ಮೂಡುಬಿದಿರೆಯ ಸಿ. ಹೆಚ್. ಗಫೂರ್ ಅವರಿಗೆ ಜೀವ ರಕ್ಷಕ ಪ್ರಶಸ್ತಿ

Update: 2017-02-01 12:58 GMT

ಅಪಘಾತಗಳಾದ ಸಂದರ್ಭ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸುವುದಕ್ಕೆ ಹೆದರುವವರು ಕೆಲವರಾದರೆ, ಇನ್ನು ಕೆಲವರು ಜೀವ ಉಳಿಸುವ ಉಪಕಾರ ಮಾಡದೇ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು ಅದನ್ನು ಶೇರ್ ಮಾಡುವ ಮೂಲಕ ತಮ್ಮ ಕೆಲಸವಾಯಿತೆಂದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅಪಘಾತಕ್ಕೊಳಗಾದ ಜೀವವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ನೆರವಾಗುವವರು ಬಹಳ ವಿರಳ ಎಂದೇ ಹೇಳಬೇಕು.

ಆದರೆ ಮೂಡುಬಿದಿರೆ ಆಸುಪಾಸಿನಲ್ಲಿ ದಿನದ 24 ಗಂಟೆಯಲ್ಲಿ ಯಾವುದೇ ಹೊತ್ತು ಗೊತ್ತಿಲ್ಲದೇ ಜೀವ ಉಳಿಸುವ ಕಾಯಕದಲ್ಲಿ ತೊಡಗಿಕೊಂಡು ಜೀವರಕ್ಷಕನೆನಿಸಿಕೊಂಡ ಒಬ್ಬ ಧೀಮಂತ ವ್ಯಕ್ತಿ ಇದ್ದಾರೆ. ಅವರ ಸೇವೆಯನ್ನು ಗಮನಿಸದ ಯಾರೇ ಆದರೂ ಅವರಿಗೊಂದು ಸೆಲ್ಯೂಟ್ ಹೊಡೆಯದೇ ಇರಲಾರರು. ಅವರ ಹೆಸರು ಸಿ.ಹೆಚ್. ಅಬ್ದುಲ್ ಗಫೂರ್.

ಅಬ್ದುಲ್ ಗಫೂರ್‌ರರ ಹೆಸರಿಗಿಂತ ಅವರ ಇನಿಶಿಯಲ್ ಮೂಡುಬಿದಿರೆಯಲ್ಲಿ ಹೆಚ್ಚು ಪರಿಚಿತ. ಕಾರಣ ಅವರದು ಸ್ವಂತ ಉದ್ಯಮ. ಅದು ಮೆಡಿಕಲ್ ಶಾಪ್. ಅದರ ಹೆಸರು ಸಿ.ಹೆಚ್. ಮೆಡಿಕಲ್. ಹಗಲೇ ಇರಲಿ, ನಡು ರಾತ್ರಿಯೇ ಆಗಿರಲಿ - ಅಪಘಾತವಾಗಿದೆ, ಅಥವಾ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ರಕ್ತ ಬೇಕಾಗಿದೆ ಎಂಬ ಸಂದರ್ಭದಲ್ಲಿ ಗಫೂರ್ ಸಾಹೇಬರಿಗೆ ಕಾಲ್ ಬರುತ್ತದೆ. ಆಗಲೇ ಜೇಬಿಗೆ ಒಂದೈದು ಸಾವಿರ ರೂಪಾಯಿ ಹಣವನ್ನು ತುರುಕಿಕೊಂಡು ತಮ್ಮ ಕಾರಿನಲ್ಲೇ ಹೊರಟು ನಿಲ್ಲುತ್ತಾರೆ ಗಫೂರ್.

 ಅಪಘಾತವಾದ ಸ್ಥಳಕ್ಕೆ ತೆರಳಿ ಅಲ್ಲಿದ್ದ ಗಾಯಾಳುಗಳನ್ನು ಅವರದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆಗಳು ಹಲವು. ಮೂಡುಬಿದಿರೆಯಲ್ಲಿ ತುರ್ತು ಸಂದರ್ಭಗಳಿಗೆ ಸಮೀಪದ ಆಳ್ವಾಸ್ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಬೇಕಾಗುತ್ತದೆ. ಅಲ್ಲಿ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳ ಬಳಿ, ಅಥವಾ ಅವರ ಸಂಬಂಧಿಕರ ಬಳಿ ಹಣ ಇರುವುದಿಲ್ಲ. ಒಂದೋ ಈ ಸಂದರ್ಭದಲ್ಲಿ ತುರ್ತಾಗಿ ಔಷಧ ಅಥವಾ ರಕ್ತದ ಅವಶ್ಯಕತೆ ಇರುತ್ತದೆ.

ಈ ಸಂದರ್ಭದಲ್ಲಿ ತಾವು ಮನೆಯಿಂದ ಬರುವಾಗ ತಂದಿದ್ದ ಹಣವನ್ನೇ ಗಾಯಾಳುವಿಗೆ ಅಥವಾ ಅವರ ಕಡೆಯವರಿಗೆ ಕೊಟ್ಟು, ನಿಮಗೆ ವಾಪಾಸು ಕೊಡಲು ಸಾಧ್ಯವಾದ ಮೇಲೆ ಕೊಡಿ ಎನ್ನುತ್ತಾರೆ. ಅಥವಾ ಗಾಯಾಳುವಿಗೆ ತುರ್ತು ರಕ್ತದ ಅನಿವಾರ್ಯತೆ ಇದ್ದರೆ ಅದನ್ನೂ ವ್ಯವಸ್ಥೆ ಮಾಡಿಕೊಡುತ್ತಾರೆ ಗಫೂರ್.
ಹಲವು ಪ್ರಕರಣಗಳಲ್ಲಿ ಗಾಯಾಳುಗಳು ತಾವು ಗುಣಮುಖರಾದ ಮೇಲೆ ಎಷ್ಟೋ ಸಮಯಗಳ ನಂತರ ಹಣವನ್ನು ವಾಪಾಸು ನೀಡಿದ್ದೂ ಇದೆ. ನೀಡದೇ ಉಳಿದುದರ ಬಗ್ಗೆ ಅಬ್ದುಲ್ ಗಫೂರ್ ತಲೆಕೆಡಿಸಿಕೊಂಡವರಲ್ಲ. ಕಳೆದ 30 ವರ್ಷಗಳಲ್ಲಿ ಗಫೂರ್ ಇದನ್ನೇ ದೇವರ ಸೇವೆಯೆಂದು ತಿಳಿದು ಯಾವುದೇ ಜಾತಿಮತ ನೋಡದೇ ಹಲವು ಸಾವಿರ ಮಂದಿಗಳಿಗೆ ನೆರವಾಗಿದ್ದಾರೆ. ಅದನ್ನವರು ಲೆಕ್ಕವಿಟ್ಟಿಲ್ಲ.

ಮೂಡುಬಿದಿರೆಯಿಂದ ಮಂಗಳೂರಿಗೆ ಗಾಯಾಳುವನ್ನು ಸಾಗಿಸಬೇಕಿದ್ದರೆ ತುರ್ತು ಆಂಬುಲೆನ್ಸ್ ಸೇವೆ, ಅಲ್ಲಿನ ವೈದ್ಯರಿಗೆ ಕರೆ ಮಾಡಿ ತಿಳಿಸುವುದು, ಗಾಯಾಳುಗಳ ಸಂಬಂಧಿಕರಿಗೆ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುವುದು ಮೊದಲಾದ ವ್ಯವಸ್ಥೆಗಳನ್ನು ಗಫೂರ್ ಅವರು ನಿರ್ವಹಿಸಿಯೇ ಮನೆಗೆ ವಾಪಾಸುಗುವುದು. ಇದರ ಜೊತೆಗೆ ಸ್ಥಳೀಯವಾಗಿ ಯಾರಿಗಾದರೂ ರಾತ್ರಿ ವೇಳೆ ಹೆರಿಗೆ ಅಥವಾ ಇನ್ನಿತರ ಯಾವುದೇ ತುರ್ತು ವೈದ್ಯಕೀಯ ಸೇವೆಯ ಅವಶ್ಯಕತೆ ಬಿದ್ದಲ್ಲಿ ಅಲ್ಲಿಗೆ ಧಾವಿಸುತ್ತಾರವರು.

ಹಾಗೆಂದು ಇಷ್ಟೆಲ್ಲಾ ಸಮಾಜಸೇವೆಗೆ ಸಮಯ ಮೀಸಲಿರಿಸಲು ಸಾಕಷ್ಟು ಸಮಯವಿರುವ ವ್ಯಕ್ತಿಯಲ್ಲ ಇವರು. ತಮ್ಮದೇ ಆದ ಮೆಡಿಕಲ್ ಶಾಪ್ ಇದೆ. ಅದರ ಜೊತೆಗೆ ವೈದ್ಯಕೀಯ ಉತ್ಪನ್ನಗಳ ಇನ್ನೊಂದು ಅಂಗಡಿಯ ಜವಾಬ್ದಾರಿ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ವ್ಯವಹಾರಗಳಿವೆ. ಜೊತೆಗೆ ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ಮಹಾವೀರ ಕಾಲೇಜಿನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜಿ.ವಿ. ಪೈ ಆಸ್ಪತ್ರೆಯಲ್ಲಿ ಟ್ರಸ್ಟಿಯಾಗಿ, ಮೂಡುಬಿದಿರೆ ಸರಕಾರಿ ಆಸ್ಪತ್ರೆಯ ಆಡಳಿತದಲ್ಲಿ ಸದಸ್ಯನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಜೆಸಿಐ, ರೋಟರಿ, ಜಮಿಯ್ಯತುಲ್ ಫಲಾಹ್ ಮುಂತಾದ ಸಮಾಜಮುಖಿ ಸಂಸ್ಥೆಗಳಲ್ಲಿ ಇವರು ಸದಾ ಸಕ್ರೀಯ.

 ಮೊನ್ನೆ ಜನವರಿ 26 ಮುನ್ನಾದಿನ ಅಬ್ದುಲ್ ಗಫೂರ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಅದೇನೆಂದರೆ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ವತಿಯಿಂದ ಕೊಡಮಾಡಲ್ಪಡುವ ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯಡಿ ಜೀವರಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂಬ ಕರೆಯೊಂದು ಬಂದಿತ್ತು.

ತಾನು ಯಾವುದೇ ಪ್ರಶಸ್ತಿ ಪುರಸ್ಕಾರಗಳ ಹಿಂದೆ ಹೋಗದಿದ್ದರೂ ತನ್ನನ್ನೇ ಹುಡುಕಿಕೊಂಡು ಬಂದ ಈ ಪ್ರಶಸ್ತಿಯ ಬಗ್ಗೆ ಗಫೂರ್ ಪ್ರಾರಂಭದಲ್ಲಿ ನಿರಾಕರಿಸಿದರು. ನಂತರ ಗೊತ್ತಾದ ಸಂಗತಿಯೇನೆಂದರೆ ಅಬ್ದುಲ್ ಗಫೂರ್ ಅವರಿಂದ ತುರ್ತು ಸಂದರ್ಭದಲ್ಲಿ ಪ್ರಯೋಜನ ಪಡೆದ ಹಲವು ಮಂದಿಯೇ ಈ ಪ್ರಶಸ್ತಿಗಾಗಿ ತಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಹಾಗೆ ತಮ್ಮಿಂದ ಸಹಾಯ ಪಡೆದವರ ಈ ರೂಪದ ಕೃತಜ್ಞತೆಯ ಒತ್ತಡಕ್ಕೆ ಮಣಿದ ಅವರು ಕಡೆಗೂ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಈ ಬಗ್ಗೆ ವಾರ್ತಾಭಾರತಿ ಅವರನ್ನು ಸಂಪರ್ಕಿಸಿದಾಗ, ನಾನು ಯಾವುದೇ ಪ್ರಚಾರದ ಉದ್ದೇಶದಿಂದ ಸಹಾಯ ಮಾಡುತ್ತಿಲ್ಲ. ಒಳ್ಳೆಯ ಕೆಲಸ ಮಾಡಬೇಕೆಂಬ ಒಂದೇ ನೆಲೆಯಲ್ಲಿ ಮಾಡಿದ್ದೇನೆ. ನನ್ನ ತಂದೆ ತಾಯಿ ಇಬ್ಬರೂ ಸಣ್ಣಂದಿನಿಂದಲೇ ನನಗೆ ಈ ಅಭ್ಯಾಸ ಮಾಡಿಸಿದ್ದರು. ನಮ್ಮ ವಠಾರ ಅಥವಾ ಊರಿನಲ್ಲಿ ಯಾರೇ ಕಷ್ಟದಲ್ಲಿದ್ದರೂ ಅವರ ಸಹಾಯಕ್ಕೆ ಧಾವಿಸುವಂತೆ ಪ್ರೇರೇಪಿಸುತ್ತಿದ್ದರು ಎನ್ನುತ್ತಾರೆ.

ಸಿ.ಹೆಚ್. ಆಸಿಯಾ ಹಾಗೂ ಸಿ.ಹೆಚ್. ಅಬೂಬಕ್ಕರ್ ದಂಪತಿಗಳ ಪುತ್ರನಾಗಿ 1963ರ ಜನವರಿ 10ರಂದು ಜನಿಸಿದ ಸಿ.ಹೆಚ್. ಅಬ್ದುಲ್ ಗಫೂರ್ ಬಿ.ಕಾಂ. ಪದವೀಧರರು. ಮೂಡುಬಿದಿರೆ ವಿದ್ಯಾನಗರ ನಿವಾಸಿಯಾಗಿರುವ ಇವರದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗಿನ ಸಂತೃಪ್ತ ಕುಟುಂಬ. ಒಬ್ಬ ಪುತ್ರ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರೆ , ಪುತ್ರಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ.

Writer - ಹಾರಿಸ್ ಹೊಸ್ಮಾರ್

contributor

Editor - ಹಾರಿಸ್ ಹೊಸ್ಮಾರ್

contributor

Similar News