ಅನ್ನದ ಹೆಸರಲ್ಲಿ ವಿಷ ಉಣ್ಣುತ್ತಿದ್ದೀರಾ ?

Update: 2017-03-05 15:41 GMT

 ಅನ್ನ ಭಾರತದಲ್ಲಿ ಪ್ರಮುಖ ಆಹಾರ.ದೇಶದ ಹೆಚ್ಚಿನ ರಾಜ್ಯಗಳಲ್ಲಿ ಅನ್ನವನ್ನು ಹೊಟ್ಟೆಗೆ ಹಾಕಿಕೊಳ್ಳದೆ ಜನರ ಕೆಲಸ ಸಾಗದು. ವಿಶ್ವಾದ್ಯಂತವೂ ವಿವಿಧ ಪ್ರಾದೇಶಿಕ ಸ್ವಾದಿಷ್ಟ ಆಹಾರಗಳ ತಯಾರಿಕೆಯಲ್ಲಿ ಅಕ್ಕಿಯ ಬಳಕೆ ಇದ್ದೇ ಇದೆ. ಅಕ್ಕಿಯನ್ನು ನೀರಿನಲ್ಲಿ ಕುದಿಸಿ ಅನ್ನವನ್ನು ತಯಾರಿಸುವುದು ಹೆಚ್ಚಾಗಿ ಬಳಕೆಯಲ್ಲಿರುವ ವಿಧಾನವಾಗಿದೆ. ಅಕ್ಕಿಯನ್ನು ನೆನೆಸಿಟ್ಟು ದೋಸೆ ಅಥವಾ ಇಡ್ಲಿಗೆ ಹಿಟ್ಟನ್ನು ತಯಾರಿಸಿಕೊಳ್ಳಬಹುದು ಅಥವಾ ಅಕ್ಕಿಯನ್ನು ಹುಡಿಯ ರೂಪದಲ್ಲಿಯೂ ಬಳಸಬಹುದು. ಶತಮಾನಗಳಿಂದಲೂ ಅನ್ನ ನಮ್ಮ ಪ್ರಮುಖ ಆಹಾರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಸರಿಯಾದ ವಿಧಾನದಲ್ಲಿ ಅನ್ನವನ್ನು ತಯಾರಿಸುತ್ತಿದ್ದೇವೆಯೇ ಎನ್ನುವುದು ಈಗಿನ ಪ್ರಶ್ನೆ.

ಕೈಗಾರಿಕಾ ವಿಷವಸ್ತುಗಳಲ್ಲಿಯ ರಾಸಾಯನಿಕಗಳು ಮತ್ತು ಮಣ್ಣಿನಲ್ಲಿಯ ಕೀಟನಾಶಕಗಳು ಅಕ್ಕಿಯಲ್ಲಿ ಬೆರೆತಿರುತ್ತವೆ ಮತ್ತು ಈ ದೋಷಪೂರ್ಣ ಅಕ್ಕಿ ಕೋಟ್ಯಂತರ ಜನರ ಆರೋಗ್ಯಕ್ಕೆ ಅಪಾಯವೊಡ್ಡುತ್ತಿದೆ ಎಂದು ಬ್ರಿಟನ್‌ನ ಬೆಲ್‌ಫಾಸ್ಟ್‌ನ ಕ್ವೀನ್ಸ್ ವಿಶ್ವವಿದ್ಯಾನಿಲಯವು ಇತ್ತೀಚಿಗೆ ನಡೆಸಿದ ತನಿಖೆಯು ಬೆಟ್ಟು ಮಾಡಿದೆ. ಕೀಟನಾಶಕಗಳ ಹಾನಿಕಾರಕ ಪರಿಣಾಮಗಳು ಮತ್ತು ಅವು ಆಹಾರದ ಮೂಲಕ ನಮ್ಮ ದೇಹವನ್ನು ಸೇರಿಕೊಂಡು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತಿರುವುದನ್ನು ಈಗಾಗಲೇ ಹಲವಾರು ವರದಿಗಳು ಸೂಚಿಸಿವೆ.

ಆರ್ಸೆನಿಕ್ ಎಂಬ ರಕ್ಕಸ

ಕೀಟನಾಶಕಗಳು ಮತ್ತು ಕ್ರಿಮಿನಾಶಕಗಳ ತಯಾರಿಕೆಯಲ್ಲಿ ಆರ್ಸೆನಿಕ್ ಬಳಕೆ ಸಾಮಾನ್ಯವಾಗಿದೆ. ಭಾರತದ ಪಶ್ಚಿಮ ಬಂಗಾಲ ಸೇರಿದಂತೆ ವಿಶ್ವದ ವಿವಿಧೆಡೆಗಳಲ್ಲಿ ಅಂತರ್ಜಲವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಆರ್ಸೆನಿಕ್ ಅನ್ನು ಒಳಗೊಂಡಿದೆ.

ಕಲಬೆರಕೆ ಆಹಾರ ಅಥವಾ ನೀರಿನ ಮೂಲಕ ದೀರ್ಘ ಕಾಲ ಅರ್ಸೆನಿಕ್ ನಮ್ಮ ದೇಹವನ್ನು ಸೇರುತ್ತಿದ್ದರೆ ಅದು ‘ಆರ್ಸೆನಿಕ್ ಪಾಯಿಸನಿಂಗ್ ’ಎಂಬ ವೈದ್ಯಕೀಯ ಸ್ಥಿತಿಗೆ ಕಾರಣವಾಗುತ್ತದೆ. ಇದರಿಂದಾಗಿ ವಾಂತಿ,ಹೊಟ್ಟೆನೋವು,ಡಯಾರಿಯಾ,ಚರ್ಮರೋಗ. ಇಷ್ಟೇ ಏಕೆ,ಕ್ಯಾನ್ಸರ್ ಕೂಡ ಬರಬಹುದು.
 ಹೆಚ್ಚಿನ ಕೀಟನಾಶಕ ಬಳಕೆ,ರೈತರಲ್ಲಿ ಸರಿಯಾದ ರೀತಿಯಲ್ಲಿ ಕೃಷಿ ಮಾಹಿತಿಯ ಕೊರತೆ ಇತ್ಯಾದಿಗಳಿಂದಾಗಿ ಅಕ್ಕಿಯಲ್ಲಿ ಆರ್ಸೆನಿಕ್ ಪಾಯಿಸನಿಂಗ್ ನಂಜಿನ ಅಂಶ ಹೆಚ್ಚಬಹುದು. ನಾವು ಅನ್ನವನ್ನು ಚೆನ್ನಾಗಿ ಅಥವಾ ಸರಿಯಾದ ರೀತಿಯಲ್ಲಿ ಬೇಯಿಸದಿದ್ದರೆ ಅದು ಅಪಾಯಕಾರಿ ರೋಗಗಳನ್ನು ಆಹ್ವಾನಿಸಬಹುದು ಎನ್ನತ್ತದೆ ಕ್ವೀನ್ಸ್ ವಿವಿಯ ವರದಿ.

ಅಕ್ಕಿಯನ್ನು ಮುಂಚಿನ ದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೇಯಿಸುವುದು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ತುಂಬ ಒಳ್ಳೆಯದು. ಇದು ಆರ್ಸೆನಿಕ್ ಪಾಯಿಸನಿಂಗ್‌ನ ಅಪಾಯವನ್ನು ತಗ್ಗಿಸುತ್ತದೆ ಮತ್ತು ಹೃದ್ರೋಗ,ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ದ ಉತ್ತಮ ಪ್ರತಿರೋಧವನ್ನು ಒದಗಿಸುತ್ತದೆ ಎಂದು ವರದಿಯು ತಿಳಿಸಿದೆ.

ರಾತ್ರಿಯಿಡೀ ಅಕ್ಕಿಯನ್ನು ನೆನೆಸಿಟ್ಟು ಅನ್ನ ಮಾಡಿದರೆ ಅದರಲ್ಲಿಯ ವಿಷದ ಪ್ರಮಾಣ ಶೇ.80ರಷ್ಟು ಕಡಿಮೆಯಾಗುತ್ತದೆ ಎನ್ನುವುದು ಅಧ್ಯಯನದಿಂದ ಸಿದ್ಧಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News