ಜೋಕ್‌ಗಳಿಗೆ ಹೇಗೆ ಸ್ಪಂದಿಸಬೇಕೆಂದು ಜನರಿಗೆ ಸಲಹೆ ನೀಡುವುದು ನಮ್ಮ ಕೆಲಸವಲ್ಲ:ಸುಪ್ರೀಂ

Update: 2017-02-07 09:39 GMT

ಹೊಸದಿಲ್ಲಿ,ಫೆ.7: ಜನರು ನಗೆಹನಿಗಳನ್ನು ಕೇಳಿದಾಗ ಹೇಗೆ ನಡೆದುಕೊಳ್ಳಬೇಕೆಂದು ತಾನೇಕೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು?

ಇದು ನಿಜ ಜೀವನದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಿಖ್ ಸಮುದಾಯವು ಹಾಸ್ಯಕ್ಕೆ ವಸ್ತುವಾಗಿರುವ ಕುರಿತು ವಕೀಲ ಹರ್‌ವಿಂದರ್ ಚೌಧರಿ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭ ಇಂದು ಸರ್ವೋಚ್ಚ ನ್ಯಾಯಾಲಯವು ಕೇಳಿರುವ ಪ್ರಶ್ನೆ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಯಾವುದೇ ಅವಮಾನದಿಂದ ರಕ್ಷಣೆ ನೀಡಲು ಕಠಿಣ ಕಾನೂನಿದೆ. ಆದರೆ ಸಿಖ್ ಸಮುದಾಯ ಕುರಿತಂತೆ ಇಂತಹ ಯಾವುದೇ ಕಾನೂನಿಲ್ಲ ಎಂದು ಚೌಧರಿ ಬೆಟ್ಟು ಮಾಡಿದರು.

ಹೌದು,ಅದೊಂದು ಕಾನೂನು ಮತ್ತು ಅದನ್ನು ಮಾಡಿರವುದು ಸಂಸತ್ತು. ಕಾನೂನು ರೂಪಿಸುವ ಅಧಿಕಾರ ಶಾಸಕಾಂಗದ್ದಾಗಿದೆ. ನಾವು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸುವಂತಿಲ್ಲ, ಇಂತಹ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸುವುದದರೂ ಯಾರಿಗೆ ಎಂದು ನ್ಯಾ.ದೀಪಕ್ ಮಿಶ್ರಾ ಪ್ರಶ್ನಿಸಿದರು.

ಇದೇ ರೀತಿ ಇಂಟರ್‌ನೆಟ್‌ನಲ್ಲಿ ಗೂರ್ಖಾ ಸಮುದಾಯವನ್ನು ಟೊಪ್ಪಿಗೆ ಮತ್ತು ಖುಖ್ರಿ(ಬಾಕು)ಯೊಂದಿಗೆ ಸಮೀಕರಿಸಿರುವ ಕುರಿತ ವಿದ್ಯಾರ್ಥಿಯೋರ್ವನ ದೂರಿಗೆ ಸಂಬಂಧಿಸಿದಂತೆ ಪೀಠವು, ಈ ನ್ಯಾಯಾಲಯವು ಜನರಿಗೆ ನೈತಿಕ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಾಧ್ಯವಿಲ್ಲ. ಜನರು ಪರಸ್ಪರ ಸಂಯಮದಿಂದಿರಬೇಕು. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ತಮ್ಮ ಶೌರ್ಯ ಮತ್ತು ಭಾರತಕ್ಕೆ ತಮ್ಮ ಕೊಡುಗೆಗಳಿಂದಾಗಿ ಗೂರ್ಖಾ ಸಮುದಾಯವು ಈ ದೇಶದ ಗೌರವಕ್ಕೆ ಪಾತ್ರವಾಗಿದೆ. ವಾಸ್ತವದಲ್ಲಿ ನೀವು ಇಂತಹ ಅರ್ಜಿಗಳನ್ನು ದಾಖಲಿಸುವ ಮೂಲಕ ಆ ಸಮುದಾಯವನ್ನು ಕೆಳಮಟ್ಟಕ್ಕಿಳಿಸುತ್ತಿದ್ದೀರಿ ಎಂದು ಅರ್ಜಿದಾರರನ್ನು ಕುಟುಕಿದ ನ್ಯಾಯಾಲಯವು, ಯಾವದೇ ವ್ಯಕ್ತಿ ತನ್ನ ದೂರು ಹೇಳಿಕೊಂಡು ಬಂದರೆ ನಾವು ಅದನ್ನು ಕೈಗೆತ್ತಿಕೊಳ್ಳುತ್ತೇವೆ. ಈ ದೇಶದಲ್ಲಿ ಹಲವಾರು ಧರ್ಮಗಳಿವೆ. ನಿರ್ದಿಷ್ಟ ಸಮುದಾಯ ಅಥವಾ ಧರ್ಮಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ನಾವು ನೀಡಲು ಹೇಗೆ ಸಾಧ್ಯ ಎಂದು ನ್ಯಾ.ಮಿಶ್ರಾ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News