ಎರಡು ದಿನದ ಮಗುವಿಗೆ ಸಂಕೀರ್ಣ ಹೃದ್ರೋಗ ಶಸ್ತ್ರಚಿಕಿತ್ಸೆ

Update: 2017-02-08 08:13 GMT

ಮಂಗಳೂರು, ಫೆ.8: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ದಿನಗಳ ಹಸುಳೆಗೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದ್ರೋಗ ತಜ್ಞರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಜನಿಸಿ ಎರಡು ದಿನಗಳಷ್ಟೇ ಆಗಿರುವ ಸುಮಾರು 2.3 ಕೆಜಿ ತೂಕದ ಮೈ ಬಣ್ಣ ನೀಲಿ ವರ್ಣಕ್ಕೆ ತಿರುಗಿರುವ ಮಗುವೊಂದನ್ನು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನವಜಾತ ಶಿಶು ಆರೈಕೆ ಘಟಕದಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞ ಡಾ.ಪ್ರೇಮ್ ಆಳ್ವ ಅವರು ಮಗುವನ್ನು ಪರೀಕ್ಷೆಗೆ ಒಳಪಡಿಸಿದಾಗ ಮಗುವಿನ ಮಹಾ ಅಪಧಮನಿಯು ಸ್ಥಳಾಂತರ ಹೊಂದಿರುವುದನ್ನು ಪತ್ತೆ ಹಚ್ಚಿದ್ದರು. ಹೃದಯದಿಂದ ಹೊರಹೊಮ್ಮುವ ಎರಡು ಮುಖ್ಯ ರಕ್ತನಾಳಗಳು ತಾವು ಸಂಪರ್ಕಿಸಬೇಕಾದ ಕೋಣೆಗಳನ್ನು ಬಿಟ್ಟು ಹೃದಯದ ತಪ್ಪು ಕೋಣೆಗಳನ್ನು ಸಂಪರ್ಕಿಸಿರುವ ಸ್ಥಿತಿ. ಈ ಸ್ಥಿತಿಯಲ್ಲಿ ದೇಹದ ಪೋಷಣೆಗೆ ಅಗತ್ಯವಿರುವ ಆಮ್ಲಜನಕವನ್ನು ಪೂರೈಸುವ ರಕ್ತವು ಹೃದಯದ ಬದಲು ಮರಳಿ ಶ್ವಾಸಕೋಶವನ್ನು ಸೇರುತಿತ್ತು. ಈ ಸ್ಥಿತಿಯನ್ನು ಸರಿಪಡಿಸಲು ಮಗುವಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.

ಹೃದ್ರೋಗ ಸಮಸ್ಯೆಯಿಂದ ಜನಿಸುವ ಶಿಶುಗಳಲ್ಲಿ ಶೇ.5%ರಷ್ಟು ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯನ್ನು ಸರಿಪಡಿಸಲು ಮಗು ಹುಟ್ಟಿದ ತಕ್ಷಣ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿರುತ್ತದೆ. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಗೌರವ್ ಎಸ್. ಶೆಟ್ಟಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಇಂತಹ ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸೆಯನ್ನು ನಡೆಸಿರುವವರು. ಅದೇ ರೀತಿ ಈ ಮಗುವಿನ ಹೆತ್ತವರೊಡನೆ ಸಮಾಲೋಚಿಸಿ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಯ ಸಂಕೀರ್ಣತೆ ಮತ್ತು ಶಸ್ತ್ರಚಿಕಿತ್ಸೆಗೆ ಬೇಕಾದ ಪರಿಣತಿಯನ್ನು ವಿವರಿಸಿದರು.

ಈ ಶಸ್ತ್ರಚಿಕಿತ್ಸೆಯನ್ನು ಮೊಟ್ಟೆಗಿಂತಲೂ ಸಣ್ಣಗಾತ್ರದ, ಕಿರುಬೆರಳಿಗಿಂತಲೂ ಸಣ್ಣದಾದ 2 ಪ್ರಮುಖ ಅಪಧಮನಿಗಳು ಮತ್ತು ಬಾಲ್ ಪಾಯಿಂಟ್ ಪೆನ್ನಿನ ರಿಫಿಲ್‌ಗಿಂತಲೂ ಸಣ್ಣಗಾತ್ರದ ರಕ್ತವನ್ನು ಪೂರೈಸುವ ರಕ್ತನಾಳಗಳ ನ್ಯೂನತೆಯನ್ನು ಹೊಂದಿರುವ ಸಣ್ಣ ಹೃದಯದ ಮೇಲೆ ನಡೆಸಿ ಅದನ್ನು ಸರಿಪಡಿಸಬೇಕಾಗಿತ್ತು. ಇದನ್ನು ಡಾ.ಗೌರವ್ ಎಸ್ ಶೆಟ್ಟಿ ಮತ್ತು ಅವರ ತಂಡದವರಾದ ಮುಖ್ಯ ಅರಿವಳಿಕೆ ತಜ್ಞಡಾ.ಗುರುರಾಜ್ ತಂತ್ರಿ, ರು ಮತ್ತು ಅರಿವಳಿಕೆ ತಜ್ಞ ಡಾ. ಸುಹಾಸ್ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸಿದ್ದಾರೆ.

ಮಗುವನ್ನು 7ನೆ ದಿನದಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಇದೀಗ ಒಂದುವಾರದ ನಂತರ ಮರು ಪರಿಶೀಲನೆಗೆ ಒಳಪಡಿಸಿದಾಗ ಮಗು ಆರೋಗ್ಯವಾಗಿದೆ..

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವೊಂದೇ ಇಂತಹ ಅತ್ಯಂತ ಕ್ಲಿಷ್ಟಕರವಾದ ನವಜಾತ ಶಿಶುಗಳಲ್ಲೂ ಶಸ್ತ್ರಚಿಕಿತ್ಸೆಯನ್ನು ಮಾಡುವ ಸೌಲಭ್ಯ ಮತ್ತು ಪರಿಣತಿ ಹೊಂದಿರುವ ಕರಾವಳಿ ಪ್ರದೇಶದ ಕೇಂದ್ರವಾಗಿದೆ.

ಶಸ್ತ್ರಚಿಕಿತ್ಸೆಯ ಹೆಚ್ಚಿನ ಮಾಹಿತಿಗಾಗಿ ಡಾ.ಗೌರವ್ ಶೆಟ್ಟಿ ಮೊ.ಸಂ: 9448485279 ಇಮೇಲ್:  ajhospitalmarketing@gmail.com ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News