ಶಶಿಕಲಾ ವಂಚಕಿ: ಪನ್ನೀರ್‌ಸೆಲಂ ಆರೋಪ
ಚೆನ್ನೈ, ಫೆ.9: ತನ್ನ ವಿರುದ್ಧ ಸಂಚು ಎಸಗಿದ ಕಾರಣಕ್ಕೆ ಪೋಯೆಸ್‌ಗಾರ್ಡನ್‌ನಲ್ಲಿರುವ ತನ್ನ ನಿವಾಸ ‘ವೇದ ನಿಲಯಂ’ನಿಂದ ಜಯಲಲಿತಾ 2011ರಲ್ಲಿ ಶಶಿಕಲಾರನ್ನು ಉಚ್ಛಾಟಿಸಿದ್ದರು. ಬಳಿಕ ಆಕೆಯ ಕೋರಿಕೆ ಮೇರೆಗೆ ಮರಳಿ ಕರೆಸಿಕೊಂಡಿದ್ದರು. ಆದರೆ ತನಗೆ ಆಶ್ರಯ ನೀಡಿದವರಿಗೇ ದ್ರೋಹ ಎಸಗಿದ ಶಶಿಕಲಾ ಮಹಾ ವಂಚಕಿ ಎಂದು ಒ.ಪನ್ನೀರ್‌ಸೆಲ್ವಂ ಆರೋಪಿಸಿದ್ದಾರೆ.
ಶಶಿಕಲಾ ಈಗ ವಾಸಿಸುತ್ತಿರುವ, ದಿವಂಗತ ಜಯಲಲಿತಾರಿಗೆ ಸೇರಿದ ಪೋಯೆಸ್ ಗಾರ್ಡನ್ ನಿವಾಸವನ್ನು ಸ್ಮಾರಕ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ ಪನ್ನೀರ್‌ಸೆಲ್ವಂ, ‘ಅಮ್ಮ’ನಿಗೆ ಸೇರಿದ ಕೆಲವು ವೈಯಕ್ತಿಕ ವಸ್ತುಗಳನ್ನು ಸಂರಕ್ಷಿಸಿ ಇಡಬೇಕು ಎಂದು ಒತ್ತಾಯಿಸಿದರು.
ಎಐಎಡಿಎಂಕೆ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮಧುಸೂದನ್ ಉಪಸ್ಥಿತಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪನ್ನೀರ್‌ಸೆಲ್ವಂ, ಶಶಿಕಲಾ ಮರಳಿ ಜಯಲಲಿತಾರ ಆಶ್ರಯಕ್ಕೆ ಬಂದಾಗ, ಮುಂದೆಂದೂ ದ್ರೋಹ ಎಸಗಲಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.