ಈಜಿಪ್ಟ್ ಸರಕಾರಕ್ಕೆ ‘ಭಯೋತ್ಪಾದಕ’ನಾದ ದೇಶದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ತಾರೆ ಮೊಹಮ್ಮದ್ !
ಕೈರೋ, ಜ.24 : ಈಜಿಪ್ತಿನ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ ಮೊಹಮ್ಮದ್ ಅಬೂ ತರೀಕರನ್ನು ಅಲ್ಲಿನ ಸಿಸಿ ನೇತೃತ್ವದ ಸರ್ಕಾರ ಅಧಿಕೃತ ‘ಭಯೋತ್ಪಾದಕರ ಪಟ್ಟಿ’ಯಲ್ಲಿ ಸೇರಿಸಿದೆ.
‘ದಿ ಮ್ಯಾಜಿಷಿಯನ್ ’ ಎಂದೇ ಜನಪ್ರಿಯರಾಗಿರುವ ಮೊಹಮ್ಮದ್ ನಿಷೇಧಿತ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಗೆ ಹಣಕಾಸು ನೆರವು ಒದಗಿಸಿದ್ದ ಆರೋಪಕ್ಕೆ ಗುರಿಯಾಗಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಅಧ್ಯಕ್ಷ ಮೊಹಮ್ಮದ್ ಮುರ್ಸಿ ಅವರನ್ನು ಸೇನೆಯು 2013,ಜುಲೈನಲ್ಲಿ ಹುದ್ದೆಯಿಂದ ಕಿತ್ತು ಹಾಕಿದ ನಂತರ ಈಜಿಪ್ಟ್ ಸರಕಾರವು ಮುಸ್ಲಿಮ್ ಬ್ರದರ್‌ಹುಡ್ ಅನ್ನು ‘ಭಯೋತ್ಪಾದಕ ’ ಸಂಘಟನೆಯೆಂದು ಘೋಷಿಸಿತ್ತು.
ಆ ಬಳಿಕ ಬ್ರದರ್‌ಹುಡ್ ವಿರುದ್ಧ ಆಗಿನಿಂದಲೂ ಪೊಲೀಸರು ದಾಳಿಗಳನ್ನು ನಡೆಸುತ್ತಿದ್ದು, ನೂರಾರು ಜನರು ಬಲಿಯಾಗಿ ದ್ದಾರೆ. ಹತ್ತಾರು ಸಾವಿರ ಜನರು ಜೈಲುಗಳಲ್ಲಿ ಕೊಳೆಯುತ್ತಿದ್ದು, ಹೆಚ್ಚಿನವರ ವಿರುದ್ಧ ಕರಾಳ ಪ್ರತಿಭಟನೆ ನಿಗ್ರಹ ಕಾನೂನಿನಡಿ ಆರೋಪಗಳನ್ನು ಹೊರಿಸಲಾಗಿದೆ.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಗುಂಪುಗಳಿಂದ ಭಾರೀ ಟೀಕೆಗೆ ಗುರಿಯಾ ಗಿರುವ, 2016ರಲ್ಲಿ ಅಂಗೀಕರಿಸಲಾದ ಭಯೋತ್ಪಾದನೆ ನಿಗ್ರಹ ಕಾನೂನಿನಡಿ ‘ಭಯೋತ್ಪಾದಕರ ಪಟ್ಟಿ ’ಯಲ್ಲಿರುವ ಯಾವುದೇ ವ್ಯಕ್ತಿಯು ಪ್ರವಾಸ ನಿಷೇಧಕ್ಕೊಳ ಗಾಗುತ್ತಾನೆ ಮತ್ತು ಮೂರು ವರ್ಷಗಳ ಅವಧಿಗೆ ಆತನ ಪಾಸ್‌ಪೋರ್ಟ್ ಮತ್ತು ಆಸ್ತಿಯನ್ನು ಸ್ತಂಭನಗೊಳಿಸಲಾಗುತ್ತದೆ.
2012ರಲ್ಲಿ ರಾಷ್ಟ್ರಾಧ್ಯಕ್ಷರಾಗುವ ಮುರ್ಸಿಯವರ ಪ್ರಯತ್ನವನ್ನು ಮೊಹಮ್ಮದ್ (38) ಬಹಿರಂಗವಾಗಿಯೇ ಬೆಂಬಲಿಸಿದ್ದರು. ಆದರೆ ತಾನು ಬ್ರದರ್‌ಹುಡ್‌ಗೆ ಹಣಕಾಸು ನೆರವು ನೀಡಿದ್ದೇನೆ ಎನ್ನುವ ಆರೋಪವನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇದು ಕಾನೂನಿಗೆ ವಿರುದ್ಧ : ವಕೀಲ
ಕ್ರಿಮಿನಲ್ ನ್ಯಾಯಾಲಯದ ನಿರ್ಧಾರವು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದಮೊಹಮ್ಮದ್ ರ ವಕೀಲ ಮೊಹಮ್ಮದ್ ಉಸ್ಮಾನ್, ತನ್ನ ಕಕ್ಷಿದಾರ ದೋಷಿ ಎಂದು ತೀರ್ಪು ನೀಡಲಾಗಿಲ್ಲ ಅಥವಾ ಅವರ ವಿರುದ್ಧದ ಯಾವುದೇ ಆರೋಪದ ಕುರಿತು ಅವರಿಗೆ ವಿಧ್ಯುಕ್ತವಾಗಿ ನೋಟಿಸ್‌ನ್ನು ನೀಡಿಲ್ಲ. ನಾವು ಈ ನಿರ್ಧಾರದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಬ್ರದರ್‌ಹುಡ್‌ನ ಆಸ್ತಿಗಳು ಮತ್ತು ಹಣಕಾಸನ್ನು ವಶಪಡಿಸಿಕೊಂಡು, ಅದನ್ನು ನಿರ್ವಹಿಸಲು 2015ರಲ್ಲಿ ರಚಿಸಲಾಗಿದ್ದ ಸರಕಾರಿ ಸಮಿತಿಯೊಂದು ಮೊಹಮ್ಮದ್ ರ ಆಸ್ತಿಗಳನ್ನು ಸ್ತಂಭನಗೊಳಿಸಿದೆ.
2016,ಜೂನ್‌ನಲ್ಲಿ ನ್ಯಾಯಾಲಯವೊಂದು ಈ ಕ್ರಮವನ್ನು ಹಿಂದೆಗೆದುಕೊಳ್ಳುವಂತೆ ಆದೇಶಿಸಿದ್ದರೂ,ಸ್ತಂಭನ ಇನ್ನೂ ಜಾರಿಯಲ್ಲಿದೆ ಎಂದು ಉಸ್ಮಾನ್ ತಿಳಿಸಿದರು.
ಮೊಹಮ್ಮದ್ ಸದ್ಯ ಆಫ್ರಿಕಾ ಕಪ್ ನೇಷನ್ಸ್ ಟೂರ್ನ್‌ಮೆಂಟ್‌ಗೆ ವೀಕ್ಷಕ ವಿವರಣೆ ಕಾರರಾಗಿ ಗಬನ್‌ನಲ್ಲಿದ್ದು, ಅವರು ಸ್ವದೇಶಕ್ಕೆ ಎಂದು ಮರಳಬಹುದು ಎನ್ನುವುದನ್ನು ತಿಳಿಸಲು ಅವರು ನಿರಾಕರಿಸಿದರು.
ಪ್ರಸ್ತುತ ಈಜಿಪ್ತಿನ ‘ಭಯೋತ್ಪಾದಕರ ಪಟ್ಟಿ ’ಯಲ್ಲಿ ಮೊಹಮ್ಮದ್ ಅಬೂ ತರೀಕ ಜೊತೆಗೆ ಮುರ್ಸಿ , ಬ್ರದರ್‌ಹುಡ್‌ನ ಆಧಾತ್ಮಿಕ ಮಾರ್ಗದರ್ಶಕ ಮೊಹಮ್ಮದ್ ಬದೀ ಮತ್ತು ಸಂಘಟನೆಯ ಇತರ ನಾಯಕರು ಸೇರಿದಂತೆ 1,500ಕ್ಕೂ ಅಧಿಕ ಜನರ ಹೆಸರುಗಳಿವೆ.
ಇವರೇ ಈಜಿಪ್ತಿನ ಎಲ್ಲ ವೈಫಲ್ಯಗಳಿಗೆ ಕಾರಣರು ಎಂದು ಸರಕಾರವು ಆಪಾದಿಸುತ್ತಿದೆ ಎಂದು ಈಜಿಪ್ತ್ ಸಂಸತ್ತಿನ ಯೋಜನೆ ಮತ್ತು ಮುಂಗಡಪತ್ರ ಆಯೋಗದ ಮಾಜಿ ಸದಸ್ಯ ಅಷ್ರಫ್ ಬದರ್ ಅಲ್ದಿನ್ ಹೇಳಿದ್ದಾರೆ . ಅಲ್ದಿನ್ ಕೂಡ ಸರ್ಕಾರದ 'ಭಯೋತ್ಪಾದಕರ ಪಟ್ಟಿ ’ಯಲ್ಲಿದ್ದಾರೆ.
ಸರಕಾರದ ಆರೋಪಕ್ಕೆ ಯಾವುದೇ ಅರ್ಥವಿಲ್ಲ. ‘ಭಯೋತ್ಪಾದಕರನ್ನು ’ ಮೂರು ವರ್ಷಗಳ ಅವಧಿಗೆ ಪಟ್ಟಿಯಲ್ಲಿ ಸೇರಿಸಲಾಗಿದೆ. ನಾವು ಭಯೋತ್ಪಾದಕರಾಗಿದ್ದರೆ ನಮ್ಮನ್ನು ಕೇವಲ ಮೂರು ವರ್ಷಗಳ ಮಟ್ಟಿಗೆ ಪಟ್ಟಿಯಲ್ಲಿ ಸೇರಿಸಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಶ್ರೇಷ್ಠ ಫುಟ್ಬಾಲಿಗ
2013ರ ಉತ್ತರಾರ್ಧದಲ್ಲಿ ಕ್ರೀಡೆಯಿಂದ ನಿವೃತ್ತಿಯಾದ ಅಬೂ ತರಿಕವರ್ಷದ ದೇಶದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ತಾರೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಕೈರೋದ ಪ್ರತಿಷ್ಠಿತ್ ಅಲ್ ಅಹ್ಲಿ ಕ್ಲಬ್ ಗೆ ಆಡಿರುವ ಮೊಹಾಮ್ಮದ್ ದಾಖಲೆಯ ನಾಲ್ಕು ಬಾರಿ ಆಫ್ರಿಕನ್ ವರ್ಷದ ಫುಟ್ಬಾಲಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಾನವೀಯತೆ
ಫುಟ್ಬಾಲ್ ತಾರೆಯಾಗಿ ಬೆಳೆಯುತ್ತಿದ್ದಂತೆ ಮೊಹಮ್ಮದ್ ಮಾನವೀಯ ವಿಷಯಗಳತ್ತಲೂ ಗಮನವನ್ನು ಹರಿಸಿದ್ದರು. ಕಡುಬಡವರಿಗೆ ತನ್ನಿಂದ ಸಾಧ್ಯವಾದಷ್ಟು ನೆರವು ನೀಡಲು ನಿರ್ಧರಿಸಿದ ಅವರು, 2005ರಲ್ಲಿ ಜರ್ಮನಿಯಲ್ಲಿ ನಡೆದಿದ್ದ ‘ಬಡತನದ ವಿರುದ್ಧ ಪಂದ್ಯ ’ಕ್ಕಾಗಿ ವಿಶ್ವದ ಅಂದಿನ ಖ್ಯಾತ ಫುಟ್ಬಾಲ್ ಆಟಗಾರರಾದ ಬ್ರೆಝಿಲ್‌ನ ರೊನಾಲ್ಡೋ ಮತ್ತು ಫ್ರಾನ್ಸ್‌ನ ಝೈನುದ್ದೀನ್ ಝೈದಾನ್ ಸೇರಿದಂತೆ 40 ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರರೊಂದಿಗೆ ಕೈ ಜೋಡಿಸಿದ್ದರು.
"ಪ್ರತಿ ಕ್ರೀಡಾಪಟುವಿಗೆ ಸಮಾಜದೆಡೆಗೆ ಹಾಗು ಅದರಲ್ಲಿರುವ ಬಡವರ ಕಡೆಗೆ ಜವಾಬ್ದಾರಿಯಿದೆ. ನಾನು ಫುಟ್ಬಾಲ್ ಮೂಲಕ ನೊಂದವರ ಕಣ್ಣೀರು ಒರೆಸಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದ್ದರು. "ಹಸಿವಿನಿಂದ ಬಳಲಿದ ಮಗು ಕ್ಷಣಗಳಲ್ಲಿ ಮೃತಪಡಬಹುದು. ಹಾಗಾಗಿ ಒಂದೊಂದು ಕ್ಷಣವೂ ಅಮೂಲ್ಯ. ಇದು ನಾವು ಗೆಲ್ಲಲೇಬೇಕಾದ ಆಟ " ಎಂದು ಬಡತನ ಹಾಗು ಹಸಿವಿನ ಕುರಿತು ಅವರು ಹೇಳಿದ್ದರು. ಕ್ರೀಡೆಯಲ್ಲಿ ಈಜಿಪ್ಟಿನ ಇನ್ನೊಬ್ಬ ಖ್ಯಾತನಾಮ ಆಟಗಾರ ಮಹಮೂದ್ ಅಲ್ ಖತೀಬ್ ಅವರ ಹಾದಿಯಲ್ಲಿ ಮುನ್ನಡೆದ ಮೊಹಮ್ಮದ್ ಅಬೂ ತರೀಕ ಬದುಕಿನಲ್ಲಿ ನನಗೆ ಪ್ರವಾದಿ ಮೊಹಮ್ಮದ್ (ಸ ) ಅವರು ಮಾದರಿ ಎಂದು ಹೇಳುತ್ತಿದ್ದರು.
ಗಾಝಾ ಬಗ್ಗೆ ಸಹಾನುಭೂತಿ
2008ರ ಆಫ್ರಿಕನ್ ಕಪ್ ಆಫ್ ನೇಷನ್ಸ್ ಪಂದ್ಯಾವಳಿಯಲ್ಲಿ ಈಜಿಪ್ಟ್ ಸುಡಾನ್ ವಿರುದ್ಧ 3-0 ಗೋಲುಗಳಿಂದ ಜಯ ಸಾಧಿಸಿದ್ದ ಸಂದರ್ಭ ಮೊಹಮ್ಮದ್ ‘ಗಾಝಾದ ಬಗ್ಗೆ ಸಹಾನುಭೂತಿಯಿದೆ ’ ಎಂಬ ಸಂದೇಶ ಬರೆದಿದ್ದ ಟಿ-ಶರ್ಟ್ ಪ್ರದರ್ಶಿಸಲು ತನ್ನ ಜೆರ್ಸಿಯನ್ನು ತೆಗೆದಿದ್ದರು. ಅದು ಗಾಝಾವನ್ನು 10 ದಿನಗಳ ಕಾಲ ನಿರ್ಬಂಧಿಸಿದ್ದ ಇಸ್ರೇಲ್‌ನ ಕ್ರಮಕ್ಕೆ ಅವರ ಪ್ರತಿಭಟನೆಯಾಗಿತ್ತು. ಪಂದ್ಯದ ವೇಳೆ ರಾಜಕೀಯ ಘೋಷಣೆಯನ್ನು ಪ್ರದರ್ಶಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಹಳದಿ ಕಾರ್ಡ್‌ನ್ನು ನೀಡಲಾಗಿತ್ತು ಮತ್ತು ಅವರು ತನ್ನ ವಿರುದ್ಧ ಸಂಭಾವ್ಯ ನಿಷೇಧವನ್ನು ಎದುರಿಸಬೇಕಾಗಿತ್ತು. ಆದರೆ ಅಂತಿಮವಾಗಿ ಅವರ ವಿರುದ್ಧ ಯಾವುದೇ ದಂಡನಾ ಕ್ರಮ ಕೈಗೊಳ್ಳದಿರಲು ಆಫ್ರಿಕನ್ ಫುಟ್ಬಾಲ್ ಒಕ್ಕೂಟ ನಿರ್ಧರಿಸಿತ್ತು