ಇನ್‌ಸ್ಟಾಗ್ರಾಂನಲ್ಲಿ ಗಾಂಜಾ ಮಾರಾಟ:ರಮ್‌ಬಾಲ್ ಮತ್ತು ಭಾಂಗ್‌ನಿಂದ ಸ್ಫೂರ್ತಿ ಪಡೆದಿದ್ದ ವೈದ್ಯ!

Update: 2017-01-30 10:00 GMT

ಹೈದರಾಬಾದ್,ಜ.30: ಗಾಂಜಾ ಚಾಕ್ಲೇಟ್‌ಗಳ ತಯಾರಿಕೆ ಮತ್ತು ಮಾರಾಟದ ಆರೋಪದಲ್ಲಿ ಬಂಧಿತನಾಗಿರುವ ವೈದ್ಯ ಮಹಾಶಯ ವಿಸ್ಕಿ ಚಾಕ್ಲೇಟ್,ರಮ್ ಬಾಲ್ ಮತ್ತು ಹೋಳಿ ಸಂದರ್ಭ ಬಳಕೆಯಾಗುವ ಭಾಂಗ್‌ನಿಂದ ಸ್ಫೂರ್ತಿ ಪಡೆದು ಈ ದಂಧೆಗೆ ಕೈಹಾಕಿದ್ದನೆನ್ನಲಾಗಿದೆ.

ಡಾ.ಮುಹಮ್ಮದ್ ಸಜತ್ ಅಲಿ ಖಾನ್ ಬಂಧಿತ ವ್ಯಕ್ತಿ. ಸ್ವತಃ ಮರಿಜುವಾನಾದ ದಾಸನಾಗಿರುವ ಈತ ವಿಚಾರಣೆ ಸಂದರ್ಭ ಈ ವಿಷಯವನ್ನು ಬಾಯಿಬಿಟ್ಟಿದ್ದಾನೆ ಎಂದು ರಾಚಕೊಂಡ ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ ಅಲ್ಲದೆ ಬೆಂಗಳೂರು,ಚೆನ್ನೈ ಮತ್ತು ವೆಲ್ಲೂರುಗಳಲ್ಲಿಯೂ ಈತನಿಗೆ ಗಿರಾಕಿಗಳಿದ್ದಾರೆ ಮತ್ತು ಈ ಪೈಕಿ ಹೆಚ್ಚಿನವರು ಮಹಿಳೆಯರು ಮತ್ತು ವಿದ್ಯಾರ್ಥಿಗಳಾಗಿದ್ದಾರೆ ಎಂದರು.

ನೆಟ್ ಬ್ಯಾಂಕಿಂಗ್ ಮೂಲಕ ಗಿರಾಕಿಗಳಿಂದ ಹಣ ಪಡೆದುಕೊಂಡು ಗಾಂಜಾ ಚಾಕ್ಲೇಟ್‌ಗಳನ್ನು ಕೊರಿಯರ್ ಮೂಲಕ ರವಾನಿಸುತ್ತಿದ್ದ ಈತ ತನ್ನ ಈ ಅಕ್ರಮ ದಂಧೆಯ ಮೂಲಕ ಸುಮಾರು 40,000 ರೂ.ಗಳನ್ನು ಗಳಿಸುತ್ತಿದ್ದ ಎಂದು ವಿಶೇಷ ಕಾರ್ಯಾಚರಣೆ ತಂಡದ ಇನ್‌ಸ್ಪೆಕ್ಟರ್ ನರಸಿಂಗ್ ರಾವ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಇನ್‌ಸ್ಟಾಗ್ರಾಂ ಮೂಲಕ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದ ಖಾನ್‌ಗೆ ಸುಮಾರು 700-800 ಫಾಲೋವರ್‌ಗಳಿದ್ದರು. ಈ ಪೈಕಿ ಎಷ್ಟು ಜನರು ಆತನ ಗಿರಾಕಿಗಳಾಗಿದ್ದರು ಎನ್ನುವುದನ್ನು ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಖಾನ್ ತಂದೆ ಕುತುಬ್ ಅಲಿ ಖಾನ್ ಹಿಂದೆ ದುಬೈನಲ್ಲಿ ಕೆಲಸ ಮಾಡಿದ್ದು, ಇತ್ತೀಚೆಗೆ ನಿಧನರಾಗಿದ್ದರು. ಗಾಂಜಾ ಮಾರಾಟದಲ್ಲಿ ಈತ ತೊಡಗಿಕೊಳ್ಳಲು ಇದು ಒಂದು ಕಾರಣವಾಗಿತ್ತೆನ್ನಲಾಗಿದೆ. ಈತ ತಯಾರಿಸುತ್ತಿದ್ದ ವಿವಧ ಚಾಕ್ಲೇಟ್‌ಗಳು  x,xx,xxx,4x,5x,-5x  ಹೀಗೆ ಗಾಂಜಾದ ಪ್ರಮಾಣವನ್ನು ಸೂಚಿಸುವ ವಿವಿಧ ಸಂಕೇತಾಕ್ಷರಗಳನ್ನು ಹೊಂದಿರುತ್ತಿದ್ದವು. ಉದಾಹರಣೆಗೆ ಚಾಕ್ಲೇಟ್ 15 ಗ್ರಾಂ ಗಾಂಜಾ ಒಳಗೊಂಡಿರುತ್ತಿತ್ತು.

ಇನ್‌ಸ್ಟಾಗ್ರಾಂನಲ್ಲಿ ಖಾನ್‌ನ ಪೋಸ್ಟಿಂಗ್ ನೋಡಿದ ಗಿರಾಕಿ ಕರೆ ಮಾಡಿದರೆ ಈತ ತನ್ನ ಚಾಕ್ಲೇಟ್‌ನ ‘ವಿಶೇಷ ’ವನ್ನು ತಿಳಿಸುತ್ತಿದ್ದ. ಈತನ ಅಕ್ರಮ ವ್ಯವಹಾರದ ಬಗ್ಗೆ ಖಾನ್ ಕುಟುಂಬಕ್ಕೆ ಗೊತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಈ ದಂಧೆಗೆ ಗಾಂಜಾವನ್ನು ಈತ ಸ್ಥಳೀಯವಾಗಿ ಖರೀದಿಸುತ್ತಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News