ಕಾನ್ಪುರ ರೈಲು ಅಪಘಾತದ ಪ್ರಮುಖ ಶಂಕಿತ ನೇಪಾಳದಲ್ಲಿ ಸೆರೆ

Update: 2017-02-07 09:04 GMT

ಕಾಠ್ಮಂಡು,ಫೆ.7: ಕಳೆದ ವರ್ಷದ ನ.21ರಂದು ಕಾನ್ಪುರದಲ್ಲಿ ಇಂದೋರ-ಪಾಟ್ನಾ ಎಕ್ಸಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಪ್ರಮುಖ ಶಂಕಿತ ಆರೋಪಿ ಸಂಶುಲ್ ಹೋಡಾನನ್ನು ಮಂಗಳವಾರ ಇಲ್ಲಿ ಬಂಧಿಸಲಾಗಿದೆ. ಈ ಅಪಘಾತದಲ್ಲಿ 150 ಪ್ರಯಾಣಿಕರು ಮೃತಪಟ್ಟಿದ್ದರು.

ದುಬೈನಿಂದ ಗಡೀಪಾರುಗೊಂಡು ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆತನನ್ನು ನೇಪಾಳ ಪೊಲೀಸರ ವಿಶೇಷ ತಂಡವು ಬಂಧಿಸಿತು.

 ಕಾನ್ಪುರ ರೈಲ್ವೆ ಅಪಘಾತದಲ್ಲಿ ಹೋಡಾ ಅಪೇಕ್ಷಿತ ಆರೋಪಿಯಾಗಿದ್ದಾನೆ ಎಂದು ನಾವು ಕೇಳಿದ್ದೇವೆ. ಭಾರತದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಹೋಡಾನ ಪಾತ್ರದ ಬಗ್ಗೆ ನಾವು ಅಲ್ಲಿಯ ಪೊಲೀಸರೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಡಿಐಜಿ ಪಶುಪತಿ ಉಪಾಧ್ಯಾಯ ತಿಳಿಸಿದರು.

ಹೋಡಾ ನೇಪಾಳದ ಬಾರಾ ಜಿಲ್ಲೆಯಲ್ಲಿ ನಡೆದ ಅವಳಿ ಕೊಲೆಗಳ ರೂವಾರಿ ಯಾಗಿದ್ದಾನೆ ಎಂದರು.

ಇಂಟರ್‌ಪೋಲ್ ನೆರವಿನೊಂದಿಗೆ ಹೋಡಾ ಮತ್ತು ನೇಪಾಳ ಪ್ರಜೆಗಳಾದ ಇತರ ಮೂವರನ್ನು ದುಬೈನಿಂದ ಗಡೀಪಾರುಗೊಳಿಸಿ ಇಲ್ಲಿಗೆ ತರಲಾಗಿದೆ.

ಅಂತಾರಾಷ್ಟ್ರೀಯ ಕ್ರಿಮಿನಲ್ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಹೋಡಾ ನೇಪಾಳ ಮತ್ತು ಭಾರತದಲ್ಲಿ ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದೂ ಉಪಾಧ್ಯಾಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News