×
Ad

ಮೋದಿ ಸರಕಾರದ ಅವಿವೇಕದ ಪರಾಕಾಷ್ಠೆ 2017ರ ಬಜೆಟ್

Update: 2017-02-07 23:20 IST

ಕೇಂದ್ರ ಸರಕಾರ ಜಿಡಿಪಿಗೆ ಸಂಬಂಧಪಟ್ಟಂತೆ ತನ್ನ ವೆಚ್ಚವನ್ನು ಮಾರ್ಪಾಡು ಮಾಡದೆ ಇರಲು ನಿರ್ಧರಿಸಿದೆ. ಸರಕಾರದ ಬಜೆಟ್ ತಂತ್ರದ ಮೈಲಿಗಲ್ಲಾಗಿರುವ ಆರ್ಥಿಕ ವಿವೇಕದ ಇಂತಹ ನಡೆಯ ದಡ್ಡತನ ದಿಗ್ಭ್ರಮೆ ಮೂಡಿಸುತ್ತದೆ. ಇದು ನೋಟು ಅಮಾನ್ಯತೆಯ ಮೂರ್ಖತನವನ್ನು ಮತ್ತಷ್ಟು ಅನಾವರಣಗೊಳಿಸುತ್ತದೆ. 

2017-18ರ ಬಜೆಟ್ ಎರಡು ಕಾರಣಗಳಿಂದಾಗಿ ಅರ್ಥಹೀನವಾಗಿದೆ. ಮೊದಲನೆಯದಾಗಿ ಅವಧಿಗಿಂತ ಬೇಗ ಬಜೆಟ್ ಮಂಡನೆಯಿಂದ ಪ್ರಸಕ್ತ ವರ್ಷದ ಬಗ್ಗೆ ಕಡಿಮೆ ಮಾಹಿತಿ ಲಭ್ಯವಾಗುತ್ತದೆ ಮತ್ತು ಎರಡನೆಯದಾಗಿ ನೋಟು ಅಮಾನ್ಯತೆಯಿಂದ ಜಿಡಿಪಿ ಬೆಳವಣಿಗೆ ಕುಂಠಿತಗೊಳ್ಳುವುದು ಶತಃಸಿದ್ಧವಾಗಿದ್ದು ಯಾವುದೇ ರೀತಿಯ ನಿಖರ ಭವಿಷ್ಯವಾಣಿಯನ್ನು ಅಸಾಧ್ಯಗೊಳಿಸಿದೆ. ಹಾಗಾಗಿ ಸದ್ಯದ ಬಜೆಟ್‌ನ್ನು ಅಂಕಿಸಂಖ್ಯೆಗಳ ಮೂಲಕ ಸಮೀಕ್ಷಿಸುವುದಕ್ಕಿಂತ ಅದರ ಒಟ್ಟಾರೆ ಅಂಕಿಅಂಶಗಳ ಬಗ್ಗೆ ತಿಳಿಯೋಣ.

ಇಲ್ಲಿ ಪ್ರತ್ಯೇಕವಾಗಿ ನಿಲ್ಲುವ ಒಂದು ವಿಷಯವೆಂದರೆ ಕೇಂದ್ರ ಸರಕಾರದ ಕರ ಆದಾಯ ಮತ್ತು ಜಿಡಿಪಿಯ ಅನುಪಾತ ವ್ಯತ್ಯಾಸವಾಗದೆ ಉಳಿದರೆ (ಮುಖ್ಯ ಆದಾಯ ಸಲಹೆಗಾರರು ಈ ಅಂಶವನ್ನು ಮಾಧ್ಯಮಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ) ವಿತ್ತೀಯ ಕೊರತೆ ಮತ್ತು ಜಿಡಿಪಿಯ ಅನುಪಾತವು ಬದಲಾಗದಂತೆ ನೋಡಬೇಕಿದೆ(ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಕ್ರೆಡಿಟ್ ರೇಟಿಂಗ್‌ನ್ನು ಕಾಪಾಡುವ ಸಲುವಾಗಿ). ಇದರರ್ಥವೇನೆಂದರೆ ಕೇಂದ್ರ ಸರಕಾರ ಜಿಡಿಪಿಗೆ ಸಂಬಂಧಪಟ್ಟಂತೆ ತನ್ನ ವೆಚ್ಚವನ್ನು ಮಾರ್ಪಾಡು ಮಾಡದೆ ಇರಲು ನಿರ್ಧರಿಸಿದೆ. ಸರಕಾರದ ಬಜೆಟ್ ತಂತ್ರದ ಮೈಲಿಗಲ್ಲಾಗಿರುವ ಆರ್ಥಿಕ ವಿವೇಕದ ಇಂತಹ ನಡೆಯ ದಡ್ಡತನ ದಿಗ್ಭ್ರಮೆ ಮೂಡಿಸುತ್ತದೆ. ಇದು ನೋಟು ಅಮಾನ್ಯತೆಯ ಮೂರ್ಖತನವನ್ನು ಮತ್ತಷ್ಟು ಅನಾವರಣಗೊಳಿಸುತ್ತದೆ. ನೋಟು ಅಮಾನ್ಯಗೊಳಿಸುವ ಮೂಲಕ ಉತ್ಪಾದನೆಯಲ್ಲಿ ಅನಗತ್ಯ ಹಿನ್ನಡೆ ಮತ್ತು ಉದ್ಯೋಗ ಬೆಳವಣಿಗೆಯನ್ನು ನಿಧಾನಗೊಳಿಸಿದ ಕೇಂದ್ರ ಸರಕಾರ ಅದರಿಂದ ಉಂಟಾದ ನಷ್ಟವನ್ನು ಬಜೆಟ್‌ನಲ್ಲಿ ಜಿಡಿಪಿಗೆ ಸಂಬಂಧಪಟ್ಟ ವೆಚ್ಚವನ್ನು ಏರಿಸಿ ನೋಟು ರದ್ದತಿಯಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೀಡಾದ ಜನರ ಕಲ್ಯಾಣಕ್ಕೆ ಬಳಸುವ ಒಂದು ಅವಕಾಶ ಸರಕಾರದ ಕೈಯಲ್ಲಿತ್ತು. ನಿಜವಾಗಿ ಬಜೆಟ್‌ಗಿಂತಲೂ ಮೊದಲು ಎಲ್ಲರಿಗೂ ಮೂಲ ಕನಿಷ್ಠ ಆದಾಯದ ಖಚಿತತೆ ಸೇರಿದಂತೆ ಎಲ್ಲಾ ರೀತಿಯ ಗಾಳಿ ಸುದ್ದಿಗಳು ಹಾರಾಡುತ್ತಿದ್ದವು. ಇಂತಹ ಎಡಪಂಥೀಯ ಸರಕಾರಗಳ ಯೋಜನೆಗಳು (ಬ್ರೆಝಿಲ್‌ನಲ್ಲಿ ವರ್ಕರ್ಸ್ ಪಾರ್ಟಿ ಆಡಳಿತ ಒಂದು ಉತ್ತಮ ಉದಾಹರಣೆ) ಬಿಜೆಪಿಯಂತಹ ಬಲಪಂಥೀಯ ಸಿದ್ಧಾಂತ ಹೊಂದಿರುವ ಪಕ್ಷಗಳಿಗೆ ತೀರಾ ವಿರುದ್ಧವಾಗಿದ್ದರೂ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿರುವ ಪರಿಣಾಮ ನೋಟು ರದ್ದತಿಯಿಂದ ತೊಂದರೆಗೀಡಾದ ಜನರಿಗೆ ಒಂದಷ್ಟು ಸಾಂತ್ವನ ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂಬ ನಂಬಿಕೆಯಿತ್ತು. ಆದರೆ ಬಿಜೆಪಿ ಮಾತ್ರ ಬಜೆಟ್‌ನಲ್ಲಿ ಆದಾಯ ಬೆಂಬಲದ ಬಗ್ಗೆ ಒಂದು ಮಾತನ್ನೂ ನುಡಿಯದೆ ಇರುವ ಮೂಲಕ ತನ್ನ ಮೂಲ ಗುಣವನ್ನು ಸಾಬೀತುಪಡಿಸಿತು.

ವಿಪರ್ಯಾಸವೆಂದರೆ ನೋಟು ರದ್ದತಿಯಿಂದ ಉಂಟಾದ ನಷ್ಟದ ಬಗ್ಗೆ ಯಾವುದೇ ಉಲ್ಲೇಖ ಮಾಡದೇ ಇರುವುದು ಮಾತ್ರವಲ್ಲ (ಆದಾಯ ತೆರಿಗೆ ದರದಲ್ಲಿ ಮಾಡಿರುವ ಹೊಂದಾಣಿಕೆ ತೃಣ ಮಾತ್ರ) ನೋಟು ಅಮಾನ್ಯತೆಯು ನೀಡಿರುವ ಅವಕಾಶವನ್ನೂ ಬಳಸಿಕೊಳ್ಳುವಲ್ಲಿ ಸಫಲವಾಗಲಿಲ್ಲ. ಇಲ್ಲಿ ನಾನು ಸರಕಾರ ಬಹಳವಾಗಿ ನಿರೀಕ್ಷೆಯಿಟ್ಟುಕೊಂಡಿದ್ದ, ವಾಪಸಾಗದ ಕಪ್ಪುಹಣದ ಬಗ್ಗೆ ಮಾತನಾಡುತ್ತಿಲ್ಲ, ನೋಟು ರದ್ದತಿಯ ನಂತರ ಜಮೆಯಾದ ಕಪ್ಪುಹಣದ ಪ್ರಮಾಣ ಅತ್ಯಂತ ಕನಿಷ್ಠವಾಗಿದ್ದು ಇದರಿಂದ ಆರ್ಥಿಕವಾಗಿ ಯಾವುದೇ ಉಪಯೋಗವಾಗಲಿಲ್ಲ. (ಶೇ. 97 ಅಮಾನ್ಯಗೊಂಡ ನೋಟುಗಳು ಬ್ಯಾಂಕ್‌ಗಳಿಗೆ ಬದಲಾವಣೆಗೆ ಅಥವಾ ಠೇವಣಿಗೆ ವಾಪಸಾಗಿವೆ). ಇಲ್ಲಿ ನಾನು ಮಾತನಾಡುತ್ತಿರುವುದು ಬ್ಯಾಂಕ್‌ಗಳಲ್ಲಿ ಜಮೆಯಾದ ಅಮಾನ್ಯಗೊಂಡ ನೋಟುಗಳ ಬಗ್ಗೆ. ಸಾಲ ನೀಡಲು ಅರ್ಹ ವ್ಯಕ್ತಿಗಳೆಂದು ಬ್ಯಾಂಕ್‌ಗಳು ಪರಿಗಣಿಸಿರುವ ಸಾಲಗಾರರಿಂದ ಅಷ್ಟೇನೂ ಹೆಚ್ಚುವರಿ ಸಾಲಕ್ಕಾಗಿ ಬೇಡಿಕೆ ಬರದ ಕಾರಣ ಬ್ಯಾಂಕ್‌ಗಳು ಈ ಮೊತ್ತವನ್ನು ತಮ್ಮಲ್ಲೇ ಇಟ್ಟುಕೊಂಡು ಅದಕ್ಕೆ ಬಡ್ಡಿ ಪಾವತಿಸುತ್ತಿವೆಯೇ ಹೊರತು ಅದರಿಂದ ಏನೂ ಪ್ರತಿಫಲ ಗಳಿಸುತ್ತಿಲ್ಲ. ಒಂದು ವೇಳೆ ಸರಕಾರವು ವೆಚ್ಚವನ್ನು ಭರಿಸುವ ಸಲುವಾಗಿ ಸರಕಾರಿ ಭದ್ರತೆಯನ್ನು ನೀಡಿ ಈ ಹಣವನ್ನು ಬ್ಯಾಂಕ್‌ಗಳಿಂದ ಪಡೆದುಕೊಂಡಿದ್ದರೆ ಈ ಮೊತ್ತ ಮರಳಿ ಚಲಾವಣೆಗೆ ಬಂದು ಆರ್ಥಿಕ ಕುಸಿತದ ಪರಿಣಾಮವನ್ನು ಕಡಿಮೆ ಮಾಡುವ ಜೊತೆಗೆ ಬ್ಯಾಂಕ್‌ಗಳಿಗೂ ಆದಾಯ ತರುತ್ತಿತ್ತು. ಸರಕಾರ ಪಡೆಯುವ ಇಂಥಾ ಸಾಲ ಬಜೆಟ್‌ನಲ್ಲಿ ವಿತ್ತೀಯ ಕೊರತೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಆರ್ಥಿಕತೆಗೆ ಇದರಿಂದ ಯಾವುದೇ ವ್ಯತಿರಿಕ್ತ ಪರಿಣಾಮವಾಗುತ್ತಿರಲಿಲ್ಲ. ಇದು ಸರಕಾರವು ಜನರಿಂದ ಕಡ್ಡಾಯ ಸಾಲ ಪಡೆದುದಕ್ಕಿಂತ ಭಿನ್ನವಾಗೇನೂ ಇರುತ್ತಿರಲಿಲ್ಲ, ಪರಿಣಾಮವಾಗಿ ಖರೀದಿಸುವ ಅಧಿಕಾರ ಸರಕಾರದಿಂದ ಜನರತ್ತ ವರ್ಗಾವಣೆಯಾಗುತ್ತಿತ್ತೇ ಹೊರತು ಬೇರೇನೂ ಅಲ್ಲ. ಅದು ನಾವು ಹಿಂದಿನ ಕಾಲದಲ್ಲಿ ಒಗ್ಗಿಹೋಗಿದ್ದ ‘ಕಡ್ಡಾಯ ಠೇವಣಿ’ ಯೋಜನೆಗಿಂತ ಭಿನ್ನವಾ ಗಿಯೂ ಇರುತ್ತಿರಲಿಲ್ಲವಾಗಿದ್ದರೂ ಬೃಹತ್ ಮಟ್ಟದಲ್ಲಿ ನಡೆಯುತ್ತಿತ್ತೆಂಬುದು ನಿಜ. ಆದರೆ ಅದು ನೋಟು ಅಮಾನ್ಯತೆಯಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿಗ್ರಹಿಸುತ್ತಿತ್ತು. ಜೊತೆಗೆ ಬ್ಯಾಂಕ್‌ಗಳಿಗೂ ಆದಾಯವನ್ನು ಒದಗಿಸುತ್ತಿತ್ತು.

ಹಳೆ ನೋಟುಗಳ ಜಾಗವನ್ನು ಹೊಸ ನೋಟುಗಳು ಆವರಿಸಿದಾಗ ಠೇವಣಿಗಳು ಖಂಡಿತವಾಗಿಯೂ ಕುಸಿಯುತ್ತದೆ ಯಾಕೆಂದರೆ ಜನರು ತಮ್ಮ ವ್ಯವಹಾರಗಳಿಗೆ ಬ್ಯಾಂಕ್‌ಗಳ ಬದಲಾಗಿ ನಗದು ರೂಪದ ಹಣವನ್ನೇ ಹೆಚ್ಚು ಬಳಸುತ್ತಾರೆ. ಆದರೆ ಅಮಾನ್ಯಗೊಂಡ ನೋಟುಗಳ ಸಂಪೂರ್ಣ ಮೌಲ್ಯದ ನೋಟುಗಳನ್ನು ಮುದ್ರಿಸಲಾಗುವುದಿಲ್ಲ ಎಂದು ಸರಕಾರ ಘೋಷಿಸಿತು. ಈ ಅಂತರದಿಂದ ಜನರ ಮೇಲೆ ನಗದು ವ್ಯವಹಾರವನ್ನು ತ್ಯಜಿಸಿ ನಗದುರಹಿತ ವ್ಯವಹಾರ ನಡೆಸಲು ಒತ್ತಡ ಹೇರಿದಂತಾಗುತ್ತದೆ. ಈ ಅಂತರದ ನಗದನ್ನು ಬ್ಯಾಂಕ್‌ಗಳು ನಿಭಾಯಿಸದಂತಾಗಿವೆ ಮತ್ತು ಅದಕ್ಕಾಗಿ ಸರಕಾರ ಈ ಮೊತ್ತವನ್ನು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಮೂಲಕ ನೋಟು ಅಮಾನ್ಯತೆಯ ದುಷ್ಪರಿಣಾಮವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬಹುದಿತ್ತು. ಆದರೆ ಸರಕಾರದ ಜಾಗತಿಕ ಆರ್ಥಿಕತೆಯನ್ನು ಓಲೈಸಬೇಕೆಂಬ ಹಂಬಲ (ಸಾಲ ಪಡೆಯದೆ ಇರುವ ಮೂಲಕ) ಅದರದ್ದೇ ಅವಾಂತರಗಳ ಪರಿಣಾಮದಿಂದ ಆರ್ಥಿಕತೆಯನ್ನು ರಕ್ಷಿಸುವ ಸರಕಾರದ ಬಯಕೆಗಿಂತಲೂ ಪ್ರಖರವಾಗಿರುವುದು ಸ್ಪಷ್ಟವಾಗಿದೆ. ನರೇಗಾದ ಅಡಿಯಲ್ಲಿ ನೀಡಲಾಗುವ ಅನುದಾನ ಹೆಚ್ಚಾಗಿದೆ ಎಂಬ ಸರಕಾರದ ಹೇಳಿಕೆ ತಪ್ಪುಮಾಹಿತಿಯಿಂದ ಕೂಡಿದೆ. 2017-18ರ ಸಾಲಿಗೆ ನಿಗದಿಪಡಿಸಲಾಗಿರುವ ರೂ. 48,000 ಕೋಟಿ ಬಂಡವಾಳ ಬಹುತೇಕವಾಗಿ 2016-17ರ ಸಾಲಿನ ಪರಿಷ್ಕೃತ (ರೂ. 47,500) ಹೂಡಿಕೆಯಷ್ಟೇ ಆಗಿದೆ. ಇದೊಂದು ಬೇಡಿಕೆ ಆಧಾರಿತ ಯೋಜನೆಯಾಗಿದ್ದು ಬಂಡವಾಳ ಹೂಡಿಕೆಯು ಸರಕಾರದ ನಿಯಂತ್ರಣದಲ್ಲಿ ಇರುವುದಿಲ್ಲ ಮತ್ತು ಅದನ್ನು ಅಗತ್ಯಕ್ಕೆ ತಕ್ಕಂತೆ ವೃದ್ಧಿಸಿಕೊಳ್ಳಬಹುದು ಎಂಬುದು ನಿಜ. ಆದರೆ ನರೇಗಾ ಯೋಜನೆಯಡಿ ವೇತನ ಪಾವತಿಯಲ್ಲಿ ಉಂಟಾಗಿರುವ ದೀರ್ಘ ವಿಳಂಬ ಮತ್ತು ಭವಿಷ್ಯದಲ್ಲಿ ಆಧಾರ್ ಕಾರ್ಡ್ ಬೇಕೆಂಬ ಒತ್ತಾಯ, ಈ ಎರಡು ಅಂಶಗಳು ಕೂಡಾ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ವಿರುದ್ಧವಾಗಿದ್ದು ಯೋಜನೆಗೆ ಸಂಬಂಧಪಟ್ಟಂತೆ ಸರಕಾರದ ಇರಾದೆಯ ಬಗ್ಗೆ ಅನುಮಾನ ಮೂಡುವಂತೆ ಮಾಡುತ್ತದೆ.

ಕೃಪೆ: thewire.in

Writer - ಪ್ರಭಾತ್ ಪಟ್ನಾಯಕ್

contributor

Editor - ಪ್ರಭಾತ್ ಪಟ್ನಾಯಕ್

contributor

Similar News

ಜಗದಗಲ

ಜಗ ದಗಲ