×
Ad

ಯುವಶಕ್ತಿ ಮತ್ತು ಜಲ್ಲಿಕಟ್ಟು

Update: 2017-01-29 00:13 IST

ರಾಜಕೀಯ ಪ್ರೇರಿತ ಹೋರಾಟಕ್ಕೂ ಈ ಯುವಜನರ ಹೋರಾಟಕ್ಕೂ ಬಹಳ ವ್ಯತ್ಯಾಸವನ್ನು ಕಾಣಬಹುದು. ಇದು ವಿದ್ಯಾವಂತ ಯುವಜನರ ಅಹಿಂಸಾತ್ಮಕ ಪ್ರತಿಭಟನೆ. ಯಾರೊಬ್ಬರೂ ಯಾವುದರ ಮೇಲೂ ಕಲ್ಲೆಸೆದಿಲ್ಲ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿಲ್ಲ. ಯಾರದೇ ಪ್ರತಿಕೃತಿ, ಟೈರ್ ದಹನ ಮಾಡಿ ಪರಿಸರ ಮಾಲಿನ್ಯವನ್ನೂ ಉಂಟು ಮಾಡಿಲ್ಲ. ಇಲ್ಲಿ ಎಲ್ಲವೂ ಶಾಂತಿಯುತ. ಯುವಜನರ ಬೃಹತ್ ಪ್ರಮಾಣದ ಶಕ್ತಿ ಪ್ರದರ್ಶನ!

 ನನಗೆ ನೂರು ಜನ ಸಮರ್ಥ ಯುವಕರನ್ನು ಕೊಡಿ; ಭಾರತವನ್ನು ಬದಲಾಯಿಸಿ ತೋರಿಸುತ್ತೇನೆ-ಇದು ಯುವಶಕ್ತಿಯ ಮಹತ್ವವನ್ನು ಅರಿತಿದ್ದ ಸ್ವಾಮಿ ವಿವೇಕಾನಂದರು ಹೇಳಿದ ಮಾತು. ಕಳೆದ ಕೆಲದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ಯುವಜನರ ಹೋರಾಟ ನಮಗೆ ಮತ್ತೆ ವಿವೇಕಾನಂದರ ಈ ಮಾತನ್ನು ನೆನಪಿಸುತ್ತದೆ. ತಮಿಳರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪಾರಂಪರಿಕ ಹಾಗೂ ಸಾಹಸ ಕ್ರೀಡೆ ಜಲ್ಲಿಕಟ್ಟು ನಿಷೇಧದ ಹಿನ್ನೆಲೆಯಲ್ಲಿ ಪೊಂಗಲ್ ದಿನದಂದು ಜಗತ್ತಿನ ಎರಡನೆ ಅತಿ ದೊಡ್ಡ ಬೀಚ್ ಎನಿಸಿಕೊಂಡಿರುವ ಮರೀನಾ ಕಡಲತೀರದಲ್ಲಿ ಕೇವಲ 25 ಜನ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಹೋರಾಟ, ಇಡೀ ದೇಶವನ್ನೇ ಬೆರಗುಗೊಳಿಸುವ ಹೆಮ್ಮರವಾಗಿ ಬೆಳೆಯಿತು.

ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಟ್ವಿಟ್ಟರ್‌ಗಳ ಮೂಲಕ ಚಳವಳಿಗಾರರು ಯುವಜನರಲ್ಲಿ ಹೋರಾಟದ ಕಿಡಿ ಹತ್ತಿಸಿದರು. ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಯುವಜನರು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಕಂಡು ಕೇಳರಿಯದ ಸಂಖ್ಯೆಯಲ್ಲಿ ಕಡಲಲೆಗಳಿಗೆ ಪೈಪೋಟಿ ಎಂಬಂತೆ ಅಲೆಯಲೆಯಾಗಿ ಕಡಲತೀರದಲ್ಲಿ ಸೇರಿ ಅಹೋರಾತ್ರಿ ಹೋರಾಟಕ್ಕೆ ಇಳಿದರು. ವಿದ್ಯಾರ್ಥಿಗಳು ಕಾಲೇಜು ತೊರೆದು ಹೋರಾಟಕ್ಕೆ ಧುಮುಕಿದ್ದರಿಂದ ಅನಿವಾರ್ಯವಾಗಿ ಕಾಲೇಜುಗಳಿಗೆ ರಜೆ ಘೋಷಿಸಬೇಕಾಯಿತು. ಐಟಿ ಉದ್ಯೋಗಿಗಳು ಕೆಲಸ ಬಿಟ್ಟು ಹೋರಾಟಕ್ಕೆ ಕೈಜೋಡಿಸಿದರು.

ಯುವಕರಂತೆ ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ರಾತ್ರಿಯಿಡೀ ಕಡಲತೀರದಲ್ಲೇ ವಾಸ್ತವ್ಯಹೂಡಿದ್ದು ಸಾಮಾನ್ಯ ಸಂಗತಿಯೇನಲ್ಲ. ಮಾಧ್ಯಮಗಳಲ್ಲಿ ವರದಿಯಾಗುವ ಹೆಣ್ಣಿನ ಮೇಲಿನ ದೌರ್ಜನ್ಯದ ಸುದ್ದಿಗಳು ಪೋಷಕರು ಹೆಣ್ಣು ಮಕ್ಕಳನ್ನು ಮನೆಯಾಚೆ ಕಳುಹಿಸಲು ಹಿಂಜರಿಯುವಂತೆ ಮಾಡಿವೆ. ಆದರೆ ಹೆಣ್ಣು ಗಂಡೆಂಬ ಭೇದವಿಲ್ಲದೆ ಒಟ್ಟೊಟ್ಟಿಗೆ ಕುಳಿತು ರಾತ್ರಿ-ಹಗಲು ಪ್ರತಿಭಟಿಸುತ್ತಿದ್ದರೂ ಇಲ್ಲಿ ಒಬ್ಬ ಹೆಣ್ಣುಮಗಳಿಗೂ ಯಾವುದೇ ತೊಂದರೆಯಾಗಿಲ್ಲ. ಇದನ್ನು ಗಮನಿಸಿದ ಎನ್‌ಡಿಟಿವಿ ಸಂಪಾದಕೀಯ ನಿರ್ದೇಶಕಿ ಸೋನಿಯಾಸಿಂಗ್ ‘‘ಸ್ತ್ರೀಯರನ್ನು ಗೌರವಿಸುವುದನ್ನು ಚೆನ್ನೈನ ಗಂಡಸರಿಂದ ದಿಲ್ಲಿಯವರು ಪಾಠ ಕಲಿಯಬೇಕು’’ ಎಂದು ಟ್ವೀಟ್ ಮಾಡಿದ್ದಾರೆ.

ರಾಜಕೀಯ ಪ್ರೇರಿತ ಹೋರಾಟಕ್ಕೂ ಈ ಯುವಜನರ ಹೋರಾಟಕ್ಕೂ ಬಹಳ ವ್ಯತ್ಯಾಸವನ್ನು ಕಾಣಬಹುದು. ಇದು ವಿದ್ಯಾವಂತ ಯುವಜನರ ಅಹಿಂಸಾತ್ಮಕ ಪ್ರತಿಭಟನೆ. ಯಾರೊಬ್ಬರೂ ಯಾವುದರ ಮೇಲೂ ಕಲ್ಲೆಸೆದಿಲ್ಲ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿಲ್ಲ. ಯಾರದೇ ಪ್ರತಿಕೃತಿ, ಟೈರ್ ದಹನ ಮಾಡಿ ಪರಿಸರ ಮಾಲಿನ್ಯವನ್ನೂ ಉಂಟು ಮಾಡಿಲ್ಲ. ಇಲ್ಲಿ ಎಲ್ಲವೂ ಶಾಂತಿಯುತ. ಯುವಜನರ ಬೃಹತ್ ಪ್ರಮಾಣದ ಶಕ್ತಿ ಪ್ರದರ್ಶನ!

ಯುವಜನರ ಹೋರಾಟದಿಂದ ಪ್ರಭಾವಿತರಾಗಿ ಹಿರಿಯರು, ಮಕ್ಕಳು, ಗರ್ಭಿಣಿಯರು ಸೇರಿದಂತೆ ಎಲ್ಲಾ ವಯೋಮಾನದವರೂ ಚಳವಳಿಯಲ್ಲಿ ಪಾಲ್ಗೊಳ್ಳುವಂತಾಯಿತು. ಮರೀನಾ ಬೀಚ್ ಒಂದರಲ್ಲೇ 5 ಲಕ್ಷಜನ ಹೋರಾಟ ನಡೆಸಿದ್ದಾರೆ. ತಮಿಳುನಾಡಿನ ವಿವಿಧೆಡೆ ಸುಮಾರು 25 ಲಕ್ಷ ಜನ ಪ್ರತಿಭಟನೆ ನಡೆಸಿದರೆಂದು ಮಾಧ್ಯಮಗಳು ವರದಿ ಮಾಡಿವೆ. ಜಲ್ಲಿಕಟ್ಟು ಚಳವಳಿಯನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜುರವರು ‘‘ಅತಿ ದೊಡ್ಡ ಸವಾಲನ್ನು ಎದುರಿಸಲು ಒಗ್ಗಟ್ಟಾಗಿರಬೇಕೆಂದು ಸಾರಿದ ತಮಿಳು ಜನರು ದೇಶಕ್ಕೆ ಮಾರ್ಗದರ್ಶಕರಾಗಿದ್ದಾರೆ. ಇದು ಚಾರಿತ್ರಿಕ ಹೋರಾಟ. ಭಾರತದ ಇತರ ಸಮಸ್ಯೆಗಳಿಗೂ ಇಂತಹ ಹೋರಾಟಗಳು ಅಗತ್ಯ’’ ಎಂದು ಶ್ಲಾಘಿಸಿದ್ದಾರೆ. ನಿಜ; ಇಂತಹ ಹೋರಾಟಗಳು ತಮಿಳು ನಾಡಿಗೆ ಮಾತ್ರ ಸೀಮಿತವಾಗಿರದೆ ದೇಶದ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ಭ್ರಷ್ಟಾಚಾರ, ಆರೋಗ್ಯ ಸೌಲಭ್ಯಗಳ ಕೊರತೆ, ಅಪೌಷ್ಟಿಕತೆ, ಪರಿಸರ ಮಾಲಿನ್ಯ, ಜಾತಿ ತಾರತಮ್ಯ ಮುಂತಾದವುಗಳ ವಿರುದ್ಧವೂ ನಡೆಯಬೇಕಿದೆ.

 ಜನರು ಜಾತಿ, ಧರ್ಮ, ಲಿಂಗಭೇದವಿಲ್ಲದೆ ಒಂದಾಗಬೇಕು; ಸಣ್ಣ ಸಣ್ಣ ದ್ವೀಪಗಳಾಗಿ ಉಳಿದಿರುವ ಸಮುದಾಯದ ಜನರು ಒಗ್ಗೂಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಹೋರಾಟ ಮಾದರಿಯಾಗಿದೆ. ಕಾನೂನುಗಳು ಕೇವಲ ಕಾನೂನಿಗಳಿಗಾಗಿ ಅಲ್ಲ, ಅವು ಜನರಿಗಾಗಿ; ಜನಾಭಿಪ್ರಾಯವೇ ನೆಲದ ಕಾನೂನುಗಳಾಗಬೇಕು. ಸರ್ವೋಚ್ಚ ನ್ಯಾಯಾಲಯ ಜಲ್ಲಿಕಟ್ಟು ನಿಷೇಧವನ್ನು ತೆರವುಗೊಳಿಸಲು ನಿರಾಕರಿಸಿದಾಗ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಚೆಲ್ಲಿ ಕುಳಿತವು. ಆದರೆ ಜನಶಕ್ತಿಯೆದುರು ಕೈಕಟ್ಟಿ ಕುಳಿತುಕೊಳ್ಳಲಾಗದ ಸರಕಾರಗಳು ಸುಗ್ರೀವಾಜ್ಞೆ ಹೊರಡಿಸಿ ಜಲ್ಲಿಕಟ್ಟು ನಡೆಸಲು ಅನುವು ಮಾಡಿಕೊಟ್ಟವು. ಯುವಜನರ ಹೋರಾಟದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಬಂದ ರಾಜಕಾರಣಿಗಳು ಮತ್ತು ಚಲನಚಿತ್ರ ನಟ-ನಟಿಯರನ್ನು ಅವರು ದೂರವಿಟ್ಟರು. ತಮ್ಮ ಸ್ವಾರ್ಥ ಸಾಧನೆಗಾಗಿ ಬರುವ ರಾಜಕಾರಣಿಗಳು ಮತ್ತು ಪ್ರಚಾರಕ್ಕಾಗಿ ಚಳವಳಿಗೆ ಬರುವ ನಟ-ನಟಿಯರಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಈ ಹೋರಾಟದಲ್ಲಿ ಯಾರೂ ನಾಯಕರಲ್ಲ, ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ನಾಯಕರೇ! ಮರೀನಾಬೀಚ್‌ನಲ್ಲಿ ಯಾವುದೇ ಪ್ರತಿಭಟನೆ ನಡೆಸಬಾರದೆಂಬ ನಿಷೇಧವಿದ್ದರೂ, ಪ್ರತಿಭಟನಾಕಾರರನ್ನು ಯಾರಿಂದಲೂ ತಡೆಯಲು ಸಾಧ್ಯವಾಗಲಿಲ್ಲ. ಸರಕಾರದವರು ರಾತ್ರಿ ವೇಳೆ ಬೇಕೆಂದೇ ವಿದ್ಯುತ್ ಕಡಿತಗೊಳಿಸಿ ಪ್ರತಿಭಟನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ಆದರೆ ಚಳವಳಿಗಾರರು ಮೊಬೈಲ್ ಬೆಳಗಿಸಿ ಪ್ರತಿಭಟನೆಯನ್ನು ಮುಂದುವರಿಸಿದರು. ಯುವಜನರು ಸಂಘಟಿತರಾಗುವುದನ್ನು ತಡೆಯಲು ಪೊಲೀಸರು ಮೊಬೈಲ್ ಜಾಮರ್‌ನ್ನು ಇಟ್ಟರು. ಆದರೆ ಐಟಿ ತಜ್ಞರಾದ ಯುವಕರು ಸ್ವಲ್ಪ ಹೊತ್ತಿನಲ್ಲೇ ಮೊಬೈಲ್ ಜಾಮರ್‌ನ್ನು ನಿಷ್ಕ್ರಿಯಗೊಳಿಸಿದರು! ತಮಿಳುನಾಡಿನ ಯುವಕರಿಂದ ಉತ್ತೇಜಿತರಾಗಿ ವಿದೇಶಗಳಲ್ಲಿ ನೆಲೆಸಿರುವ ತಮಿಳರು ಕೂಡ ಪ್ರತಿಭಟನೆಗಿಳಿದರು. ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದರು.

‘‘ಇದು ಕೊನೆಯಲ್ಲ ಪ್ರಾರಂಭ’’ ಎಂದಿರುವ ಯುವಜನರು, ಸರಕಾರಗಳು ಜನಪರವಾಗಿದ್ದು ಸಮಸ್ಯೆಯನ್ನು ಪರಿಹರಿಸಿದ್ದರೆ ನಾವೇಕೆ ಹೋರಾಟಕ್ಕೆ ಇಳಿಯಬೇಕಿತ್ತು? ಇನ್ನು ನಮಗೆ ಯಾವ ಪಕ್ಷವೂ ಬೇಡ, ನಾಯಕರೂ ಬೇಡ. ನಾವು ಯಾರನ್ನೂ ನಂಬೋದಿಲ್ಲ. ಮುಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆ, ಜಲವಿವಾದ, ಮದ್ಯಪಾನ ಹಾವಳಿ, ಮೀನುಗಾರರ ಬಂಧನ ಮೊದಲಾದ ಸಮಸ್ಯೆಗಳ ಕುರಿತೂ ಹೋರಾಡುತ್ತೇವೆ. ಸಾಮಾಜಿಕ ಜಾಲತಾಣಗಳ ಮೂಲಕ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ಸಾರಿದ್ದಾರೆ. ವಿದ್ಯಾರ್ಥಿ ಹಾಗೂ ಯುವಜನರ ಚಳವಳಿಗಳಿಗೆ ಚರಿತ್ರೆಯ ಪುಟಗಳಲ್ಲಿ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟ ಮತ್ತು ಸ್ವತಂತ್ರ ಭಾರತದ ವಿವಿಧ ಚಳವಳಿಗಳಲ್ಲಿ ಯುವಜನರು ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಕಳೆದೆರಡು ದಶಕಗಳಲ್ಲಿ ಅದರಲ್ಲೂ ಜಾಗತೀಕರಣದ ಬಳಿಕ ವಿದ್ಯಾರ್ಥಿ ಚಳವಳಿಗಳು ಗೌಣವಾಗಿವೆ. ಯುವಜನರನ್ನು ಅತಂತ್ರತೆ ಮತ್ತು ಅಭದ್ರತೆ ಕಾಡತೊಡಗಿದೆ. ಆದರೆ ಕಣ್ಣೆದುರು ನಡೆಯುತ್ತಿರುವ ಅನ್ಯಾಯದ ವಿರುದ್ಧ, ಜನರ ನ್ಯಾಯ ಸಮ್ಮತ ಬೇಡಿಕೆಗಳ ಪರ ಯುವ ಸಮುದಾಯ ದನಿಯೆತ್ತುವ ಅಗತ್ಯವಿದೆ.

ಜಾತಿಪದ್ಧತಿ, ಕೋಮುವಾದ, ಭ್ರಷ್ಟಾಚಾರ, ನಿರುದ್ಯೋಗ, ಭಯೋತ್ಪಾದನೆ ಮುಂತಾದ ಸಮಸ್ಯೆಗಳು ದೇಶವ್ಯಾಪಿಯಾಗಿರುವಾಗ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ರೈತರು ಮತ್ತು ಕಾರ್ಮಿಕರ ಬದುಕು ದುಸ್ತರವಾದಾಗ ದೇಶದ ಒಟ್ಟು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿರುವ ಯುವಜನರು ಮೂಕ ಪ್ರೇಕ್ಷಕರಾಗದೆ ಪ್ರತಿಭಟನೆಯ ಧ್ವನಿಯೆತ್ತಬೇಕಾಗುತ್ತದೆ. ಆ ಮೂಲಕ ಸ್ವಾಭಿಮಾನ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆತ್ಮಾಭಿಮಾನ ಬದಲಾವಣೆಗೆ ಪ್ರೇರಕ ಶಕ್ತಿಯಾಗಿದೆ. ಯೌವನದಲ್ಲಿ ಸಾಧಿಸಲಾಗದ್ದನ್ನು ಮುಪ್ಪಿನಲ್ಲಿ ಸಾಧಿಸಲು ಸಾಧ್ಯವಿಲ್ಲ.

Writer - ಐ. ಸೇಸುನಾಥನ್, ಮೈಸೂರು

contributor

Editor - ಐ. ಸೇಸುನಾಥನ್, ಮೈಸೂರು

contributor

Similar News

ಜಗದಗಲ

ಜಗ ದಗಲ