ಅಪಧಮನಿಗಳು ಕೆಂಪಗಿರುವ ಬದಲು ನೀಲಿಯಾಗಿರುತ್ತವೆ...ಏಕೆ?

Update: 2017-02-16 06:28 GMT

ನಮ್ಮ ಶರೀರದಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಹೊತ್ತೊಯ್ಯುವ ಅಪಧಮನಿಗಳು ಮಾತ್ರ ನೀಲಿಬಣ್ಣದ್ದಾಗಿ ಕಾಣುತ್ತವೆಯಲ್ಲ....ಏಕೆಂದು ಗೊತ್ತೇ..?

ಕೆಂಪು ಬೆಳಕು ಚರ್ಮದೊಳಗೆ ನೀಲಿ ಬೆಳಕಿಗಿಂತ ಹೆಚ್ಚು ಪ್ರವೇಶಿಸುವುದು ಇದಕ್ಕೆ ಕಾರಣವಾಗಿದೆ.

ನಮ ಹೃದಯ ಪಂಪ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಸದಾ ಕಾಲವೂ ಮಲಿನ ರಕ್ತವನ್ನು ಶುದ್ಧಗೊಳಿಸುತ್ತದೆ. ದೇಹದ ಇತರ ಭಾಗಗಳಿಂದ ಹೃದಯಕ್ಕೆ ಮಲಿನ ರಕ್ತವನ್ನು ಸಾಗಿಸುವ ಅಪಧಮನಿಗಳು ಚರ್ಮದ ಕೆಳಗೇ ಇದ್ದರೆ ದೇಹದ ಇತರ ಭಾಗಗಳಿಗೆ ಹೃದಯದಿಂದ ಶುದ್ಧರಕ್ತವನ್ನು ಸಾಗಿಸುವ ಅಭಿಧಮನಿಗಳು ಚರ್ಮದಿಂದ ದೂರ,ಸ್ವಲ್ಪ ಆಳದಲ್ಲಿರುತ್ತವೆ.

ದೇಹದ ಛೇದನ ಅಥವಾ ಡಿಸೆಕ್ಷನ್ ಸಮಯದಲ್ಲಿ ಅಪಧಮನಿಗಳು ನೀಲಿಬಣ್ಣದಲ್ಲಿ ಕಂಡು ಬರುವುದಿಲ್ಲ. ಹೀಗಾಗಿ ರಕ್ತ ನೀಲಿಬಣ್ಣದ್ದಲ್ಲ ಅಥವಾ ಅದನ್ನು ಸಾಗಿಸುವ ಅಪಧಮನಿಗಳೂ ನೀಲಿ ಬಣ್ಣದ್ದಲ್ಲ. ‘ನೀಲಿ ಅಪಧಮನಿ ’ಚರ್ಮದ ವಿಶಿಷ್ಟ ವಿದ್ಯಮಾನವಾಗಿದೆ.

ಚರ್ಮದಲ್ಲಿಯ ಅಪಧಮನಿಗಳು ನೀಲಿಯಾಗಿ ಕಾಣಲು ಕಾರಣಗಳು: ರಕ್ತ ಮತ್ತು ಚರ್ಮದೊಡನೆ ಬೆಳಕಿನ ಅಂತರ್‌ಕ್ರಿಯೆ ಒಂದಾದರೆ ಇನ್ನೊಂದು ಮಾನಸಿಕತೆಗೆ,ಅಂದರೆ ಬಣ್ಣದ ಅರಿವು ಮೂಡಿಸುವಲ್ಲಿ ನಮ್ಮ ಮಿದುಳು ಮಾಹಿತಿಯನ್ನು ಸಂಸ್ಕರಿಸುವ ಪ್ರಕ್ರಿಯೆಗೆ ಸಂಬಂಧಿಸಿದೆ.
ಇದನ್ನು ತಿಳಿದುಕೊಳ್ಳಲು ಬೆಳಕು ಚರ್ಮದ ಪರಸ್ಪರ ಹೊಂದಿಕೊಂಡಿರುವ ಎರಡು ಪ್ರದೇಶಗಳಿಂದ ಹಿಂದಕ್ಕೆ ಚದುರಿಸಲ್ಪಟ್ಟಿದೆ ಎಂದು ಭಾವಿಸೋಣ.

ಚಿತ್ರದಲ್ಲಿ ತೋರಿಸಿರುವಂತೆ ಪ್ರದೇಶ ‘ಎ ’ಅಪಧಮನಿಯ ಮೇಲಿರುವ ಚರ್ಮವಲ್ಲ ಮತ್ತು ಪ್ರದೇಶ ‘ಬಿ’ ಅಪಧಮನಿಯ ಮೇಲಿನ ಪ್ರದೇಶವಾಗಿದೆ.
‘ಎ’ಪ್ರದೇಶದಲ್ಲಿ ನಿರ್ದಿಷ್ಟ ಪ್ರಮಾಣದ ನೀಲಿ ಬೆಳಕು ಮತ್ತು ಅಷ್ಟೇ ಪ್ರಮಾಣದ ಕೆಂಪು ಬೆಳಕನ್ನು ನಿರ್ಬಂಧಿಸಿದರೆ ಅವು ಸಮ ಪ್ರಮಾಣದಲ್ಲಿ ಹರಡುತ್ತವೆ.

‘ಬಿ’ ಪ್ರದೇಶ ಅಂದರೆ ಅಪಧಮನಿಯ ಮೇಲಿನ ಚರ್ಮದ ಪ್ರದೇಶದಲ್ಲಿಯೂ ಇಷ್ಟೇ ಪ್ರಮಾಣದಲ್ಲಿ ನೀಲಿ ಬೆಳಕು ನಿರ್ಬಂಧಿಸಲ್ಪಟ್ಟಾಗ ಅದು ಅಪಧಮನಿಯನ್ನು ತಲುಪುವಷ್ಟು ಆಳವಾಗಿ ಪ್ರವೇಶಿಸುವುದಿಲ್ಲವಾದ್ದರಿಂದ ಅದರ ಮೇಲೆ ಅಪಧಮನಿಯ ಯಾವದೇ ಪ್ರಮಾಣವಿರುವುದಿಲ್ಲ. ಆದರೆ ಕೆಂಪುಬೆಳಕು ಅಪಧಮನಿಯನ್ನು ತಲುಪುತ್ತದೆ ಮತ್ತು ರಕ್ತದಿಂದ ಭಾಗಶಃ ಹೀರಿಕೊಳ್ಳಲ್ಪಡುತ್ತದೆ. ಹೀಗೆ ಪ್ರದೇಶ ‘ಎ’ಗಿಂತ ಕಡಿಮೆ ಕೆಂಪು ಬೆಳಕು ಪ್ರದೇಶ ‘ಬಿ’ಯಿಂದ ಚದುರುತ್ತದೆ.

ಇದೇ ಕಾರಣದಿಂದ ಪ್ರದೇಶ ‘ಬಿ ’ ಯು ಪ್ರದೇಶ ‘ಎ ’ಗಿಂತ ಹೆಚ್ಚು ನೀಲಿ ಬಣ್ಣವನ್ನು ಹೊಂದಿದೆ ಎಂದು ನಮಗೆ ಭಾಸವಾಗುತ್ತದೆ ಮತ್ತು ‘ಬಿ’ ಪ್ರದೇಶದ ಕೆಳಗಿರುವ ಅಪಧಮನಿ ನೀಲಿ ಬಣ್ಣದ್ದಾಗಿ ನಮಗೆ ತೋರುತ್ತದೆ. ಅಂದರೆ ನಮ್ಮ ಮಿದುಳು ಅಪಧಮನಿಯನ್ನು ‘ನೀಲಿ ’ಯಾಗಿಸುತ್ತದೆ !

ಹೀಗೆ ಚರ್ಮದಲ್ಲಿಯ ಅಪಧಮನಿಗಳು ನೀಲಿಯಾಗಿ ಕಾಣುವದು ಅವು ಚರ್ಮದ ಮೇಲ್ಮೈಗೆ ಎಷ್ಟು ಹತ್ತಿರವಾಗಿವೆ ಎನ್ನುವುದನ್ನು ಮತ್ತು ಬೆಳಕಿನ ಪ್ರತಿಫಲನವನ್ನು ಅವಲಂಬಿಸಿದೆ ಮತ್ತು ಹೀಗೆ ಕಾಣುವುದಕ್ಕೂ ಅವುಗಳಲ್ಲಿ ಹರಿಯು ರಕ್ತದ ಶುದ್ಧತೆಗೂ ಅಶುದ್ಧತೆಗೂ ಯಾವುದೇ ಸಂಬಂಧವಿಲ್ಲ. ನಮಗೆ ಚರ್ಮದ ಮೂಲಕ ಅಭಿಧಮನಿಗಳನ್ನೂ ಕಾಣಲು ಸಾಧ್ಯವಾಗಿದ್ದರೆ ಅವೂ ನೀಲಿ ಬಣ್ಣದ್ದಾಗಿರುತ್ತಿದ್ದವು !

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News