×
Ad

ಬಿಎಂಸಿ ಚುನಾವಣೆ: ಶಿವಸೇನೆಗೆ ಸ್ಪಷ್ಟ ಮುನ್ನಡೆ, ಬಿಜೆಪಿ, ಕಾಂಗ್ರೆಸ್‌ಗೆ ಹಿನ್ನಡೆ

Update: 2017-02-23 15:15 IST

ಮುಂಬೈ, ಫೆ.23: ಆಡಳಿತಾರೂಢ ಬಿಜೆಪಿ ಹಾಗೂ ಶಿವಸೇನೆಗೆ ಪ್ರತಿಷ್ಠೆಯ ಕಣವಾಗಿದ್ದ ದೇಶದ ಶ್ರೀಮಂತ ಮಹಾನಗರ ಪಾಲಿಕೆ ಮುಂಬೈನ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಚುನಾವಣೆಯಲ್ಲಿ ಶಿವಸೇನೆ ಸ್ಪಷ್ಟ ಮುನ್ನಡೆಯಲ್ಲಿದ್ದು, ಬಿಜೆಪಿ ಎರಡನೆ ಹಾಗೂ ಕಾಂಗ್ರೆಸ್ ಮೂರನೆ ಸ್ಥಾನದಲ್ಲಿವೆ.

25 ವರ್ಷಗಳ ಬಳಿಕ ಬಿಜೆಪಿ ಬೆಂಬಲವಿಲ್ಲದೇ ಏಕಾಂಗಿಯಾಗಿ ಚುನಾವಣೆಯ ಕಣಕ್ಕಿಳಿದಿದ್ದ ಶಿವಸೇನೆ ಅಧಿಕಾರವನ್ನು ಉಳಿಸಿಕೊಳ್ಳುವುದು ಖಚಿತವಾಗಿದೆ. ಶಿವಸೇನೆ 1997ರಿಂದ ಬಿಎಂಸಿಯಲ್ಲಿ ಅಧಿಕಾರದಲ್ಲಿದೆ.

  ಈ ಫಲಿತಾಂಶ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ-ಶಿವಸೇನೆ ಮೈತ್ರಿಕೂಟದ ಸರಕಾರಕ್ಕೆ ನೇರ ಪರಿಣಾಮಬೀರುವ ಸಾಧ್ಯತೆಯಿದೆ. ಮತ ಎಣಿಕೆ ಗುರುವಾರ ಬೆಳಗ್ಗೆ ಆರಂಭವಾಗಿದ್ದು, ಆಡಳಿತರೂಢ ಶಿವಸೇನೆ 85 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ತಕ್ಷಣ ಪಕ್ಷದ ಕಾರ್ಯಕರ್ತರು ದಾದರ್‌ನಲ್ಲಿರುವ ಶಿವಸೇನಾ ಭವನದ ಎದುರು ಜಮಾಯಿಸಿ ಸಂಭ್ರಮಾಚರಣೆ ಆಚರಿಸತೊಡಗಿದರು.

ಬಿಎಂಸಿ ಹಾಗೂ ಮಹಾರಾಷ್ಟ್ರದ ಇತರ 9 ಮುನ್ಸಿಪಲ್ ಕಾರ್ಪೊರೇಶನ್‌ಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಳ್ಳಲಿದೆ. ಒಟ್ಟು 227 ವಾರ್ಡ್‌ಗಳ ಪೈಕಿ ಶಿವಸೇನೆ 93ರಲ್ಲಿ ಮುನ್ನಡೆಯಲ್ಲಿದ್ದು, ಶಿವಸೇನೆಗೆ ತೀವ್ರ ಸ್ಪರ್ಧೆಯೊಡ್ಡುತ್ತಿರುವ ಬಿಜೆಪಿ 77 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 22 ವಾರ್ಡ್‌ಗಳಲ್ಲಿ ಮುನ್ನಡೆಯಲ್ಲಿದೆ.

ಶಿವಸೇನೆ ಪಕ್ಷ ಕಳೆದ 20 ವರ್ಷಗಳಿಂದ ಬಿಎಂಸಿಯಲ್ಲಿ ಅಧಿಕಾರದಲ್ಲಿದೆ. 1992 ರಿಂದ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದ ಶಿವಸೇನೆ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಈ ಬಾರಿಯ ಬಿಎಂಸಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿರುವ ಉದ್ಧವ್ ಠಾಕ್ರೆ ನೇತೃತ್ವವ ಶಿವಸೇನೆ ಹಾಗೂ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಂದಾಳತ್ವದ ಬಿಜೆಪಿಯ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಮಂಗಳವಾರ ನಡೆದ ಬಿಎಂಸಿ ಚುನಾವಣೆಯಲ್ಲಿ 55 ಶೇ.ರಷ್ಟು ಮತದಾನ ನಡೆದಿದ್ದು, 25 ವರ್ಷಗಳ ಬಳಿಕ ಗರಿಷ್ಠ ಪ್ರಮಾಣದ ಮತದಾನವಾಗಿದೆ. ಬಿಎಂಸಿಯ ವಾರ್ಷಿಕ ಬಜೆಟ್ 37,000 ಕೋಟಿ. ರೂ. ಆಗಿದ್ದು, ಇದು ಕೆಲವು ರಾಜ್ಯಗಳ ಬಜೆಟ್‌ಗಿಂತಲೂ ಹೆಚ್ಚಿನದ್ದಾಗಿದೆ. ಬಿಎಂಸಿಯಲ್ಲಿ ಒಟ್ಟು 227 ಸೀಟುಗಳಿದ್ದು, ಬಹುಮತಕ್ಕೆ 114 ಸೀಟುಗಳ ಅಗತ್ಯವಿದೆ.

ಪುಣೆ, ಸೋಲಾಪುರದಲ್ಲಿ ಬಿಜೆಪಿಗೆ ಮುನ್ನಡೆ: ಕಳೆದ 10 ವರ್ಷಗಳಿಂದ ಪುಣೆ ಹಾಗೂ ಪಿಂಪ್ರಿ-ಚಿಂಚ್ವಾಡ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಅಧಿಕಾರದಲ್ಲಿದ್ದ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ತೀವ್ರ ಹಿನ್ನಡೆಯಾಗಿದೆ. ಈ ಎರಡು ಪಾಲಿಕೆಗಳಲ್ಲಿ ಆಡಳಿತ ಪಕ್ಷ ಬಿಜೆಪಿ ಮುನ್ನಡೆಯಲ್ಲಿದೆ.
ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ತವರುಪಟ್ಟಣ ಸೋಲಾಪುರದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದ್ದು, ಇಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಸೋಲಾಪುರದಲ್ಲಿ 24 ಸೀಟುಗಳಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ ಕ್ಲೀನ್‌ಸ್ವೀಪ್‌ನತ್ತ ಮುನ್ನುಗ್ಗುತ್ತಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News