ಉಪ ಸಂಪಾದಕರಿಂದ ಕೇಂದ್ರ ಸಚಿವರವರೆಗೆ ಇ. ಅಹ್ಮದ್‌ರ ಪಯಣ

Update: 2017-02-01 06:52 GMT

ಕ್ಯಾಲಿಕಟ್, ಫೆ.1: ಮುಸ್ಲಿಂ ಲೀಗ್ ಮುಖವಾಣಿ ಚಂದ್ರಿಕಾದ ಉಪಸಂಪಾದಕರಾಗಿ ಕೆಲಸ ಆರಂಭಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೂ ಇ. ಅಹ್ಮದ್ ತಲುಪಿದ್ದರು. ಇಬ್ರಾಹೀಂ ಸುಲೇಮಾನ್ ಸೇಠ್ ಹಾಗೂ ಜಿ.ಎಂ.ಬನಾತ್‌ವಾಲರ ಉತ್ತರಾಧಿಕಾರಿಯಾಗಿ ಅಹ್ಮದ್ ಪಕ್ಷ ವಹಿಸಿದ ದಿಲ್ಲಿ ದೌತ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳ್ ಹಾಗೂ ಇಬ್ರಾಹೀಂ ಸುಲೇಮಾನ್ ಸೇಠ್‌ರ ಬಳಿಕ ಕೇರಳದ ಲೀಗ್ ಅಧ್ಯಕ್ಷರಾದ ಮೂರನೆ ವ್ಯಕ್ತಿ ಅವರು.

ಎಂಎಸ್‌ಎಫ್ ವಿದ್ಯಾರ್ಥಿ ಸಂಘಟನೆಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಅಹ್ಮದ್ ರಾಜಕೀಯ ಪ್ರವೇಶಿಸಿದ್ದರು. ಕಣ್ಣೂರ್ ನಗರದ ಮುಕ್ಕಡವ್ ಶಾಖೆಯಲ್ಲಿ ಚಟುವಟಿಕೆ ಆರಂಭಿಸಿದ್ದರು. ಮುಸ್ಲಿಂ ವಿದ್ಯಾರ್ಥಿ ಫೆಡರೇಷನ್‌ನ ಪ್ರಥಮ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಲಬಾರ್ ಜಿಲ್ಲಾ ಕಾರ್ಯದರ್ಶಿಯಾದರು. ಮುಕ್ಕಡವ್ ವಾರ್ಡ್‌ನಿಂದ ನಗರಸಭೆಗೆ ಗೆದ್ದು ಬಂದರು. ನಂತರ ನಗರಸಭೆ ಅಧ್ಯಕ್ಷರಾದರು. ತಾವಕ್ಕರ ಸಬ್ ವೇ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅವರು ಚಾಲನೆ ನೀಡಿದರು.

1976ರಲ್ಲಿ ಕಣ್ಣೂರಿನಿಂದ 29ವರ್ಷದ ಸಣ್ಣಪ್ರಾಯದಲ್ಲೇ ವಿಧಾನಸಭೆಗೆ ಆಯ್ಕೆಯಾದರು. ಅಂದು ಕೇರಳ ವಿಧಾನಸಭೆಯ ಎಳೆಪ್ರಾಯದ ಶಾಸಕರೆಂಬ ಹೆಗ್ಗಳಿಕೆ ಅವರದ್ದಾಗಿತ್ತು. 19ವರ್ಷ ವಿಧಾನಸಭೆ ಸದಸ್ಯರಾಗಿ 82,87ರವರೆಗೆ ರಾಜ್ಯದ ವಾಣಿಜ್ಯ ಸಚಿವರಾಗಿ ಕೆಲಸ ನಿರ್ವಹಿಸಿದರು. ಆದರೆ 1970 ಚುನಾವಣೆಯಲ್ಲಿ ಅವರು ಸೋಲುಂಡಿದ್ದರು. ಲೀಗ್ ಚುನಾವಣಾ ಸೋಲಿನ ಹೊಣೆ ಹೊತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪಿ.ಕೆ.ಕುಂಞಾಲಿಕುಟ್ಟಿ ರಾಜಿನಾಮೆ ನೀಡಿದಾಗ ಇ. ಅಹ್ಮದ್ ಆ ಸ್ಥಾನತುಂಬಿದರು. ಕೇಂದ್ರ ಸಚಿವರೆನ್ನುವ ಕಾರಣದಿಂದ ನಂತರ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ಹಲವಾರು ಪಾರ್ಲಿಮೆಂಟ್ ಸಮಿತಿಗಳಲ್ಲಿ ಅವರು ಸದಸ್ಯರಾಗಿದ್ದರು. ವಿಶ್ವಸಂಸ್ಥೆಯ ಭಾರತ ಪ್ರತಿನಿಧಿ ತಂಡದಲ್ಲಿ ಐವರು ಪ್ರಧಾನಿಗಳ ನಿರ್ದೇಶನ ಪ್ರಕಾರ ನಿರಂತರವಾಗಿ ಆರು ಬಾರಿ ಸದಸ್ಯರಾದ ದಾಖಲೆ ಅವರ ಹೆಸರಿನಲ್ಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News