ಅಪೂರ್ವ ಮದುವೆ: 77ವರ್ಷದ ವರ,75ವರ್ಷದ ಜರ್ಮನಿ ವಧು !
ಬಿಹಾರ, ಜ.31: ರಾಜ್ಯದ ಜುಮಯಿ ಜಿಲ್ಲೆ ಅಪೂರ್ವ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ಜರ್ಮನಿಯ 75ವರ್ಷದ ಮಹಿಳೆಮತ್ತು 77ವರ್ಷದ ಅನಿವಾಸಿ ಭಾರತೀಯ ವ್ಯಕ್ತಿ ನಡುವೆ ಮದುವೆ ನಡೆದಿದೆ.ಜುಮಯಿ ಜಿಲ್ಲೆಯ ಗಿದ್ದೌರ್‌ನ ಅನಿವಾಸಿ ಭಾರತೀಯ ಶತ್ರುಘ್ನ ಪ್ರಸಾದ್ ಸಿಂಗ್ ಹಾಗೂ ಜರ್ಮನಿಯಿಂದ ಬಂದ ಇಡಲ್ಟ್ರಡ್ ಹಬೀಬ್ ಪರಸ್ಪರ ವಿವಾಹಿತರಾಗಿದ್ದಾರೆ. ಇಡಲ್ಟ್ರಡ್ ಪತಿಯ ನಿಧನದ ನಂತರ ಒಂಟಿ ಜೀವನ ಸಾಗಿಸುತ್ತಿದ್ದರು.
ತನ್ನ ಪತ್ನಿ 2014ರಲ್ಲಿ ನಿಧನರಾಗಿದ್ದರು. ಆದ್ದರಿಂದ ನಾವಿಬ್ಬರೂ ಪರಸ್ಪರ ನಿಕಟವಾದೆವು ಎಂದು ಶತ್ರುಘ್ನ ಪ್ರಸಾದ್ ಮಾಧ್ಯಮಗಳಿಗೆತಮ್ಮ ಪ್ರೇಮ ಸಂಬಂಧ ವಿವಾಹದಲ್ಲಿ ಪರ್ಯಾವಸಾನಗೊಂಡ ಕತೆಯನ್ನುವಿವರಿಸಿದ್ದಾರೆ. ಇವರಿಬ್ಬರು ಮೊದಲು ಸೋಶಿಯಲ್ ಮೀಡಿಯದಲ್ಲಿ ಪರಸ್ಪರ ಪರಿಚಿತರಾಗಿದ್ದರು.
ಪಂತೇಶ್ವರ್ ಮಂದಿರದಲ್ಲಿ ಈ ಇಬ್ಬರು ಹಿರಿಯರು ಮದುವೆ ಮಾಡಿಕೊಂಡಿದ್ದಾರೆ.
ಕುಟುಂಬದ ಬಯಕೆಯಂತೆ ಭಾರತದಲ್ಲಿ ಮದುವೆ ಮಾಡಿಕೊಂಡೆವು ಎಂದು ಶತ್ರುಘ್ನ ತಿಳಿಸಿದ್ದಾರೆ. ಮದುಮಗಳು ಕೂಡಾ ಸಂತಸ ವ್ಯಕ್ತಪಡಿಸಿದ್ದು, ಅವರು ಈಗ ಹಿಂದಿ ಕಲಿಯುತ್ತಿದ್ದಾರೆ. ವಯಸ್ಸಾದಾಗ ಸಂಗಾತಿಯ ಅಗತ್ಯ ಹೆಚ್ಚಿರುತ್ತದೆ ಎಂದು ವಧುವರರಿಬ್ಬರು ಹೇಳಿದ್ದಾರೆ. ಆದರೆ ಹಿರಿಯರ ವಿವಾಹ ಸ್ಥಳೀಯವಾಗಿ ಬಹಳ ಚರ್ಚೆಯಾಗುತ್ತಿದೆ ಎಂದು ವರದಿತಿಳಿಸಿದೆ.