ಜಾತಿ ತಾರತಮ್ಯ ಪ್ರಕರಣಗಳ ಸಂಖ್ಯೆ : ಭಾರತದ ನಂ. 1 ವಿವಿ ಯಾವುದು ಗೊತ್ತೇ ?
ಹೊಸದಿಲ್ಲಿ, ಫೆ.7: ದಲಿತರ ವಿರುದ್ಧ ಜಾತಿ-ಆಧರಿತ ತಾರತಮ್ಯ ಪ್ರಕರಣಗಳಲ್ಲಿ 2015-16ರ ಅವಧಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಈ ಸಂಸ್ಥೆಯಲ್ಲಿ ಒಟ್ಟು 19 ಜಾತಿ ತಾರತಮ್ಯ ಪ್ರಕರಣಗಳು ದಾಖಲಾಗಿದ್ದರೆ, ಎರಡನೆ ಸ್ಥಾನ 18 ಪ್ರಕರಣಗಳು ನಡೆದಿರುವ ಗುಜರಾತ್ ವಿಶ್ವವಿದ್ಯಾಲಯ ಪಡೆದಿದೆಯೆಂದು ಯುಜಿಸಿ ತಿಳಿಸಿದೆ. ಲೋಕಸಭೆಯಲ್ಲಿ ಎತ್ತಲಾದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಮೇಲಿನ ಮಾಹಿತಿ ನೀಡಲಾಗಿದೆ.
ಒಟ್ಟು 18 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 2015-16ರ ಅವಧಿಯಲ್ಲಿ ದಲಿತರ ವಿರುದ್ಧದ ತಾರತಮ್ಯದ 102 ಪ್ರಕರಣಗಳು ದಾಖಲಾಗಿದ್ದರೆ, ಆದಿವಾಸಿಗಳ ವಿರುದ್ಧದ ತಾರತಮ್ಯದ 40 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಘಟನೆಯ ನಂತರ ವಿಶ್ವವಿದ್ಯಾಲಯ ಕ್ಯಾಂಪಸ್ಸುಗಳಲ್ಲಿ ನಡೆಯುವ ಜಾತಿ ತಾರತಮ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಜಾತಿ ಆಧರಿತ ತಾರತಮ್ಯ ಪ್ರಕರಣಗಳಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯ ಮೊದಲ ಸ್ಥಾನದಲ್ಲಿದೆಯೆಂಬ ಮಾಹಿತಿ ಹೊರಬೀಳುತ್ತಿದ್ದಂತೆಯೇ ವಿವಿಯ ಉಪಕುಲಪತಿ ಪ್ರೊ. ಗಿರೀಶ್ ಚಂದ್ರ ತ್ರಿಪಾಠಿ ಪ್ರತಿಕ್ರಿಯಿಸಿ ತಮ್ಮ ವಿಶ್ವವಿದ್ಯಾಲಯದಲ್ಲಿ ಜಾತಿ ಆಧರಿತ ತಾರತಮ್ಯ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳು ಸಲ್ಲಿಸಿದ ವರದಿಗಳ ಆಧಾರದಲ್ಲಿಯೇ ಯುಜಿಸಿ ತನ್ನ ವರದಿ ಸಿದ್ಧಪಡಿಸಿದೆಯೆಂದು ಹೇಳಲಾಗಿದೆ.
ಬನಾರಸ್ ಹಿಂದು ವಿಶ್ವವಿದ್ಯಾಲಯ ಹಾಗೂ ಗುಜರಾತ್ ವಿಶ್ವವಿದ್ಯಾಲಯದ ನಂತರದ ಸ್ಥಾನಗಳು ಈ ಕೆಳಗಿನ ಸಂಸ್ಥೆಗಳಿಗೆ ಹೋಗಿವೆ - ಸೌರಾಷ್ಟ್ರ ವಿಶ್ವವಿದ್ಯಾಲಯ(9), ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯ ಹಾಗೂಕರ್ನಾಟಕ ಪಶು ವೈದ್ಯಕೀಯ ಹಾಗೂ ಮತ್ಸ್ಯವಿಜ್ಞಾನ ವಿಶ್ವವಿದ್ಯಾಲಯ (8), ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ (7), ಮಹರ್ಷಿ ದಯಾನಂದ ಸರಸ್ವತಿ ವಿವಿ (6), ಛತ್ರಪತಿ ಶಹುಜಿ ಮಹಾರಾಜ್ ವೈದ್ಯಕೀಯ ವಿವಿ(5)ಹಾಗೂ ಜೆಎನ್‌ಯು (3).