ನಿಮ್ಮ ಎಟಿಎಂ ಕಾರ್ಡ್ ಮೂಲಕ 10 ಲಕ್ಷ ರೂ. ವಿಮೆ ಪಡೆಯಿರಿ !

Update: 2017-02-11 09:47 GMT

ಎಟಿಎಂ ಕಾರ್ಡ್‌ಗಳು ಜನರ ಬದುಕನ್ನು ಸುಲಭವಾಗಿಸಿವೆ. ಹಣವನ್ನು ವಿಥ್‌ಡ್ರಾ ಮಾಡಲು ಬ್ಯಾಂಕ್ ಕೌಂಟರ್‌ಗಳೆದುರು ಕಾದು ನಿಲ್ಲುವ ಕಾಲವೆಂದೋ ಕಳೆದುಹೋಗಿದೆ. ಈಗ ನಮಗೆ ಅಗತ್ಯವಿದ್ದಾಗ, ವಾರದ ಏಳೂ ದಿಗಳ ಕಾಲ ದಿನದ 24 ಗಂಟೆಯೂ ನಾವುಇ ಎಟಿಎಂಗಳಿಂದ ಹಣವನ್ನು ಪಡೆಯಬಹುದಾಗಿದೆ. ಎಟಿಎಂ ಕಾರ್ಡ್‌ಗಳ ಮೂಲಕ ಆನ್‌ಲೈನ್ ಶಾಪಿಂಗ್‌ನ್ನೂ ಮಾಡಬಹುದಾಗಿದೆ. ಇದಿಷ್ಟೇ ಅಲ್ಲ,ಎಟಿಎಂ ಕಾರ್ಡ್‌ಗಳು ಹಲವಾರು ಪ್ರಯೋಜನಗಳನ್ನೂ ನೀಡುತ್ತಿವೆ. ಆದರೆ ಜನರಿಗೆ ಅವುಗಳ ಬಗ್ಗೆ ಗೊತ್ತೇ ಇಲ್ಲ. ಉದಾಹರಣೆಗೆ ಎಟಿಎಂ ಕಾರ್ಡ್ ಹೊಂದಿರುವವರಿಗೆ ವಿಮೆ ರಕ್ಷಣೆಯೂ ಇರುತ್ತದೆ. ಆದರೆ ಗ್ರಾಹಕರಿಗೆ ಈ ಮಾಹಿತಿ ತಿಳಿದಿರುವುದಿಲ್ಲ,ಮಾಹಿತಿ ನೀಡಬೇಕಾದ ಬ್ಯಾಂಕುಗಳೂ ಆ ಗೋಜಿಗೆ ಹೋಗುವುದಿಲ್ಲ.

ಸರಕಾರಿ ಅಥವಾ ಖಾಸಗಿ ಆಗಿರಲಿ, ಹೆಚ್ಚಿನೆಲ್ಲ ಬ್ಯಾಂಕುಗಳು ಸಕ್ರಿಯ ಬ್ಯಾಂಕ್ ಖಾತೆಗಳನ್ನು ಹೊಂದಿರುವ ತಮ್ಮ ಗ್ರಾಹಕರಿಗೆ ಅಪಘಾತ ವಿಮೆಯ ರಕ್ಷಣೆಯನ್ನು ಒದಗಿಸುತ್ತವೆ. ಬ್ಯಾಂಕ್ ಜೊತೆ ಗ್ರಾಹಕರ ವ್ಯವಹಾರಗಳನ್ನು ಅವಲಂಬಿಸಿ ಈ ವಿಮಾ ರಕ್ಷಣೆ 50,000 ರೂ.ನಿಂದ 10 ಲ.ರೂ.ವರೆಗೂ ಇರುತ್ತದೆ. ಬ್ಯಾಂಕುಗಳು ನೀಡುವ ಅಪಘಾತ ವಿಮೆಯ ಬಗ್ಗೆ ಕೇಳಿ ತಿಳಿದುಕೊಳ್ಳಲು ಗ್ರಾಹಕರೇಕೋ ಸಂಕೋಚ ಪಟ್ಟುಕೊಳ್ಳುತ್ತಾರೆ. ಹೀಗಾಗಿ ಬ್ಯಾಂಕುಗಳೂ ಈ ವಿಷಯದಲ್ಲಿ ಸುಮ್ಮನಿದ್ದು ಬಿಡುತ್ತವೆ. ಕ್ರೆಡಿಟ್ ಕಾರ್ಡ್‌ಗಳ ಮೇಲೂ ಹೆಚ್ಚಿನ ಬ್ಯಾಂಕುಗಳು ವಿಮೆ ರಕ್ಷಣೆಯನ್ನು ನೀಡುತ್ತಿವೆ. ಆದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡರೆ ವಿಮೆ ರಕ್ಷಣೆಯನ್ನು ಬ್ಯಾಂಕು ಹಿಂದೆಗೆದು ಕೊಳ್ಳಬಹುದು.

ವಿಮೆ ಹಣ ಪಡೆಯುವುದು ಹೇಗೆ...?

  ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ಅಪಘಾತ ವಿಮೆ ರಕ್ಷಣೆಯು ಅಪಘಾತದಿಂದಾದ ಆಸ್ಪತ್ರೆ ಖರ್ಚನ್ನು ನಿರ್ದಿಷ್ಟ ಮಿತಿಗೊಳಪಟ್ಟು ಭರಿಸುತ್ತದೆ. ಅಂಗವೈಕಲ್ಯಕ್ಕೀಡಾದರೆ ಭಾಗಶಃ ವಿಮಾ ಹಣ ದೊರೆಯುತ್ತದೆ. ದುರದೃಷ್ಟವಶಾತ ವ್ಯಕ್ತಿ ಮೃತಪಟ್ಟರೆ ವಾರಸುದಾರರಿಗೆ ಸಂಪೂರ್ಣ ವಿಮೆ ಹಣ ದೊರೆಯುತ್ತದೆ. ಆದರೆ ಬ್ಯಾಂಕ್ ಗ್ರಾಹಕರಿಗೆ ತಮಗಿರುವ ಈ ಸೌಲಭ್ಯದ ಬಗ್ಗೆ ಮಾಹಿತಿಯಿಲ್ಲದ್ದರಿಂದ ವಿಮೆ ಹಣವನ್ನು ಕೇಳುವ ಗೋಜಿಗೇ ಹೋಗುವುದಿಲ್ಲ. ವಿಮೆಯ ಹಣವನ್ನು ಪಡೆಯಲು ಗ್ರಾಹಕ ಅಪಘಾತಕ್ಕೆ ಗುರಿಯಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ.

ಆ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಿದ್ಧವಾಗಿಡಬೇಕು. ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ ಎಲ್ಲ ವೈದ್ಯಕೀಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ವ್ಯಕ್ತಿ ನಿಧನನಾದರೆ ಮರಣೋತ್ತರ ಪರೀಕ್ಷೆಯ ವರದಿ, ಪೊಲೀಸ್ ವರದಿ, ಮರಣ ಪ್ರಮಾಣಪತ್ರ ಮತ್ತು ಆತ ವಾಹನ ಚಾಲನಾ ಪರವಾನಿಗೆ ಇವೂ ವಿಮೆ ಹಣವನ್ನು ಪಡೆಯಲು ಅಗತ್ಯವಾಗಿವೆ. ಅಪಘಾತಕ್ಕೆ ಮೊದಲಿನ 60 ದಿನಗಳಲ್ಲಿ ವ್ಯಕ್ತಿ ಎಟಿಎಂ ಮೂಲಕ ವಹಿವಾಟು ನಡೆಸಿದ್ದನ್ನೂ ನೀವು ಬ್ಯಾಂಕಿಗೆ ತಿಳಿಸಬೇಕಾಗುತ್ತದೆ.

ಹಣದ ಜಮಾ,ವರ್ಗಾವಣೆಗೂ ಎಟಿಎಂ ನೆರವು

ಬ್ಯಾಂಕ್‌ಗೆ ಭೇಟಿ ನೀಡದೆ,ಡಿಪೋಸಿಟ್ ಮಷಿನ್‌ಗಳಲ್ಲಿ ಎಟಿಎಂ ಕಾರ್ಡ್ ಬಳಸುವ ಮೂಲಕ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನೂ ಜಮಾ ಮಾಡಬಹುದು. ನೀವು ನೆಟ ಬಾಂಕಿಗ್ ಸೌಲಭ್ಯ ಹೊಂದಿಲ್ಲದಿದ್ದರೂ ಎಟಿಎಂ ಯಂತ್ರಗಳಲ್ಲಿ ಟ್ರಾನ್ಸ್‌ಫರ್ ಬಟನ್ ಒತ್ತುವ ಮೂಲಕ ಬೇರೆ ಖಾತೆಗೆ ಹಣವನ್ನು ವರ್ಗಾಯಿಸಬಹುದು.

ಸುರಕ್ಷತೆ

ಡಿಜಿಟಲ್ ಕಾರ್ಡ್‌ಗಳು ನೀವು..ವಿಶೇಷವಾಗಿ ಪ್ರಯಾಣದ ಸಂದರ್ಭಗಳಲ್ಲಿ ಹಣ ಕಳೆದುಕೊಳ್ಳುವುದನ್ನು ತಪ್ಪಿಸುತ್ತವೆ. ನೀವು ಯಾವುದೇ ಊರಿಗೆ ಹೋದರೂ ಅಲ್ಲಿ ನಿಮ್ಮ ಎಟಿಎಂ ಕಾರ್ಡ್ ಬಳಸಿ ಹಣವನ್ನು ಪಡೆಯಬಹುದಾಗಿದೆ.

ಶಾಪಿಂಗ್‌ಗೂ ಸೈ

ನೋಟು ರದ್ದತಿ ಕ್ರಮದ ಬಳಿಕ ಈಗ ಸಣ್ಣಪುಟ್ಟ ಅಂಗಡಿಗಳೂ ಪಿಒಎಸ್ ಮಷಿನ್‌ಗಳನ್ನು ಹೊಂದಿರುತ್ತವೆ. ಹೀಗಾಗಿ ಖರೀದಿಗೆ ಹೋಗಬೇಕಾದರೆ ನೋಟುಗಳ ಕಂತೆಯನ್ನು ಒಯ್ಯಬೇಕೆಂದಿಲ್ಲ. ಜೇಬಿನಲ್ಲಿ ಎಟಿಎಂ ಕಾರ್ಡ್ ಇದ್ದರೆ ಸಾಕು. ಎಟಿಎಂ ಕಾರ್ಡ್ ಬಳಸಿ ಆನ್‌ಲೈನ್ ಶಾಪಿಂಗ್‌ನ್ನೂ ಸುಲಭವಾಗಿ ಮಾಡಬಹುದು. ಶಾಪಿಂಗ್‌ಗೆ ಎಟಿಎಂ ಕಾರ್ಡ್ ಬಳಸಿದರೆ ಕ್ಯಾಷ್ ಬ್ಯಾಕ್ ಸೌಲಭ್ಯವೂ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News