ಸರಕಾರಿ ಶಾಲೆಗಳನು್ನ ಉಳಿಸಲೇಬೇಕು... ಏಕೆಂದರೆ?
ಸರಕಾರ ಸರಕಾರಿ ಶಾಲೆಗಳನ್ನು ಉಳಿಸಲು ಯಾವೊಂದು ಕಾರ್ಯಕ್ರಮವನ್ನೂ ಹಾಕಿಕೊಳ್ಳದೇ ಹಳಸಲು ಜಾಹೀರಾತುಗಳನ್ನೇ ನೀಡುತ್ತಾ ಹೋದರೆ ಅದು ಖಂಡಿತಾ ಸಾಧ್ಯವಿಲ್ಲ. ಬಿಸಿಯೂಟ, ಕ್ಷೀರಭಾಗ್ಯ ಎಂಬ ಭೋಜನ ಕಾರ್ಯಕ್ರಮದಿಂದಷ್ಟೆ ಮಕ್ಕಳನ್ನು ಸರಕಾರಿ ಶಾಲೆಯತ್ತ ಆಕರ್ಷಿಸಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಒಂದನೆ ತರಗತಿಯಿಂದ ಇಂಗ್ಲಿಷನ್ನು ಒಂದು ಪಠ್ಯವಾಗಿ ಪ್ರಾರಂಭಿಸಲೇಬೇಕು. ಹೀಗೆ ಮಾಡುವುದರಿಂದ ಕನಿಷ್ಠ ಪಕ್ಷ ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಿಗೆ ಕಳುಹಿಸುವ ಹೆತ್ತವರನ್ನು ಆಕರ್ಷಿಸಬಹುದು.
ಒಂದೆಡೆ ಸರಕಾರ ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುತ್ತದೆ. ಇನ್ನೊಂದೆಡೆ ಗಲ್ಲಿ ಗಲ್ಲಿಗಳಲ್ಲಿ ಶಿಕ್ಷಣ ವ್ಯಾಪಾರಿಗಳಿಗೆ ಶಿಕ್ಷಣದಂಗಡಿ ತೆರೆಯಲು ಅನುಮತಿ ನೀಡುತ್ತಿದೆ. (ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನೆಲ್ಲಾ ಖಾಸಗಿ ಶಾಲೆಗಳು ಕನ್ನಡ ಶಾಲೆಗೆಂದು ಅನುಮತಿ ಪಡೆದು ಆಂಗ್ಲ ಶಾಲೆಗಳನ್ನು ಪ್ರಾರಂಭಿಸುತ್ತಿರುವುದು ಗುಟ್ಟಾಗಿರುವ ಸಂಗತಿಯೇನಲ್ಲ.) ಈ ಮೂಲಕ ಸರಕಾರಿ ಶಾಲೆಗಳನ್ನು ಮುಚ್ಚಲು ಬೇಕಾದ ಕೃತಕ ಕಾರಣಗಳನ್ನು ಸರಕಾರವೇ ಸೃಷ್ಟಿಸುತ್ತಿದೆ. ಇಷ್ಟಾಗಿಯೂ ಸರಕಾರ ಇನ್ನೂ ಕೂಡಾ ಸರಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂಬ ಟೊಳ್ಳು ಹೇಳಿಕೆಗಳನ್ನು ನೀಡುತ್ತಲೇ ಇವೆ. ಆದರೆ ಸರಕಾರಿ ಶಾಲೆಗಳನ್ನು ಉಳಿಸಲು ಬೇಕಾಗುವ ಯಾವುದೇ ಜನಪ್ರಿಯ ಕಾರ್ಯಕ್ರಮಗಳನ್ನು ಸರಕಾರ ಹಾಕುತ್ತಿಲ್ಲ ಎಂದರೆ ತಪ್ಪಾಗದು. ಸರಕಾರಿಶಾಲೆಗಳು ಮುಚ್ಚಿದರೆ ಹಳ್ಳಿಗಾಡಿನ ಬಡ ಕುಸುಮಗಳ ಭವಿಷ್ಯ ಕರಟಿ ಹೋಗುತ್ತದೆ ಎಂಬ ನಮ್ಮ ಆತಂಕ ಸತ್ಯವಾಗುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ಒಂದೆರಡು ಉದಾಹರಣೆಗಳು ಇಲ್ಲಿವೆ. ನನ್ನ ಪತ್ನಿಯ ತವರೂರು ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಒಂದು ಕುಗ್ರಾಮ ಕುಳಾಲು. ಅಲ್ಲಿನ ಬಡ ಮಕ್ಕಳಿಗೆಲ್ಲಾ ಶಿಕ್ಷಣದ ಬೆಳಕು ನೀಡಿದ ಶಾಲೆಯೊಂದು ಮಕ್ಕಳ ಕೊರತೆಯಿಂದ ಇಂದೋ ನಾಳೆಯೋ ಮುಚ್ಚಿ ಹೋಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕುಳಾಲು ಎಂಬ ಕುಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಸುತ್ತಮುತ್ತಲ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಏಕೈಕ ಶಾಲೆ. ಅಲ್ಲಿನ ನಿವಾಸಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ಅಂದಂದಿನ ಪಡಿ ಅಂದಂದೇ ದುಡಿಯುವವರು ಅಂತಹ ಜನಕ್ಕೆ ಖಾಸಗಿ ಶಾಲೆಗಳ ಕನಸು ಕಾಣಲೂ ಸಾಧ್ಯವಿಲ್ಲ. ಒಂದು ವೇಳೆ ಕುಳಾಲು ಶಾಲೆ ಮುಚ್ಚಿದರೆ ಅಲ್ಲಿನ ಮಕ್ಕಳು ಇನ್ನೊಂದು ಸರಕಾರಿ ಶಾಲೆಗೆ ಬರಬೇಕೆಂದರೆ ಐದು ಕಿಲೋ ಮೀಟರ್ ಕ್ರಮಿಸಬೇಕು. ಆಟೊ ಬಾಡಿಗೆ ಕೊಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸುವ ಆರ್ಥಿಕ ಚೈತನ್ಯ ಅಲ್ಲಿನ ಜನಕ್ಕಿಲ್ಲ. ಆ ಊರಿಗೆ ಇರುವುದು ದಿನಕ್ಕೆ ಒಂದು ಟ್ರಿಪ್ ಹೊಡೆಯುವ ಒಂದೇ ಒಂದು ಬಸ್. ಈಗಾಗಲೇ ಆ ಊರಿನ ಕೆಲವು ಬಡವರು ಕುಳಾಲು ಶಾಲೆ ಇನ್ನೇನು ಮುಚ್ಚಿ ಹೋಗುತ್ತದೆ ಎಂಬ ಭಯದಿಂದ ಸಾಲ ಸೋಲ ಮಾಡಿ ತಮ್ಮ ಮಕ್ಕಳನ್ನು ದೂರದ ಖಾಸಗಿ ಶಾಲೆಗಳಿಗೆ ವರ್ಗಾಯಿಸಿದ್ದಾರೆ. ಈಗ ಅಲ್ಲಿ ಉಳಿದಿರುವ ಮಕ್ಕಳು ತೀರಾ ತೀರಾ ಬಡವರ ಮಕ್ಕಳು. ಇದು ಕೇವಲ ಒಂದು ಉದಾಹರಣೆಯಷ್ಟೆ. ಇಂತಹ ಅಸಂಖ್ಯ ಶಾಲೆಗಳು ನಮ್ಮ ರಾಜ್ಯದಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿಯೇ ಹೀಗಾದರೆ ರಾಜ್ಯದ ಇತರ ಹಿಂದುಳಿದ ಜಿಲ್ಲೆಗಳ ಸ್ಥಿತಿ ಹೇಗಿರಬಹುದೆಂದು ಊಹಿಸಿ.
ಈಗ ನಮ್ಮ ಸರಕಾರವು ಮಕ್ಕಳ ಕೊರತೆಯಿರುವ ಶಾಲೆಗಳನ್ನು ಮರ್ಜಿ ಮಾಡುವ ಬಗ್ಗೆ ಮಾತಾಡುತ್ತಿದೆ. ಸರಕಾರವೇನೋ ಸುಲಭವಾಗಿ ಮರ್ಜಿ ಮಾಡಿ ಬಿಡಬಹುದು. ಆದರೆ ಮರ್ಜಿಯಾಗುವ ಶಾಲೆ ಐದು ಹತ್ತು ಕಿಲೋ ಮೀಟರ್ ದೂರದಲ್ಲಿದ್ದರೆ ಮುಚ್ಚಿದ ಶಾಲೆಯ ಮಕ್ಕಳಿಗೆ ದೂರದ ಶಾಲೆಗೆ ಹೋಗಲು ಬೇಕಾದ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತದೆಯೇ? ಯಾವುದೇ ಒಂದು ಪ್ರಜಾತಾಂತ್ರಿಕ ಸರಕಾರವು ತನ್ನ ನಾಡಿನ ಮಕ್ಕಳಿಗೆ ಶಿಕ್ಷಣ ನೀಡಬೇಕಾದುದು ಅದರ ಕರ್ತವ್ಯವೇ ಹೊರತು ಸರಕಾರದ ಔದಾರ್ಯವೇನಲ್ಲ.
ಗುಣಮಟ್ಟದ ಶಿಕ್ಷಣ ಯಾಕೆ ಸಾಧ್ಯವಿಲ್ಲ:
ಇಂದು ನಮ್ಮ ಸರಕಾರವು ಶಿಕ್ಷಣದ ಹಕ್ಕು ಖಾಯ್ದೆಯ ಅನುಸಾರ ಒಂದೊಂದು ಖಾಸಗಿ ಶಾಲೆಯಲ್ಲಿ ಬಡ ಮಕ್ಕಳಿಗಾಗಿ ಕನಿಷ್ಠ ಹತ್ತು ಸೀಟುಗಳನ್ನು ಖರೀದಿಸಿ ನೀಡುತ್ತಿದೆ. ಒಂದು ಮಗುವಿಗಾಗಿ ಖಾಸಗಿ ಶಾಲೆಯೊಂದಕ್ಕೆ 11,000 ರೂಪಾಯಿಗಳನ್ನು ಸರಕಾರ ನೀಡುತ್ತಿದೆ. ಅಂದರೆ ವರ್ಷವೊಂದಕ್ಕೆ ಖಾಸಗಿ ಶಾಲೆಯೊಂದಕ್ಕೆ ಸರಕಾರ ಒಂದು ಲಕ್ಷ ಹತ್ತು ಸಾವಿರ ರೂಪಾಯಿ ನೀಡುತ್ತದೆ. ಇದಕ್ಕಿಂತ ಇದೇ ದುಡ್ಡನ್ನು ಸರಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ವ್ಯಯಿಸಿದ್ದರೆ....?
ಸರಕಾರ ಸರಕಾರಿ ಶಾಲೆಗಳನ್ನು ಉಳಿಸಲು ಯಾವೊಂದು ಕಾರ್ಯಕ್ರಮವನ್ನೂ ಹಾಕಿಕೊಳ್ಳದೇ ಹಳಸಲು ಜಾಹೀರಾತುಗಳನ್ನೇ ನೀಡುತ್ತಾ ಹೋದರೆ ಅದು ಖಂಡಿತಾ ಸಾಧ್ಯವಿಲ್ಲ. ಬಿಸಿಯೂಟ, ಕ್ಷೀರಭಾಗ್ಯ ಎಂಬ ಭೋಜನ ಕಾರ್ಯಕ್ರಮದಿಂದಷ್ಟೆ ಮಕ್ಕಳನ್ನು ಸರಕಾರಿ ಶಾಲೆಯತ್ತ ಆಕರ್ಷಿಸಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಒಂದನೆ ತರಗತಿಯಿಂದ ಇಂಗ್ಲಿಷನ್ನು ಒಂದು ಪಠ್ಯವಾಗಿ ಪ್ರಾರಂಭಿಸಲೇಬೇಕು. ಹೀಗೆ ಮಾಡುವುದರಿಂದ ಕನಿಷ್ಠ ಪಕ್ಷ ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಿಗೆ ಕಳುಹಿಸುವ ಹೆತ್ತವರನ್ನು ಆಕರ್ಷಿಸಬಹುದು. ನಾಮಕಾವಸ್ತೆ ಇಂಗ್ಲಿಷ್ ಬೋಧಿಸುವುದರಿಂದ ಹೆತ್ತವರನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಲು ಸಾಧ್ಯವಿಲ್ಲ. ಸದ್ಯ ಸೇವೆಯಲ್ಲಿರುವ ಶಿಕ್ಷಕರಿಗೇ ಇಂಗ್ಲಿಷ್ ಬೋಧನೆಯ ವಿಶೇಷ ತರಬೇತಿಯನ್ನು ನೀಡಿ ಅವರನ್ನು ಪಕ್ವಗೊಳಿಸಲೇಬೇಕು. ಇಂಗ್ಲಿಷ್ ಶಿಕ್ಷಣ ಮತ್ತು ಗುಣಮಟ್ಟದ ಬೋಧನೆ ಸಿಗುತ್ತದೆ ಎಂಬ ನಂಬಿಕೆ ಹುಟ್ಟಿದರೆ ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಿಗೆ ಕಳುಹಿಸುವ ಬಡವರಾದರೂ ಮತ್ತೆ ಸರಕಾರಿಶಾಲೆಗಳತ್ತ ಮುಖ ಮಾಡಬಹುದು. ಹೀಗೆ ಮಕ್ಕಳ ಸಂಖ್ಯೆ ಸ್ವಲ್ಪವಾದರೂ ಏರಿದರೆ ಸರಕಾರಿಶಾಲೆಗಳನ್ನು ಮುಚ್ಚುವ ಪ್ರಮೇಯವೇ ಉಂಟಾಗದು. ಅದರೊಂದಿಗೆ ಕಡು ಬಡವರ ಮಕ್ಕಳಿಗೂ ಪಕ್ಕದಲ್ಲಿಯೇ ಶಿಕ್ಷಣ ಪಡೆಯಲು ಸಾಧ್ಯ.
ಕೆಲವು ವರ್ಷಗಳ ಹಿಂದೆ ನನ್ನ ಹಿರಿಯ ಮಿತ್ರ ಡಾ ಭೂಮಿಗೌಡ ಅವರು ತಾನು ಕಲಿತ ಮಂಡ್ಯ ಜಿಲ್ಲೆಯ ಮಾದಹಳ್ಳಿ ಸರಕಾರಿಶಾಲೆ ಮುಚ್ಚುವ ಹಂತ ತಲುಪಿದ್ದನ್ನು ಅರಿತು ಅದನ್ನು ಉಳಿಸುವ ಸಾಹಸಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ಅವರು ಮಾದಹಳ್ಳಿ ಸರಕಾರಿ ಶಾಲೆಯಲ್ಲಿ ಅನೌಪಚಾರಿಕವಾಗಿ ಐ.ಏ.ಉ ಮತ್ತು .ಏ.ಉ. ತರಗತಿಗಳನ್ನು ಪ್ರಾರಂಭಿಸಿದರು. ಪ್ರಾರಂಭದಿಂದಲೇ ಇಂಗ್ಲಿಷನ್ನು ಒಂದು ಭಾಷಾಪಠ್ಯವಾಗಿ ಪರಿಚಯಿಸಿದರು. ಕೆಲವು ಶಿಕ್ಷಕರನ್ನು ಖಾಸಗಿಯಾಗಿ ನೇಮಕ ಮಾಡಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣವನ್ನೂ ಕೊಡಲಾರಂಭಿಸಿದರು. ದಾನಿಗಳ ಸಹಕಾರ ಪಡೆದು ನೀಟಾದ ಸಮವಸ್ತ್ರ, ಬೂಟು, ಕಾಲುಚೀಲ, ಟೈ ಮುಂತಾದವುಗಳನ್ನು ನೀಡಿದರು. ಅಲ್ಲಿನ ಮಕ್ಕಳು ಯಾವುದೇ ಕಾನ್ವೆಂಟ್ ಶಾಲೆಗಳ ಮಕ್ಕಳಿಗಿಂತ ಕಡಿಮೆಯಿರದಂತೆ ಮಾಡಿದರು. ಸಹಜವಾಗಿಯೇ ಖಾಸಗಿ ಶಾಲೆಗಳತ್ತ ಗುಳೇ ಹೋಗಿದ್ದ ಮಕ್ಕಳನ್ನು ಬಡ ಹೆತ್ತವರು ಮರಳಿ ಮಾದಹಳ್ಳಿ ಸರಕಾರಿಶಾಲೆಗೆ ಮರುಸೇರ್ಪಡೆಗೊಳಿಸಿದರು. ಯಾವುದೇ ಹೆತ್ತವರಿಗೂ ತಮ್ಮ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಂತೆ ನೀಟಾಗಿ ಸಮವಸ್ತ್ರ, ಬೂಟು, ಟೈ ಕಟ್ಟಿಕೊಂಡು ಶಾಲೆಗೆ ಹೋಗಿ ಕಲಿಯಬೇಕೆಂಬ ಬಯಕೆಯಿರುತ್ತದೆ. ಗುಣಮಟ್ಟದ ಶಿಕ್ಷಣ ಮತ್ತು ಇಂತಹ ಅಲ್ಪ ಬದಲಾವಣೆ ಮಾಡಿದರೆ ಸರಕಾರಿಶಾಲೆಗಳು ಮುಚ್ಚಿ ಹೋಗುವ ಪ್ರಮೇಯ ಉಂಟಾಗುವುದಿಲ್ಲ. ಇಂತಹ ಪ್ರಯೋಗದಿಂದ ನೂರು ಶೇಕಡಾ ಬದಲಾವಣೆಯಾಗುತ್ತದೆಯೆಂದು ನಾನು ಹೇಳಲಾರೆ. ಮೊದಲ ಹಂತದಲ್ಲಿ ಕನಿಷ್ಠ ಮುಚ್ಚುಗಡೆೆಯ ಹಂತದಲ್ಲಿರುವ ಶಾಲೆಯನ್ನು ಉಳಿಸಲು ಸಾಧ್ಯ.
ಸರಕಾರಿ ಶಾಲೆಗಳ ಶಿಕ್ಷಕರ ಮೇಲೆ ನಿಗಾ:
ನನಗೆ ತಿಳಿದಿರುವಂತೆ ನನ್ನ ಊರಿನ ಅಧ್ಯಾಪಕರೋರ್ವರು ಪ್ರತೀ ತಿಂಗಳು ಸರಕಾರದ ಸಂಬಳವೇನೋ ಪಡೆಯುತ್ತಿದ್ದರು. ಆದರೆ ಅವರು ಶಾಲೆಗೆ ಹಾಜರಾಗುತ್ತಿರಲಿಲ್ಲ. ಅದಕ್ಕೆ ಬದಲಾಗಿ ತನ್ನ ಸಂಬಳದ ಹತ್ತು ಶೇಕಡಾ ದುಡ್ಡನ್ನು ಸಂಬಳವಾಗಿ ನೀಡಿ ಓರ್ವ ಖಾಸಗಿ ಶಿಕ್ಷಕಿಯನ್ನು ನೇಮಕ ಮಾಡಿದ್ದರು. ಅವರು ತನ್ನ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು. (ಕೆಲವು ತಿಂಗಳ ಹಿಂದೆ ಅವರು ನಿಧನ ಹೊಂದಿದರು) ಇಂತಹದ್ದು ಅನೇಕ ಸರಕಾರಿ ಶಾಲೆಗಳಲ್ಲಿ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗಗಳಲ್ಲಂತೂ ಇದು ಸರ್ವೇ ಸಾಮಾನ್ಯ. ಇಂತಹದ್ದೆಲ್ಲಾ ನಡೆಯುವಾಗ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕಲು ಹೇಗೆ ಸಾಧ್ಯ? ಇಂತಹವರನ್ನು ಪತ್ತೆ ಹಚ್ಚಿ ತಕ್ಷಣ ಸೇವೆಯಿಂದ ವಜಾಗೊಳಿಸಬೇಕು. ಶಿಕ್ಷಕರನ್ನು ಡೆಪ್ಯುಟೇಶನ್ ಮೇಲೆ ಇತರ ಇಲಾಖೆಗಳಿಗೆ ವರ್ಗಾಯಿಸುವ ಪರಿಪಾಠವನ್ನು ಸರಕಾರ ನಿಲ್ಲಿಸಬೇಕು. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಕನ್ನಡ ಮಾಧ್ಯಮಕ್ಕೆ ಕಡ್ಡಾಯ ಮೀಸಲಾತಿ: ಇತ್ತೀಚೆಗೆ ಕನ್ನಡ ಚಿತ್ರರಂಗದ ಅತ್ಯಂತ ಜನಪರ ಕಾಳಜಿಯ ನಟ ಚೇತನ್ ಕನ್ನಡ ಮಾಧ್ಯಮಕ್ಕೆ ಕಡ್ಡಾಯ ಮೀಸಲಾತಿ ನೀಡಬೇಕೆಂಬ ಹೇಳಿಕೆ ನೀಡಿದ್ದರು. ಇದೊಂದು ಚಿಂತನಾರ್ಹ ಸಲಹೆ. ಈಗಾಗಲೇ ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಇತ್ಯಾದಿಗಳಲ್ಲಿ ಕನ್ನಡ ಮಾಧ್ಯಮ ಮೀಸಲಾತಿಯೇನೋ ಇದೆ. ಆದರೆ ಅದು ಏನೇನೂ ಸಾಲದು. ಕನಿಷ್ಠ 25% ಮೀಸಲಾತಿಯನ್ನಾದರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನೀಡಬೇಕು. ಸರಕಾರಿ ಪಾಲಿಟೆಕ್ನಿಕ್, ಐ.ಟಿ.ಐ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಪ್ರವೇಶಾತಿಯಲ್ಲಿ ಕನ್ನಡ ಮಾಧ್ಯಮಕ್ಕೆ ಮೊದಲ ಆದ್ಯತೆ ನೀಡಬೇಕು. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಕನ್ನಡ ಮಾಧ್ಯಮದವರಿಗೆ ಸ್ವಲ್ಪ ಕಷ್ಟವಿರುವುದರಿಂದ ಕನ್ನಡ ಮಾಧ್ಯಮದವರಿಗೆ ಸ್ವಲ್ಪ ಸಡಿಲಿಕೆ ನೀಡಬೇಕು.
ಇದೇ ರೀತಿ ರಾಜ್ಯ ಸರಕಾರ ಉದ್ಯೋಗಾವಕಾಶದಲ್ಲಿಯೂ ಕನ್ನಡ ಮಾಧ್ಯಮದವರಿಗೆ ಮೀಸಲಾತಿಯ ಮಿತಿಯನ್ನು ಗರಿಷ್ಠ ಮಟ್ಟಕ್ಕೆ ಏರಿಸಬೇಕು ಮತ್ತು ಕನ್ನಡ ಮಾಧ್ಯಮದವರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಕೊನೆಯ ಮಾತು: ಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಎಂದು ಘೋಷಿಸಿದರೆ ಸಾಲದು. ಅದು ಸಮಾಜದ ಕಟ್ಟ ಕಡೆಯ ಮಗುವಿಗೂ ಸಿಗಬೇಕೆಂದಾದರೆ ಸರಕಾರಿಶಾಲೆಗಳು ಉಳಿಯಲೇಬೇಕು.