ಡಯಾಲಿಸ್‌ನಿಂದ ಶೀಘ್ರ ಶಾಶ್ವತ ಮುಕ್ತಿ!

Update: 2017-02-21 12:56 GMT

ಚೆನ್ನೈ, ಜ.27: ಕಿಡ್ನಿ ರೋಗಿಗಳಿಗೆ ಶುಭ ಸುದ್ದಿ. ಇನ್ನು ಜೀವನ ಪರ್ಯಂತ ಡಯಾಲಿಸಿಸ್ ಅವಲಂಬಿಸಬೇಕಾದ ಯಾತನೆ ಇಲ್ಲ. ಹಿಡಿ ಗಾತ್ರದ ಕೃತಕ ಕಿಡ್ನಿ ಈ ದಶಕದ ಅಂತ್ಯದ ಒಳಗಾಗಿ ಮಾರುಕಟ್ಟೆಗೆ ಬರಲಿದೆ. ಈ ಸಾಧನವನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸರಣಿಯಾಗಿ ಸುರಕ್ಷತೆ ಮತ್ತು ದಕ್ಷತೆಯ ಪರೀಕ್ಷಾರ್ಥ ಪ್ರಯೋಗಗಳು ನಡೆಯುತ್ತಿವೆ. ಅಮೆರಿಕದಲ್ಲಿ ಈಗಾಗಲೇ ನೂರಾರು ರೋಗಿಗಳ ಮೇಲೆ ಈ ಪ್ರಯೋಗ ನಡೆದಿದ್ದು, ಎಫ್‌ಡಿಎ ಕೂಡಾ ಇದನ್ನು ಅಂಗೀಕರಿಸಿದೆ ಎಂದು ಸಹ ಸಂಶೋಧಕ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡಾ.ಶುವೊ ರಾಯ್ ಅವರು ಟ್ಯಾಂಕರ್ ವಾರ್ಷಿಕ ದತ್ತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಕಟಿಸಿದರು.

ಈ ಸಾಧನವನ್ನು ಹೊಟ್ಟೆಯಲ್ಲಿ ಅಳವಡಿಸಲಾಗುವುದು ಹಾಗೂ ಇದಕ್ಕೆ ಪೂರಕವಾಗಿ ಹೃದಯವೇ ರಕ್ತವನ್ನು ಶುದ್ಧೀಕರಿಸುವಂತೆ ಮತ್ತು ಮೂತ್ರಪಿಂಡದ ಇತರ ಕೆಲಸಗಳನ್ನು ನಿರ್ವಹಿಸುವಂತೆ ಮಾಡಲಾಗುತ್ತದೆ. ಹಾರ್ಮೋನ್‌ಗಳ ಉತ್ಪಾದನೆ, ರಕ್ತದ ಒತ್ತಡದಲ್ಲಿ ಸಹಕರಿಸುವುದು ಮತ್ತಿತರ ಕಾರ್ಯಗಳನ್ನು ಹೃದಯವೇ ನಿರ್ವಹಿಸುತ್ತದೆ ಎಂದು ಅವರು ವಿವರ ನೀಡಿದರು. ಸಾಂಪ್ರದಾಯಿಕ ಹಿಮೊಡಯಾಲಿಸಿಸ್‌ಗಿಂತ ಭಿನ್ನವಾಗಿ ಇದು ಕಾರ್ಯನಿರ್ವಹಿಸುತ್ತದೆ. ಹಿಮೊ ಡಯಾಲಿಸಿಸ್ ರಕ್ತದಿಂದ ವಿಷಕಾರಿ ಅಂಶವನ್ನಷ್ಟೇ ಶುದ್ಧೀಕರಿಸಿದರೆ, ಕೃತಕ ಕಿಡ್ನಿಯು, ರಕ್ತವನ್ನು ಶೋಧಿಸುವ ಮ್ಯಾಂಬ್ರೇನ್ ಹೊಂದಿರುತ್ತದೆ. ಜೀವಂತ ಕಿಡ್ನಿಯಲ್ಲಿ ಇರುವ ಕೋಶಗಳನ್ನು ಒಳಗೊಂಡ ಬಯೊ ರಿಯಾಕ್ಟರ್ ಕೂಡಾ ಕೃತಕ ಕಿಡ್ನಿಯಲ್ಲಿ ಇರುತ್ತದೆ. ಇದು ಡಯಾಲಿಸಿಸ್ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಹಿಂದಿನ ಡಯಾಲಿಸಿಸ್ ವಿಧಾನಕ್ಕಿಂತ ಸಮಗ್ರವಾಗಿ ಇದು ಕಿಡ್ನಿಯ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಬಹಿರಂಗಪಡಿಸಿದರು.

ಕೊನೆ ಹಂತದ ಮೂತ್ರಪಿಂಡ ರೋಗ ಎನ್ನಲಾದ ತೀವ್ರತರ ರೋಗದಿಂದಾಗಿ ಮೂತ್ರಪಿಂಡವು ದೇಹದ ದ್ರವಗಳಿಂದ ತ್ಯಾಜ್ಯಗಳನ್ನು ಶುದ್ಧೀಕರಿಸಲು ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ ರಕ್ತವನ್ನು ಕೃತಕವಾಗಿ ಶುದ್ಧಪಡಿಸಲು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಹೊಸ ಸಾಧನದಿಂದ ಈ ಎಲ್ಲ ಸಮಸ್ಯೆಗಳುಪರಿಹಾರವಾಗಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News