ಆಯ್ಕೆ ಮತ್ತು ಆದ್ಯತೆ
ಸಾಂದರ್ಭಿಕ ಚಿತ್ರ (Gemini AI)
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಆದ್ಯತೆಗಳನ್ನು ಅಥವಾ ಪ್ರಾಮುಖ್ಯತೆಗಳನ್ನು ಗುರುತಿಸುವುದು; ಈ ಎರಡೂ ನಮ್ಮ ಜೀವನ ರೂಪಿಸುವ ಮಹತ್ವದ ಕೌಶಲ್ಯಗಳು. ಜೀವನದಲ್ಲಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಒಂದು ದಿಕ್ಕು ತೋರಿಸುವ ಸೂಚಕದಂತೆ ಮತ್ತು ಮಾರ್ಗದರ್ಶಿಯಂತೆ. ಸರಿಯಾದ ನಿರ್ಧಾರ ಸಾಮರ್ಥ್ಯವಿಲ್ಲದೆ ಹೋದರೆ ನಮ್ಮ ಬದುಕಿಗೆ ಅಗತ್ಯವಿರುವ ಅವಕಾಶಗಳು ಕೈ ತಪ್ಪುತ್ತವೆ, ಶಕ್ತಿ ನಷ್ಟವಾಗುತ್ತದೆ ಮತ್ತು ಅನಗತ್ಯ ಒತ್ತಡ ಹುಟ್ಟುತ್ತದೆ. ಉತ್ತಮ ನಿರ್ಧಾರ ಸಾಮರ್ಥ್ಯವಿರುವವರು ಪರಿಸ್ಥಿತಿಯನ್ನು ವಾಸ್ತವವಾಗಿ ನೋಡುವರು, ಉತ್ತಮ ಪ್ರತಿಫಲ ಮತ್ತು ಸಾಧ್ಯತೆ ಬಾಧ್ಯತೆಗಳನ್ನು ತೂಗಿ ನೋಡಿ, ತಮ್ಮ ವೌಲ್ಯಗಳಿಗೆ ಸರಿಹೊಂದುತ್ತಿರುವ ಆಯ್ಕೆಯನ್ನು ಮಾಡುವರು. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಜೀವನದ ಮೇಲೆ ನಿಯಂತ್ರಣದ ಭಾವನೆಯನ್ನೂ ಕೊಡುತ್ತದೆ.
ಅದರಂತೆಯೇ ಆದ್ಯತೆ ಮತ್ತು ಪ್ರಾಮುಖ್ಯತೆ ಗುರುತಿಸುವಿಕೆಯೂ ಕೂಡಾ ದಿನನಿತ್ಯದ ಕಾರ್ಯಕ್ಷಮತೆಯ ಹೃದಯ. ಎಲ್ಲ ಕೆಲಸಗಳೂ ಸಮಾನವಾಗಿರುವುದಿಲ್ಲ; ಯಾವುದು ತುರ್ತು, ಯಾವುದು ಮುಖ್ಯ, ಯಾವುದು ಬಿಡಬಹುದಾದುದು ಎಂಬ ಅರಿವು ಇಲ್ಲದಿದ್ದರೆ ಜೀವನ ಗೊಂದಲದಿಂದ ತುಂಬುತ್ತದೆ. ಸ್ಪಷ್ಟ ಆದ್ಯತೆ ಕೊಡುವವರು ಸಮಯವನ್ನು ಉಳಿಸುವರು, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವರು ಮತ್ತು ತಮ್ಮ ಗುರಿಗಳತ್ತ ವೇಗವಾಗಿ ಮತ್ತು ಸರಾಗವಾಗಿ ಸಾಗುವರು.
ಆದರೆ ಬಹಳಷ್ಟು ಜನರಿಗೆ ನಿರ್ಧಾರಗಳಲ್ಲಿ ಗೊಂದಲ ಉಂಟಾಗುವುದು ಮತ್ತು ಪ್ರಾಮುಖ್ಯತೆ ಗುರುತಿಸಲು ಆಗದಿರುವುದು ಏಕೆಂದು ಮನೋವೈಜ್ಞಾನಿಕ ದೃಷ್ಟಿಕೋನದಿಂದ ಗಮನಿಸಬೇಕು. ಯಾವುದೇ ವ್ಯಕ್ತಿಗೆ ನಿರ್ಧಾರ ತೆಗೆದುಕೊಳ್ಳುವುದು, ಕೆಲಸಗಳನ್ನು ಆದ್ಯತೆಯ ಪ್ರಕಾರ ಮಾಡುವುದು, ಜೀವನದಲ್ಲಿ ಯಾವುದು ಮೊದಲು ಮತ್ತು ಯಾವುದು ನಂತರ ಎಂಬುದನ್ನು ಗುರುತಿಸುವುದು ಮತ್ತೊಮ್ಮೆ ಕಷ್ಟವಾಗುತ್ತಿದ್ದರೆ ಅದೇನು ಮಾನಸಿಕ ಸಮಸ್ಯೆ ಎಂದೇನೂ ಪರಿಗಣಿಸಲಾಗದು. ಆದರೆ ನಾನಾ ಕಾರಣಗಳಿಂದ ಉಂಟಾಗುವ ಮನಸ್ಸಿನ ಕಾರ್ಯವೈಕಲ್ಯಗಳೊಂದರ ಸಂಕೇತವಾಗಿರುತ್ತದೆ.
ಸಾಮಾನ್ಯವಾಗಿ ಈ ಸಮಸ್ಯೆಯ ಮೂಲದಲ್ಲಿ ಎಕ್ಸಿಕ್ಯೂಟಿವ್ ಫಂಕ್ಷನ್ ಎಂದು ಕರೆಯುವ ಮೆದುಳಿನ ಸಾಮರ್ಥ್ಯ ಕುಂದಿರುವುದು ಕಾಣಬಹುದು. ಯೋಜನೆ, ಕ್ರಮಬದ್ಧತೆ, ಸಮಯ ನಿರ್ವಹಣೆ, ಆಯ್ಕೆ ಪ್ರಕ್ರಿಯೆ - ಇವುಗಳಲ್ಲಿ ವ್ಯತ್ಯಯವಾದಾಗ ವ್ಯಕ್ತಿಗಳು ಗೊಂದಲಕ್ಕೆ ಸಿಲುಕುತ್ತಾರೆ. ಹಲವು ಸಂದರ್ಭಗಳಲ್ಲಿ ಇದು ಸ್ವತಂತ್ರವಾಗಿ ಕಾಣಿಸಬಹುದು, ಮತ್ತೆ ಕೆಲವು ಸಂದರ್ಭಗಳಲ್ಲಿ ಇತರ ಮನೋವೈಜ್ಞಾನಿಕ ಸ್ಥಿತಿಗಳೊಂದಿಗೆ ಕೂಡ ಬರುತ್ತದೆ.
ಇದರಲ್ಲೇ ಪ್ರಮುಖವಾದುದು ಎಡಿಎಚ್ಡಿ - ವಿಶೇಷವಾಗಿ ಇನಟೆಂಟಿವ್ ಟೈಪ್. ಈ ಸ್ಥಿತಿಯಲ್ಲಿರುವವರು ಎಲ್ಲಾ ಕೆಲಸಗಳೂ ಒಂದೇ ತರಹ ತುರ್ತು ಅಥವಾ ಆತುರವಿಲ್ಲದಂತೆ ಕಾಣುವುದರಿಂದ ಆದ್ಯತೆ ಗುರುತಿಸಲು ಕಷ್ಟಪಡುವುದು ಸಾಮಾನ್ಯ. ಅವರ ಮೆದುಳಿನ ಡೋಪಮಿನ್ ವ್ಯವಸ್ಥೆಯ ವೈಶಿಷ್ಟ್ಯವೇ ಈ ಗೊಂದಲಕ್ಕೆ ಕಾರಣವಾಗಬಹುದು.
ಮತ್ತೊಂದು ಪ್ರಮುಖ ಕಾರಣ ಆತಂಕ (Anxiety Disorders). ಆತಂಕ ಹೆಚ್ಚಾದಾಗ ‘‘ತಪ್ಪಾದ ನಿರ್ಧಾರ ಮಾಡಿದರೆ?’’ ಎಂಬ ಭಯ ಮನಸ್ಸನ್ನು ಹಿಡಿದಿಡುತ್ತದೆ. ಪರಿಣಾಮವಾಗಿ ನಿರ್ಧಾರದಾಳ್ವಿಕೆ ನಿಧಾನವಾಗುತ್ತದೆ, ಕೆಲವೊಮ್ಮೆ ನಿಲ್ಲುತ್ತದೆ. ಇದನ್ನು "Decision Paralysis'$ ಎಂದು ಕರೆಯುತ್ತಾರೆ. ಖಿನ್ನತೆ ಕೂಡ ನಿರ್ಧಾರ ಸಾಮರ್ಥ್ಯವನ್ನು ಕಡಿಮೆ ಮಾಡಿ, ಎಲ್ಲ ಕೆಲಸಗಳೂ ಭಾರವಾಗಿರುವಂತೆ ತೋರ್ಪಡಿಸುತ್ತದೆ. ಏನು ಮಾಡಬೇಕು, ಏನು ಬಿಡಬೇಕು ಎಂಬುದನ್ನು ತಿಳಿಯುವುದೇ ಕಷ್ಟವಾಗುತ್ತದೆ.
ಕೆಲವರಲ್ಲಿ ಒಸಿಡಿ ಲಕ್ಷಣಗಳು ಇದ್ದರೆ ನಿರಂತರ ಅನುಮಾನಗಳು, ಮರುಪರಿಶೀಲನೆಗಳು ನಿರ್ಧಾರ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಮತ್ತೊಂದು ಗುಂಪಿನವರು ಬಾಲ್ಯದಿಂದ ಬಂದಿರುವ ಅತಿಯಾದ ಅನುಸರಣೆ ಅಥವಾ ತಾಳ್ಮೆಯ ವ್ಯಕ್ತಿತ್ವದಿಂದ ಇತರರ ಅಭಿಪ್ರಾಯಗಳ ಮೇಲೇ ನಿಂತು ನಿರ್ಧಾರ ಮಾಡುವುದಕ್ಕೆ ಅಭ್ಯಾಸವಾಗಿರುತ್ತದೆ.
ಇದಕ್ಕೆ ವಿರುದ್ಧವಾಗಿ ಕೆಲವರು ವಿಶ್ಲೇಷಣಾ ಗೊಂದಲ (Analysis Paralysis) ಎಂಬ ಸ್ಥಿತಿಯಲ್ಲಿ ಸಿಲುಕುತ್ತಾರೆ. ಹೆಚ್ಚು ಮಾಹಿತಿಯೂ, ಹೆಚ್ಚು ಆಯ್ಕೆಗಳೂ ಇರುವ ಕಾಲದಲ್ಲಿ ಮೆದುಳು ತಾನೇ ಆಯ್ಕೆ ಮಾಡಲು ತಯಾರಾಗುವುದಿಲ್ಲ.
ಒಟ್ಟಾರೆ ನಿರ್ಧಾರ ತೆಗೆದುಕೊಳ್ಳಲು ಆಗದಿರುವುದು ಮನಸ್ಸಿನ ಕಾರ್ಯವಿಧಾನ, ಭಾವಸ್ಥಿತಿ, ಮನೋವೈಜ್ಞಾನಿಕ ಒತ್ತಡಗಳು ಮತ್ತು ವ್ಯಕ್ತಿತ್ವ ಶೈಲಿಗಳ ಸಮೂಹ ಪರಿಣಾಮಗಳ ಮೇಲೆ ಅವಲಂಬಿತವಾಗಿರುತ್ತದೆ. ಸಹಾನುಭೂತಿಯಿಂದ, ಅರಿವಿನಿಂದ ಮತ್ತು ಸೂಕ್ತ ಮಾರ್ಗದರ್ಶನದಿಂದ ಈ ಸವಾಲನ್ನು ಸುಗಮವಾಗಿ ನಿಭಾಯಿಸಬಹುದು. ಸುಧಾರಣೆಗೆ ಕೆಲವು ಪರಿಣಾಮಕಾರಿ ಸಲಹೆಗಳೆಂದರೆ;
1. ಮೂರು ಪ್ರಶ್ನೆಗಳ ವಿಧಾನ: ‘‘ಇದು ನನಗೆ ಏಕೆ ಮುಖ್ಯ?’’, ‘‘ಪರಿಣಾಮವೇನು?’’, ‘‘ಇದನ್ನು ಈಗಲೇ ಮಾಡಬೇಕೆ?’’ ಈ ಮೂರು ಪ್ರಶ್ನೆಗಳು ನಿರ್ಧಾರಕ್ಕೆ ತಕ್ಷಣ ಸ್ಪಷ್ಟತೆ ತರುತ್ತವೆ.
2. ಟಾಪ್-3 ಎಂಬ ದಿನನಿತ್ಯ ನಿಯಮ: ಪ್ರತಿದಿನ ಅತ್ಯಂತ ಮುಖ್ಯವಾದ ಮೂರು ಕೆಲಸಗಳನ್ನು ಗುರುತು ಮಾಡಿ. ಉಳಿದವು ಪೂರಕ.
3. ಸನ್ಹೋವರ್ ಆದ್ಯತೆಗಳ ಚೌಕಟ್ಟು: ಇದರಲ್ಲಿ ಕೆಲಸಗಳನ್ನು ನಾಲ್ಕು ವಿಭಾಗಗಳಿಗೆ ಹಂಚಿಕೊಳ್ಳಬೇಕು: ತುರ್ತು ಮತ್ತು ಮುಖ್ಯ, ಮುಖ್ಯ ಆದರೆ ತುರ್ತು ಅಲ್ಲ, ತುರ್ತು ಆದರೆ ಮುಖ್ಯ ಅಲ್ಲ, ತುರ್ತು ಅಲ್ಲ ಮತ್ತು ಮುಖ್ಯವೂ ಅಲ್ಲ. ಇದರಿಂದ ಕೆಲಸಗಳ ಗೊಂದಲ ಮಾಯವಾಗುತ್ತದೆ.
4. ಎರಡು ನಿಮಿಷ ನಿಯಮ: ಎರಡು ನಿಮಿಷಗಳಲ್ಲಿ ಮಾಡುವ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಿ. ಇದು ನಿರ್ಧಾರ ಭಾರವನ್ನು ಕಡಿಮೆ ಮಾಡುತ್ತದೆ.
5. ಮನಶ್ಶಾಂತಿ ಅಭ್ಯಾಸಗಳು: ಆಳವಾದ ಉಸಿರಾಟ, ಚಿಕ್ಕ ನಡಿಗೆ, 60 ಸೆಕೆಂಡ್ ವೌನ - ಇವು ನಿರ್ಧಾರ ಗುಣಮಟ್ಟವನ್ನು ತಕ್ಷಣ ಸುಧಾರಿಸುತ್ತವೆ.
ಸರಿಯಾದ ನಿರ್ಧಾರ ಮತ್ತು ಆದ್ಯತೆಯ ಗುರುತಿಸುವ ಕೌಶಲ್ಯ ಯಶಸ್ಸು, ಸಮಾಧಾನ ಮತ್ತು ಸದೃಢ ಜೀವನಕ್ಕಾಗಿ ಅಗತ್ಯವಾದ ಎರಡು ಶಕ್ತಿಗಳು.