×
Ad

ಮೋದಿ,ಅಮಿತ್ ಶಾ ‘ಭಯೋತ್ಪಾದಕರು’ : ಎಸ್ಪಿ ಸಚಿವ ರಾಜೇಂದ್ರ ಚೌಧುರಿ ವಿವಾದಾತ್ಮಕ ಹೇಳಿಕೆ

Update: 2017-02-20 20:49 IST

ಲಕ್ನೋ,ಫೆ.20: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ‘ಭಯೋತ್ಪಾದಕ’ರೆಂದು ಕರೆಯುವ ಮೂಲಕ ಸಮಾಜವಾದಿ ಪಕ್ಷದ ವಕ್ತಾರ ಹಾಗೂ ಉತ್ತರಪ್ರದೇಶದ ಸಚಿವ ರಾಜೇಂದ್ರ ಚೌಧುರಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

 ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಸರಕಾರವು ಧಾರ್ಮಿಕ ತಾರತಮ್ಯವನ್ನು ಮಾಡುತ್ತಿದೆಯೆಂದು ಪ್ರಧಾನಿ ಮೋದಿ ಆರೋಪಿಸಿದ ಬೆನ್ನಲ್ಲೇ ರಾಜೇಂದ್ರ ಚೌಧುರಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಪಾಠವನ್ನು ಕಲಿಸುವಂತೆಯೂ ಚೌಧುರಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ರವಿವಾರ ಉತ್ತರಪ್ರದೇಶ ವಿಧಾನಸಭೆಗೆ  ಮೂರನೆ ಹಂತದ ಮತದಾನ ನಡೆದ ಬಳಿಕ ಲಕ್ನೋದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ‘‘ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಭಯೋತ್ಪಾದಕರಾಗಿದ್ದಾರೆ ಹಾಗೂ ಅವರು ನಮ್ಮ ಪ್ರಜಾಪ್ರಭುತ್ವದಲ್ಲಿ ಭೀತಿಯನ್ನು ಸೃಷ್ಟಿಸುತ್ತಿದ್ದಾರೆ’’ ಎಂದು ಚೌಧುರಿ ತಿಳಿಸಿದರು.

 ‘‘ ಬಿಜೆಪಿಯು ಉತ್ತರಪ್ರದೇಶದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದ್ದು, ಬಿಹಾರಕ್ಕಿಂತಲೂ ದಯನೀಯವಾದ ಸೋಲನುಭವಿಸಲಿದೆ’’ ಎಂದು ಅಖಿಲೇಶ್‌ಸಂಪುಟದ ಹಿರಿಯ ಸಚಿವರಲ್ಲೊಬ್ಬರಾದ ರಾಜೇಂದ್ರ ಚೌಧುರಿ ಹೇಳಿದ್ದಾರೆ.

ಚೌಧುರಿ ಅವರ ಹೇಳಿಕೆಗೆ ಬಿಜೆಪಿ ನಾಯಕ ಓಮ್ ಮಾಥುರ್ ತಕ್ಷಣವೇ ಪ್ರತಿಕ್ರಿಯಿಸಿದ್ದು, ಪ್ರಧಾನಿ ವಿರುದ್ಧ ಇಂತಹ ಅತಿರೇಕದ ಪದವನ್ನು ಬಳಸಿದ್ದಕ್ಕಾಗಿ ಎಸ್ಪಿ ಯನ್ನು ಉತ್ತರಪ್ರದೇಶದ ಜನತೆ ಶಿಕ್ಷಿಸಲಿದ್ದಾರೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News