸಿದೆ. ಯಾರಾದರೊಬ್ಬರನ್ನು ನೇಮಿಸಲು ಯಾಕೆ ಹಿಂದೇಟು ಹಾಕುತ್ತಿದ್ದೀರಿ. ಇನ್ನಷ್ಟು ಸಮಯಾವಕಾಶ ಸಿಗದು. ನಾಲ್ಕು ವಾರವಿದೆ. ಇದರಲ್ಲಿ ಮೂರು ವಾರ ಸದಸ್ಯರನ್ನು ನೇಮಿಸುವ ಅವಧಿ. ಒಂದು ವಾರ ಮಹಾನಿರ್ದೇಶಕರ ನೇಮಕಾತಿಗೆ ಇರುವ ಸಮಯಾವಕಾಶ ಎಂದು ಸುಪ್ರೀಂಕೋರ್ಟ್ ತಿಳಿಸಿತು. ಈ ಹಂತದಲ್ಲಿ ಸದಸ್ಯರನ್ನು ನೇಮಿಸಲು ಕೇಂದ್ರ ಸರಕಾರ ಇನ್ನಷ್ಟು ಸಮಯಾವಕಾಶ ಕೇಳಿದಾಗ , ನಾಲ್ಕು ವಾರಗಳ ಅವಕಾಶವನ್ನು ಕೋರ್ಟ್ ನೀಡಿತು.

  ಎನ್‌ಎಚ್‌ಆರ್‌ಸಿಯ ಸದಸ್ಯರು ಮತ್ತು ಮಹಾನಿರ್ದೇಶಕರ ಹುದ್ದೆಯನ್ನು ಭರ್ತಿ ಮಾಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಮತ್ತು ಇದಕ್ಕೆ ಅಸಂಬದ್ಧ ಕಾರಣಗಳನ್ನು ನೀಡಲಾಗುತ್ತಿದೆ ಎಂದು ಕಳೆದ ಡಿ.2ರಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ಎತ್ತಿಕೊಂಡಿತ್ತು.

2014ರ ಮಾರ್ಚ್‌ನಿಂದಲೂ ಈ ಹುದ್ದೆಗಳು ಖಾಲಿಯಿವೆ. ಮಹಾನಿರ್ದೇಶಕರ ಹುದ್ದೆಗೆ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಅಧಿಕಾರಿಯ ಹೆಸರನ್ನು ಯಾವಾಗ ಪ್ರಸ್ತಾವನೆ ಮಾಡಲಾಗಿದೆ, ಯಾವಾಗ ಇದಕ್ಕೆ ಅನುಮೋದನೆ ದೊರಕಿದೆ, ನೇಮಕಾತಿಯ ವಿಳಂಬಕ್ಕೆ ಕಾರಣಗಳೇನು ಇತ್ಯಾದಿ ವಿವರವನ್ನು ನೀಡುವಂತೆ ಕೋರ್ಟ್ ತಿಳಿಸಿದೆ.

    ಸರಕಾರದ ನಿರ್ಲಕ್ಷದ ಧೋರಣೆಯಿಂದ ಎನ್‌ಎಚ್‌ಆರ್‌ಸಿ ನಿಷ್ಕ್ರಿಯಗೊಂಡಿದೆ. ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಆಯೋಗವು ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ತಕ್ಷಣ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿ ವಕೀಲ ರಾಧಾಕಾಂತ ತ್ರಿಪಾಠಿ ಎಂಬವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News