ಗೋವಿನ ಅಳಲು

Update: 2017-01-25 18:43 GMT

ಜನವರಿ ಪ್ರಜಾಪ್ರಭುತ್ವವನ್ನು ನೆನಪಿಸುವ ತಿಂಗಳು. ಜೊತೆಗೇ ಮಹಾತ್ಮನ ಪುಣ್ಯತಿಥಿಯೂ ಇರುವ ತಿಂಗಳು. ಈ ಎರಡನ್ನೂ ಏಕಕಾಲಕ್ಕೆ ಸಮಾಧಿಗೊಳಿಸುವ ದಿಕ್ಕಿನಲ್ಲಿ ಆಳುವವರು ಹೆಜ್ಜೆಯಿಟ್ಟಿದ್ದಾರೆ. ಬೀಫ್ ಮಾಡಿದರೆ ಮಾತ್ರ ಗೋವಿಗೆ ಅವಮಾನವಾಗುತ್ತದೆಂದು ತಿಳಿಯುವವರು ಜಲ್ಲಿಕಟ್ಟುವಿನ ಮೂಲಕ ಬೀಫ್ ತಯಾರಿಗೆ ಇನ್ನಷ್ಟು ನೆರವಾಗುತ್ತಿದ್ದಾರೆ.

ನಮ್ಮಲ್ಲಿ ಗೋವು ಒಂದು ಚರ್ಚೆಯ ಮಾತ್ರವಲ್ಲ, ಗೊಂದಲದ ಮತ್ತು ವಿವಾದದ ವಸ್ತುವಾಗಿರುವುದು ಸಂಸ್ಕೃತಿಯ ಒಂದು ಅಚ್ಚರಿ. ‘‘ಗಂಗೆ ಬಾರೇ ಗೌರಿ ಬಾರೇ ಕಾಮಧೇನು ನೀನು ಬಾರೇ’’ ಎಂದು ಗೊಲ್ಲನು ಕರೆವಾಗ ಅವನ ಹಟ್ಟಿಯಲ್ಲಿ ದನಗಳು ಮಾತ್ರ ಇದ್ದವು ಎಂದು ಅರ್ಥವಲ್ಲ. ಗೋ ಎಂದಾಗ ಹಾಲು ಕೊಡುವವು ಮಾತ್ರವಲ್ಲ, ಉಳುವ ಗಂಡು ಸಂತತಿಯನ್ನೂ ಗೋವೆಂದೇ ಗುರುತಿಸಬೇಕು. ನಂದಿ, ಬಸವಾದಿ ಕಲ್ಪನೆಗಳೆಲ್ಲವೂ ಎತ್ತಿನ ಪ್ರತಿಮೆಗಳೇ. ಎಲ್ಲ ಗೋಸಂಪತ್ತು ಅವನ ಜೀವ. ತಲತಲಾಂತರಗಳಿಂದ ಬಂದ ಈ ಜಾನಪದ ಹಾಡು ಸುಮಾರಾಗಿ ಪುರಾಣೀಭವಿಸಿದೆ. ಗೋಮಾಂಸ ತಿನ್ನುವವರೂ ಸೇರಿದಂತೆ ಸಮಾಜವು ಈ ಕಥೆಯನ್ನು ಒಂದು ಮಾನವೀಯ ಮೌಲ್ಯದ ಸೆಲೆಯಾಗಿ ಗುರುತಿಸಿದೆಯೇ ವಿನಾ ಯಾವುದೇ ಜಾತಿ-ಧರ್ಮ-ಪಂಗಡದ ಪರ-ವಿರೋಧವಾಗಿ ಅಲ್ಲ. ಮಾತುಕೊಟ್ಟದ್ದಕ್ಕಾಗಿ ತನ್ನ ಜೀವವನ್ನು ಅರ್ಪಿಸುವುದಕ್ಕಾಗಿ ಹುಲಿಯ ಬಳಿ ಬಂದ ಪುಣ್ಯಕೋಟಿ ಹೆಚ್ಚೇ ಅಥವಾ ಪುಣ್ಯಕೋಟಿಯ ಸತ್ಯಾತ್ಪತೆಯನ್ನು ಕಂಡು ಪಶ್ಚಾತಾಪ ಪಟ್ಟು ತನ್ನ ಜೀವವನ್ನೇ ತೆತ್ತ ಅರ್ಬುದ ಹೆಚ್ಚೇ ಎಂದು ಚರ್ಚೆ ನಡೆಸುವುದು ಅರ್ಥಹೀನವಾಗುತ್ತದೆ. ಆದರೆ ಈ ಜಾನಪದ ಹಾಡಿನಲ್ಲಿ ಗೋವನ್ನು ದೇವರಾಗಿ ಕಾಣದೆ ಒಂದು ಜೀವವಾಗಿ ಕಂಡಿದೆಯೆಂಬುದೇ ಮುಖ್ಯವಾಗುತ್ತದೆ.

ಕಳೆದ ವರ್ಷ ಇದೇ ಸಮಯಕ್ಕೆ ಈ ಅಂಕಣದ ಲೇಖನವೊಂದರಲ್ಲಿ ಅಂಶಿಕವಾಗಿ ಜಲ್ಲಿಕಟ್ಟುವಿನ ಕುರಿತು ಹೀಗೆ ಬರೆದಿದ್ದೆ: (ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಅದು ಭವಿಷ್ಯವಾಣಿಯಂತಿತ್ತು!) ‘‘(ಇನ್ನೊಂದು) ವಿಚಿತ್ರ ಮತ್ತು ದಾರುಣ ಪ್ರಸಂಗವೆಂದರೆ ತಮಿಳುನಾಡಿನ ಜಲ್ಲಿಕಟ್ಟು, ಮತ್ತು ಪ್ರಾಣಿಹಿಂಸೆಯ ಇಂತಹ ಅನೇಕ ಆಚರಣೆಗಳಿಗೆೆ ಸರ್ವೋಚ್ಚ ನ್ಯಾಯಾಲಯವು ನೀಡಿದ ತಡೆಯಾಜ್ಞೆ. ಕಳೆದ 4 ವರ್ಷಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನೆಲ್ಲೆಡೆ ಪೊಂಗಲ್ (ಕರ್ನಾಟಕದಲ್ಲಿ ಮಕರ ಸಂಕ್ರಾಂತಿ) ಸಂದರ್ಭದಲ್ಲಿ ನಡೆಯುವ ಜಲ್ಲಿಕಟ್ಟು ಎಂಬ, ಹೋರಿಗಳನ್ನು ಚಿತ್ರಹಿಂಸೆಗೊಳಪಡಿಸಿ ಮಣಿಸುವ, ಮತ್ತು ಈ ಕಾರಣದಲ್ಲಿ ಮನುಷ್ಯರೂ ಸಾವು-ನೋವಿಗೊಳಗಾಗುವ ಹಿಂಸಾತ್ಮಕ ಕ್ರೀಡೆಯನ್ನು ನಿಷೇಧಿಸಿತು. ಇದರಿಂದ ಎಲ್ಲ ಪ್ರಾಣಿದಯಾಪರರಿಗೂ ಸಂತೋಷವಾಗಿದೆ. ಅದರಲ್ಲೂ ಗೋವುಗಳನ್ನು ತಾಯಿಯಂತೆ ಪೂಜಿಸುವ, ಗೋಹತ್ಯೆಯನ್ನು ನಿಷೇಧಿಸಬೇಕೆಂದು ಅವಿರತ ಹೋರಾಟಮಾಡುವ ಮತ್ತು ಈ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ (ಸ್ವಘೋಷಿತ) ಗೋಭಕ್ತರಿಗಂತೂ ಖಂಡಿತವಾಗಿ ಸಂತೋಷವಾಗಿದೆಯೆಂದು ನಂಬಲಾಯಿತು. ಆದರೆ ಈ ಗೋಗೌರವವು (ಅಯೋಧ್ಯೆಯ ರಾಮಮಂದಿರ ನಿರ್ಮಾಣದಂತೆ) ಒಂದು ರಾಜಕೀಯ ನಡೆಯೆಂಬುದನ್ನು ಈ ಪ್ರಸಂಗವು ವಿಧಿತಗೊಳಿಸಿದೆ. ಕಳೆದ ವಾರ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಈ ನಿಷೇಧವನ್ನು ಅನೂರ್ಜಿತಗೊಳಿಸುವಂತೆ ಒಂದು ಆದೇಶವನ್ನು ಹೊರಡಿಸಿ ಜಲ್ಲಿಕಟ್ಟು ಎಂಬ ಹಿಂಸೆಗೆ ಅನುವುಮಾಡಿಕೊಟ್ಟಿತು. ಈ ಬಗ್ಗೆ ಯಾವ ಗೋಭಕ್ತರೂ ಚಕಾರವೆತ್ತಲಿಲ್ಲ. ಇದಕ್ಕೆ ಕಾರಣವೆಂದರೆ ಸದ್ಯದಲ್ಲೇ ತಮಿಳುನಾಡಿನಲ್ಲಿ ಚುನಾವಣೆ ಬರಲಿದೆ. ಮತೀಯ ಶಕ್ತಿಗಳು ಇಂತಹ ಜನಪ್ರಿಯ ದೊಂಬರಾಟಗಳನ್ನು ದುರುಪಯೋಗಪಡಿಸಿಯೇ ಅಧಿಕಾರಕ್ಕೆ ಬರಲು ಯತ್ನಿಸುತ್ತವೆ. ಪ್ರತೀ ಗೋವಿನ ಹಿಂದೆಯೂ ಅಸಂಖ್ಯಾತ ಗೋಮುಖ ವ್ಯಾಘ್ರಗಳಿರುವುದರಿಂದ ಬಹುಪಾಲು ಜನರ ಈ ಹಿಂಸಾತ್ಮಕ ಅಭಿರುಚಿಯಲ್ಲಿ ಗೋವಿನಂತಹ ಗೋವನ್ನು ರಕ್ಷಿಸುವವರು ಯಾರು?

ಗೋ-ಭಕ್ತರು ತೊಡಗುವ ಕುತರ್ಕವೆಂದರೆ ಜಲ್ಲಿಕಟ್ಟು ಗೋಹತ್ಯೆಯಂತಲ್ಲ; ಜಸ್ಟ್ ಕ್ರೀಡೆ. ಹಿಂಸೆ ಮತ್ತು ಕ್ರೌರ್ಯಕ್ಕೆ ಇಂತಹ ಬದನೆಕಾಯಿ ಸೀಮೆಗಳನ್ನಿಟ್ಟುಕೊಂಡರೆ ದೇಶ ಯಾವ ಹಂತಕ್ಕೆ ತಲುಪೀತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಸಂವೇದನಾರಹಿತ ಭಾವಕ್ಕೆ ಎಲ್ಲ ವಿಚಾರಗಳನ್ನೂ ವಿಕಾರಗೊಳಿಸುವ ಶಕ್ತಿಯಿರುತ್ತದೆ. ವಿಶೇಷವೆಂದರೆ ಈ ಆದೇಶ ಬಂದ ತಕ್ಷಣ ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಸಿಗದಂತೆ ಯತ್ನಿಸಿತು. ಆದರೂ ಅದೃಷ್ಟವಶಾತ್ ದೇಶದ ಪ್ರಾಣಿ ಕಲ್ಯಾಣಮಂಡಳಿಯು (ಅದರ ಅಧ್ಯಕ್ಷರೂ ತಮಿಳುನಾಡಿನವರೇ!) ಸರ್ವೋಚ್ಚ ನ್ಯಾಯಾಲಯದಲ್ಲಿ ತಕ್ಷಣ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿತು. ಪರಿಸ್ಥಿತಿಯ ಗಂಭೀರತೆಯ ಅರಿವಾದ ಸರ್ವೋಚ್ಚ ನ್ಯಾಯಾಲಯವು ಕೇವಿಯಟ್ ಇದ್ದರೂ ತಡೆಯಾಜ್ಞೆ ನೀಡಿತು. ಈ ಬಾರಿಯ ಪೊಂಗಲ್ ನಿಜಕ್ಕೂ ಗೋವುಗಳಿಗೆ ಕಳೆದ 4 ವರ್ಷಗಳಂತೆ ಅರ್ಥಪೂರ್ಣ. ಏಕೆಂದರೆ ಚುನಾವಣೆ ಎದುರಿಗಿದ್ದರೂ ಗೋವುಗಳನ್ನು ಸರ್ವೋಚ್ಚ ನ್ಯಾಯಾಲಯವೂ ಅದಕ್ಕೆ ಕಾರಣವಾದ ಪ್ರಾಣಿರಕ್ಷಣಾ ಮಂಡಳಿಯೂ ರಕ್ಷಿಸಿವೆ! ಕವುಚಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಇದನ್ನೂ ಅನೂರ್ಜಿತಗೊಳಿಸುವಂತೆ ಸುಗ್ರೀವಾಜ್ಞೆ ನೀಡಲು ಜಯಲಲಿತಾ ಕೇಂದ್ರ ಸರಕಾರವನ್ನು ಕೋರಿದರು. ಆದರೆ ಕೇಂದ್ರ ಸರಕಾರ ಅತ್ತ ದರಿ ಇತ್ತ ಪುಲಿ ಎಂಬಂತೆ ಜನರನ್ನೂ ನ್ಯಾಯಾಲಯವನ್ನೂ ಎದರುಹಾಕಿಕೊಳ್ಳಲಾರದೆ ನುಣುಚಿಕೊಂಡಿತು. ಇದು ಸ್ಪಷ್ಟವಾದದ್ದು ‘‘ಬೇಕಾದರೆ ರಾಜ್ಯ ಸರಕಾರವು ಸುಗ್ರೀವಾಜ್ಞೆ ತಂದರೆ ಅದನ್ನು ಕೇಂದ್ರವು ಬೆಂಬಲಿಸಲಿದೆ’’ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡು ಸರಕಾರಕ್ಕೆ ನೀಡಿದ ಅದ್ಭುತ ಸಲಹೆ: ಗೋವುಗಳಿಗೆ ಮತದಾನದ ಹಕ್ಕಿದ್ದರೆ ಇಂತಹ ಸಲಹೆಯಿರುತ್ತಿರಲಿಲ್ಲವೇನೊ? ಆಹಾ ಗೋ-ಭಕ್ತಿಯೇ!’’
(ಅನುಗಾಲ: ವಾ.ಭಾ.21.01.2016)

ವರ್ಷವೊಂದು ಕಳೆದಾಗ ಆಗಿರುವ ಬದಲಾವಣೆಯನ್ನು ಗಮನಿಸಿದರೆ ಈ ದೇಶದಲ್ಲಿರುವ ಪ್ರಜಾತಂತ್ರ ಎಂತಹದ್ದು ಎಂದು ಗೊತ್ತಾಗುತ್ತದೆ. ದೇಶವೆಂದರೆ ಅದರ ಪ್ರಜೆಗಳು ಎಂಬುದೇ ಪ್ರಜಾಪ್ರಭುತ್ವದ ನಿಜವಾದ ಸಂದೇಶ. ಆದರೆ ಜನರು ಶಕ್ತಿಯುತವಾಗಿ ಏನೇ ಹೇಳಿದರೂ ಅದನ್ನು ಎತ್ತಿಹಿಡಿಯುವುದು ಪ್ರಜಾತಂತ್ರವಾಗಲು ಸಾಧ್ಯವಿಲ್ಲ. ಬಹುಮತ ಸತ್ಯವೆಂದು ಭಾವಿಸುವುದು ತಪ್ಪು. ಅಂತಹ ಸಂದರ್ಭದಲ್ಲಿ ಹಠಹಿಡಿಯುವ ಮಗುವನ್ನು ಸಾಮ, ದಾನ, ಭೇದ, ದಂಡ ಎಂದು ಹೇಗೆ ಒಪ್ಪಿಸುತ್ತೇವೋ ಅಥವಾ ಮಣಿಸುತ್ತೇವೋ ಹಾಗೆಯೇ ಒಪ್ಪಿಸಬೇಕಾದ್ದು, ಮಣಿಸಬೇಕಾದ್ದು ದಕ್ಷ ಆಡಳಿತದ ಲಕ್ಷಣ.

ಈ ವರ್ಷ ಜಲ್ಲಿಕಟ್ಟು ನಡೆಯುವುದಿಲ್ಲವೆಂದು ಆಶಿಸಲಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ತಮಿಳುನಾಡಿನ ಜನ ಜಲ್ಲಿಕಟ್ಟು ಆಚರಿಸಲೇಬೇಕೆಂಬ ಒತ್ತಾಯದ ಚಳವಳಿ ಮಾಡಿದರು. ವಿಶೇಷವೆಂದರೆ ತಮಿಳುನಾಡಿನ ಸರಕಾರ ಈ ಚಳವಳಿಯ ಪರವಾಗಿ ನಿಂತಿತು. ತಮಿಳು ಚಿತ್ರರಂಗ ಮತ್ತು ಎಲ್ಲ ಜನಪ್ರಿಯ ವ್ಯಕ್ತಿಗಳು ಇದಕ್ಕೆ ಸಾಥ್ ನೀಡಿದರು. ಮುಖ್ಯಮಂತ್ರಿಗಳು ಪ್ರಧಾನಿಯವರನ್ನು ಭೇಟಿ ಮಾಡಿ ಜಲ್ಲಿಕಟ್ಟುವಿನ ಪ್ರಾಮುಖ್ಯತೆಯನ್ನು ವಿವರಿಸಿದರು. ಪರಿಣಾಮವಾಗಿ ಗೋರಕ್ಷಣೆಯ ಕೇಂದ್ರ ಸಚಿವ ಸಂಪುಟವೇ ತಮಿಳುನಾಡಿನ ಜಲ್ಲಿಕಟ್ಟು ಎಂಬ ಕ್ರೂರ ಕ್ರೀಡೆಗೆ ಶಾಸನಾತ್ಮಕ ಬೆಂಬಲವನ್ನು ಪೊಂಗಲ್‌ನ ಅದ್ದೂರಿ ಉಡುಗೊರೆಯಾಗಿ ನೀಡಿತು. ತಮಿಳುನಾಡು ಸರಕಾರ ಅಧ್ಯಾದೇಶವನ್ನು ಹೊರಡಿಸಿತು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕಾನೂನುಬದ್ಧವಾಯಿತು. ಇದನ್ನು ಶಾಸನವಾಗಿ ಮಾಡುವ ಪ್ರಕ್ರಿಯೆ ಇನ್ನೇನು ನಡೆಯಲಿದೆ- ಸರ್ವೋಚ್ಚ ನ್ಯಾಯಾಲಯವು ನಿಗದಿತ ಸಮಯದಲ್ಲಿ ಮತ್ತೆ ಮಧ್ಯಪ್ರವೇಶಿಸದಿದ್ದರೆ!

ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆಯು ವಿನೂತನವಾದದ್ದು. ಕಾಲಗತಿಯಲ್ಲಿ ಹಿಂದಕ್ಕೆ ಸರಿಯುವಲ್ಲಿ ಮತಾಂಧತೆಯ ಪಾಲು ದೊಡ್ಡದಿದೆ. ಆದರೆ ಸಂಸ್ಕೃತಿ-ಸಂಪ್ರದಾಯದ ಹೆಸರಿನಲ್ಲಿ ಜಾತಿ-ಮತ-ಧರ್ಮ ಎಲ್ಲವನ್ನೂ ಮೀರಿ ಜನರು ಒಟ್ಟಾಗಿ ಹೀಗೆ ರಿವರ್ಸ್ ಗೇರಿನಲ್ಲಿ ನಡೆದ ಉದಾಹರಣೆಗಳು ಕಮ್ಮಿ. ರಜನಿಕಾಂತ್, ಕಮಲ ಹಾಸನ್, ಎ.ಆರ್.ರೆಹ್ಮಾನ್ ಹೀಗೆ ತಮಿಳು ಚಿತ್ರರಂಗದ ಪ್ರಮುಖರು ಈ ಹಿಂದೆ ಸರಿಯುವ ಯಾತ್ರೆಯ ನಾಯಕರಾದರು. ಸಮರ್ಥಿಸಲಾಗದ ವಿಚಾರವೊಂದನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವನ್ನು ರಾಜ್ಯ ಸರಕಾರವೊಂದು ಬಗ್ಗುಬಡಿದ ಉದಾಹರಣೆಯು ಬೇರೊಂದಿಲ್ಲವೇನೋ? ಬೆಂಗಳೂರಿನಲ್ಲಿ ಕಾವೇರಿ ವಿವಾದದ ಗಲಭೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಕಾನೂನು ಮತ್ತು ಶಿಸ್ತುಪಾಲನೆಯ ಹೊಣೆಯು ರಾಜ್ಯ ಸರಕಾರದ ಮೇಲಿದ್ದು ಅಶಿಸ್ತು ಮತ್ತು ಗಲಭೆಯನ್ನು ನಿಯಂತ್ರಿಸದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುತ್ತದೆಂದು ಬೆದರಿಸಿ ಕರ್ನಾಟಕ ಸರಕಾರಕ್ಕೆ ಮೂಗುದಾರ ಹಾಕಿತು. ಆದರೆ ತಮಿಳುನಾಡು ಸರಕಾರಕ್ಕೆ ಅಂತಹ ಯಾವ ಸೂಚನೆಯೂ ಬರಲಿಲ್ಲ.

ಜಲ್ಲಿಕಟ್ಟುವಿಗೆ ಅನುಮತಿ ಬೇಡಿ ತಾಂಡವಗೊಂಡ ಹಿಂಸೆಯು ಅಧ್ಯಾದೇಶದ ಅನಂತರವೂ ನಿಲ್ಲಲಿಲ್ಲ. ಶಾಶ್ವತ ಪರಿಹಾರ ಕೋರಿ ಪ್ರತಿಭಟನಾನಿರತರು ಇನ್ನೂ ಬೀಚಿನಲ್ಲೇ ಉಳಿದು ಹಿಂಸೆಗೆ ತೊಡಗಿದರು. ಪೊಲೀಸರು ಬಲಾತ್ಕಾರವಾಗಿ ಅವರನ್ನು ನಿರ್ಯಾತಗೊಳಿಸಲಾರಂಭಿಸಿದಾಗ ಅದಕ್ಕೂ ಟೀಕೆಗಳು ಹುಟ್ಟಿಕೊಂಡವು.

ಅಟೊರಿಕ್ಷಾಗಳು ಮತ್ತಿತರ ವಾಹನಗಳು ಬೆಂಕಿಗಾಹುತಿಯಾಗುವ ವೀಡಿಯೊಗಳೊಂದಿಗೆ ಜಲ್ಲಿಕಟ್ಟುವಿನ ಭಯಾನಕ, ಬೀಭತ್ಸ ದೃಶ್ಯಾವಳಿಗಳೂ ಪ್ರಸಾರಗೊಂಡವು. ಜನರು ಕೇಕೇ ಹಾಕಿಕೊಂಡು ಎತ್ತುಗಳನ್ನು ಘಾಸಿಗೊಳಿಸುವ ಮತ್ತು ಕ್ರೌರ್ಯಗಳನ್ನು ಪ್ರದರ್ಶಿಸುವ ರೀತಿ ಮನುಷ್ಯಕುಲಕ್ಕೂ ಪ್ರಾಣಿಕುಲಕ್ಕೂ ಅಪಮಾನವೆಸಗುವಂತಿದ್ದವು. ಒಟ್ಟಿನಲ್ಲಿ ಮನುಷ್ಯನು ಪ್ರಯತ್ನಿಸಿದರೆ ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚು ದಕ್ಷತೆಯಿಂದ ಕೆಟ್ಟದನ್ನು ಮಾಡಬಲ್ಲನೆಂದು ತೋರಿಸಲಾಯಿತು. ಜಲ್ಲಿಕಟ್ಟುವಿನಲ್ಲಿ ಈಗಾಗಲೇ ಮೂವರು ಸತ್ತಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾನೂನುಬದ್ಧವಾದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ತೀರಿಕೊಂಡರೆ, ಗಾಯಗೊಂಡರೆ ಅವರಿಗೆ ಪರಿಹಾರ ನೀಡುವುದು ಸರಕಾರಗಳ ಕರ್ತವ್ಯವಾಗುತ್ತದೆ. ಆದ್ದರಿಂದ ಜಲ್ಲಿಕಟ್ಟುವಿನ ನೆಪದಲ್ಲಿ ಸಾರ್ವಜನಿಕ ಬೊಕ್ಕಸಕ್ಕೂ ಕೈಹಚ್ಚಬಹುದು. ಒಟ್ಟಿನಲ್ಲಿ ಯಾರದ್ದೊ ದುಡ್ಡು, ಎಲ್ಲವ್ವನ ಜಾತ್ರೆ!

ಗೋವನ್ನು ಅರಾಧಿಸದಿದ್ದರೂ ಸಾಧು ಪ್ರಾಣಿಯೆಂದಾದರೂ ನೋಡಬೇಕಲ್ಲ! ಮನುಷ್ಯನ ದುರಾವರ್ತನೆಗೆ ಅದನ್ನು ಬಲಿಪಶು ಮಾಡುವ ಇಂತಹದ್ದೊಂದು ಕ್ರೀಡೆಗೆ ಸಂಸ್ಕೃತಿ-ಸಂಪ್ರದಾಯದ ಹೆಸರಿನಲ್ಲಿ ಕೇಂದ್ರ ಸರಕಾರ ಮಣೆಹಾಕಿದ್ದು ಒಂದು ದೇಶೀ ದುರಂತ. ಈಗ ಕಂಬಳ, ಕೋಳಿ ಅಂಕ ಮುಂತಾದ ಕ್ರೀಡೆಗಳಿಗೆ ಸಹಸ್ರ ಬಾಹುಬಲ ಬಂದಂತಾಗಿದೆ. ಜನರು ಈ ಮತ್ತು ಇಂತಹ ಅಂಶಗಳನ್ನು ಮುಂದಿಟ್ಟುಕೊಂಡು ಇನ್ನೊಂದು ಅಧ್ಯಾದೇಶಕ್ಕೆ ಒತ್ತಾಯಿಸಿದರೆ ಮತ್ತು ಇವೆಲ್ಲದಕ್ಕೂ ಅರ್ಹತೆಯನ್ನು ನೀಡಿದರೆ ಯಾವುದೆಲ್ಲವನ್ನು ನಾವು ವಿನಾಶಕಾರಿಯೆಂದು, ಪ್ರತಿಗಾಮಿಯೆಂದು, ಮೂಢನಂಬಿಕೆಯೆಂದು ಅಳಿಸಿಹಾಕಲು ಯತ್ನಿಸಿದೆವೋ ಅವೆಲ್ಲಾ ಕೊಳ್ಳಿದೆವ್ವಗಳಂತೆ ಮುತ್ತಿಕೊಳ್ಳಬಹುದು. ಹುಡುಕುತ್ತ ಹೋದರೆ ಬಾಲ್ಯ ವಿವಾಹ, ಸತಿಸಹಗಮನ ಮಾತ್ರವಲ್ಲ, ನರಬಲಿಯೂ ಸಂಪ್ರದಾಯವೇ. ಆಗ ಈ ದೇಶದ ತುಂಬ ಮಾಟ-ಮಂತ್ರ ಛಿದ್ರ-ವಿಚ್ಛಿದ್ರಗಳು ತುಂಬಿಕೊಂಡು ಭಾರತವು ಅಖಂಡ ಮೂರ್ಖಸ್ಥಾನವಾಗುವುದು ಖಚಿತ. ಸಮಸ್ಯೆಯ ಇನ್ನೊಂದು ಮುಖ ಇನ್ನೂ ವಿಕಾರ. ಸಾಂವಿಧಾನಿಕವಾಗಿ ಬದುಕುವ ಹಕ್ಕು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆಯೆಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹೇಳಿದೆ. ನಾವು ರಕ್ಷಿಸಬೇಕಾದ ಮೂಕಪ್ರಾಣಿಗಳನ್ನು ಅಳಿಸುವ ಹಕ್ಕು ನಮಗಿಲ್ಲ. ಮನುಷ್ಯ ಕೇಂದ್ರಿತ ಬದುಕು ವಿಕೇಂದ್ರಿತಗೊಂಡು ಪಶು, ಪಕ್ಷಿ, ಪ್ರಾಣಿಗಳಿಗೂ ಸಮಾನ ಅವಕಾಶ ಲಭಿಸಿದೆ. ಹಸಿರನ್ನು ಉಳಿಸುವಂತೆಯೇ ವನ್ಯಪ್ರಾಣಿಗಳನ್ನೂ ರಕ್ಷಿಸುವ ಪ್ರಾಣಿದಯಾ ಸಂಘಗಳು ನಡೆಸುವ ಕೆಲಸಕಾರ್ಯಗಳಿಗೆ ಇಂತಹ ಪ್ರತಿಗಾಮೀ ನಡೆಗಳು ಮಾರಕವಾಗುತ್ತವೆ. ಸದ್ಯಕ್ಕಂತೂ ಕೇಂದ್ರ ಸರಕಾರವು ವಿವೇಚನಾ ರಹಿತವಾಗಿ-ಮುಖ್ಯ ಕಾರ್ಯಗಳನ್ನು ಬದಿಗೊತ್ತಿ, ಜನರಿಗಾಗುತ್ತಿರುವ ತೊಂದರೆಗಳಿಗೆ ಕಿವುಡಾಗಿ- ತನ್ನ ವೈಯಕ್ತಿಕ ವರ್ಚಸ್ಸಿಗೆ ನೆರವಾಗುವ/ನೆರವಾಗುತ್ತದೆಂದು ನಂಬುವ, ಇಂತಹ ನಾಟಕಗಳಿಗೆ ವೇದಿಕೆ ಸಿದ್ಧಗೊಳಿಸುತ್ತಿರುವುದು, ಆ ಮೂಲಕ ಮನುಷ್ಯನ ಹಿಂಸಾ ಪ್ರವೃತ್ತಿಯನ್ನು ಹೆಚ್ಚಿಸುತ್ತಿದೆ.

ಜನವರಿ ಪ್ರಜಾಪ್ರಭುತ್ವವನ್ನು ನೆನಪಿಸುವ ತಿಂಗಳು. ಜೊತೆಗೇ ಮಹಾತ್ಮನ ಪುಣ್ಯತಿಥಿಯೂ ಇರುವ ತಿಂಗಳು. ಈ ಎರಡನ್ನೂ ಏಕಕಾಲಕ್ಕೆ ಸಮಾಧಿಗೊಳಿಸುವ ದಿಕ್ಕಿನಲ್ಲಿ ಆಳುವವರು ಹೆಜ್ಜೆಯಿಟ್ಟಿದ್ದಾರೆ. ಬೀಫ್ ಮಾಡಿದರೆ ಮಾತ್ರ ಗೋವಿಗೆ ಅವಮಾನವಾಗುತ್ತದೆಂದು ತಿಳಿಯುವವರು ಜಲ್ಲಿಕಟ್ಟುವಿನ ಮೂಲಕ ಬೀಫ್ ತಯಾರಿಗೆ ಇನ್ನಷ್ಟು ನೆರವಾಗುತ್ತಿದ್ದಾರೆ. ಈಗಾಗಲೇ ಬ್ರೆಝಿಲ್ ದೇಶವನ್ನು ಹಿಂದಿಕ್ಕಿ ಭಾರತವು ಬೀಫ್ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆಯಂತೆ. ಈಗ ಗೋವಿನ ಸರದಿ: ಹೀಗೆ ಹಿಂಸೆ ಕೊಡುವ ಬದಲು ಕೊಂದುಬಿಡಿ! ಎಂದು ಪುಣ್ಯಕೋಟಿ ಗೋರಕ್ಷಕರತ್ತ ಮುಖ ಮಾಡಿ ಅಳುತ್ತಿದೆಯೇನೋ?

Writer - ಬಾಲಸುಬ್ರಮಣ್ಯ ಕಂಜರ್ಪಣೆ

contributor

Editor - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News