×
Ad

ಹೈಕೋರ್ಟ್ ತೀರ್ಪು : ಹಿಂಭಾಗದಲ್ಲಿ ಪಟ್ಟಿ ಇಲ್ಲದ ಮಹಿಳೆಯರ ಪಾದರಕ್ಷೆ ಚಪ್ಪಲಿಯಲ್ಲ

Update: 2017-01-29 20:55 IST

ಹೊಸದಿಲ್ಲಿ, ಜ.29: ಹಿಂಭಾಗದಲ್ಲಿ ಪಟ್ಟಿಯಿಂದ ಕಟ್ಟಲ್ಪಡದ ಮಹಿಳೆಯರ ಪಾದರಕ್ಷೆಯನ್ನು ಚಪ್ಪಲಿ ಎನ್ನಲಾಗದು. ಅದನ್ನು ಸ್ಯಾಂಡಲ್ ಎಂದು ಕರೆಯಬಹುದು ಎಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ.

ಸ್ಯಾಂಡಲ್‌ಗಳನ್ನು ರಫ್ತು ಮಾಡುವಾಗ ಶೇ.10ರಷ್ಟು ರಫ್ತು ಸುಂಕ ತೆರಬೇಕು. ಆದರೆ ಚಪ್ಪಲ್‌ಗಳನ್ನು ರಫು ಮಾಡುವವರು ಶೇ.5ರಷ್ಟು ರಫ್ತು ಸುಂಕ ಪಾವತಿಸಿದರೆ ಸಾಕು ಎಂಬ ನಿಯಮದ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಈ ತೀರ್ಪಿಗೆ ಮಹತ್ವವಿದೆ.

    ಪಾದರಕ್ಷೆ ರಫ್ತು ಮಾಡುವ ಓರ್ವ ಉತ್ಪಾದಕನಿಗೆ ವಿಧಿಸಲಾಗಿದ್ದ ಶೇ.10 ರಫ್ತು ಸುಂಕ ವನ್ನು ಮರು ಪಾವತಿಗೆ ನಿರಾಕರಿಸಿದ್ದ ಸರಕಾರ, ಆತ ರಫ್ತು ಮಾಡಿದ್ದ ಪಾದರಕ್ಷೆಗಳಿಗೆ ಹಿಂಬದಿಯಲ್ಲಿ ಬಿಗಿದು ಕಟ್ಟುವ ಪಟ್ಟಿ ಇಲ್ಲದ ಕಾರಣ ಅವು ಚಪ್ಪಲಿಯಾಗಿದೆ ಎಂದು ತಿಳಿಸಿತ್ತು. ಆದರೆ ಸರಕಾರದ ನಿರ್ಧಾರವನ್ನು ತಳ್ಳಿ ಹಾಕಿದ್ದ ಹೈಕೋರ್ಟ್, ಇವು ಚಪ್ಪಲಿಗಳಲ್ಲ. ಸ್ಯಾಂಡಲ್ ಎಂದು ತೀರ್ಪು ನೀಡಿದೆ.

   ಚೆನ್ನೈ ಮೂಲದ ಪಾದರಕ್ಷೆ ಉತ್ಪಾದಕರಾದ ವಿಶಾಲ್ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯೊಂದು 2003ರ ಮೇ ತಿಂಗಳಿನಲ್ಲಿ ‘ಮಹಿಳೆಯರ ಚರ್ಮದ ಸ್ಯಾಂಡಲ್’ ಎಂಬ ಹೆಸರಿನಲ್ಲಿ ಸರಕನ್ನು ರಫ್ತು ಮಾಡಿತ್ತು ಮತ್ತು ಶೇ.10ರಷ್ಟು ರಫ್ತು ಸುಂಕ ಮರುಪಾವತಿಗೆ ಕೋರಿಕೆ ಸಲ್ಲಿಸಿತ್ತು. ಆದರೆ ಹಿಂಬದಿಯಲ್ಲಿ ಬಿಗಿದು ಕಟ್ಟುವ ಪಟ್ಟಿ ಇಲ್ಲದ ಪಾದರಕ್ಷೆ ಸ್ಯಾಂಡಲ್ ಅಲ್ಲ, ಅದು ಚಪ್ಪಲ್ ಎಂದು ಸೀಮಾ ಸುಂಕ ಇಲಾಖೆ , ಈ ಕೋರಿಕೆಯನ್ನು ತಳ್ಳಿ ಹಾಕಿತ್ತು. ಈ ವಿಷಯವನ್ನು ಸಂಸ್ಥೆಯು ಚರ್ಮ ರಫ್ತು ಸಮಿತಿಯ ಗಮನಕ್ಕೆ ತಂದಿತ್ತು. ಈ ಸರಕು ಸ್ಯಾಂಡಲ್ ಹೌದು ಎಂದು ಸಮಿತಿ ಸ್ಪಷ್ಟಪಡಿಸಿತ್ತು.

  ಇದನ್ನು ಆಕ್ಷೇಪಿಸಿದ ಸೀಮಾ ಸುಂಕ ಇಲಾಖೆ, ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆಯ ಅಭಿಪ್ರಾಯ ಕೇಳಿತ್ತು. ಈ ಸಂಸ್ಥೆ ಸೀಮಾ ಸುಂಕ ಇಲಾಖೆಯ ವಾದವನ್ನು ಎತ್ತಿ ಹಿಡಿಯಿತು. ಈ ಹಿನ್ನೆಲೆಯಲ್ಲಿ , ಈಗಾಗಲೇ ಮರು ಪಾವತಿಸಿರುವ ಶೇ.10ರಷ್ಟು ಸುಂಕವನ್ನು ದಂಡ ಸಹಿತ ಮರಳಿಸುವಂತೆ ಇಲಾಖೆಯು ಪಾದರಕ್ಷೆ ಉತ್ಪಾದನಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.

ಈ ನೋಟಿಸನ್ನು ಪ್ರಶ್ನಿಸಿ, ಪಾದರಕ್ಷೆ ಉತ್ಪಾದನಾ ಸಂಸ್ಥೆ ದಿಲ್ಲಿ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News