×
Ad

ಹಳಿತಪ್ಪಿದ ಅಭಿವೃದ್ಧಿ

Update: 2017-01-25 09:33 IST

2014 ಮೇ 26ರಂದು ಭಾರತ ಎರಡು ಘಟನೆಗಳಿಗೆ ಸಾಕ್ಷಿಯಾಯಿತು. ಒಂದು, ನರೇಂದ್ರ ಮೋದಿಯವರು ಪ್ರಮಾಣವಚನ ನೆರವೇರಿಸಿದ ದಿನ ಅದು. ಅಂದು ಈ ದೇಶಕ್ಕೆ ಭರವಸೆಗಳ ಮೇಲೆ ಭರವಸೆಗಳನ್ನು ಸುರಿಸಿದವರು ನರೇಂದ್ರ ಮೋದಿ. ಅದೇ ದಿನ ಉತ್ತರ ಪ್ರದೇಶದಲ್ಲಿ ಭಾರೀ ದುರಂತವೊಂದು ಸಂಭವಿಸಿತು. ಅಂದು ಅಲ್ಲಿನ ಸಂತ ಕಬೀರ್ ನಗರದಲ್ಲಿ ಘೋರಕ್‌ಧಾಮ್ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ 30ಕ್ಕೂ ಅಧಿಕ ಮಂದಿ ಭೀಕರವಾಗಿ ಮೃತಪಟ್ಟರು. ಮೇಲಿನ ಎರಡೂ ಘಟನೆಗಳಿಗೆ ಯಾವುದೇ ಸಂಬಂಧ ಇಲ್ಲದೇ ಇರಬಹುದು. ಆದರೆ ಇಂದು ಆರ್ಥಿಕವಾಗಿ ಹಳಿ ತಪ್ಪಿ ಬಿದ್ದಿರುವ ದೇಶವನ್ನು ನೋಡುವಾಗ ಈ ಎರಡು ಘಟನೆಗಳ ನಡುವೆ ಅದಾವುದೋ ಒಂದು ಕೊಂಡಿ ಕಾಣಿಸಿಕೊಳ್ಳುತ್ತಿದೆ. ಬಹುಶಃ ಮೋದಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಡೆದ ಆ ದುರಂತ, ಒಂದು ರೂಪಕದಂತೆ ಈಗ ಕಾಣಿಸುತ್ತಿದೆ.

ರೈಲು ಹಳಿಗಳಿಗೆ ಈ ದೇಶದ ಚರಿತ್ರೆಯೊಂದಿಗೆ ಅವಿನಾಭಾವ ನಂಟಿದೆ. ಮಹಾತ್ಮಗಾಂಧೀಜಿಯ ವ್ಯಕ್ತಿತ್ವವನ್ನು ರೂಪಿಸಿರುವುದು ರೈಲುಬೋಗಿಗಳೇ ಆಗಿವೆ. ರೈಲಿನಲ್ಲಿರುವ ಬೋಗಿಗಳ ಮೊದಲನೆ ದರ್ಜೆ, ಎರಡನೆ, ಮೂರನೆ ದರ್ಜೆಗಳ ತಾರತಮ್ಯಗಳ ವಿರುದ್ಧದ ಹೋರಾಟ ಮುಂದೆ ಭಾರತದಲ್ಲಿ ಬೃಹತ್ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿಸಿತು. ಮಹಾತ್ಮ ಗಾಂಧೀಜಿ ಬಗೆಗಿನ ಯಾವುದೇ ಸಾಕ್ಷ್ಯ ಚಿತ್ರಗಳನ್ನು ನೋಡಿದರೂ ಸಾಮಾನ್ಯವಾಗಿ ಕಾಣುವ ಅಂಶ ಅವರು ಮೂರನೆ ದರ್ಜೆ ರೈಲಿನಲ್ಲಿ ಭಾರತದ ಉದ್ದಗಲಕ್ಕೂ ಸುತ್ತುತ್ತಿರುವುದು. ಸಾಮ್ರಾಜ್ಯಶಾಹಿ ಆಡಳಿತದ ಕಾಲದಲ್ಲಿ ಭಾರತದಲ್ಲಿ ರೈಲು ಜಾಲ ಹೇಗೆ ಭಾರತದ ರಾಷ್ಟ್ರೀಯತೆಯನ್ನು ಪೋಷಿಸಿತು, ಉಪಖಂಡದ ಜನರ ನಡುವೆ ಬಾಂಧವ್ಯದ ಬೆಸುಗೆ ಹೇಗೆ ಬೆಳೆಸಿತು ಎನ್ನುವುದಕ್ಕೆ ಇದು ನಿದರ್ಶನ. ಇಂದು ಭಾರತದ ಅರ್ಥವ್ಯವಸ್ಥೆಯ ನರನಾಡಿಯಂತೆ ಹರಡಿಕೊಂಡಿದೆ ಈ ರೈಲು ಹಳಿಗಳು. ಇದೀಗ ಮೋದಿಯ ಆಡಳಿತದ ಕಾಲದಲ್ಲಿ, ಈ ರೈಲು ಇಲಾಖೆ ಹಂತಹಂತವಾಗಿ ಖಾಸಗಿ ಕೈವಶವಾಗುತ್ತಿವೆ. ಮೊದಲ ಬಾರಿಗೆ ರೈಲ್ವೆ ಬಜೆಟ್ ಸ್ಥಗಿತಗೊಳ್ಳಲಿದೆ. ಅದರರ್ಥವೇ, ನಿಧಾನಕ್ಕೆ ಅದು ಸರಕಾರದ ಸ್ವಾಧೀನದಿಂದ ಹೊರಹೋಗುತ್ತದೆಯೆನ್ನುವುದು. ವಿಪರ್ಯಾಸವೆಂದರೆ, ರೈಲುಗಳ ಜೊತೆಗೆ ತಳಕು ಹಾಕಿಕೊಂಡಿರುವ ಜನಸಾಮಾನ್ಯರ ಬದುಕನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ರೈಲ್ವೆ ಇಲಾಖೆಯನ್ನು ಶ್ರೀಮಂತರಿಗಾಗಿ ಮರು ರೂಪಿಸುವ ಪ್ರಯತ್ನ ನಡೆಯುತ್ತಿದೆ.

ಆದುದರಿಂದಲೇ, ಭಾರತದ ಕಳಪೆ ರೈಲು ಹಳಿಗಳನ್ನು ಮರೆತು ನರೇಂದ್ರ ಮೋದಿ ಬುಲೆಟ್ ಟ್ರೈನ್ ಕುರಿತಂತೆ ಮಾತನಾಡುತ್ತಿದ್ದಾರೆ. ರೈಲ್ವೆಯ ಎಲ್ಲ ಸವಲತ್ತುಗಳಿಗೂ ಕಡ್ಡಾಯವಾಗಿ ಪಾವತಿ ಮಾಡಲೇಬೇಕು ಎಂದು ಕೇಂದ್ರ ಸಚಿವರು ಫರ್ಮಾನು ಹೊರಡಿಸುತ್ತಾರೆ. ಇದೇ ಸಂದರ್ಭದಲ್ಲಿ ಜನಸಾಮಾನ್ಯರಿಗಾಗಿ ರೈಲು ಎನ್ನುವ ಪದವನ್ನು ಸರಕಾರ ಮರೆಯುತ್ತಿದೆ. ಆದುದರಿಂದಲೇ ಬುಲೆಟ್‌ಟ್ರೈನ್ ಕುರಿತಂತೆ ಆಸಕ್ತಿ ವಹಿಸಿರುವ ಸರಕಾರಕ್ಕೆ, ತಳಮಟ್ಟದಲ್ಲಿ ರೈಲ್ವೆ ಇಲಾಖೆಯನ್ನು ಸುಧಾರಣೆ ಮಾಡುವ ಬಗ್ಗೆ ಆಸಕ್ತಿ ಉಳಿದಿಲ್ಲ. ಪರಿಣಾಮವಾಗಿ ಇಂದು ದೇಶದಲ್ಲಿ ರೈಲು ಅಪಘಾತಗಳು ಪದೇ ಪದೇ ಹೆಚ್ಚುತ್ತಿವೆ. ಸರಕಾರವಾಗಲಿ, ರೈಲ್ವೆ ಇಲಾಖೆಗಳಾಗಲಿ ಈ ದುರಂತದ ಕಾರಣ ಹುಡುಕುವಲ್ಲಿ ಮತ್ತು ಮತ್ತೆ ಇಂತಹ ಅನಾಹುತ ತಡೆಯುವಂತೆ ನೋಡಿಕೊಳ್ಳುವಲ್ಲಿ ವಿಫಲವಾಗುತ್ತಿವೆ.

ಮೊನ್ನೆ ಶನಿವಾರ ಮತ್ತೊಂದು ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದಲ್ಲಿ ರೈಲು ಹಳಿತಪ್ಪಿದ ಘಟನೆ 39 ಮಂದಿಯ ಜೀವವನ್ನು ಬಲಿ ಪಡೆದಿದೆ. ಕಳೆದ ಎರಡು ತಿಂಗಳಲ್ಲಿ ಇದು ಮೂರನೆ ದೊಡ್ಡ ಅಪಘಾತ. ನವೆಂಬರ್ 10ರಂದು ಇಂಧೋರ್- ಪಾಟ್ನಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 151 ಮಂದಿ ಕಣ್ಮುಚ್ಚಿದರು. ಡಿಸೆಂಬರ್ 26ರಂದು ಸೀಲ್ಧ್- ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 43 ಮಂದಿ ಗಾಯಗೊಂಡರು.

2009-2010 ರಿಂದ 2015-2016ರ ನಡುವೆ ರೈಲು ಅಪಘಾತಗಳಿಗೆ 620 ಮಂದಿ ಬಲಿಯಾಗಿದ್ದಾರೆ. ಇಷ್ಟಾಗಿಯೂ ಇದು ಕೋಲಾಹಲಕ್ಕೆ ಕಾರಣವಾಗಿಲ್ಲ. ಹೀಗೆ ಬೋಗಿಗಳಲ್ಲಿ ಜೀವ ಕಳೆದುಕೊಂಡವರು ಶ್ರೀಮಂತರು ಅಥವಾ ನಗರವಾಸಿಗಳಲ್ಲ; ಆದ್ದರಿಂದ ಇದು ದೇಶದಲ್ಲಿ ಇಂಗ್ಲಿಷ್ ಪತ್ರಿಕೆಗಳ ಗಮನ ಸೆಳೆದದ್ದು ಕಡಿಮೆ. ಇಂಥ ಘಟನೆಗಳ ಬಗ್ಗೆ ಇಂಗ್ಲಿಷ್ ಮಾಧ್ಯಮಗಳಲ್ಲಿ ಪುಟ್ಟ ಸುದ್ದಿಗಳಷ್ಟೇ ಸ್ಥಾನ ಪಡೆದವು.

ಟೆಲಿವಿಷನ್ ಮಾಧ್ಯಮಗಳಿಗೆ ರೈಲು ಅಪಘಾತಗಳ ಸಾವಿಗಿಂತ, ವಿಮಾನ ವಿಳಂಬವಾದದ್ದು ದೊಡ್ಡ ಸುದ್ದಿಯಾಗುತ್ತದೆ. ಕಟು ವಾಸ್ತವ ಎಂದರೆ ನಮ್ಮ ಆದ್ಯತೆಗಳೇ ಹಳಿತಪ್ಪಿವೆ. ನರೇಂದ್ರ ಮೋದಿ ಸರಕಾರ ಅತ್ಯಂತ ದುಬಾರಿ ಎನಿಸುವ ಮುಂಬೈ- ಸೂರತ್ ಬುಲೆಟ್ ರೈಲು ಯೋಜನೆಯ ಕನಸು ಬಿತ್ತಿದೆ. ಇದರ ಅಂದಾಜು ವೆಚ್ಚ ಒಂದು ಲಕ್ಷ ಕೋಟಿ ರೂಪಾಯಿ. ಭಾರತದ ಮಧ್ಯಮವರ್ಗ ಇದನ್ನು ಅಭಿವೃದ್ಧಿಯ ಸಂಕೇತ ಎಂದು ಗುಣಗಾನ ಮಾಡುತ್ತಿದೆ. ಬುಲೆಟ್ ರೈಲು ಎಂಬ ಶಬ್ದವೇ ಪುಳಕ ಮೂಡಿಸಿದೆ. ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ಭಾರತೀಯ ರೈಲ್ವೆ ಇಂದು ದುಬಾರಿ ರೈಲುಗಳತ್ತ ಮುಖ ಮಾಡಿದೆ. ಬಹುತೇಕ ಇಂಥ ರೈಲುಗಳ ದರ ವಿಮಾನ ಪ್ರಯಾಣದರಕ್ಕೆ ಸಮನಾಗಿದೆ.

ರೈಲು ಜಾಲ ದೇಶದ ಬೆನ್ನೆಲುಬು ಎನಿಸಿಕೊಂಡರೂ, ಪ್ರತೀ ಕಿಲೋಮೀಟರ್ ಟ್ರ್ಯಾಕ್ ವ್ಯಾಪ್ತಿಯಲ್ಲಿ ಬರುವ ಜನಸಂಖ್ಯೆ ಚೀನಾದ ಶೇಕಡ 63ರಷ್ಟು ಮಾತ್ರ. ಸ್ವತಂತ್ರ ಭಾರತವು ರೈಲ್ವೆ, ಪ್ರಮುಖವಾಗಿ ಹಳಿಗಳ ಗುಣಮಟ್ಟವನ್ನು ಕಡೆಗಣಿಸಿದೆ. ರಾಜರ ಕಾಲದಲ್ಲಿ ನಿರ್ಮಾಣವಾದ ಜಾಲವನ್ನು ನಿಯತವಾಗಿ ಮೇಲ್ದರ್ಜೆಗೆ ಏರಿಸಲೇ ಇಲ್ಲ. ಈ ಕಾರಣದಿಂದಾಗಿ ಭಾರತೀಯ ರೈಲ್ವೆ ಸುರಕ್ಷಿತವಲ್ಲ ಎಂಬ ಭಾವನೆ ದಟ್ಟವಾಗುತ್ತಲೇ ಹೋಯಿತು. ಸರಕಾರ ಒಂದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ದೇಶದ ಅಭಿವೃದ್ಧಿಯ ಬೇರುಗಳಿರುವುದು ತಳಸ್ತರದಲ್ಲಿ, ಜನಸಾಮಾನ್ಯರೊಂದಿಗೆ ಸಂಬಂಧ ಹೊಂದಿರುವ ರೈಲ್ವೈ ಹಳಿಗಳಲ್ಲಿ. ಆಕಾಶದಲ್ಲಿ ನೆಗೆದು ಹಾರುವ ರೈಲುಗಳು ದೇಶವನ್ನು ಮುಂದಕ್ಕೆ ಕೊಂಡೊಯ್ಯಲಾರದು.

ನೋಟು ನಿಷೇಧದ ಮೂಲಕ ಅಭಿವೃದ್ಧಿಯ ಓಟದಲ್ಲಿ ಬಹುದೊಡ್ಡ ಭಾರತವನ್ನು ಹಿಂದೆ ಉಳಿಸಲಾಗಿದೆಯೋ ಹಾಗೆಯೇ, ರೈಲಿನಲ್ಲೂ ಜನಸಾಮಾನ್ಯರಿರುವ ಬೋಗಿಯನ್ನು ಮರೆತು, ಸಾಗಿದರೆ ಒಂದಲ್ಲ ಒಂದು ದಿನ ಭಾರೀ ಪ್ರಪಾತಕ್ಕೆ ದೇಶ ಬೀಳುವುದು ಖಂಡಿತ. ಆದುದರಿಂದ, ರೈಲು ಹಳಿಗಳ ಸುಧಾರಣೆಯ ಮೂಲಕವೇ ರೈಲ್ವೆ ಇಲಾಖೆಯ ಸುಧಾರಣೆಯ ಕಡೆಗೆ ಸರಕಾರ ಗಮನ ಹರಿಸಬೇಕು. ಹೊಟ್ಟೆಗೆ ಹಿಟ್ಟಿಲ್ಲದವರ ಜುಟ್ಟಿಗೆ ಮಲ್ಲಿಗೆ ಇಡುವ ಸರಕಾರದ ಪ್ರಯತ್ನ ಇನ್ನಾದರೂ ನಿಲ್ಲಬೇಕು. ಇಲ್ಲವಾದರೆ, ಭಾರತದ ರೈಲ್ವೆ ಚಲಿಸುವ ಶವಪೆಟ್ಟಿಗೆಯೆಂಬ ಹೆಗ್ಗಳಿಕೆಯನ್ನು ಹೊರಬೇಕಾದಂತಹ ಸನ್ನಿವೇಶ ನಿರ್ಮಾಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News