ಮರ್ಸಿಡಿಸ್‌ನ ಈ ಹೊಸ ವಾಹನ ಇಡೀ ವಿಶ್ವದಲ್ಲಿ ಕೇವಲ 99 ಮಂದಿಗೆ ಲಭ್ಯ !

Update: 2017-02-21 12:37 GMT

ವಿಶ್ವವಿಖ್ಯಾತ ಕಾರು ತಯಾರಿಕೆ ಸಂಸ್ಥೆ ಮರ್ಸಿಡಿಸ್ ತನ್ನ ಐಷಾರಾಮಿ ಮೇಬ್ಯಾಕ್ ಸರಣಿಯ ಮುಂದಿನ ಆವೃತ್ತಿಯನ್ನು ಅನಾವರಣಗೊಳಿಸಿದೆ. ಈ ಆವೃತ್ತಿಯ ಕೇವಲ 99 ಕಾರುಗಳು ಮಾತ್ರ ತಯಾರಾಗಲಿದ್ದು, ಮುಂದಿನ ವರ್ಷದ ವೇಳೆಗೆ ಮಾರುಕಟ್ಟೆಗೆ ಬರಲಿವೆ.
ಮರ್ಸಿಡಿಸ್ ಜಿ 650 ಲ್ಯಾಂಡಾಲೆಟ್ ಎಂದು ಹೆಸರಿಸಲಾಗಿರುವ ಈ ಕಾರು ವಿಶಾಲವಾದ ಸ್ಥಳಾವಕಾಶವನ್ನು ಹೊಂದಿದ್ದು, ನಿಮ್ಮ ಸುಪ್ಪತ್ತಿಗೆಗಿಂತಲೂ ಹೆಚ್ಚು ಆರಾಮದಾಯಕವಾಗಿದೆ.

ನಿಮಗಾಗಿ ಕಾರಿನ ಚಿತ್ರಗಳು ಇಲ್ಲಿವೆ,ನೋಡಿಕೊಳ್ಳಿ....

ಲ್ಯಾಂಡಾಲೆಟ್ ಕೆಲ ಸಮಯದ ವಿರಾಮದ ಬಳಿಕ 2015ರಲ್ಲಿ ಪುನರುಜ್ಜೀವನಗೊಂಡ ಮೇಬ್ಯಾಕ್ ಸರಣಿಯ ಮೊದಲ ಆಫ್-ರೋಡರ್ ಆವೃತ್ತಿಯಾಗಿದೆ. ಮರ್ಸಿಡಿಸ್ ಮೇಬ್ಯಾಕ್ ಬ್ರಾಂಡ್‌ಗೆ ಮತ್ತೆ ಚಾಲನೆ ನೀಡಿದ ಸಂದರ್ಭದಲ್ಲಿ ಎಸ್-ಕ್ಲಾಸ್ ಕಾರನ್ನು ಮೊದಲು ಅನಾವರಣಗೊಳಿಸಿತ್ತು. (ಕೆಳಗಿನ ಚಿತ್ರ)


ನಂತರ ಮರ್ಸಿಡಿಸ್ ಮೇಬ್ಯಾಕ್ ಸರಣಿಗಾಗಿ ತನ್ನ ಎಸ್650 ಕಾರನ್ನು ಬಿಡುಗಡೆ ಗೊಳಿಸಿತ್ತು.

ಇದೀಗ ಮರ್ಸಿಡಿಸ್ ತನ್ನ ತೀರ ಇತ್ತೀಚಿನ ಜಿ 650 ಅನ್ನು ಅನಾವರಣಗೊಳಿಸಿದೆ. ಈ ಕಾರಿನ ತಳಭಾಗ ನೆಲದಿಂದ ಹೆಚ್ಚುಕಡಿಮೆ ಎರಡು ಅಡಿ ಎತ್ತರದಲ್ಲಿದೆ.


ಮುಂಭಾಗದ ಆಸನದಲ್ಲಿ ಪ್ರಯಾಣಿಸುವವರು ಸಾಂಪ್ರದಾಯಿಕ ಮುಚ್ಚಿದ ಛಾವಣಿಯಡಿ ಕುಳಿತಿದ್ದರೆ, ಹಿಂದಿನ ಆಸನಗಳಲ್ಲಿ ಪ್ರಯಾಣಿಸುವವರು ತಮ್ಮ ತಲೆಯ ಮೇಲಿನ ಛಾವಣಿಯ ಕಿಟಕಿಯನ್ನು ತೆರೆದರೆ ಆಗಸ ಕಾಣುತ್ತದೆ,ಜೊತೆಗೆ ಹೊರಗಿನ ಗಾಳಿಯನ್ನೂ ಅನುಭವಿಸಬಹುದು.


ಹಿಂದಿನ ಮತ್ತು ಮುಂದಿನ ಆಸನಗಳಲ್ಲಿಯ ಪ್ರಯಾಣಿಕರನ್ನು ಪ್ರತ್ಯೇಕಿಸಲು ಮಧ್ಯೆ ಗಾಜಿನ ತೆರೆಯೂ ಇದೆ.


ಕಾರಿನ ಒಳಭಾಗವನ್ನು ಗರಿಷ್ಠ ಹಿತಾನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಹಿಂಭಾಗದಲ್ಲಿ ಪ್ರತ್ಯೇಕ ಆಸನಗಳಿದ್ದು, ಕೆಳಬೆನ್ನಿಗೆ ಆಧಾರವನ್ನು ಹೆಚ್ಚಿಸಲು ಇನ್‌ಫ್ಲೇಟೇಬಲ್ ಏರ್ ಚೇಂಬರ್‌ಗಳನ್ನು ಹೊಂದಿವೆ. ಹಾಟ್ ಸ್ಟೋನ್ ಮಸಾಜ್‌ನ ಅನುಭವ ನೀಡುವ ಮಸಾಜ್ ಪ್ರೋಗ್ರಾಮ್‌ಗಳನ್ನೂ ಇವುಗಳಲ್ಲಿ ವಿನ್ಯಾಸ ಗೊಳಿಸಲಾಗಿದೆ.


ಹಿಂಬದಿಯ ಪ್ರಯಾಣಿಕರು ತಮ್ಮ ಪಾನೀಯವನ್ನು ಬಿಸಿ ಅಥವಾ ತಂಪಾಗಿರಿಸಲು ದೊಡ್ಡದಾದ ಥರ್ಮಲ್ ಕಪ್ ಹೋಲ್ಡರ್‌ಗಳನ್ನು ಅಳವಡಿಸಲಾಗಿದೆ.


ಇಷ್ಟೆಲ್ಲ ಇರುವಾಗ ಮನೋರಂಜನೆ ಬೇಡವೇ ? ಅದಕ್ಕಾಗಿ ಹಿಂಬದಿಯ ಪ್ರತಿ ಪ್ರಯಾಣಿಕರಿಗೆ ಪ್ರತ್ಯೇಕವಾಗಿ 10 ಇಂಚಿನ ಹೈ ರೆಸೊಲ್ಯೂಷನ್ ಸ್ಕ್ರೀನ್‌ಗಳಿವೆ.


ಲಿಮೋಸಿನ್ ಶೈಲಿಯ ಒಳಭಾಗವಿದ್ದರೂ ಯಾವುದೇ ಪ್ರದೇಶದಲ್ಲಿಯೂ ಸುಲಭವಾಗಿ ಚಲಿಸುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ನೆಲದಿಂದ 1.7 ಅಡಿ ಎತ್ತರವಿದ್ದು, ವಿ12 ಬೈಟರ್ಬೊ ಇಂಜಿನ್‌ನ್ನು ಅಳವಡಿಸಲಾಗಿದೆ. ಇದು 630 ಎಚ್‌ಪಿ ಮತ್ತು ಪ್ರತಿ ಅಡಿಗೆ 738 ಪೌಂಡ್ ಟಾರ್ಕ್ ಉತ್ಪಾದಿಸುತ್ತದೆ.

ಈ ಕಾರಿನ ಮಾರಾಟ ಬೆಲೆಯನ್ನು ಮರ್ಸಿಡಿಸ್ ಬಹಿರಂಗಗೊಳಿಸಿಲ್ಲ. ಕೇವಲ 99 ಕಾರುಗಳು ಮಾತ್ರ ತಯಾರಾಗಲಿದ್ದು, ಮೇಬ್ಯಾಕ್ ಸರಣಿಯ ಇತರ ಎರಡು ಕಾರುಗಗಳ ಬೆಲೆಗಳನ್ನು ಪರಿಗಣಿಸಿದರೆ ಪ್ರತಿ ಕಾರಿನ ಬೆಲೆ ಮೂರು ಲಕ್ಷ ಡಾಲರ್‌ಗಿಂತ ಮೇಲೆಯೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News