ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ಭಾರತೀಯ ಮೂಲದ ಷಾನ ಪಾಂಡ್ಯ ನಿಜವಾಗಿ ಏನು ?

Update: 2017-02-10 12:31 GMT

ಭಾರತೀಯ ಮೂಲದ ಬಾಹ್ಯಾಕಾಶ ಯಾನಿ ಷಾನ ಪಾಂಡ್ಯ ಅವರು ತಾನು ಮುಂದಿನ ನಾಸಾ ಅಭಿಯಾನದ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾನೊಮ್ಮೆ ನಾಸಾದಲ್ಲಿ ಇಂಟರ್ನಿಯಾಗಿದ್ದೆನಾದರೂ ತಾನು ಅದರೊಂದಿಗೆ ಅಥವಾ ಕೆನಡಿಯನ್ ಸ್ಪೇಸ್ ಏಜನ್ಸಿಯೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಪಾಂಡ್ಯ(32) ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಾಜೆಕ್ಟ್ ಪೋಸಮ್ ಅಥವಾ ಫೆನಮ್ ಪ್ರಾಜೆಕ್ಟ್ ಜೊತೆ ನಾಗರಿಕ-ವಿಜ್ಞಾನಿ ಗಗನಯಾತ್ರಿಯಾಗಿ ತನ್ನ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಪ್ರಕಟಣೆ ಯಾಗಲೀ,ಅಭಿಯಾನಕ್ಕೆ ಆಯ್ಕೆಗಳಾಗಲೀ ಇಲ್ಲ. ತಾನು ಯಾವುದೇ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚುಕಡಿಮೆ ಇಲ್ಲವೇ ಇಲ್ಲ ಎಂದು ಅವರು ಹೇಳಿದ್ದಾರೆ.
 
ನಾಸಾದ ಬಾಹ್ಯಾಕಾಶ ಯಾನಕ್ಕಾಗಿ ಆಯ್ಕೆಯಾಗಲಿರುವ ಮೂರನೇ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ ಎಂಬ ವರದಿಗಳ ಬಳಿಕ ಪಾಂಡ್ಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಈ ಹಿಂದೆ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಅವರು ಪ್ರತ್ಯೇಕ ನಾಸಾ ಯಾನಗಳಿಗೆ ಆಯ್ಕೆಯಾಗಿದ್ದರು. ಮಾಧ್ಯಮಗಳಲ್ಲಿ ಕೆಲವು ತಪ್ಪುಹೇಳಿಕೆಗಳನ್ನು ತಾನು ಗಮನಿಸಿದ್ದೇನೆ ಎಂದು ತಿಳಿಸಿರುವ ಪಾಂಡ್ಯ, ಕೆನಡಿಯನ್ ಸ್ಪೇಸ್ ಏಜನ್ಸಿಯ ಬಾಹ್ಯಾಕಾಶ ಯಾನಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ತಾನು ಅದರ ಭಾಗವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾನು ನ್ಯೂರೊಸರ್ಜನ್ ಅಲ್ಲ, ಒಪೇರಾ ಗಾಯಕಿಯೂ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪಾಂಡ್ಯ ನ್ಯೂರೊ ಸರ್ಜರಿಯಲ್ಲಿ ತರಬೇತಿ ಪಡೆದಿದ್ದಾರಾದರೂ ಜನರಲ್ ಪ್ರಾಕ್ಟೀಸ್‌ನ ವೈದ್ಯಕೀಯ ಪ್ರಮಾಣಪತ್ರವನ್ನು ಹೊಂದಿದ್ದಾರೆ.
ತಾನು ಒಮ್ಮೆ ವೇದಿಕೆಯಲ್ಲಿ ಒಪೇರಾ ಹಾಡಿದ್ದೆನಾದರೂ ಅದು ತನ್ನನ್ನು ಒಪೇರಾ ಗಾಯಕಿಯನ್ನಾಗಿಸಲಿಲ್ಲ ಎಂದೂ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಪಾಂಡ್ಯ ಪ್ರಸ್ತುತ ಕೊಲರಾಡೊದ ಪ್ರಾಜೆಕ್ಟ್ ಪೋಸಮ್‌ನಲ್ಲಿ ನಾಗರಿಕ-ವಿಜ್ಞಾನಿ ಗಗನಯಾತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೀ ಸ್ಪೇಸ್ ಎಕ್ಸಪ್ಲೊರೇಷನ್ ಆ್ಯಂಡ್ ರಿಸರ್ಚ್ ಸೊಸೈಟಿಯಲ್ಲಿಯೂ ಅವರು ಕೆಲಸ ಮಾಡುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News