ಕೋಣಗಳ ಬಾಲ ಹಿಡಿದು ಎತ್ತಿನ ಹೊಳೆಯನ್ನು ಮರೆತರೇ?
ಪಕ್ಕದ ಮನೆಯವರು ಟಿವಿ ತಂದರೆ ನಮಗೂ ಟಿವಿ ಬೇಕು ಎಂದು ಮಕ್ಕಳು ಹಟ ಹಿಡಿಯುವುದಿದೆ. ನಮಗೇನು ಅಗತ್ಯ ಎನ್ನುವುದಕ್ಕಿಂತ, ನೆರೆಮನೆಯವರಲ್ಲಿರುವುದು ನಮ್ಮಲ್ಲೂ ಇರಬೇಕು, ಅದು ನಮಗೆ ಅಗತ್ಯವಿರಲಿ, ಇಲ್ಲದಿರಲಿ. ಈ ಮನಸ್ಥಿತಿ ಕರ್ನಾಟಕದ ಜನರಲ್ಲಿ ತುಸು ಹೆಚ್ಚೇ ಇದೆ. ಒಂದು ಕಾಲದಲ್ಲಿ ಕರ್ನಾಟಕದ ರೈತ ಮತ್ತು ದಲಿತ ಹೋರಾಟಗಳು ಬೇರೆ ರಾಜ್ಯಗಳಿಗೆ ಮಾದರಿಯ ರೂಪದಲ್ಲಿದ್ದವು. ಇಂದು ನಾವು, ನಮ್ಮ ಹೋರಾಟಗಳಿಗೆ ಪಕ್ಕದ ರಾಜ್ಯಗಳನ್ನು ಮಾದರಿಯಾಗಿಸಿಕೊಳ್ಳುತ್ತಿದ್ದೇವೆ. ತಮಿಳು ಭಾಷೆಗೆ ಶಾಸ್ತ್ರೀಯ ಮಾನ್ಯತೆ ಸಿಕ್ಕಿತು ಎಂದಾಗ ನಮ್ಮಲ್ಲಿ ಭಾಷಾಭಿಮಾನ ಜಾಗೃತವಾಗುತ್ತದೆ. ತಕ್ಷಣ, ನಮಗೂ ಶಾಸ್ತ್ರೀಯ ಸ್ಥಾನಮಾನ ಬೇಕು ಎಂದು ಹೋರಾಟಕ್ಕಿಳಿಯುತ್ತೇವೆ. ಮರಾಠಿಗರು ಬೆಳಗಾವಿಯಲ್ಲಿ ಮರಾಠಿ ಸಮ್ಮೇಳನ ನಡೆಸಿದಾಗಷ್ಟೇ ನಮಗೆ ಬೆಳಗಾವಿ ನೆನಪಾಗುತ್ತದೆ. ಇದೀಗ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರವಾಗಿ ಮೂಡಿ ಬಂದ ಹೋರಾಟವನ್ನು ಕರ್ನಾಟಕದಲ್ಲೂ ನಾವು ಅನುಕರಿಸಲು ಹೊರಟಿದ್ದೇವೆ. ಈ ಕಾರಣದಿಂದಲೇ, ಕರಾವಳಿಯಲ್ಲಿ ‘ಕಂಬಳ’ವನ್ನು ಜಲ್ಲಿಕಟ್ಟುವಿಗೆ ಸಮೀಕರಿಸುವ ಪ್ರಯತ್ನ ನಡೆಯುತ್ತಿದೆ.
ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲ ಪಕ್ಷಗಳ ನಾಯಕರೂ ಕಂಬಳವನ್ನು ಈ ನಾಡಿನ ಅಳಿವುಉಳಿವಿನ ಪ್ರಶ್ನೆಯಾಗಿ ಚರ್ಚೆಯಲ್ಲಿಟ್ಟಿದ್ದಾರೆ. ಕೋಣಗಳ ಗದ್ದಲಗಳಲ್ಲಿ ಎತ್ತಿನ ಹೊಳೆ ಬದಿಗೆ ಸರಿದಿರುವುದು ಕರಾವಳಿಯ ಜನರ ಗಮನಕ್ಕೇ ಬಂದಿಲ್ಲ. ಕಂಬಳದ ಕಡೆಗೆ ಜನರ ಗಮನವನ್ನು ತಿರುಗಿಸಿ, ಎತ್ತಿನ ಹೊಳೆಯೋಜನೆಯನ್ನು ಮುಂದುವರಿಸುವ ತಂತ್ರವನ್ನ್ನು ಸರ್ವಪಕ್ಷಗಳು ಜೊತೆ ಸೇರಿ ಹಮ್ಮಿಕೊಂಡಂತಿದೆ.
ಜಲ್ಲಿಕಟ್ಟು ಕ್ರೀಡೆ ಇಡೀ ತಮಿಳುನಾಡಿನ ಸಾಂಸ್ಕೃತಿಕ ಬದುಕಿನೊಂದಿಗೆ ಅವಲಂಬಿತವಾಗಿರುವುದು. ಇದು ಯಾವುದೋ ಪ್ರಾಯೋಜಿತ ಕ್ರೀಡೆಯಲ್ಲ. ಎಲ್ಲರೂ ಸಾಮೂಹಿಕವಾಗಿ ಭಾಗಿಯಾಗುವಂತಹ ಕ್ರೀಡೆ. ಆದರೂ ಇದು ತಂದೊಡ್ಡುವ ಹಿಂಸೆ, ಅಪಾಯ ಈಗಲೂ ಪ್ರಶ್ನಾರ್ಹವೇ ಆಗಿದೆ. ಇಂದು ತಮಿಳುನಾಡಿನ ಜನರು ಮಾತ್ರವಲ್ಲ, ಇಡೀ ದೇಶ ನೋಟು ನಿಷೇಧದ ಕಾರಣದಿಂದ ಆರ್ಥಿಕವಾಗಿ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಲ್ಲಿಕಟ್ಟು ಕೃಷಿಯ ಒಂದು ಭಾಗ. ಒಂದೆಡೆ ಕೃಷಿಯೇ ನಾಶವಾಗುತ್ತಿರುವ ಸಂದರ್ಭದಲ್ಲಿ, ಜಲ್ಲಿಕಟ್ಟು ಉಳಿಯಬೇಕು ಎನ್ನುವ ಹೋರಾಟ ಜನಸಾಮಾನ್ಯರ ಮೂಲಭೂತ ಆವಶ್ಯಕತೆ ಎನ್ನಿಸುವುದಿಲ್ಲ. ಕೇಂದ್ರದ ಸರ್ವಾಧಿಕಾರದ ವಿರುದ್ಧ ಪ್ರತಿಭಟಿಸಲು ಅವರು ಜಲ್ಲಿಕಟ್ಟನ್ನು ಒಂದು ನೆಪವಾಗಿ ಬಳಸಿರಬಹುದು.
ಜಲ್ಲಿಕಟ್ಟು ಹೋರಾಟದ ಹಿಂದಿದ್ದದ್ದು, ಎತ್ತು, ಕೃಷಿ ಜೊತೆಗೆ ಯಾವ ಸಂಬಂಧವೂ ಇಲ್ಲದ ಹೊಸ ತಲೆಮಾರು ಎನ್ನುವುದು ಇನ್ನೊಂದು ಪ್ರಮುಖ ಅಂಶ. ಆದರೆ ಯಾವ ರೀತಿಯಲ್ಲೂ ಕಂಬಳವನ್ನು ಜಲ್ಲಿಕಟ್ಟಿಗೆ ಸಮೀಕರಿಸುವುದಕ್ಕೆ ಸಾಧ್ಯವಿಲ್ಲ. ಕಂಬಳ ತೀರಾ ಪ್ರಾದೇಶಿಕವಾದ ಕ್ರೀಡೆ ಮತ್ತು ಈ ಹಿಂದೆ, ಕೃಷಿಯ ಭಾಗವಾಗಿ, ಭೂಮಾಲಿಕ ಗುತ್ತಿನ ದೊರೆಗಳ ದೌಲತ್ತಿನ ಭಾಗವಾಗಿ ಕಂಬಳವನ್ನು ಆಚರಿಸಲಾಗುತ್ತಿತ್ತು. ಇಂದು ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿಯನ್ನು ಕೈ ಬಿಡುತ್ತಾ ಬಂದಿದೆ. ಕೃಷಿ ಭೂಮಿಯೆಲ್ಲ ಬೃಹತ್ ಉದ್ಯಮಿಗಳ ಕೈವಶವಾಗಿದೆ. ಕೃಷಿ ಭೂಮಿಯನ್ನು ಕೈಗಾರಿಕೆಗಳಾಗಿ, ಬೃಹತ್ ಉದ್ದಿಮೆಗಳಾಗಿ ಪರಿವರ್ತಿಸಿದ ಬೃಹತ್ ಉದ್ಯಮಿಗಳೇ ಈ ಕಂಬಳಗಳ ಪೋಷಕರು ಎನ್ನುವುದನ್ನು ನಾವು ಗಮನಿಸಬೇಕು. ಕಂಬಳದಲ್ಲಿ ಜನಸಾಮಾನ್ಯರ ಪಾಲುದಾರಿಕೆ ವೀಕ್ಷಣೆಯಲ್ಲಿ ಮಾತ್ರ.
ಈಗಾಗಲೇ ಚರ್ಚೆಯಲ್ಲಿರುವಂತೆ, ಕಂಬಳದಲ್ಲಿ ತಿಳಿದೋ ತಿಳಿಯದೆಯೋ ಊಳಿಗಮಾನ್ಯ ವ್ಯವಸ್ಥೆಯೊಂದು ತಳಕು ಹಾಕಿಕೊಂಡಿದೆ. ಅಜಲು ಪದ್ಧತಿಯೂ ಕಂಬಳ ಕ್ರೀಡೆಯ ಸಂದರ್ಭದಲ್ಲಿ ಗುಟ್ಟಾಗಿ ಆಚರಿಸಲ್ಪಡುತ್ತದೆ. ಕಂಬಳ ಕರೆಯನ್ನು ಸಿದ್ಧಪಡಿಸಿ, ಹಿಂದಿನ ರಾತ್ರಿ ಕೊರಗರು ‘ಪನಿಕುಲ್ಲುನ’ ಎಂಬ ರೀತಿಯಲ್ಲಿ ಡೋಲು ಬಾರಿಸುವ ಪದ್ಧತಿಯಿದೆ. ಈ ಕೆಲಸವನ್ನು ಕೆಳಜಾತಿಯವರೇ ಮಾಡಬೇಕು ಹೊರತು, ತಮ್ಮ ಸಂಸ್ಕೃತಿ ಎಂದು ಕರಾವಳಿಯ ಇತರ ಜಾತಿಯವರು ಇದರಲ್ಲಿ ಭಾಗಿಯಾಗುವುದಿಲ್ಲ. ಹಾಗೆಯೇ ದುಡ್ಡಿನ ಕುಳಗಳು, ಜಮೀನ್ದಾರಿಗಳಾಗಿರುವ ಬಲಾಢ್ಯ ಜಾತಿಯ ಜನರೇ ಕೋಣಗಳ ಒಡೆಯರು. ಅದನ್ನು ಕೃಷಿಗಾಗಿ ಸಾಕಿರುವುದಿಲ್ಲ. ಬದಲಿಗೆ, ತಮ್ಮ ದೌಲತ್ತುಗಳನ್ನು ಪ್ರದರ್ಶಿಸುವುದಕ್ಕಾಗಿಯೇ ಸಾಕಲಾಗುತ್ತದೆ ಮತ್ತು ಈ ಕೋಣಗಳ ಪರಿಚಾರಿಕೆ ಮಾಡುವವರೂ ಕೆಳ ಜಾತಿಯವರು. ಕೋಣಗಳನ್ನು ಓಡಿಸುವವರೂ ನಿರ್ದಿಷ್ಟ ಜಾತಿಯವರೇ ಆಗಿರುತ್ತಾರೆ. ಕರಾವಳಿಯಲ್ಲಿಯೂ ಕಂಬಳ, ತಳಸ್ತರದ ಸಾಂಸ್ಕೃತಿಕ ಭಾಗೀದಾರಿಕೆಯನ್ನು ಪಡೆದುಕೊಂಡಿಲ್ಲ. ಬದಲಿಗೆ, ಮೇಲ್ಜಾತಿಯ ಹಿರಿಮೆಗಳನ್ನು ಎತ್ತಿ ಹಿಡಿಯುವ ಭಾಗವಾಗಿ ಕಂಬಳಗಳು ನಡೆಯುತ್ತವೆ. ಉಳಿದ ಕೆಳಜಾತಿಗಳೆಲ್ಲ ಈ ಕಂಬಳದಲ್ಲಿ ‘ಬಳಕೆ’ಯಾಗುತ್ತಾರಷ್ಟೇ. ಆದುದರಿಂದ ಕಂಬಳವನ್ನು ಇಡೀ ರಾಜ್ಯದ ಸಾಂಸ್ಕೃತಿಕ ಹಿರಿಮೆಯಾಗಿ ಬಿಂಬಿಸಿ, ಅದಕ್ಕಾಗಿ ವಿಶೇಷ ಅಧಿವೇಶನ ಕರೆಯುವ, ಕಾನೂನು ಜಾರಿಗೊಳಿಸುವ ಸರಕಾರದ ಕ್ರಮ ಕೇವಲ ಬೂಟಾಟಿಕೆಯಿಂದ ಕೂಡಿದೆ. ಇದೊಂದು ರಾಜಕೀಯ ತಂತ್ರವಾಗಿದೆ.
ಕರಾವಳಿ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ನಿಂತಿದೆ. ಬೃಹತ್ ಉದ್ಯಮಗಳು ಇಲ್ಲಿರುವ ಜನಸಾಮಾನ್ಯರ ಬದುಕನ್ನು ಕಿತ್ತು ತಿನ್ನುತ್ತಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಜನರ ಜೀವನದಿಯಾಗಿರುವ ನೇತ್ರಾವತಿ ನದಿ ನೀರಿಗೂ ಕುತ್ತು ಬರಲಿದೆ ಎಂಬ ಆತಂಕ ಜನರದು. ಈ ಆತಂಕವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಯಾವುದೇ ರಾಜಕೀಯ ನಾಯಕರೂ ಯಶಸ್ವಿಯಾಗಿಲ್ಲ. ಜೊತೆಗೆ ನೋಟು ನಿಷೇಧದಿಂದಾಗಿ ಮಂಗಳೂರಿನ ಉದ್ಯಮಗಳು ನೆಲಕಚ್ಚಿವೆ. ಇದೇ ಸಂದರ್ಭದಲ್ಲಿ ಕರಾವಳಿಯ ಹೈನೋದ್ಯಮಕ್ಕೂ ಕುತ್ತು ಬಂದಿದೆ. ನಕಲಿ ಗೋರಕ್ಷಕರಿಂದ ಗೋವುಗಳನ್ನು ಸಾಕುವುದು ಕಷ್ಟ ಎನ್ನುವಂತಹ ಸನ್ನಿವೇಶ ಎದುರಾಗಿದೆ. ಬಹು ಜನರ ಮೂಲಭೂತ ಆಹಾರದ ಹಕ್ಕಾಗಿರುವ ಗೋಮಾಂಸದ ವಿರುದ್ಧವೇ ಸಂಚು ನಡೆದಿದೆ. ಇವೆಲ್ಲವುಗಳ ಕಡೆಗೆ ಗಮನ ಹರಿಸಿ, ಜನರನ್ನು ಸಂಕಷ್ಟದಿಂದ ಮೇಲೆತ್ತ ಬೇಕಾಗಿರುವ ಸರಕಾರ, ಜನರ ಸಮಸ್ಯೆಗಳೆಲ್ಲ ಕಂಬಳದ ಜೊತೆ ತಳಕು ಹಾಕಿಕೊಂಡಿದೆ ಎಂದು ನಂಬಿಸಲು ಹೊರಟಿದೆ. ಕನಿಷ್ಟ ಎತ್ತಿನ ಹೊಳೆ ಯೋಜನೆಯ ಕುರಿತಂತೆಯಾದರೂ ಸರಕಾರ ಕರಾವಳಿಯ ಜನರ ಆತಂಕಕ್ಕೆ ತುರ್ತಾಗಿ ಸ್ಪಂದಿಸಬೇಕಾಗಿದೆ. ಗಂಭೀರ ಚರ್ಚೆ, ವಿನಿಮಯಗಳಾಗಬೇಕಾಗಿರುವುದು ಎತ್ತಿನ ಹೊಳೆ ಯೋಜನೆಯ ಕುರಿತಂತೆ. ಕರಾವಳಿಯ ಜನರು ಸಂಘಟಿತರಾಗಿ ಸಭೆಗಳನ್ನು ಮಾಡಬೇಕಾಗಿರುವುದು, ಸಮಾವೇಶಗಳನ್ನು ಹಮ್ಮಿಕೊಳ್ಳಬೇಕಾಗಿರುವುದು ನೇತ್ರಾವತಿ ನದಿ ನೀರನ್ನು ಉಳಿಸುವ ಹಿನ್ನೆಲೆಯಲ್ಲಿ. ನಾಳೆ, ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ಜನರ ಆತಂಕ ನಿಜವಾಗಿ ಬಿಟ್ಟರೆ ಮಂಗಳೂರು ನೀರಿಗಾಗಿ ಹಪಹಪಿಸಬೇಕಾಗುತ್ತದೆ. ಕೆಲವೇ ಕೆಲವು ವರ್ಗದ ತೆವಲಾಗಿರುವ ಕಂಬಳ ಉಳಿದರೂ, ಅಳಿದರೂ ಅದರಿಂದ ಜನಸಾಮಾನ್ಯರ ಬದುಕಿನಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಇಂದು ಎತ್ತಿನ ಹೊಳೆ ಯೋಜನೆ ಜಾರಿಗೊಳಿಸುವುದಕ್ಕಾಗಿ ಸರ್ವಪಕ್ಷದವರೂ ಒಂದಾಗಿ ನಿಂತಿದ್ದಾರೆ. ಕರಾವಳಿಯಲ್ಲಿ ಬಿಜೆಪಿಯೂ ಸೇರಿದಂತೆ ವಿವಿಧ ಪಕ್ಷಗಳ ಪ್ರತಿಭಟನೆ ಒಂದು ಪ್ರಹಸನವಷ್ಟೇ. ಇದೀಗ ಅವರೆಲ್ಲರೂ ಇಂದು ಕಂಬಳವನ್ನೇ ಕರಾವಳಿ ಜನರ ಮೂಲಭೂತ ಅಗತ್ಯ ಎಂದು ಬಿಂಬಿಸಿ, ಜನರ ಗಮನವನ್ನು ಎತ್ತಿನಹೊಳೆ ಯೋಜನೆಯಿಂದ ಬೇರೆಡೆಗೆ ಸರಿಯುವಂತೆ ಮಾಡಿದ್ದಾರೆ.
ಆದುದರಿಂದ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಕೋಣಗಳ ಬಾಲವನ್ನು ಬಿಟ್ಟು ಮತ್ತೆ ಎತ್ತಿನ ಬಾಲವನ್ನು ಹಿಡಿಯಬೇಕಾಗಿದೆ. ಎತ್ತಿನಹೊಳೆ ಯೋಜನೆಯ ಪರಿಣಾಮ, ದುಷ್ಪರಿಣಾಮಗಳ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ. ಕರಾವಳಿಯ ಜನರ ಮೂಲಭೂತ ಆವಶ್ಯಕತೆಗಳಿಗೆ, ಬೇಡಿಕೆಗಳಿಗೆ ಸಂಬಂಧ ಪಟ್ಟು ಸರಕಾರ ವಿಶೇಷ ಅಧಿವೇಶನ ಕರೆಯಲಿ, ವಿಶೇಷ ಸಭೆ ಹಮ್ಮಿಕೊಳ್ಳಲಿ. ಕಾನೂನನ್ನು ಜಾರಿಗೊಳಿಸಲಿ. ಕಂಬಳಕ್ಕಾಗಿ ಸರಕಾರ ಸಮಯವನ್ನು ವ್ಯರ್ಥ ಮಾಡುವುದು ಸಲ್ಲ. ಇದು ಕರಾವಳಿಯ ಬಹುಜನರ ಅಗತ್ಯವಂತೂ ಅಲ್ಲವೇ ಅಲ್ಲ.