ಫೂಲನ್ ದೇವಿಯ ತಾಯಿಗೆ ಊಟಕ್ಕೂ ಗತಿಯಿಲ್ಲ !
ಜಲಾಯುಂ(ಉ.ಪ್ರ),ಫೆ.23: ಜಿಲ್ಲೆಯ ಶೇಖಪುರಾ ಗುಧಾ ಗ್ರಾಮದ ನಿವಾಸಿ ಮುಲಾ ದೇವಿ ಇತ್ತೀಚಿನ ವರ್ಷಗಳಲ್ಲಿ ಸೂಟು-ಬೂಟು ಧರಿಸಿದವರನ್ನು ಭೇಟಿಯಾಗಿಲ್ಲ. ತನ್ನನ್ನು ಯಾರಾದರೂ ಭೇಟಿಯಾದರೆ ಹಲವಾರು ದಿನಗಳಿಂದ ತಾನು ಊಟ ಮಾಡಿಲ್ಲ ಎಂದು ಗೋಳು ತೋಡಿಕೊಳ್ಳುತ್ತಾಳೆ. ಅವರೇನಾದರೂ ಹಣ ನೀಡಿದರೆ ಬಟ್ಟೆ ಮತ್ತು ಪ್ಲಾಸ್ಟಿಕ್ ಚೂರುಗಳಿಂದ ಅಲಂಕೃತ ತನ್ನ ಗುಡಿಸಲಿಗೆ ತೆರಳಿ ಪುಟ್ಟ ತಗಡಿನ ಡಬ್ಬಿಯಲ್ಲಿ ಆ ಹಣವನ್ನು ಹಾಕಿಡುತ್ತಾಳೆ. ಒಂದು ಕಾಲದಲ್ಲಿ ಈ ಮೌಲಾ ದೇವಿ ಮನೆಯಿಂದ ಹೊರಬಿದ್ದರೆ ಎಷ್ಟೋ ಜನರು ಅಡ್ಡಬಿದ್ದು ನಮಸ್ಕರಿಸುತ್ತಿದ್ದರು. ಆಕೆಯ ಮನೆಗೆ ಅತಿಥಿಗಳು ನಿರಂತರವಾಗಿ ಭೇಟಿ ನೀಡುತ್ತಿದ್ದರು. ಆಹಾರ,ಬಟ್ಟೆಬರೆ ಎಲ್ಲವೂ ಸಮೃದ್ಧವಾಗಿತ್ತು. ಈಗಾಕೆಯ ಬಳಿ ಉಳಿದಿರುವುದು ಹಳೆಯ ಚಿಂದಿ ಬಟ್ಟೆಗಳು ಮತ್ತು ನೆನಪುಗಳು ಮಾತ್ರ.
ಅಂದ ಹಾಗೆ ಈ ಮುಲಾ ದೇವಿ ಒಂದು ಕಾಲದ ‘ಚಂಬಲ್ ರಾಣಿ ’ಫೂಲನ್ ದೇವಿಯ ತಾಯಿ ! ಈ ದಿನಗಳಲ್ಲಿ ಆಕೆ ಫೂಲನ್ ತಾಯಿಯೆಂದು ಯಾರೂ ನಂಬುತ್ತಿಲ್ಲ.
ಕಳೆದ ವರ್ಷ ಪ್ರದೇಶದಲ್ಲಿ ಬರ ಪರಿಣಾಮ ಕುರಿತು ಅಧ್ಯಯನ ನಡೆಸುತ್ತಿದ್ದ ಬುಂದೇಲಖಂಡ್ ದಲಿತ ಅಧಿಕಾರ್ ಮಂಚ್ ಹೆಸರಿನ ಎನ್‌ಜಿಒದ ಕಾರ್ಯಕರ್ತರು ಹಸಿವಿನಿಂದ ಸಾವಿನ ಅಂಚಿನಲ್ಲಿದ್ದ ಮುಲಾ ದೇವಿ ಮತ್ತು ಆಕೆಯ ಕಿರಿಯ ಪುತ್ರಿ ರಾಮಕಲಿಯನ್ನು ಪತ್ತೆ ಹಚ್ಚಿದ್ದರು.
ನಾವು ಅವರನ್ನು ಭೇಟಿಯಾಗಿದ್ದಾಗ ಅವರ ಬಳಿ 2-3 ಈರುಳ್ಳಿ ಮತ್ತು ಒಂದು ಮುಷ್ಟಿಯಷ್ಟು ಹಿಟ್ಟು ಉಳಿದುಕೊಂಡಿತ್ತು. ಹಸಿವೆಯಿಂದ ಕಂಗೆಟ್ಟಿದ್ದ ಅವರು ಮಲಗಿದಲ್ಲಿಂದ ಏಳಲೂ ಸಾಧ್ಯವಾಗದಷ್ಟು ನಿತ್ರಾಣರಾಗಿದ್ದರು. ಈ ಕುಟುಂಬದ ಸದಸ್ಯರೋರ್ವರು 17 ವರ್ಷಗಳ ಹಿಂದೆ ಲೋಕಸಭೆಯ ಸದಸ್ಯರಾಗಿದ್ದರು ಎನ್ನುವದನ್ನು ನಂಬಲೂ ಸಾಧ್ಯವಾಗುತ್ತಿಲ್ಲ ಎಂದು ಮಂಚ್‌ನ ಸಂಚಾಲಕ ಕುಲದೀಪ್ ಬೌಧ್ ಹೇಳಿದರು.
ಗ್ರಾಮದ ಹೊರವಲಯಲ್ಲಿ ಮುಲಾ ದೇವಿ ಹೊಂದಿದ್ದ, ಸರಳ ಹಳ್ಳಿಹೆಣ್ಣು ‘ಢಕಾಯಿತ ರಾಣಿ ಫೂಲನ್ ’ ಆಗಿ ರೂಪುಗೊಳ್ಳಲು ಕಾರಣವಾಗಿದ್ದ ಮೂರು ಬಿಘಾ ಜಮೀನು ಕೂಡ ಈ ಕುಟುಂಬದ ಕೈತಪ್ಪಿ ಹೋಗಿದೆ. ರಾಮಕಲಿಗೆ ಅದೃಷ್ಟ ಚೆನ್ನಾಗಿದ್ದ ದಿನ ನರೇಗಾ ಯೋಜನೆಯಡಿ ಕೆಲಸ ಸಿಗುತ್ತದೆ. ಇದರಿಂದ ತಿಂಗಳಿಗೆ ಅಬ್ಬಬ್ಬಾ ಎಂದರೆ 300-400 ರೂ.ಕೂಲಿ ದೊರೆಯುತ್ತಿದ್ದು, ಸಂಸಾರ ಇಷ್ಟರಲ್ಲೇ ನಡೆಯಬೇಕಿದೆ. ಹೀಗಾಗಿ ಹೆಚ್ಚಿನ ದಿನಗಳಲ್ಲಿ ಉಪವಾಸ ಅನಿವಾರ್ಯವಾಗಿದೆ.
ಚುನಾವಣೆಗಳ ಸಂದರ್ಭ ಮಾತ್ರ ರಾಜಕಾರಣಿಗಳು ಈ ಮನೆಯ ಬಾಗಿಲಿಗೆ ಬರುತ್ತಾರೆ. ವೇದಿಕೆಯಲ್ಲಿ ಅವರನ್ನು ಪ್ರದರ್ಶಿಸಿ ಫೂಲನ್ ದೇವಿಯ ಹೆಸರಿನಲ್ಲಿ ಮತಗಳನ್ನು ಬೇಡುತ್ತಾರೆ. ಇದಕ್ಕಾಗಿ ಮುಲಾ ದೇವಿಗೆ 200 ರೂ.ಸಿಗುತ್ತದೆ. ಆದರೆ ಇತರ ಅಭ್ಯರ್ಥಿಗಳ ಬೆದರಿಕೆಯಿಂದಾಗಿ ಮುಲಾ ದೇವಿ ಈಗ ಅದಕ್ಕೂ ಹೋಗುತ್ತಿಲ್ಲ.
1993ರಲ್ಲಿ ಶರಣಾಗತಳಾಗಿದ್ದ ಫೂಲನ್ ವಿರುದ್ಧ ಹಲವಾರು ಕೊಲೆಗಳು ಸೇರಿದಂತೆ 48 ಪ್ರಕರಣಗಳು ದಾಖಲಾಗಿದ್ದವು. ಬಳಿಕ ಮುಲಾಯಂ ಸಿಂಗ್ ಸರಕಾರವು ಈ ಎಲ್ಲ ಪ್ರಕರಣಗಳನ್ನು ಹಿಂದೆಗೆದುಕೊಂಡಿತ್ತು. 1994ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದ ಫೂಲನ್ 1996 ಮತ್ತು 1999ರಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದಳು. 2001,ಜು.25ರಂದು ದಿಲ್ಲಿಯ ಅಧಿಕೃತ ನಿವಾಸದ ಬಳಿ ಆಕೆಯನ್ನು ಹತ್ಯೆ ಮಾಡಲಾಗಿತ್ತು.
ಫೂಲನ್ ಹತ್ಯೆ ಬಳಿಕ ಕುಟುಂಬದ ಭೂಮಿಯನ್ನು ಕಿತ್ತುಕೊಳ್ಳಲಾಗಿತ್ತು. ಫೂಲನ್ ಗಾಝಿಯಾಬಾದ್‌ನಲ್ಲಿ ಕೃಷಿಭೂಮಿ, ಮನೆಗಳು ಮತ್ತು ಪೆಟ್ರೋಲ್ ಪಂಪ್ ಹೊಂದಿದ್ದಳಾದರೂ ಅವೂ ಈ ನತದೃಷ್ಟ ಕುಟುಂಬಕ್ಕೆ ದಕ್ಕಲಿಲ್ಲ. ರಾಮಕಲಿಗೆ ಪಕ್ಷದ ಚುನಾವಣಾ ಟಿಕೆಟ್ ನಿಡುವುದಾಗಿ ಫೂಲನ್ ಹತ್ಯೆಯಾದಾಗ ಮುಲಾಯಂ ಭರವಸೆ ನೀಡಿದ್ದರಾದರೂ ಕಾಲದೊಂದಿಗೆ ಫೂಲನ್ ಸುದ್ದಿಗಳು ಪತ್ರಿಕೆಗಳಲ್ಲಿ ಬರುವುದು ನಿಂತು ಹೋದಾಗ ಮುಲಾಯಂ ಸುಲಭವಾಗಿಯೇ ತನ್ನ ಭರವಸೆಯನ್ನು ಮರೆತುಬಿಟ್ಟಿದ್ದರು.
( ಮುಲಾ ದೇವಿಯ ‘ಅರಮನೆ ’)