ನೀವು ಆ 2 ರೂ. ಸಿರಿಂಜ್ ಗೆ ಎಷ್ಟು ಪಟ್ಟು ಹೆಚ್ಚು ಹಣ ತೆರುತ್ತಿದ್ದೀರಿ ಗೊತ್ತೇ?

Update: 2017-02-16 07:49 GMT

 # ಆರೋಗ್ಯದ ಹೆಸರಿನಲ್ಲಿ ಬಿಲಿಯಗಟ್ಟಲೆ ರೂ. ಲೂಟಿ

# 10-20% ಅಲ್ಲ, 100-200% ಲಾಭ ಬಾಚಿಕೊಳ್ಳುವ ದಂಧೆ
# ಇದು ಭಾರತದ ನಿತ್ಯ ಹಗರಣ
# ಕಂಪೆನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ವೈದ್ಯರು

ಮುಂಬೈ ಫೆ.16: ಚುಚ್ಚುಮದ್ದು ನೀಡಲು ಬಳಸುವ ಒಂದು ಸಿರಿಂಜ್ ತಯಾರಿಸಲು ತಗಲುವ ವೆಚ್ಚ ಬರೀ ರೂ 2. ಆದರೆ ಭಾರತದ ಜನಸಾಮಾನ್ಯರು ಇದರ ಐದು ಪಟ್ಟು ಹೆಚ್ಚು ಹಣ ತೆತ್ತು ಆ ಸಿರಿಂಜನ್ನು ಖರೀದಿಸುತ್ತಾರೆ.

ಒಂದು ಸಿರಿಂಜ್ ಖರೀದಿಸಿದಾಗ ಕಂಪೆನಿಗೆ ಸಿಗುವ ಒಂದಂಕಿ ಲಾಭ ಪಕ್ಕನೆ ಯೋಚಿಸುವಾಗ ಗೌಣವಾಗಿ ಕಾಣಬಹುದು. ಆದರೆ ಭಾರತದಲ್ಲಿ ವಾರ್ಷಿಕ 300 ಕೋಟಿ ಸಿರಿಂಜ್ ಗಳು ಮಾರಾಟವಾಗುತ್ತಿವೆಯೆಂದಾದರೆ ಆರೋಗ್ಯದ ಹೆಸರಿನಲ್ಲಿ ಕೋಟಿಗಟ್ಟಲೆ ರೂಪಾಯಿ ಲೂಟಿಯಾಗುತ್ತಿದೆಯೆಂದೇ ಅರ್ಥ.

ಅಂತೆಯೇ ಹಿಪ್ ಇಂಪ್ಲಾಂಟ್ ಆಮದು ಬೆಲೆ ರೂ.8,906 ಆಗಿದ್ದರೆ, ಅದು ರೋಗಿಯೊಬ್ಬನ ಬಿಲ್ ನಲ್ಲಿ ರೂ1.29 ಲಕ್ಷ ಆಗುತ್ತದೆ. ಇಲ್ಲಿ ಆ ಸಾಧನದ ಬೆಲೆ 1,448 ಶೇ. ಅಧಿಕವಾಗಿರುತ್ತದೆ. ನ್ಯಾಷನಲ್ ಫಾರ್ಮಾಸ್ಯೂಟಿಕಲ್ಸ್‌ ಪ್ರೈಸಿಂಗ್ ಅಥಾರಿಟಿ, ಕಾರ್ಡಿಯಾಕ್ ಸ್ಟೆಂಟ್ ಬೆಲೆಗಳನ್ನು ಪ್ರತಿಯೊಂದಕ್ಕೆ ರೂ.29,600ಕ್ಕೆ ನಿಗದಿಪಡಿಸಿದ ನಂತರ ಟೈಮ್ಸ್ ಆಫ್ ಇಂಡಿಯಾ ಬೇರೆ ಸಾಧನಗಳ ಬಗ್ಗೆ ತಿಳಿಯುವ ಸಲುವಾಗಿ ಕೆಲ ವಿತರಕರನ್ನು ಕಂಡು ಮಾತನಾಡಿಸಿದಾಗ ಸಿರಿಂಜ್ ಹಾಗೂ ಹಿಪ್ ಇಂಪ್ಲಾಂಟ್ ಗಳ ಮೂಲ ಬೆಲೆಯ ಬಗ್ಗೆ ತಿಳಿದು ಬಂದಿತ್ತು.

ಕಾರ್ಡಿಯಾಕ್ ಸ್ಟೆಂಟುಗಳಿಗೆ ರೋಗಿಗಳು ಅವುಗಳ ಆಮದು ಬೆಲೆಗಿಂತ 700 ಪಟ್ಟು ಅಧಿಕ ಮೊತ್ತ ನೀಡಬೇಕಾಗಿದೆಯೆಂಬ ದೂರುಗಳ ಆಧಾರದಲ್ಲಿ ಎನ್‌ಪಿಪಿಎ ಅದರ ಬೆಲೆಯನ್ನು ನಿಗದಿಪಡಿಸಿತ್ತು. ಭಾರತದಲ್ಲಿ ವರ್ಷಕ್ಕೆ ಸುಮಾರು ಆರು ಲಕ್ಷ ಕಾರ್ಡಿಯಾಕ್ ಸ್ಟೆಂಟುಗಳು ಮಾರಾಟವಾಗುತ್ತಿದ್ದರೆ, ಮಿಲಿಯಗಟ್ಟಲೆ ಸಿರಿಂಜ್ ಗಳು, ಕ್ಯಾನುಲೇ ಅಥವಾ ಕಣ್ಣಿನ ಲೆನ್ಸ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿವೆ.

ತಮ್ಮ ಹೆಸರು ಹೇಳಲಿಚ್ಛಿಸದ ವಿತರಕರೊಬ್ಬರ ಪ್ರಕಾರ ಸಾಮಾನ್ಯ ಆರ್ಥೋಪೀಡಿಕ್ ಇಂಪ್ಲಾಂಟ್ ಗಳ ಬೆಲೆ ಶೇ. 300ರಿಂದ ಶೇ.600ರಷ್ಟು ಅಧಿಕವಾಗಿರುತ್ತದೆ. ಮೊಣಕಾಲು ಇಂಪ್ಲಾಂಟ್ ಗಳ ಆಮದು ಬೆಲೆ ಕೇವಲ ರೂ.9,264 ಆಗಿದ್ದರೆ, ಅದನ್ನು ರೂ 46,000ಕ್ಕೆ ಮಾರಾಟ ಮಾಡಲಾಗುತ್ತಿದೆ.

ಆನ್ ಲೈನ್ ರಫ್ತು ದಾಖಲೆಗಳನ್ನು ಪರಿಶೀಲಿಸಿದಾಗ ಭಾರತದಲ್ಲಿ ತಯಾರಾದ ಸಿರಿಂಜ್ ಗಳನ್ನು ಪ್ರತಿಯೊಂದಕ್ಕೆ ರೂ.2ರಂತೆ ಮಾರಾಟ ಮಾಡಲಾಗುತ್ತದೆ. ಇದು ಭಾರತದಲ್ಲಿ ನಡೆಯುವ ನಿತ್ಯ ಹಗರಣ ಎಂದು ಸಾಮಾಜಿಕ ಕಾರ್ಯಕರ್ತ ಅಭಯ್ ಶುಕ್ಲಾ ಹೇಳುತ್ತಾರೆ. ಜನ ಸ್ವಾಸ್ಥ್ಯ ಅಭಿಯಾನ್ ಇದರ ರಾಷ್ಟ್ರೀಯ ಸಂಚಾಲಕರಾಗಿರುವ ಶುಕ್ಲಾ ಪ್ರಕಾರ ''ಹೆಚ್ಚಿನ ಮಾರುಕಟ್ಟೆಗಳನ್ನು ಗ್ರಾಹಕರೇ ಆಳುತ್ತಾರಾದರೂ ಆರೋಗ್ಯ ಕ್ಷೇತ್ರದಲ್ಲಿ ರೋಗಿಯ ಪರವಾಗಿ ವೈದ್ಯರೇ ಎಲ್ಲವನ್ನು ನಿರ್ವಹಿಸುತ್ತಾರೆ. ಆದರೆ ವೈದ್ಯರೊಬ್ಬರು ತಮಗೆ ಹೆಚ್ಚು ಲಾಭ ತರುವ ಕಂಪೆನಿಯ ಉತ್ಪನ್ನಗಳಿಗೇ ಮೊರೆ ಹೋಗಿ ತಮ್ಮ ಲಾಭದ ಬಗ್ಗೆ ಮಾತ್ರ ಯೋಚಿಸಿದರೆ ರೋಗಿ ಅದರ ಬೆಲೆ ತೆರಲೇ ಬೇಕಾಗುತ್ತದೆ'' ಎಂದು ಅವರು ವಿವರಿಸುತ್ತಾರೆ. ಆದುದರಿಂದ ಈ ನಿಟ್ಟಿನಲ್ಲಿ ದರ ನಿಯಂತ್ರಣ ತರುವುದು ಅತ್ಯಗತ್ಯ ಎನ್ನುತ್ತಾರೆ.
ದೇಶದ ಅತ್ಯಂತ ದೊಡ್ಡ ಸಿರಿಂಜ್ ತಯಾರಿಕಾ ಘಟಕದ ಮಾಲಕ ರಾಜೀವ್ ನಾಥ್ ಅವರು ಅಸೋಸಿಯೇಶನ್ ಆಫ್ ಇಂಡಿಯನ್ ಮೆಡಿಕಲ್ ಡಿವೈಸಸ್ ಇಂಡಸ್ಟ್ರಿ ಇದರ ಸಂಘಟಕರೂ ಆಗಿದ್ದಾರೆ. ಸಿರಿಂಜ್ ಗಳನ್ನು ಹಾಗೂ ಇಂಪ್ಲಾಂಟ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಚರ್ಚೆಗಳು ನಡೆದಿವೆಯಾದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳುತ್ತಾರೆ.
ತಾನು ಕೂಡ ಈ ಬೆಳವಣಿಗೆಯಿಂದ ಬಾಧಿತವಾಗಿದ್ದೇನೆ ಎಂದು ಹೇಳುವ ನಾಥ್, ತಮ್ಮ ಸಿರಿಂಜ್ ಗಳ ಬೆಲೆ ರೂ 4.40 ಆಗಿದ್ದರೂ ರೂ.10ಕ್ಕೆ ಸಿರಿಂಜ್ ಗಳನ್ನು ಒದಗಿಸಿದ ಕಂಪೆನಿಯೊಂದು ಬಹಳಷ್ಟು ಪ್ರೋತ್ಸಾಹಕಗಳನ್ನು ಮಾರಾಟಗಾರರಿಗೆ ಘೋಷಿಸಿದ್ದರಿಂದ ಅದು ಹೆಚ್ಚು ಮಾರಾಟವಾಗಲಾರಂಭಿಸಿತು ಎಂದು ವಿವರಿಸುತ್ತಾರೆ. ತಮಗೆ ಸ್ಪರ್ಧೆಯೊಡ್ಡಿದ ಕಂಪೆನಿಗೆ ಸ್ಪರ್ಧೆಯೊಡ್ಡುವ ಸಲುವಾಗಿ ಹಿಂದಿನ ಉತ್ಪನ್ನದ ಬೆಲೆಯೇರಿಸಲು ಸಾಧ್ಯವಾಗದೆ ಮತ್ತೊಂದು ಬ್ರ್ಯಾಂಡ್ ಹೆಸರಿನಲ್ಲಿ ಉತ್ಪಾದಿಸಬೇಕಾಯಿತು ಎಂದು ಅವರು ವಿವರಿಸುತ್ತಾರೆ.

ಮುಂಬೈ ಮೂಲದ ಲ್ಯಾಪರೋಸ್ಕೋಪಿಕ್ ಗೈನಕಾಲಜಿಸ್ಟ್ ಪ್ರಶಾಂತ್ ಮಂಗೇಶ್ಕರ್‌ ಇನ್ನೊಂದು ಉದಾಹರಣೆ ಕೊಡುತ್ತಾರೆ. ‘‘ಭಾರತದಲ್ಲಿ ದರ ನಿಯಂತ್ರಣದ ಕೊರತೆಯ ಅನಗತ್ಯ ಲಾಭವನ್ನು ಕಂಪೆನಿಗಳು ಪಡೆಯುತ್ತಿವೆ. ಹಾರ್ಮೋನಿಕ್ ಸ್ಕಾಲ್ಪೆಲ್ ಇದರ ಉತ್ಪಾದಕರೊಬ್ಬರು ತಮ್ಮ ಬೇಸ್ ಯುನಿಟನ್ನು ವಿಶ್ವದಾದ್ಯಂತ ಆಸ್ಪತ್ರೆಗಳಿಗೆ ‘ಉಚಿತ ಬಾಡಿಗೆ’ಯಾಧಾರದಲ್ಲಿ ನೀಡುತ್ತಾರಾದರೂ ಭಾರತದ ಆಸ್ಪತ್ರೆಗಳಿಗೆ ವಾರ್ಷಿಕ ರೂ.12 ಲಕ್ಷ ಶುಲ್ಕ ವಿಧಿಸುತ್ತಾರೆ’’ ಎಂದು ಅವರು ಹೇಳುತ್ತಾರೆ.

ಇದೀಗ ಕಾರ್ಡಿಯಾಕ್ ಸ್ಟೆಂಟುಗಳ ಬೆಲೆ ನಿಯಂತ್ರಿಸಿದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ವೈದ್ಯಕೀಯ ಸಾಧನಗಳ ಬೆಲೆ ನಿಯಂತ್ರಣದ ವಿಚಾರಲ್ಲಿ ಹೆಚ್ಚಿನ ಗಮನಹರಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News