ತಮಿಳುನಾಡು : ಜಲ್ಲಿಕಟ್ಟು ಮಸೂದೆಗೆ ಅಂಗೀಕಾರ

Update: 2017-01-23 15:28 GMT

ಚೆನ್ನೈ, ಜ.23: ರಾಜ್ಯದಾದ್ಯಂತ ಪ್ರತಿಭಟನೆ ಮುಂದುವರಿಯುತ್ತಿರುವಂತೆಯೇ, ತಮಿಳುನಾಡು ವಿಧಾನಸಭೆಯಲ್ಲಿಂದು ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಮಾಡಿಕೊಡುವ ತಿದ್ದುಪಡಿ ಮಸೂದೆಯನು್ನ ಅವಿರೋಧವಾಗಿ ಅಂಗೀಕರಿಸಲಾಯಿತು.

  ಎರಡು ದಿನದ ಹಿಂದೆ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ಜಲ್ಲಿಕಟ್ಟುಗೆ ಅವಕಾಶ ಮಾಡಿಕೊಡುವ ಸುಗ್ರೀವಾಜ್ಞೆಯ ಸ್ಥಾನದಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ 1960ಕ್ಕೆ ತಿದ್ದುಪಡಿ ತರುವ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.ಪ್ರಾಣಿ ಹಿಂಸೆ ತಡೆ (ತಮಿಳುನಾಡು ತಿದ್ದುಪಡಿ ಕಾಯ್ದೆ) 2017 ಅನ್ನು ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವ ಮಂಡಿಸಿದ್ದು ವಿಧಾನಸಭೆ ಧ್ವನಿಮತದಿಂದ ಅಂಗೀಕರಿಸಿತು. ಸುಗ್ರೀವಾಜ್ಞೆ ಹೊರಡಿಸಿದ ದಿನವಾದ ಜ.21ರಿಂದ ಈ ಕಾಯ್ದೆ ಾರಿಗೆ ಬರುತ್ತದೆ ಎಂದು ತಿಳಿಸಲಾಗಿದೆ.

  ಜಲ್ಲಿಕಟ್ಟು ಎಂಬುದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು , ಜನವರಿಯಿಂದ ಮೇ ತಿಂಗಳಿನವರೆಗೆ ರಾಜ್ಯದಾದ್ಯಂತ ನಡೆಸಲಾಗುತ್ತದೆ. ಮಂಜುವಿರಟು, ವಡಮಡು, ಎರುದುವಿದುಮ್ ಇತ್ಯಾದಿ ಹೆಸರಿನಿಂದ ರಾಜ್ಯದ ವಿವಿಧೆಡೆ ನಡೆಯುವ ಸಾಂಸ್ಕೃತಿಕ, ಸಾಂಪ್ರದಾಯಿಕ ಕ್ರೀಡೆ ಇದು ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

 ಸುಪ್ರೀಂಕೋರ್ಟ್ ಜಲ್ಲಿಕಟ್ಟು ಕ್ರೀಡೆ ನಡೆಸುವುದು ಪಿಸಿಎ ಕಾಯ್ದೆಯ ಉಲ್ಲಂಘನೆ ಎಂದು ತಿಳಿಸಿರುವುದನ್ನು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಂಪ್ರದಾಯ ಮತ್ತು ಸಂಸ್ಕ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಜಲ್ಲಿಕಟ್ಟು ಮಹತ್ವದ ಪಾತ್ರ ವಹಿಸುತ್ತಿದೆ. ಅಲ್ಲದೆ ಸ್ಥಳೀಯ ಗೂಳಿ ಸಂತತಿಯ ಉಳಿವಿಗೆ ಈ ಕ್ರೀಡೆ ಬಹಳಷ್ಟು ಪ್ರೋತ್ಸಾಹ ನೀಡುತ್ತದೆ. ಈ ಕಾರಣದಿಂದ ತಮಿಳುನಾಡು ಸರಕಾರ ಜಲ್ಲಿಕಟ್ಟು ಕ್ರೀಡೆಗೆ ಪಿಸಿಎ ಕಾಯ್ದೆಯಿಂದ ವಿನಾಯಿತಿ ನೀಡುತ್ತಿದೆ ಎಂದು ತಿಳಿಸಲಾಗಿದೆ. ಈ ಮಸೂದೆ ತಿದ್ದುಪಡಿಗೆ ಕಾರಣವಾದ ಕಾನೂನಾತ್ಮಕ ಮತ್ತು ವಾಸ್ತವಿಕ ಹಿನ್ನೆಲೆಯನ್ನು ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ತಿಳಿಸಿದರು. ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಸೇರಿದಂತೆ ಪ್ರಮುಖರು ಈ ಮಸೂದೆಯನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News