ಪ್ರಮುಖ ಉರ್ದು ಸಾಹಿತಿ ಖುದ್ಸಿಯಾ ನಿಧನ
ಇಸ್ಲಾಮಾಬಾದ್,ಫೆ.6: ಪಾಕಿಸ್ತಾನದ ಪ್ರಮುಖ ಉರ್ದು ಸಾಹಿತಿ ಬಾನು ಖುದ್ಸಿಯಾ (88) ಲಾಹೋರಿನಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಹೃದಯಾಘಾತಕ್ಕೆ ಸಂಬಂಧಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಕೃತಿಗಳು ದೇಶದ ಒಳಗೆ ಮತ್ತು ಹೊರಗೆ ಭಾರೀ ಪ್ರಚಾರ ಪಡೆದಿದ್ದವು. 1928ರಲ್ಲಿ ಭಾರತದ ಫಿರೋರ್ಪುರದಲ್ಲಿ ಜನಿಸಿದ್ದ ಇವರು ದೇಶ ವಿಭಜನೆ ವೇಳೆ ಪಾಕಿಸ್ತಾನಕ್ಕೆ ಹೋಗಿದ್ದರು.
ಬಾಲ್ಯದಿಂದಲೇ ಸಣ್ಣಕತೆ ಬರೆಯುತ್ತಿದ್ದ ಖುದ್ಸಿಯಾರನ್ನು ರಾಜಜಿತ್(ದಿ ವಾಲ್ಚರ್ ಕಿಂಗ್) ಎನ್ನುವ ಕಾದಂಬರಿ ಜನಪ್ರಿಯರನ್ನಾಗಿಸಿತ್ತು. ಆದಿಬಾತ್, ಆತಿಶ್ ಇ ಸೇರ್ ಇ ಪಾ, ಏಕ್‌ದಿನ್, ಅಮರ್ ಬೈಲ್, ಆಸ್‌ಪಾಸ್ ಮುಂತಾದ ಹಲವಾರು ಗಮನಾರ್ಹ ಬರಹಗಳನ್ನು ಅವರು ಪ್ರಕಟಿಸಿದ್ದಾರೆ. 2003ರಲ್ಲಿ ಸಿತಾರಾ ಇ-ಇಮ್ತಿಯಾರ್ ಪುರಸ್ಕಾರ, 2010ರಲ್ಲಿ ಹಿಲಾಲ್ ಇ- ಇಮ್ತಿಯಾರ್ ಪುರಸ್ಕಾರ ಅವರಿಗೆ ದೊರಕಿವೆ.
ಉರ್ದು ಸಾಹಿತ್ಯದ ಇನ್ನೋರ್ವ ಪ್ರಮುಖ್ಯ ವ್ಯಕ್ತಿ ಅಸ್ತಮಿಸಿದ್ದಾರೆಂದು ಪ್ರಮುಖ ಬರಹಗಾರ ಅಮ್ಜದ್ ಇಸ್ಲಾಂ ಅಮ್ಜದ್ ಖುದ್ಸಿಯಾರ ನಿಧನ ಕುರಿತು ಹೇಳಿದ್ದಾರೆ. ಖುದ್ಸಿಯಾರ ಪತಿ ಅಸ್ಫಾಕ್ ಅಹ್ಮದ್ ಈ ಹಿಂದೆಯೇ ನಿಧನರಾಗಿದ್ದು, ಅವರು ಕೂಡಾ ಪ್ರಮುಖ ಸಾಹಿತಿಯಾಗಿದ್ದರು.