ಜಾಮೀನಿಗಾಗಿ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ ಅಸಾರಾಮ್ ವಿರುದ್ಧ ಎಫ್ ಐ ಆರ್
ಹೊಸದಿಲ್ಲಿ, ಜ.31: ತನ್ನ ಆರೋಗ್ಯಕ್ಕೆ ಸಂಬಂಧಿಸಿದಂತೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ ವಿವಾದಿತ 'ದೇವಮಾನವ' ಅಸಾರಾಮ್ ಬಾಪು ವಿರುದ್ಧ ಎಫ್.ಐ.ಆರ್. ದಾಖಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆಯಲ್ಲದೆ, ಈ ಬಗ್ಗೆ ತನಿಖೆ ನಡೆಸುವಂತೆ ಕೂಡ ನಿರ್ದೇಶನ ನೀಡಿದೆ.
ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲೂ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅವರ ಆರೋಗ್ಯ ಸ್ಥಿತಿಯಲ್ಲಿ ಏನೂ ಗಂಭೀರತೆ ಇಲ್ಲದೇ ಇರುವುದರಿಂದ ಹಾಗೂ ಆರೋಪಿ ಉದ್ದೇಶಪೂರ್ವಕವಾಗಿ ವಿಚಾರಣೆ ವಿಳಂಬಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಹೇಳಿದೆ.
ಅಸಾರಾಂ ಅವರು ಕರುಳಿನ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಜೋಧಪುರ ಕೇಂದ್ರ ಕಾರಾಗೃಹದ ಸುಪರಿಂಟೆಂಡೆಂಟ್ ಅವರು ಬರೆದಿರುವ ಪತ್ರವು ಫೋರ್ಜರಿಯೆಂದು ತಿಳಿದು ಬಂದ ನಂತರ ಮೇಲಿನ ಬೆಳವಣಿಗೆ ನಡೆದಿದೆ. ಆಶ್ಚರ್ಯವೆಂಬಂತೆ ಅಸಾರಾಮ್ ಕೂಡ ಆ ಪತ್ರ ನಕಲಿ ಎಂದು ಒಪ್ಪಿಕೊಂಡಿದ್ದಾರೆ. ಅವರ ವೈದ್ಯಕೀಯ ಸ್ಥಿತಿ ಸ್ಥಿರವಾಗಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಎಐಐಎಂಎಸ್ ವೈದ್ಯಕೀಯ ಮಂಡಳಿ ಹೇಳಿದೆ.
ಫೋರ್ಜರಿ ಪತ್ರದ ಮೂಲಕ ನ್ಯಾಯಾಲಯವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ ಅಸಾರಾಮ್ ನನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ಜಸ್ಟೀಸ್ ಎನ್.ವಿ.ರಮಣ ಅವರನ್ನೊಳಗೊಂಡ ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇಂತಹ ಒಂದು ತಪ್ಪನ್ನು ಕೇವಲ ಕ್ಷಮೆ ಯಾಚಿಸುವ ಮೂಲಕ ಸರಿಪಡಸಲಾಗದು ಎಂದು ಹೇಳಿದ ನ್ಯಾಯಾಲಯ, ಈ ಬಗ್ಗೆ ತನಿಖೆಗೆ ಆದೇಶಿಸಿದೆ.