ಈ ಸೈನಿಕರ ಸಾವಿಗೆ ಯಾರು ಹೊಣೆ?
ಈ ದೇಶದಲ್ಲಿ ಯೋಧ ಜೀವಂತವಾಗಿರುವಾಗ ಅವನ ಕಡೆಗೆ ಜನರು ಗಮನಹರಿಸುವುದು ಕಡಿಮೆ. ಅವನ ಮೃತದೇಹಕ್ಕಾಗಿ ಹಂಬಲಿಸುವ ರಾಜಕಾರಣಿಗಳಿಗೆ ಅವನು ಜೀವಂತವಿದ್ದಾಗ ಅನುಭವಿಸುವ ಸಂಕಟಗಳು ನೋವುಗಳು ಗಮನಕ್ಕೆ ಬರುವುದೇ ಇಲ್ಲ. ಗಮನಕ್ಕೆ ಬಂದರೂ ಅದೇನೂ ಅಷ್ಟು ಆಕರ್ಷಕ ವಿಷಯವಲ್ಲ. ಅದರಿಂದ ಯಾವ ರಾಜಕೀಯವನ್ನು ಮಾಡುವುದಕ್ಕಾಗುವುದಿಲ್ಲ. ಶತ್ರು ದೇಶದೊಟ್ಟಿಗೆ ಯುದ್ಧವಾಗಿ ಮೃತಪಟ್ಟ ಸೈನಿಕನಿಗಿರುವ ಮರ್ಯಾದೆ, ಗಡಿಕಾಯುತ್ತಾ ಹಾವು ಕಚ್ಚಿಯೋ ಅಥವಾ ಕಾಯಿಲೆ ಪೀಡಿತನಾಗಿಯೋ ಅಥವಾ ಹಿಮಪಾತದಿಂದಲೋ ಮೃತಪಟ್ಟಾಗ ಅವನ ಬಗ್ಗೆ ನಮ್ಮ ನಾಯಕರಿಗಾಗಲಿ, ದೇಶದ ಜನರಿಗಾಗಲಿ ಆಸಕ್ತಿ ಹುಟ್ಟುವುದಿಲ್ಲ.
ಗಡಿಯಲ್ಲಿ ಶತ್ರುಗಳ ಗುಂಡಿಗೆ ಮೃತಪಟ್ಟ ಯೋಧರ ಕುರಿತಂತೆಯೂ ತಾರತಮ್ಯವಿದೆ. ಈಶಾನ್ಯ ಭಾರತದಲ್ಲಿ ನಕ್ಸಲರು ಅಥವಾ ಇನ್ನಿತರ ಸ್ಥಳೀಯ ದುಷ್ಕರ್ಮಿಗಳಿಂದ ಹುತಾತ್ಮರಾದರೆ ಅದು ಮಾಧ್ಯಮಗಳಿಗೆ ‘ರೋಚಕ’ ಸುದ್ದಿಯಾಗುವುದಿಲ್ಲ. ಅಥವಾ ಅರುಣಾಚಲದ ಗಡಿಯಲ್ಲಿ ಮೃತಪಟ್ಟರೂ ಅದು ಮಾಧ್ಯಮಗಳಿಗೆ ಮುಖಪುಟದ ಸುದ್ದಿಯಾಗುವುದಿಲ್ಲ. ಯೋಧನ ಸಾವು ಮುಖಪುಟದಲ್ಲಿ ಬರಬೇಕಾದರೆ ಆತ ಪಾಕಿಸ್ತಾನವೆಂಬ ಶತ್ರುವಿನ ಕೈಯಲ್ಲಿ ಹುತಾತ್ಮನಾಗಬೇಕು. ಆಗ ಅದು ಬೇರೆ ಬೇರೆ ರಾಜಕೀಯ ಆಯಾಮಗಳ ಮೂಲಕ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತದೆ. ರಾಜಕಾರಣಿಗಳೆಲ್ಲ ಒಮ್ಮೆಲೆ ಯೋಧರ ಕುರಿತಂತೆ ಪ್ರೀತಿಯನ್ನು ಸುರಿಸತೊಡಗುತ್ತಾರೆ. ಜನರೆಲ್ಲ ಏಕಾಏಕಿ ದೇಶಭಕ್ತರಾಗುತ್ತಾರೆ. ಇಂದು ನಮ್ಮ ಸೈನಿಕರು ವಿದೇಶದ ದಾಳಿಗಳಿಗೆ ಬಲಿಯಾಗುವುದಕ್ಕಿಂತ, ನಮ್ಮದೇ ಸೇನೆಯ ಅವ್ಯವಸ್ಥೆಗಳಿಗೆ ಬಲಿಯಾಗುತ್ತಿದ್ದಾರೆ. ಹೊರಗಿನ ಶತ್ರುಗಳ ಯುದ್ಧವಿಮಾನಗಳಿಗಿಂತಲೂ ನಮ್ಮ ಸೈನಿಕರು ನಮ್ಮದೇ ಯುದ್ಧವಿಮಾನಗಳಿಗೆ ಅಂಜುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಿಗ್ ಯುದ್ಧ ವಿಮಾನಗಳಂತೂ ಸೈನಿಕರ ಪಾಲಿಗೆ ‘ಹಾರಾಡುವ ಶವಪೆಟ್ಟಿಗೆ’ಯಾಗಿ ಪರಿಣಮಿಸಿದೆ.
ಈ ಯುದ್ಧವಿಮಾನ ದುರಂತಗಳಿಗೆ ಕಾರಣವಾದ ನಿಜವಾದ ಆರೋಪಿಗಳನ್ನು ಗುರುತಿಸುವಲ್ಲಿ ಸರಕಾರವಾಗಲಿ, ಸೇನೆಯಾಗಲಿ ಸಂಪೂರ್ಣ ಎಡವಿದೆ. ಯುದ್ಧವಿಮಾನ ಖರೀದಿಯಲ್ಲಿ ನಡೆಯುವ ಅವ್ಯವಹಾರಗಳೂ ಪರೋಕ್ಷವಾಗಿ ಈ ದುರಂತಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಇಂತಹ ಯುದ್ಧವಿಮಾನಗಳಲ್ಲಿ ನಮ್ಮ ಸೈನಿಕರನ್ನು ಕುಳ್ಳಿರಿಸಿ, ಅವರನ್ನು ಬಲಿಪಶುಮಾಡಿ ಬಳಿಕ ಅವರಿಗೆ ಹುತಾತ್ಮ ಪಟ್ಟವನ್ನು ಕಟ್ಟಿದರೆ ಅದರಿಂದ ದೇಶಕ್ಕೆ ಆಗುವ ಲಾಭವಾದರೂ ಏನು? ಹೀಗೆ ನಮ್ಮದೇ ಬೇಜವಾಬ್ದಾರಿ, ಅಕ್ರಮಗಳಿಗೆ ಬಲಿಯಾಗುವ ಸೈನಿಕರ ಜೀವಕ್ಕೆ ಯಾವ ಶತ್ರುವನ್ನು ನಾವು ಹೊಣೆ ಮಾಡಬೇಕು? ಶತ್ರುಗಳ ಕೈಯಲ್ಲಿ ನಮ್ಮ ಸೈನಿಕರು ಹತರಾದಾಗ ನಮ್ಮ ನಾಯಕರು ಶತ್ರು ದೇಶಗಳಿಗೆ ಎಚ್ಚರಿಕೆಯನ್ನು ನೀಡುತ್ತಾರೆ. ‘ಸರ್ಜಿಕಲ್ ಸ್ಟ್ರೈಕ್’ನ ಪ್ರಹಸನವನ್ನು ಹಮ್ಮಿಕೊಳ್ಳುತ್ತಾರೆ. ಆದರೆ, ನಮ್ಮ ಒಳಗಿನ ಶತ್ರುಗಳಿಗೆ ಸೈನಿಕರು ಬಲಿಯಾದಾಗ ಯಾಕೆ ಇಂತಹ ಎಚ್ಚರಿಕೆಯ ಹೇಳಿಕೆಗಳು ಹೊರಬೀಳುವುದಿಲ್ಲ. ನಮ್ಮಾಳಗಿನ ಅವ್ಯವಸ್ಥೆಯ ವಿರುದ್ಧ ಸರಕಾರವೇಕೆ ಸರ್ಜಿಕಲ್ ಸ್ಟ್ರೈಕ್ ಹಮ್ಮಿಕೊಳ್ಳುವುದಿಲ್ಲ?
ಎರಡು ದಿನಗಳ ಹಿಂದೆ ಜಮ್ಮುಕಾಶ್ಮೀರ ವಿಭಾಗದಲ್ಲಿ ನಿಯಂತ್ರಣ ರೇಖೆಯ ಬಳಿ ಕರ್ತವ್ಯ ನಿರತರಾಗಿದ್ದ ಸಂದರ್ಭ ಹಿಮಪಾತಕ್ಕೆ ಸಿಲುಕಿ ಐವರು ಯೋಧರು ಮೃತಪಟ್ಟರು. ಕಾರ್ಯಾಚರಣೆಯ ಮೂಲಕ ಅವರನ್ನು ಹೊರತೆಗೆದಾಗ ಅವರು ಉಸಿರಾಡುತ್ತಿದ್ದರು. ಆದರೆ ಎರಡು ದಿನಗಳು ಬಳಿಕ, ರಕ್ಷಿಸಲ್ಪಟ್ಟ ಐವರೂ ಆಸ್ಪತ್ರೆಯಲ್ಲಿ ಅಸು ನೀಗಿದರು. ಇದು ಆಕಸ್ಮಿಕ ಘಟನೆಯೇನೂ ಅಲ್ಲ. ಇಂತಹ ಹಿಮಪಾತಗಳು ತೀರಾ ಅನಿರೀಕ್ಷಿತವಾಗಿರುವುದಿಲ್ಲ. ಈ ಪ್ರದೇಶದಲ್ಲಿ ಆಗಾಗ ಇಂತಹ ಸಂಭವಗಳು ನಡೆಯುತ್ತಲೇ ಇರುತ್ತವೆ. ಕಳೆದ ವರ್ಷ ಸಿಯಾಚಿನ್‌ನಲ್ಲಿ ನಡೆದ ದುರಂತ ನಮ್ಮ ಮುಂದೆ ಇನ್ನೂ ಹಸಿಯಾಗಿದೆ. ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಸಹಿತ ಹತ್ತು ಮಂದಿ ಯೋಧರು ಈ ಹಿಮಪಾತಕ್ಕೆ ಸಿಲುಕಿ ಮೃತಪಟ್ಟರು. ಅದರಲ್ಲಿ ಹನುಮಂತಪ್ಪ ಅವರಂತೂ ಎರಡು ದಿನಗಳ ಕಾಲ ಸಾವು ಬದುಕಿನ ನಡುವೆ ಒದ್ದಾಡಿ ಪ್ರಾಣ ಬಿಟ್ಟರು. ಪ್ರತೀ ವರ್ಷವೂ ಈ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.
2015ರಲ್ಲಿ ಎಂಟನೂರಕ್ಕೂ ಅಧಿಕ ಸೈನಿಕರು ಹವಾಮಾನ ಕಾರಣದಿಂದ ಬಲಿಯಾಗಿದ್ದಾರೆ. ಸಿಯಾಚಿನ್‌ನ ಚಳಿ, ಹಿಮ ಇತ್ಯಾದಿಗಳು ಯಾವುದೇ ಶತ್ರುವಿಗಿಂತ ಕ್ರೂರವಾದುದು. ಇಂತಹ ಕ್ರೂರ ಸ್ಥಳದಲ್ಲಿ ನಮ್ಮ ಸೈನಿಕರಿಗೆ ಯಾವುದೇ ಅತ್ಯಾಧುನಿಕವಾದ ಸಲಕರಣೆಗಳನ್ನು ನೀಡದೆ, ಅತ್ಯಗತ್ಯ ಆಹಾರಗಳನ್ನು ಒದಗಿಸದೆ ಕಾರ್ಯಾಚರಣೆಗಿಳಿಸುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು ನಮ್ಮದೇ ಸೈನಿಕರ ವಿರುದ್ಧ ನಮ್ಮದೇ ವ್ಯವಸ್ಥೆ ನಡೆಸುತ್ತಿರುವ ದಾಳಿಯಾಗಿದೆ. ಇತ್ತೀಚೆಗೆ ಒಬ್ಬ ನಿವೃತ್ತ ಸೈನಿಕ ಮಾಡಿರುವ ಆರೋಪದಲ್ಲಿ ‘‘ಸರಿಯಾದ ಆಹಾರ ಒದಗಿಸುತ್ತಿಲ್ಲ ಮಾತ್ರವಲ್ಲ, ಅವರಿಗೆ ಸಿಗುವ ಸವಲತ್ತುಗಳನ್ನು ಅಕ್ರಮವಾಗಿ ಮಾರಾಟಮಾಡಲಾಗುತ್ತದೆ’’ ಎಂಬ ಅಂಶ ಹೊರ ಬಿದ್ದಿದೆ. ಸಾಮಾಜಿಕ ತಾಣಗಳಲ್ಲಿ ನಮ್ಮ ಯೋಧರು ಮಾಡಿರುವ ಆರೋಪವು, ಸೇನೆಯೊಳಗೆ ಎಲ್ಲವೂ ಚೆನ್ನಾಗಿಲ್ಲ ಎನ್ನುವುದನ್ನು ಬಹಿರಂಗಪಡಿಸಿದೆ. ನಮ್ಮ ಸೈನಿಕರು ನಮ್ಮದೇ ವ್ಯವಸ್ಥೆಯ ವಿರುದ್ಧ ಹತಾಶರಾಗಿದ್ದಾರೆ. ಒಳಗೊಳಗೆ ಆಕ್ರೋಶಗೊಂಡಿದ್ದಾರೆ ಎನ್ನುವುದು ಈಗಾಗಲೇ ಮಾಧ್ಯಮಗಳ ಮೂಲಕ ಹೊರಬಿದ್ದಿದೆ. ಅವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿರುವ ಸೈನಿಕರ ಬಾಯಿ ಮುಚ್ಚಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ ಅದು ಒಳಗೊಳಗೇ ಉಲ್ಬಣಿಸುತ್ತದೆ. ಆದುದರಿಂದ, ಸಿಯಾಚಿನ್‌ನಂತಹ ಪ್ರದೇಶದಲ್ಲಿ ಹಿಮದ ಮಧ್ಯೆ ಕಾರ್ಯಾಚರಣೆ ಮಾಡುವಾಗ ಅವರಿಗೆ ಬೇಕಾಗಿರುವ ಆಧುನಿಕ ಸಲಕರಣೆಗಳನ್ನು ಒದಗಿಸುವುದು, ಜೊತೆಗೆ ಅತ್ಯುತ್ತಮ ಆಹಾರವನ್ನು ನೀಡುವುದು ಇವೆಲ್ಲವೂ ಸೇನೆಯ ಹೊಣೆಯಾಗಿದೆ. ಇದೇ ಸಂದರ್ಭದಲ್ಲಿ ಉಭಯ ದೇಶಗಳೂ ಈ ಭಾಗದಿಂದ ತಮ್ಮ ತಮ್ಮ ಸೇನೆಗಳನ್ನು ಹಿಂದೆಗೆದರೆ, ಅಮಾಯಕ ಸೈನಿಕರು ಅನಗತ್ಯವಾಗಿ ಪ್ರಾಣ ತ್ಯಾಗ ಮಾಡುವ ಪ್ರಸಂಗವೂ ತಪ್ಪುತ್ತದೆ.
ಇಂದು ನಾವು ಶತ್ರುಗಳ ಗುಂಡೇಟಿಗೆ ಮಾತ್ರವಲ್ಲ, ಪ್ರಾಕೃತಿಕ ದುರಂತಗಳಿಂದ ಸಾವಿಗೀಡಾಗುವ ಸೈನಿಕರನ್ನೂ ಗೌರವಿಸುವುದನ್ನು ಕಲಿಯಬೇಕಾಗಿದೆ. ಇಂತಹ ದುರಂತಗಳಿಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಅದರಿಂದ ಅವರನ್ನು ಪಾರು ಮಾಡಲು ವ್ಯವಸ್ಥೆಯನ್ನು ಒತ್ತಾಯಿಸುವ ಕೆಲಸವೂ ನಡೆಯಬೇಕು. ಈ ಮೂಲಕ ನಾವು ನಮ್ಮ ದೇಶಪ್ರೇಮವನ್ನು ಸಾಬೀತು ಮಾಡಬೇಕು. ನಮಗೋಸ್ಕರ ಗಡಿಯಲ್ಲಿ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವ ಸೈನಿಕರ ಜೊತೆಗೆ ಗುರುತಿಸಿಕೊಳ್ಳಬೇಕು. ಅಮಾಯಕ ಸೈನಿಕರ ಸಾವಿನ ರೋಚಕತೆಯಲ್ಲಿ ನಾವು ನಮ್ಮ ದೇಶಪ್ರೇಮದ ದೊಂದಿ ಹಚ್ಚುವ ಚಾಳಿ ಇನ್ನಾದರೂ ನಿಲ್ಲಬೇಕು.