ಉತ್ಪಾದನಾ ಘಟಕದಲ್ಲಿ ಅಗ್ನಿ ಆಕಸ್ಮಿಕ: ಆರು ಕಾರ್ಮಿಕರು ಸಜೀವ ದಹನ

Update: 2017-02-22 05:52 GMT

ಹೈದರಾಬಾದ್, ಫೆ.22: ನಗರದ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಾಪುರ್ ಎಂಬಲ್ಲಿ ಏರ್-ಕೂಲರ್ ಉತ್ಪಾದನಾ ಘಟಕವೊಂದರಲ್ಲಿ ಬುಧವಾರ ಬೆಳಗ್ಗಿನ ಜಾವ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ ಆರು ಕಾರ್ಮಿಕರು ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ.

ಘಟನೆಯು ಬೆಳಗ್ಗೆ 5 ಗಂಟೆ ಸುಮಾರಿಗೆ ಸಂಭವಿಸಿದೆ. ಒಡಿಶಾ ಮೂಲದ ಕಾರ್ಮಿಕರು ಕಬ್ಬಿಣದ ಶೀಟ್‌ನಿಂದ ನಿರ್ಮಿಸಲ್ಪಟ್ಟ ಶೆಡ್‌ನಲ್ಲಿ ಮಲಗಿದ್ದ ವೇಳೆ ಈ ಅವಘಡ ನಡೆದಿದೆ.

ಏರ್-ಕೂಲರ್‌ನಲ್ಲಿ ಉಂಟಾದ ಶಾರ್ಟ್-ಸರ್ಕ್ಯೂಟ್‌ನಿಂದ ಅಗ್ನಿ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ರಾಜೇಂದ್ರ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಶನರ್ ಗಂಗಿ ರೆಡ್ಡಿ ತಿಳಿಸಿದ್ದಾರೆ. ಕಾರ್ಮಿಕರು ಶೆಡ್ ಒಳಗೆ ಬೋಲ್ಟ್‌ನ್ನು ಹಾಕಿ ಮಲಗಿದ್ದ ಕಾರಣ ಅವರಿಗೆ ಬೇಗನೆ ಹೊರ ಬರಲು ಸಾಧ್ಯವಾಗಲಿಲ್ಲ. ಬೆಂಕಿ ಇಡೀ ಪ್ರದೇಶಕ್ಕೆ ವ್ಯಾಪಿಸುವುದಕ್ಕೆ ಮೊದಲೇ ಉಳಿದ ಕಾರ್ಮಿಕರನ್ನು ರಕ್ಷಿಸಲಾಗಿದೆ. ನೆರೆಹೊರೆಯವರು ನೀಡಿದ ಮಾಹಿತಿಯ ಬಳಿಕ ನಾಲ್ಕು ಅಗ್ನಿಶಾಮಕ ಇಂಜಿನ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಉತ್ಪಾದನಾ ಘಟಕದಲ್ಲಿ ಇನ್ನೆಷ್ಟು ಕಾರ್ಮಿಕರು ಸಿಲುಕಿದ್ದಾರೆಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಬೆಂಕಿದುರಂತದಲ್ಲಿ ಸಾವನ್ನಪ್ಪಿದವರನ್ನು ಇರ್ಫಾನ್, ಸದ್ದಾಂ, ಶಾರೂಕ್ ಹಾಗೂ ಅಯೂಬ್ ಖಾನ್ ಎಂದು ಗುರುತಿಸಲಾಗಿದೆ. ಇತರ ಇಬ್ಬರ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಅವಶೇಷಗಳಡಿರುವ ಇತರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದೆ.

ಏರ್-ಕೂಲರ್ ಉತ್ಪಾದನಾ ಘಟಕದ ಮಾಲಕ ಪ್ರಮೋದ್‌ಕುಮಾರ್‌ರನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಕಮಿಶನರ್ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News