ವಿಶಿಷ್ಟವಾಗಿ ಪ್ರತಿರೋಧ ವ್ಯಕ್ತಪಡಿಸಿದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೆಡಲಿನ್ ಹೇಳಿದ್ದೇನು ?
ನ್ಯೂಯಾರ್ಕ್, ಜ.26: ಅಮೆರಿಕಕ್ಕೆ ಆಗಮಿಸುವ ವಲಸೆಗಾರರ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಸನಾತ್ಮಕ ಕ್ರಮ ಕೈಗೊಂಡರೆ ತಾನು ಮುಸ್ಲಿಮ್ ಎಂದು ನೋಂದಾಯಿಸಿಕೊಳ್ಳಲು ಸಿದ್ಧ ಎಂದು ಅಮೆರಿಕದ ಮಾಜಿ ವಿದೇಶಾಂಗ ಸಚಿವೆ ಮೆಡೆಲೀನ್ ಆಲ್‌ಬ್ರೈಟ್ ಹೇಳಿದ್ದಾರೆ.
ಕ್ಯಾಥೊಲಿಕ್ ಆಗಿ ಬೆಳೆದ ನಾನು ಮುಂದೆ ಕ್ಯಾಥೊಲಿಕ್ ಧಾರ್ಮಿಕ ನಾಯಕಿಯಾದೆ. ಬಳಿಕ ನನ್ನ ಕುಟುಂಬದವರು ಯೆಹೂದಿಗಳೆಂದು ತಿಳಿದು ಬಂತು. ಇದೀಗ ಏಕತೆಯ ದ್ಯೋತಕವಾಗಿ ಮುಸ್ಲಿಮ್ ಎಂದು ನೋಂದಾಯಿಸಿಕೊಳ್ಳಲು ಸಿದ್ಧಳಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ವಲಸೆಗಾರರ ಮೇಲೆ ನಾಲ್ಕು ತಿಂಗಳ ಕಾಲ ನಿಷೇಧ ಹೇರುವ ಬಗ್ಗೆ ಟ್ರಂಪ್ ಪರಿಗಣಿಸುತ್ತಿದ್ದಾರೆ ಎಂದು ಈ ಕುರಿತ ಕರಡು ಶಾಸನಾತ್ಮಕ ಮಸೂದೆಯಲ್ಲಿ ತಿಳಿಸಲಾಗಿದೆ. ಭಯೋತ್ಪಾದಕತೆಯ ವಿರುದ್ಧ ಹೋರಾಡಲು ಈ ನಿರ್ಧಾರ ಅತ್ಯಗತ್ಯ ಎಂದು ತಮ್ಮ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಆಶ್ವಾಸನೆ ನೀಡಿದ್ದರು.
ರಾಷ್ಟ್ರೀಯ ಭದ್ರತೆಗೆ ತೊಡಕಾಗಿರುವ ಅಮೆರಿಕ ಪ್ರವೇಶಿಸಲು ಯತ್ನಿಸುವ ಮುಸ್ಲಿಂ ವಲಸೆಗಾರರನ್ನು ನಿರ್ಬಂಧಿಸುವ ಬಲಿಷ್ಟ ಕ್ರಮ ಅತ್ಯಗತ್ಯ ಎಂದು ಟ್ರಂಪ್ ಹೇಳಿದ್ದರು.
2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಬೆಂಬಲಿಸಿದ್ದ ಮೆಡೆಲಿನ್, ಅಮೆರಿಕದ ‘ಸ್ಟಾಚ್ಯೂ ಆಫ್ ಲಿಬರ್ಟಿ’ (ಸ್ವಾತಂತ್ರ ಪ್ರತಿಮೆ)ಯ ಫೋಟೋವನ್ನು ಟ್ವೀಟ್ ಮಾಡಿದ್ದು ಜೊತೆಗೆ ಸಂದೇಶವನ್ನೂ ಬರೆದಿದ್ದಾರೆ- ನಿಮ್ಮ ದಣಿದ, ಬಡ, ಮೈ ಮುದುಡಿಕೊಂಡಿರುವ , ಮುಕ್ತವಾಗಿ ಉಸಿರಾಡಲು ಬಯಸುತ್ತಿರುವ ಜನಸಾಮಾನ್ಯರನ್ನು ನನಗೆ ನೀಡಿ. ಈ ಮನೆಯಿಲ್ಲದ ನಿರ್ಗತಿಕರನ್ನು ನನ್ನತ್ತ ಕಳುಹಿಸಿ. ನಾನವರನ್ನು ಎತ್ತಿಕೊಳ್ಳುತ್ತೇನೆ ಎಂದು ಸಂದೇಶದಲ್ಲಿ ಬರೆಯಲಾಗಿದೆ.
ಅಮೆರಿಕ ಎಲ್ಲರಿಗೂ ಮುಕ್ತವಾಗಿರಬೇಕು. ಎಲ್ಲಾ ಧರ್ಮೀಯರು ಅಥವಾ ವಿವಿಧ ಹಿನ್ನೆಲೆಯುಳ್ಳವರಿಗೆ .. ಎಂದೂ ಅವರು ಸೇರಿಸಿದ್ದಾರೆ.