ಆನ್‌ಲೈನ್ ಔಷಧಿ ಮಾರಾಟ: ಭಾರತೀಯರ ಆರೋಗ್ಯಕ್ಕೆ ಮಾರಕ?

Update: 2017-02-11 18:21 GMT

 ಗ್ರಾಹಕರಿಗೆ ಸರಿಯಾದ ಔಷಧಿಗಳನ್ನು ಪೂರೈಕೆ ಮಾಡುವುದಕ್ಕೆ ಫಾರ್ಮಾಸಿಸ್ಟ್ ಹೊಣೆಗಾರರಾಗಿರುತ್ತಾರೆ ಹಾಗೂ ಅದರ ಅಡ್ಡಪರಿಣಾಮಗಳು ಹಾಗೂ ಡೊಸೇಜ್ ಬಗ್ಗೆ ಆತ ರೋಗಿಯ ಜೊತೆ ಸಮಾಲೋಚನೆ ಮಾಡಬಹುದಾಗಿದೆ. ಆದರೆ ರೋಗಿಯ ಮನೆಗೆ ಔಷಧಿಯು ಪೂರೈಕೆಯಾಗುವಂತಹ ಆನ್‌ಲೈನ್ ವ್ಯವಸ್ಥೆಯಲ್ಲಿ ರೋಗಿ ಹಾಗೂ ಫಾರ್ಮಾಸಿಸ್ಟ್ ನಡುವೆ ಸಂವಹನ ಅಸಾಧ್ಯ.

ರೋ  ಗಿಗಳ ಸುರಕ್ಷತೆಯನ್ನು ಖಾತರಿಪಡಿಸಲು ಔಷಧಿಗಳ ಆನ್‌ಲೈನ್ ಮಾರಾಟದ ಮೇಲೆ ತೀವ್ರ ಕಣ್ಗಾವಲಿರಿಸುವ ಬಗ್ಗೆ ಭಾರತೀಯ ಮಹಾ ಔಷಧಿ ನಿಯಂತ್ರಕರು (ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ) ಪರಿಶೀಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಪ್ರಕಟಿಸಿದ ಸುತ್ತೋಲೆಯೊಂದು, ಇಂಟರ್‌ನೆಟ್ ಮೂಲಕ ಔಷಧಿಗಳ ಮಾರಾಟವು ಡ್ರಗ್ಸ್ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆಗೆ ವ್ಯತಿರಿಕ್ತವಾಗಿದೆಯೆಂದು ಹೇಳಿದೆ. ನೋಂದಾಯಿತ ಫಾರ್ಮಾಸಿಸ್ಟ್‌ನ ಮೇಲ್ವಿಚಾರಣೆಯಲ್ಲಿಯೇ ಎಲ್ಲಾ ವಿಧದ ಔಷಧಿಗಳನ್ನು ವಿತರಿಸಬೇಕೆಂದು ಕಾಯ್ದೆಯು ಪ್ರತಿಪಾದಿಸುತ್ತದೆ.

ಆದಾಗ್ಯೂ, ಇ-ಫಾರ್ಮಸಿಗಳನ್ನು ಕಾನೂನುಬಾಹಿರವೆಂದು ಘೋಷಿಸಿದ ಬೆನ್ನಲ್ಲೇ ಭಾರತೀಯ ಮಹಾ ಔಷಧಿ ನಿಯಂತ್ರಕರು, ಔಷಧಿಗಳ ಆನ್‌ಲೈನ್ ಮಾರಾಟದ ಪರಿಶೀಲನೆಗೆ ಉಪಸಮಿತಿ ಯೊಂದನ್ನು ರಚಿಸಿದರು. ಈ ವರ್ಷದ ಜನವರಿಯಲ್ಲಿ ಮಹಾರಾಷ್ಟ್ರ ಆಹಾರ ಹಾಗೂ ಔಷಧಿ ಆಡಳಿತ ಇಲಾಖೆಯ ಆಯುಕ್ತ ಡಾ. ಹರ್ಷದೀಪ್ ಕಾಂಬ್ಳೆ ಅಧ್ಯಕ್ಷತೆಯಲ್ಲಿ ರಚನೆಯಾದ ಉಪಸಮಿತಿಯು ಸಲ್ಲಿಸಿದ ವರದಿಯು ಆನ್‌ಲೈನ್‌ನಲ್ಲಿ ಮಾರಾಟವಾಗುವ ಔಷಧಿಗಳ ಚಲನವಲನಗಳ ಮೇಲೆ ನಿಗಾವಿರಿಸಲು ಕೇಂದ್ರೀಯ ಇಲಾಖೆಯನ್ನು ಸ್ಥಾಪಿಸುವಂತೆಯೂ ಶಿಫಾರಸು ಮಾಡಿತ್ತು.

ಭಾರತದಲ್ಲಿ ಆನ್‌ಲೈನ್ ಔಷಧಿ ಮಾರಾಟ ಮಳಿಗೆಗಳು (ಇ-ಫಾರ್ಮಸಿ) ಅಪಾರ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತವೆ. ಯಾಕೆಂದರೆ ಅವು ಔಷಧಿಗಳನ್ನು ದರಕಡಿತಗೊಳಿಸಿ (ಡಿಸ್ಕೌಂಟ್) ಮಾರಾಟ ಮಾಡುತ್ತವೆ ಹಾಗೂ ಮನೆಬಾಗಿಲಿಗೆ ಔಷಧಿಗಳ ಪೂರೈಕೆಯಾಗುವಂತಹ ಸೌಲಭ್ಯವನ್ನು ಒದಗಿಸುತ್ತವೆ. ಆದರೆ ಇಲ್ಲಿ ಔಷಧಿಗಳ ವಿತರಣೆಯಲ್ಲಿ ಫಾರ್ಮಸಿಸ್ಟರ ಅನುಪಸ್ಥಿತಿಯ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸುತ್ತಾರೆ.

 ಪ್ರಸ್ತುತ, ಆನ್‌ಲೈನ್ ಫಾರ್ಮಸಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ, ಔಷಧಿಗಳು ಹಾಗೂ ಪ್ರಸಾಧನಗಳ ಕಾಯ್ದೆ, ಫಾರ್ಮಸಿ ಕಾಯ್ದೆ ಹಾಗೂ ಭಾರತೀಯ ಮೆಡಿಕಲ್ ಕಾಯ್ದೆಯ ನಿಯಂತ್ರಣಕ್ಕೊಳಪಟ್ಟಿದೆ.

  ಕೆಲವನ್ನು ಹೊರತುಪಡಿಸಿ ಗ್ರಾಹಕರು ಔಷಧಿಯನ್ನು ಖರೀದಿಸಲು ವೈದ್ಯರ ಔಷಧಿ ಶಿಫಾರಸು ಚೀಟಿಯ(ಪ್ರಿಸ್ಕ್ರಿಪ್ಶನ್) ಅಗತ್ಯವಿರುತ್ತದೆ. ಈ ಔಷಧಿಗಳು ಕಾನೂನಿನ ವಿವಿಧ ಅಧಿನಿಯಮಗಳಡಿ ವರ್ಗೀಕರಿಸಲ್ಪಟ್ಟಿವೆ.

ಸದ್ಯದ ಮಟ್ಟಿಗೆ ಆನ್‌ಲೈನ್ ಮೂಲಕ ಔಷಧಿಗಳ ಮಾರಾಟ ಕಾನೂನುಬಾಹಿರವೆಂದು ಕಾಂಬ್ಲಿ ಹೇಳುತ್ತಾರೆ. ‘‘ಪ್ರಸಕ್ತ ಕಾನೂನಿನಲ್ಲಿ ಸರಕಾರವು ತಿದ್ದುಪಡಿಗಳನ್ನು ಮಾಡುವವರೆಗೆ ಅಥವಾ ಆನ್‌ಲೈನ್, ಇ-ಫಾರ್ಮಸಿಗಳ ಮೂಲಕ ಔಷಧಿಗಳ ಮಾರಾಟಕ್ಕೆ ಅವಕಾಶ ನೀಡಲು ಹೊಸ ಶಾಸನವನ್ನು ಸೃಷ್ಟಿಸುವವರೆಗೆ, ಅನ್‌ಲೈನ್ ಔಷಧಿ ಮಾರಾಟವು ಕಾನೂನುಬಾಹಿರವೆನಿಸುತ್ತದೆ’’ ಎಂದವರು ತಿಳಿಸುತ್ತಾರೆ.

ಆದರೆ ಭಾರತೀಯ ಇಂಟರ್‌ನೆಟ್ ಫಾರ್ಮಸಿ ಅಸೋಸಿಯೇಶನ್‌ನ ಅಧ್ಯಕ್ಷರಾದ ಪ್ರಶಾಂತ್ ಟಂಡನ್ ಅವರು ಭಾರತೀಯ ಇ-ಫಾರ್ಮಸಿಗಳು ಕಾನೂನಿನ ವ್ಯಾಪ್ತಿಯಡಿ ಕಾರ್ಯನಿರ್ವ ಹಿಸುತ್ತವೆಯೆಂದು ಹೇಳುತ್ತಾರೆ. ಇತರ ಯಾವುದೇ ಇ-ಕಾಮರ್ಸ್ ವೇದಿಕೆಯಂತೆ ಇ-ಫಾರ್ಮಸಿಗಳು ಗ್ರಾಹಕನಾದ ರೋಗಿ ಹಾಗೂ ಮಾರಾಟಗಾರನಾದ ಔಷಧಿ ವ್ಯಾಪಾರಿಯನ್ನು ಸಂಪರ್ಕಿಸುವ ತಂತ್ರಜ್ಞಾನ ವೇದಿಕೆಗಳಾಗಿವೆಯೆಂದು ಅವರು ಪ್ರತಿಪಾದಿಸುತ್ತಾರೆ.

 ಈ ಮಧ್ಯೆ ಭಾರತದ ಮಹಾ ಔಷಧಿ ನಿಯಂತ್ರಕ ಡಾ. ಜಿ.ಎನ್.ಸಿಂಗ್ ಅವರು, ಆನ್‌ಲೈನ್ ಫಾರ್ಮಸಿಗಳು ತಮ್ಮ ವ್ಯಾಪ್ತಿಯೊಳಗೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತವೆಯೇ ಎಂಬ ಬಗ್ಗೆ ಸಂಬಂಧಪಟ್ಟ ಸರಕಾರಿ ಇಲಾಖೆಗಳು, ಪರಿಶೀಲನೆ ನಡೆಸಬೇಕಾಗಿದೆ ಹಾಗೂ ಈ ಬಗ್ಗೆ ಶಾಸನಾತ್ಮಕ ನಿಯಮವನ್ನು ರೂಪಿಸಬೇಕಾಗಿದೆಯೆಂದು ಅಭಿಪ್ರಾಯಿಸಿದ್ದಾರೆ. ಇ-ಫಾರ್ಮಸಿಗಳ ಮೂಲಕ ಗ್ರಾಹಕರ ಶೋಷಣೆ ನಡೆಯುವ ಸಾಧ್ಯತೆಗಳು ಅಧಿಕವಾಗಿವೆಯೆಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಆಫ್‌ಲೈನ್ ವರ್ಸಸ್ ಆನ್‌ಲೈನ್

ಔಷಧಿಗಳನ್ನು ಮಾರಾಟ ಮಾಡುವ ಮೊದಲು ಪ್ರತಿಯೊಂದು ಫಾರ್ಮಸಿ ಸಂಸ್ಥೆಯೂ ಲೈಸೆನ್ಸ್ ಪಡೆದುಕೊಳ್ಳುವ ಅಗತ್ಯವಿರುತ್ತದೆ. ಆದರೆ ಆನ್‌ಲೈನ್‌ನಲ್ಲಿ ಔಷಧಿಗಳನ್ನು ಮಾರಾಟ ಮಾಡಲು ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಆನ್‌ಲೈನ್‌ನಲ್ಲಿ ಮಾರಾಟವಾಗುವ ಔಷಧಿ ಉತ್ಪನ್ನಗಳಿಗೆ ಪರವಾನಿಗೆಯಿರುವುದರಿಂದ, ತಾವು ಲೈಸೆನ್ಸ್ ಪಡೆದಿರಬೇಕಾದ ಅಗತ್ಯವಿಲ್ಲವೆಂದು,ಇ-ಫಾರ್ಮಸಿ ನಿರ್ವಾಹಕರು ತಮ್ಮನ್ನು ಸಂದರ್ಶಿಸಿದ ಖ್ಯಾತ ಅಂತರ್ಜಾಲ ಪತ್ರಿಕೆ ಸ್ಕ್ರಾಲ್.ಇನ್ ಜೊತೆ ಹೇಳಿಕೊಂಡಿದ್ದಾರೆ.

  ಸುಮಾರು ಎಂಟು ಲಕ್ಷ ಔಷಧಿ ವ್ಯಾಪಾರಿಗಳ ಸದಸ್ಯತ್ವವನ್ನು ಹೊಂದಿ ರುವ ಅಲ್ ಇಂಡಿಯಾ ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ ಆರ್ಗನೈಸೇಶನ್, ಇ-ಫಾರ್ಮಸಿಗಳನ್ನು ತೀವ್ರವಾಗಿ ವಿರೋಧಿಸುತ್ತಿವೆ. ಆನ್‌ಲೈನ್ ಫಾರ್ಮಸಿಗಳು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿಲ್ಲವೆಂದು ಸಂಘಟನೆಯ ಅಧ್ಯಕ್ಷ ಜೆ. ಶಿಂಧೆ ಹೇಳುತ್ತಾರೆ. ಆನ್‌ಲೈನ್‌ಗಳ ಮೂಲಕ ಔಷಧಿಗಳ ಮಾರಾಟವು ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತೀರಾ ವಿರುದ್ಧವಾಗಿವೆಯೆಂದು ಅವರು ಆರೋಪಿಸುತ್ತಾರೆ. ‘‘ಆನ್‌ಲೈನ್ ಫಾರ್ಮಸಿಯು ಯುವಜನರನ್ನು ಸಂಪರ್ಕಿಸಲು ಡ್ರಗ್ ಮಾಫಿಯಾಗೆ ಒಂದು ಒಳ್ಳೆಯ ಅಸ್ತ್ರವಾಗಿದೆ’’ ಎಂದವರು ಹೇಳಿದ್ದಾರೆ.

ಔಷಧಿ ಶಿಫಾರಸು ಚೀಟಿ (ಪ್ರಿಸ್ಕ್ರಿಪ್ಶನ್)ಗಳನ್ನು ತಿರುಚುವುದು ಈಗಾಗಲೇ ಸಾಮಾನ್ಯವಾಗಿಬಿಟ್ಟಿದೆ. ಇನ್ನು ಆನ್‌ಲೈನ್ ಮಾರಾಟದಿಂದ, ಚಟವನ್ನು ಹುಟ್ಟುಹಾಕುವಂತಹ ಔಷಧಿಗಳು ಸುಲಭವಾಗಿ ದೊರೆಯಲು ಸಾಧ್ಯವಾಗಲಿದೆಯೆಂದು ಶಿಂಧೆ ಆತಂಕ ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಫಾರ್ಮಸಿಸ್ಟರಿಗೆ, ತಮ್ಮ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ವೈದ್ಯರ ಬಗ್ಗೆ ತಿಳಿದಿರುತ್ತದೆ. ಒಂದು ವೇಳೆ ಔಷಧಿ ಶಿಫಾರಸು ಚೀಟಿಯಲ್ಲಿ ಯಾವುದೇ ಅಸಹಜತೆ ಕಂಡುಬಂದಲ್ಲಿ ಅದನ್ನವರು ಸುಲಭವಾಗಿ ಗುರುತಿಸಬಲ್ಲರು. ಆದರೆ ಆನ್‌ಲೈನ್‌ನಲ್ಲಿ ಹಾಗಾಗಲು ಸಾಧ್ಯವಿಲ್ಲ’’ ಎಂದು ಶಿಂಧೆ ಹೇಳುತ್ತಾರೆ.

ಆದರೆ 1ಎಂಜಿ ಎಂಬ ಇ-ಫಾರ್ಮಸಿ ಸಂಸ್ಥೆಯನ್ನು ನಡೆಸುವ ಟಂಡನ್, ಇದನ್ನು ಒಪ್ಪುವುದಿಲ್ಲ. ‘‘ಸದ್ಯಕ್ಕೆ ಈ ರೀತಿಯಾದಂತಹ ಯಾವುದೇ ಅಪಾಯ ಉದ್ಭವಿಸದು’’ ಎಂದವರು ಭರವಸೆ ವ್ಯಕ್ತಡಿಸುತ್ತಾರೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಷ್ಟೇ ಚಟಕಾರಕ ವಾದ ಔಷಧಿಗಳ ಆನ್‌ಲೈನ್ ಮಾರಾಟವು ನಡೆಯುವ ಸಾಧ್ಯತೆಯಿದೆ ಯೆಂದವರು ಹೇಳುತ್ತಾರೆ. ಇ-ಫಾರ್ಮಸಿಗಳು ಮಧುಮೇಹ ಹಾಗೂ ರಕ್ತದೊತ್ತಡದಂತಹ ದೀರ್ಘಕಾಲ ಬಾಧಿಸುವ ರೋಗಗಳಿಗೆ ಚಿಕಿತ್ಸೆ ನೀಡುವ ಔಷಧಿಗಳ ಮಾರಾಟಕ್ಕಷ್ಟೇ ಹೆಚ್ಚಿನ ಗಮನ ನೀಡುತ್ತಿವೆಯೆಂದವರು ಹೇಳಿದ್ದಾರೆ.

ಔಷಧಿಗಳ ಆನ್‌ಲೈನ್ ಮಾರಾಟದ ಮೇಲೆ ಕಣ್ಗಾವಲಿರಿಸುವುದರಿಂದ ಅಕ್ರಮ ನಡೆಯುವ ಅಪಾಯವನ್ನು ಕಡಿಮೆಗೊಳಿಸಲು ಸಾಧ್ಯವಿದೆಯೆಂದು ಟಂಡನ್ ಅಭಿಪ್ರಾಯಿಸುತ್ತಾರೆ.

 ಗ್ರಾಹಕರಿಗೆ ಸರಿಯಾದ ಔಷಧಿಗಳನ್ನು ಪೂರೈಕೆ ಮಾಡುವುದಕ್ಕೆ ಫಾರ್ಮಾಸಿಸ್ಟ್ ಹೊಣೆಗಾರರಾಗಿರುತ್ತಾರೆ ಹಾಗೂ ಅದರ ಅಡ್ಡಪರಿಣಾಮಗಳು ಹಾಗೂ ಡೊಸೇಜ್ ಬಗ್ಗೆ ಆತ ರೋಗಿಯ ಜೊತೆ ಸಮಾಲೋಚನೆ ಮಾಡಬಹುದಾಗಿದೆ. ಆದರೆ ರೋಗಿಯ ಮನೆಗೆ ಔಷಧಿಯು ಪೂರೈಕೆಯಾಗುವಂತಹ ಆನ್‌ಲೈನ್ ವ್ಯವಸ್ಥೆಯಲ್ಲಿ ರೋಗಿ ಹಾಗೂ ಫಾರ್ಮಾಸಿಸ್ಟ್ ನಡುವೆ ಸಂವಹನ ಅಸಾಧ್ಯ.

ಔಷಧಿ ಹಾಗೂ ಪ್ರಸಾಧನ ಕಾಯ್ದೆಯು, ಯಾವುದೇ ಔಷಧಿ ಮಳಿಗೆಯು, ನಿರಂತರವಾಗಿ ನೋಂದಾಯಿತ ಫಾರ್ಮಾಸಿಸ್ಟ್ ನ ವೈಯಕ್ತಿಕ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಆತನ ಹೆಸರನ್ನು ಔಷಧಿ ಮಳಿಗೆಯ ಆವರಣದಲ್ಲಿ ಪ್ರದರ್ಶಿಸಬೇಕಾಗುತ್ತದೆ.

ಆದರೆ ಈ ಫಾರ್ಮಸಿಗಳಲ್ಲಿನ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಲು ಸಾಧ್ಯವಿದೆಯೆಂದು ಆನ್‌ಲೈನ್ ಔಷಧಿ ಮಾರಾಟ ಸಂಸ್ಥೆಯೊಂದರ ನಿರ್ವಾಹಕರಾದ ದಾಧಾ ಹೇಳುತ್ತಾರೆ. ಒಂದು ವೇಳೆ ಖರೀದಿಗಾರನಿಗೆ ಯಾವುದೇ ಸಂದೇಹಗಳಿದ್ದಲ್ಲಿ, ಆನ್‌ಲೈನ್‌ನಲ್ಲಿ ವಿಚಾರಿಸಿ, ಸ್ಪಷ್ಟಪಡಿಸಿಕೊಳ್ಳಬಹುದೆನ್ನುತ್ತಾರೆ.

ಆದರೆ ಆನ್‌ಲೈನ್ ಮೂಲಕ ಔಷಧಿ ಚಿಕಿತ್ಸೆ ಪಡೆಯುವ ವ್ಯವಸ್ಥೆಯ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸುತ್ತಾರೆ. ‘‘ಔಷಧಿಗಳ ದುರ್ಬಳಕೆಯು ಈಗಾಗಲೇ ಒಂದು ಆತಂಕಕಾರಿಯಾದ ವಿಷಯ’’ ಎಂದು ರೋಗಿಗಳ ಸುರಕ್ಷತಾ ಮೈತ್ರಿಕೂಟದ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ನಿಖಿಲ್ ದಾತಾರ್ ಹೇಳುತ್ತ್ತಾರೆ. ಒಂದೇ ರೀತಿಯಾಗಿ ಕಾಣುವ ಔಷಧಿಗಳು ವ್ಯಾಪಕವಾಗಿ ಮಾರಾಟದಲ್ಲಿರುವಂತಹ ಭಾರತದಲ್ಲಿ, ಔಷಧಿ ಬಳಕೆಯಲ್ಲಿ ಮಾನವ ಹಸ್ತಕ್ಷೇಪ ಕಡ್ಡಾಯವಾಗಿರಬೇಕೆಂದು ಅವರು ಪ್ರತಿಪಾದಿಸುತ್ತಾರೆ.

  ಜನಪ್ರಿಯ ಆನ್‌ಲೈನ್ ಔಷಧಿ ಮಾರಾಟ ಸಂಸ್ಥೆಯಾದ ಫಾರ್ಮ್ ಇಸಿಯ ಸಹಸಂಸ್ಥಾಪಕ ಡಾ. ಧವಲ್ ಶಾ ಅವರು ಬಹುತೇಕ ಇ-ಫಾರ್ಮಸಿಗಳು, ಗ್ರಾಹಕರು ಅಪ್‌ಲೋಡ್ ಮಾಡುವ ಔಷಧಿ ಚೀಟಿಗಳನ್ನು ಪರಿಶೀಲಿಸಲು ಫಾರ್ಮಸಿಸ್ಟ್‌ಗಳನ್ನು ನಿಯೋಜಿಸಿರುತ್ತಾರೆ ಎಂದು ಹೇಳುತ್ತಾರೆ. ತಮ್ಮ ವೆಬ್‌ಸೈಟ್‌ಗಳಲ್ಲಿ ಗ್ರಾಹಕರು ಅಪ್‌ಲೋಡ್ ಮಾಡುವ ಔಷಧಿ ಶಿಫಾರಸು ಚೀಟಿಗಳನ್ನು ಕೂಲಂಕಶವಾಗಿ ಪರಿಶೀಲಿಸಲಾಗುವುದೆಂದು ಇ-ಫಾರ್ಮಸಿಗಳನ್ನು ನಿರ್ವಹಿಸುವ ಕಂಪೆನಿಗಳು ಹೇಳಿಕೊಳ್ಳುತ್ತವೆ. ಬರೋಬ್ಬರಿ 10 ಲಕ್ಷಕ್ಕೂ ನೋಂದಾಯಿತ ಬಳಕೆದಾರರನ್ನು ಹೊಂದಿರುವ ಇ-ಫಾರ್ಮಸಿ ಸಂಸ್ಥೆ ನೆಟ್‌ಮೆಡ್ಸ್ ಮಾರ್ಕೆಟ್ ಪ್ಲೇಸ್‌ನ ಸಂಸ್ಥಾಪಕರಾದ ಪ್ರದೀಪ್ ದಾಧಾ ಅವರು, ಇ-ಫಾರ್ಮಸಿ ಗಳ ಆನ್‌ಲೈನ್ ವೇದಿಕೆಯಲ್ಲಿ ಅಪ್‌ಲೋಡ್ ಆಗುವ ಶೇ.30ರಷ್ಟು ಔಷಧಿ ಚೀಟಿಗಳು ಅಸಿಂಧುಗೊಳ್ಳುತ್ತವೆ. ಯಾಕೆಂದರೆ ಅವು ಸಿಂಧುತ್ವವನ್ನು ಹೊಂದಿರುವ ಔಷಧಿ ಶಿಫಾರಸು ಚೀಟಿಗಳಿಗಾಗಿನ ಪರಿಶೀಲನೆಯಲ್ಲಿ ತೇರ್ಗಡೆಗೊಳ್ಳಲು ಅವು ವಿಫಲವಾಗಿರುತ್ತವೆಯೆಂದು ತಿಳಿಸುತ್ತಾರೆ.

ಆದರೆ ಭಾರತೀಯ ಔಷಧಿ ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ವಿ. ವೀರಮಣಿ ಅವರು, ಆನ್‌ಲೈನ್‌ನಲ್ಲಿ ಔಷಧಿ ಚೀಟಿಗಳ ದುರ್ಬಳಕೆ ಸುಲಭವೆಂದು ಎಚ್ಚರಿಕೆ ನೀಡುತ್ತಾರೆ. ರೋಗಿಯು ಒಂದೇ ಔಷಧಿ ಚೀಟಿಯನ್ನು ಬಳಸಿಕೊಂಡು ವಿವಿಧ ಆನ್‌ಲೈನ್ ಸಂಸ್ಥೆಗಳಿಂದ ಔಷಧಿಯನ್ನು ಪಡೆದುಕೊಳ್ಳಬಹುದಾಗಿದೆಯೆಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಔಷಧಿಗಳ ಸುರಕ್ಷಿತ ಪೂರೈಕೆ ಕೂಡಾ ಇ-ಫಾರ್ಮಸಿಯಲ್ಲಿ ಎದುರಾಗುವ ಇನ್ನೊಂದು ಪ್ರಮುಖ ಸವಾಲಾಗಿದೆ. ಕೆಲವು ಇ-ಫಾರ್ಮಸಿ ಕಂಪೆನಿಗಳು ಭಾರತದ ವಿವಿಧ ರಾಜ್ಯಗಳಿಗೆ ಔಷಧಿಗಳನ್ನು ಸಾಗಿಸುವುದರಿಂದ, ಈ ವ್ಯವಸ್ಥೆಯೊಳಗೆ ಕಲಬೆರಕೆಯ ಔಷಧಿಗಳು ಪ್ರವೇಶಿಸುವ ಅಪಾಯವೂ ಇದೆ. ‘‘ಆನ್‌ಲೈನ್ ವ್ಯವಸ್ಥೆಯಲ್ಲಿ ಔಷಧಿಯು ಎಲ್ಲಿಂದ ಬರುತ್ತದೆ ಹಾಗೂ ಎಲ್ಲಿಗೆ ಹೋಗುತ್ತಿದೆಯೆಂಬುದು ಯಾರಿಗೂ ತಿಳಿಯುವುದಿಲ್ಲ’’ ಎಂದು ಶಿಂಧೆ ಹೇಳುತ್ತಾರೆ. ಒಂದು ವೇಳೆ ಕಲಬೆರಕೆಯ ಅಥವಾ ಕಳಪೆದರ್ಜೆಯ ಔಷಧಿಗಳನ್ನು ರೋಗಿಗಳಿಗೆ ಪೂರೈಕೆ ಮಾಡಿದರೆ ಪರಿಸ್ಥಿತಿ ಏನಾದೀತು ನೀವೇ ಊಹಿಸಿ ಎಂದವರು ಕಳವಳ ವ್ಯಕ್ತಪಡಿಸುತ್ತಾರೆ. ಆ್ಯಂಟಿಬಯೋಟಿಕ್ಸ್‌ನಂತಹ ಔಷಧಿಗಳನ್ನು ಆನ್‌ಲೈನ್ ಮಾರಾಟ ಮಾಡಲಾಗುತ್ತಿರುವುದು ಕೆಲವು ವೈದ್ಯರ ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ. ಆ್ಯಂಟಿಬಯೋಟಿಕ್‌ಗಳ ಅತಾರ್ಕಿಕ ಬಳಕೆಯಿಂದ ಉಂಟಾಗಿರುವ ರೋಗಿಗಳಲ್ಲಿ ರೋಗನಿರೋಧಕ ಸಾಮರ್ಥ್ಯದ ಕೊರತೆಯ ಸಮಸ್ಯೆಯನ್ನು ಭಾರತವು ಈಗಾಗಲೇ ವ್ಯಾಪಕವಾಗಿ ಎದುರಿಸುತ್ತಿದೆ. ಇದಕ್ಕೆ ವೈದ್ಯರು ಹಾಗೂ ರೋಗಿಗಳು ಇಬ್ಬರನ್ನೂ ದೂರಬೇಕಾಗಿದೆಯೆಂದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

 ಔಷಧಿಚೀಟಿಯ ಮೂಲಕ ನೀಡಲಾಗುವ ಔಷಧಿಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಅನುಮತಿ ನೀಡಬಾರದೆಂದು ಈಗಾಗಲೇ ಸರಕಾರವು ಭಾರತೀಯ ಔಷಧಿ ಉತ್ಪಾದಕರ ಸಂಘವು ಕೇಂದ್ರ ಸರಕಾರಕ್ಕೆ ಆಗ್ರಹಿಸಿದೆ. ಹಲವು ದೇಶಗಳಲ್ಲಿ ಕೇವಲ ಮಳಿಗೆಗಳಲ್ಲಿ ಮಾತ್ರವೇ ಔಷಧಿಯ ಮಾರಾಟಕ್ಕೆ ಅನುಮತಿಯಿದೆಯೆಂದು ಭಾರತೀಯ ಔಷಧಿ ಉತ್ಪಾದಕ ಸಂಘದ ಮಾಜಿ ಅಧ್ಯಕ್ಷ ವೀರಮಣಿ ಹೇಳುತ್ತಾರೆ.

ಕೃಪೆ: scroll.in

Writer - ಪ್ರಿಯಾಂಕಾ ವೋರಾ

contributor

Editor - ಪ್ರಿಯಾಂಕಾ ವೋರಾ

contributor

Similar News

ಜಗದಗಲ
ಜಗ ದಗಲ