ಭಾರತದಲ್ಲಿ ವಿಜ್ಞಾನ : ಒಂದು ಐತಿಹಾಸಿಕ ನೋಟ
ಈ ಗ್ರಂಥದಲ್ಲಿ ಫ್ರೊಫಸರ್ ಬಿ.ವಿ ಸುಬ್ಬರಾಯ ಪ್ಪನವರು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯ ವಿವಿಧ ಮುಖಗಳನ್ನು,ಅತ್ಯಂತ ಸಮಗ್ರವಾಗಿ, ತಿಳಿಯಾದ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಖಗೋಲಶಾಸ್ತ್ರ, ಗಣಿತ, ಪದಾರ್ಥ ವಿಜ್ಞಾನಗಳು ಮತ್ತು ವೈದ್ಯಪದ್ಧತಿಗಳ ವಿವಿಧ ಮುಖಗಳಿಗೆ ಸಹಸ್ರಾರು ವರ್ಷಗಳುದ್ಧಕ್ಕೂ ಭಾರತ ನೀಡಿದ ಕೊಡುಗೆಗಳನ್ನು ಆಳವಾಗಿ ಪರಿಶೋಧಿಸುವುದರಲ್ಲಿ ಅವರು ತಮ್ಮ ಅಸಾಧಾರಣ ವಿದ್ವತ್ತೆಯನ್ನು ಪ್ರದರ್ಶಿಸಿದ್ದಾರೆ.
ಬೇರೆ ಬೇರೆ ಕಾಲಖಂಡಗಳಲ್ಲಿ, ಪ್ರತಿಯೊಂದು ವಿಷಯದಲ್ಲಿ ಕಲ್ಪನೆಗಳು ಮತ್ತು ಜ್ಞಾನವನ್ನು ಸುಸಂಬದ್ಧವಾಗಿ ವಿನ್ಯಾಸಗೊಳಿಸಿರುವುದು ಅವರ ಪ್ರಸ್ತುತಿಯಲ್ಲಿ ಎದ್ದು ತೋರುವ ಮತ್ತು ಅನನ್ಯ ಅಂಶವಾಗಿದೆ. ಅದಕ್ಕೆ, ಈ ವೌಲಿಕ ಹಾಗೂ ಅನ್ವಯಿಕ ವಿಜ್ಞಾನಗಳ ವಿವರಗಳ ನಿಕಟ ಪರಿಚಯ ಮತ್ತು ಉನ್ನತಮಟ್ಟದ ಬಹುಮುಖ ಪ್ರತಿಭೆ ಇರಬೇಕಾದುದು ಅಗತ್ಯ.
ಉದಾಹರಣೆಗೆ, ಗಣಿತ ಅಧ್ಯಾಯದಲ್ಲಿ-ವೇದ ಕಾಲದಿಂದಾರಂಭಿಸಿ, ಆನಂತರದ ಶತಮಾನಗಳ ಮೂಲಕ ಹಾಯ್ದು ಮೊದಲನೆಯ ಆರ್ಯಭಟನವರೆಗೆ, ಗಣಿತ, ಭೂಮಿತಿ(ರೇಖಾ ಗಣಿತ) , ತ್ರಿಕೋನ ಮಿತಿಗಳಲ್ಲಿ ಸಲ್ಲಿಸಲಾದ ಕೊಡುಗೆಗಳ ಬಗ್ಗೆ, ಆನಂತರ ಅದನ್ನನುಸರಿಸಿ, ಹದಿನಾಲ್ಕನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗಿನ ಕೇರಳೀಯ(ಗಣಿತ)ಪರಂಪರೆಯ ವಿಕಾಸದ ಬಗ್ಗೆ, ಪ್ರೊ.ಸುಬ್ಬರಾಯಪ್ಪನವರು ವಿವೇಚನೆ, ವಿಮರ್ಶೆ ಮತ್ತು ವಿಷಯ ನಿರ್ವಹಣೆ ಮಾಡಿರುವ ರೀತಿ, ನಿಜಕ್ಕೂ ಅವರ ಬಹುಮುಖೀ ಪ್ರತಿಭೆಯನ್ನು ಎತ್ತಿತೋರಿಸುತ್ತದೆ. ಮುಂದುವರಿದು, ಈ ಕ್ಷೇತ್ರಗಳಲ್ಲಿ ಗ್ರೀಕ್, ಇಸ್ಲಾಮಿ ಪಂಪರೆಗಳ ಪ್ರಭಾವಗಳನ್ನು ಮತ್ತು ಚೀನಾದ ಕೊಡುಗೆಗಳೊಂದಿಗೆ ಜೋಡಿಸಿ ನೋಡುವ ಸಂದರ್ಭದ ಹಿನ್ನೆಲೆಯಲ್ಲಿ ಭಾರತದ ಕೊಡುಗೆಗಳನ್ನು ವಿಮರ್ಶಾಪೂರ್ವಕವಾಗಿ ವೌಲ್ಯಾಂಕನ ಮಾಡಿದ್ದಾರೆ.
ಖಗೋಲಶಾಸ್ತ್ರ, ರಸಾಯನಶಾಸ್ತ್ರೀಯ ತಂತ್ರಗಳು ಮತ್ತು ರಸಶಾಸ ಹಾಗೂ ಸಿದ್ಧ, ಯುನಾನಿ ಮುಂತಾದ ವೈದ್ಯಕೀಯ ಪದ್ಧತಿಗಳನ್ನು ಕುರಿತ ಅವರ ವಿವರಣೆಯಲ್ಲಿ ಇದೇ ದಾಟಿ ಮುಂದಿವರಿದಿದೆ.
‘ನೂತನ ಪ್ರವೇಶ: ಭಾರತದಲ್ಲಿ ಆಧುನಿಕ ವಿಜ್ಞಾನ’ ಎಂಬ ಕೊನೆಯ ಅಧ್ಯಾಯದಲ್ಲಿ, ಯೂರೋಪಿನ ಪುರುತ್ಥಾನಕಾಲದಲ್ಲಿ ಆದ ಬೆಳವಣಿಗೆಗಳನ್ನು ವಿಕಾಸದ ಘಟ್ಟಗಳ ಕಾಲಾನುಕ್ರಮದಲ್ಲಿ ಹಾಗೂ ಗೆಲಿಲಿಯೋ, ಜೋಹಾನಸ್ ಕೆಪ್ಲರ್ ಮತ್ತು ಐಸ್ಯಾಕ್ ನ್ಯೂಟನ್‌ರಂಥ ದೈತ್ಯ ಪ್ರತಿಭೆಗಳ ಕೃತಿಗಳ ಅವಲೋಕನವಳಗೊಂಡು, ಪ್ರೊ.ಸುಬ್ಬರಾಯಪ್ಪನವರು ಸ್ಥೂಲವಾಗಿ ಚಿತ್ರಿಸುತ್ತಾರೆ.
ಮುಂದೆ ಅವರು ಅಣು ಸಿದ್ಧಾಂತ, ಪೀರಿಯಾಡಿಕ್ ಟೇಬಲ್ ರೂಪುಗೊಂಡು , ವಿದ್ಯುತ್ಕಾಂತೀಯ ಶಾಸ್ತ್ರದ ಮೂಲಭೂತ ಕೊಡುಗೆಗಳು ಇವುಗಳನ್ನು ಮತ್ತು ವಿಕಾಸವಾದವನ್ನೊಳಗೊಂಡ ಜೀವಶಾಸ್ತ್ರ, ಇನ್ನೂ ಅರ್ವಾಚೀನ ಕ್ವಾಂಟಮ್ ಮೆಕ್ಯಾನಿಕ್ಸ್ ಹಾಗೂ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತಗಳೆಲ್ಲವನ್ನೊಳಗೊಂಡು ಹತ್ತೊಂಬತ್ತನೆಯ ಶತಮಾನದ ವಿಜ್ಞಾನಗಳ ಜಾಡನ್ನು ಗುರುತಿಸಿ ನಿರೂಪಿಸುತ್ತಾರೆ.
ಆಧುನಿಕ ವಿಜ್ಞಾನದಲ್ಲಿ ಭಾರತೀಯ ಬೆಳವಣಿಗೆಗಳನ್ನು, ಹದಿನೆಂಟನೆಯ ಶತಮಾನದಿಂದ ಪ್ರಾರಂಭಿಸಿ, ಜವಾಹರಲಾಲ ನೆಹರೂ ಅವರ ವೈಜ್ಞಾನಿಕ ಪ್ರಯತ್ನಗಳು, ಯೋಜನೆಗಳು, ವಿಜ್ಞಾನದ ಯಾತ್ರೆಯ ಮುಂದುವರಿಕೆಯನ್ನು ಚಿತ್ರಿಸಿ ಹಾಗೂ ಸಮಾಜದೊಂದಿಗಿರುವ ಅವುಗಳ ಸಂಬಂಧವನ್ನು ಕುರಿತು ವಿವರಿಸಿ, ತತ್ಕಾಲದವರೆಗಿನ ಜ್ಞಾನ ಪಡೆಯುವುದರಲ್ಲಿ ಈ ಪುಸ್ತಕ ಓದುಗನಿಗೆ ಸಹಾಯಕವಾಗುವಂತೆ ಮಾಡಿದ್ದಾರೆ.
ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, ಬೆಲೆ: ರೂ.400 ಮಾತ್ರ