ಸುರಕ್ಷತಾ ಗಾರ್ಡ್ ನಿಂದಲೇ ಬರ್ಬರ ಕೊಲೆಯಾದ ಯುವ ಇನ್ಫೋಸಿಸ್ ಟೆಕ್ಕಿ
ಪುಣೆ ಜ.31: ನಗರದ ಹಿಂಜೇವಾಡಿಯಲ್ಲಿರುವ ರಾಜೀವ್ ಇನ್ಫೋಟೆಕ್ ಪಾರ್ಕ್ ನಲ್ಲಿನ ಇನ್ಫೋಸಿಸ್ ಕಟ್ಟಡದ ಒಂಬತ್ತನೆ ಮಹಡಿಯಲ್ಲಿ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್ ನಿಂದಲೇ ಕೊಲೆಗೀಡಾದ ಕೇರಳ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ರಸೀಲಾ ರಾಜು ಒ.ಪಿ. ಪ್ರಕರಣವು ಪ್ರತಿಷ್ಠಿತ ಕಂಪೆನಿಗಳ ಕಚೇರಿಯೂ ಮಹಿಳೆಯರಿಗೆ ಸುರಕ್ಷಿತವಲ್ಲವೆಂಬುದನ್ನು ಸ್ಪಷ್ಟಪಡಿಸಿದೆ.
ಘಟನೆ ಇನ್ಫೋಸಿಸ್ ನ ಕಾನ್ಫರೆನ್ಸ್ ರೂಂನಲ್ಲಿ ರವಿವಾರ ನಡೆದಿದ್ದು, ಪೊಲೀಸರು ಆರೋಪಿ ಅಸ್ಸಾಂ ಮೂಲದ ಭಾಬೆನ್ ಸೈಕಿಯಾನನ್ನು ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಬಂಧಿಸಿದ್ದರು. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ ಫೆಬ್ರವರಿ 4ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ರಸೀಲಾ ಅವರು ರವಿವಾರ ಅಪರಾಹ್ನ 2:30ಕ್ಕೆ ಕಚೇರಿಗೆ ಬಂದಿದ್ದು, ಅವರ ಹಿಂದಿನ ಶಿಫ್ಟ್ ನ ಸಹೊದ್ಯೋಗಿ ಹೊರಟು ಹೋದ ನಂತರ ಒಬ್ಬಂಟಿಯಾಗಿದ್ದರು. ಆದರೆ ಸಂಸ್ಥೆಯ ಬೆಂಗಳೂರಿನ ತಂಡದ ಸದಸ್ಯರು ರಸೀಲಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ದೂರಿದಾಗ ಪರಿಶೀಲಿಸಿದಾತ ಅವರು ಸತ್ತು ಬಿದ್ದಿರುವುದು ಕಂಡು ಬಂದಿತ್ತು.
ಪೊಲೀಸರ ಪ್ರಕಾರ ರವಿವಾರ ಅಪರಾಹ್ನ ರಸೀಲಾ ಅವರು ಆರೋಪಿ ತನ್ನನ್ನು ದಿಟ್ಟಿಸಿ ನೋಡುತ್ತಿರುವುದನ್ನು ತಿಳಿದು ಅದಕ್ಕೆ ಆಕ್ಷೇಪಿಸಿದ್ದರಲ್ಲದೆ ದೂರು ನೀಡುವುದಾಗಿಯೂ ಹೇಳಿದ್ದರು. ಕೆಲಸದ ಒಂದು ಸಣ್ಣ ಬ್ರೇಕ್ ತೆಗೆದುಕೊಂಡ ನಂತರ ಆಕೆ ತನ್ನ ಕಚೇರಿಗೆ ಮತ್ತೆ ಮರಳಿದಾಗ ಕೆಲ ಕಂಪ್ಯೂಟರ್ ಗಳ ಮಾಹಿತಿ ಕಲೆ ಹಾಕುವ ನೆಪದಲ್ಲಿ ಆಕೆಯ ಹಿಂದೆಯೇ ಒಳಕ್ಕೆ ಬಂದು ಆರೋಪಿ ಆಕೆಯೊಡನೆ ವಾಗ್ವಾದಕ್ಕಿಳಿದಿದ್ದ. ಆಕೆಯ ಮುಖಕ್ಕೆ ಬಡಿದು ಕಂಪ್ಯೂಟರ್ ಕೇಬಲನ್ನು ಕುತ್ತಿಗೆಗೆ ಬಿಗಿದು ನಂತರ ಆಕೆಯ ಪ್ರವೇಶಾತಿ ಕಾರ್ಡ್ ಉಪಯೋಗಿಸಿ ಅಲ್ಲಿಂದ ಹೊರನಡೆದಿದ್ದ.
ರಸೀಲಾ ಕೊಲೆ ನಡೆಸಿದ ನಂತರ ತಾನೂ ಸಾಯಬೇಕೆಂದು ನಿರ್ಧರಿಸಿ ಟೆರೇಸಿಗೆ ಹೋಗಿದ್ದರೂ, ಇನ್ನೊಬ್ಬ ಗಾರ್ಡ್ ಆತನನ್ನು ತಡೆದಿದ್ದ. ನಂತರ ತನ್ನ ತಾಯಿಗೆ ಕರೆ ಮಾಡಿ ನಡೆದಿದ್ದನ್ನು ಹೇಳಿದಾಗ ಶರಣಾಗುವಂತೆ ಆಕೆ ಸಲಹೆ ನೀಡಿದ್ದರೂ ಅದಕ್ಕೆ ಕಿವಿಗೊಡದೆ ಛತ್ರಪತಿ ಶಿವಾಜಿ ಟರ್ಮಿನಸ್ ಗೆ ಆಗಮಿಸಿ ಅಲ್ಲಿಂದ ಪರಾರಿಯಾಗಲು ಯೋಚಿಸಿದ್ದ. ಆದರೆ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದ.