ಸೌಹಾರ್ದಕ್ಕೆ ಬೆಂಕಿ ಹಚ್ಚಲು ಸಂಚು

Update: 2017-02-23 18:40 GMT

ಇದು ಹೀಗೇ ಮುಂದುವರಿದರೆ, ಮುಂದೊಂದು ದಿನ ಒಂದು ರಾಜ್ಯದ ಮುಖ್ಯಮಂತ್ರಿ, ಮತ್ತೊಂದು ರಾಜ್ಯಕ್ಕೆ ಕಾಲಿಡುವುದಕ್ಕೆ ‘ಪಾಸ್‌ಪೋರ್ಟ್’ ‘ವೀಸಾ’ಗಳನ್ನು ಮಾಡಿಸಿಕೊಳ್ಳುವ ದಿನ ಬರಲಿದೆ. ಕಾಂಗ್ರೆಸ್ ಪಕ್ಷದ ನೇತೃತ್ವವುಳ್ಳ ರಾಜ್ಯದ ಮುಖ್ಯಮಂತ್ರಿ ಬಿಜೆಪಿ ನೇತೃತ್ವ ಉಳ್ಳ ರಾಜ್ಯಕ್ಕೆ ಕಾಲಿಡಬೇಕಾದರೆ ಅನುಮತಿ ಕೇಳಬೇಕಾಗಬಹುದು. ಅಥವಾ ಆಯಾ ಪಕ್ಷದ ಕಾರ್ಯಕರ್ತರ ಒಪ್ಪಿಗೆ ಅನಿವಾರ್ಯವಾಗಬಹುದು. ಈಗಾಗಲೇ ಸೌಹಾರ್ದ ರ್ಯಾಲಿಗೆಂದು ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುವುದನ್ನು ತಡೆಯುವುದಕ್ಕೆ ಸಂಘಪರಿವಾರ ಸಂಚು ಹೂಡಿದ ಬೆನ್ನಿಗೇ ಅತ್ತ ಕೇರಳದ ಕಮ್ಯುನಿಷ್ಟರೂ ತಮ್ಮ ಬೆದರಿಕೆಯ ಬಾಣ ಬಿಟ್ಟಿದ್ದಾರೆ.

‘‘ಒಂದು ವೇಳೆ ಪಿಣರಾಯ್ ಕಾರ್ಯಕ್ರಮಕ್ಕೆ ಯಾವುದೇ ತಡೆಯನ್ನುಂಟು ಮಾಡಿದ್ದೇ ಆದರೆ, ಯಾವುದೇ ಬಿಜೆಪಿ ನಾಯಕರನ್ನು ಕೇರಳಕ್ಕೆ ಕಾಲಿಡಲು ಬಿಡುವುದಿಲ್ಲ’’ ಎಂದು. ಇಂತಹದೊಂದು ಪ್ರತಿಭಟನೆಯನ್ನು ಸಂಘಪರಿವಾರ ಕಾರ್ಯಕರ್ತರು ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಮಾಡಬೇಕಾಗಿತ್ತು. ಈ ದೇಶದ ಸೈನಿಕರ ರುಂಡಗಳನ್ನು ಕತ್ತರಿಸಿ ಅದನ್ನು ಅಪಹರಿಸಿದ ಪಾಕಿಸ್ತಾನದ ವಿರುದ್ಧ ಕೆಂಡ ಕಾರುತ್ತಲೇ ಬಿಜೆಪಿ ಕಳೆದ ಸಾರ್ವತ್ರಿಕ ಚುನಾವಣೆಯನ್ನು ಗೆದ್ದಿತು. ಆದರೆ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ಗೆ ಆಹ್ವಾನವನ್ನು ನೀಡಿಯೇ ಬಿಟ್ಟರು. ಒಬ್ಬ ಪ್ರಧಾನಿಯಾಗಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿರ್ಧಾರ ಮುತ್ಸದ್ದಿತನದಿಂದ ಕೂಡಿದ್ದು. ಆದರೆ, ಇಂದು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ನಮ್ಮದೇ ದೇಶದ ಒಬ್ಬ ಜನಪರ ನಾಯಕನನ್ನು ನಮ್ಮದೇ ದೇಶದೊಳಗಿನ ಕಾರ್ಯಕ್ರಮಕ್ಕೆ ಭಾಗವಹಿಸಲು ಬಿಡುವುದಿಲ್ಲ ಎಂದು ಸಂಘಪರಿವಾರ ಹಟ ಹಿಡಿಯುವಾಗ, ನವಾಝ್ ಶರೀಫ್ ಗೆ ಮೋದಿ ನೀಡಿರುವ ಆಹ್ವಾನ ಪ್ರಶ್ನಾರ್ಹವಾಗುತ್ತದೆ.

ನವಾಝ್ ಶರೀಫ್‌ರ ಆಗಮನವನ್ನು ಸಹಿಸುವ ಇವರಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಮ್ಮದೇ ನಾಯಕನ ಆಗಮನ ಯಾಕೆ ಇಷ್ಟವಾಗುವುದಿಲ್ಲ? ಈಗಾಗಲೇ ಪಾಕಿಸ್ತಾನಕ್ಕೆ ಭಾರತದ ರಹಸ್ಯಗಳನ್ನು ಮಾರಿದ ಆರೋಪ ಬಿಜೆಪಿಯ ಮುಖಂಡರ ಮೇಲಿದೆ. ಆದುದರಿಂದ ನವಾಝ್ ಶರೀಫ್ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಇವರು ವಹಿಸಿದ ವೌನವನ್ನು ನಾವು ಅನುಮಾನದಿಂದ ನೋಡಬೇಕಾಗುತ್ತದೆ.

ಬಿಜೆಪಿ ಮತ್ತು ಸಂಘಪರಿವಾರ ಕಾರ್ಯಕರ್ತರು ಅಪಾಯವನ್ನು ತಾವಾಗಿಯೇ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ಆರೆಸ್ಸೆಸ್ ಅದೆಷ್ಟು ಬಾಲ ಬಿಚ್ಚಿದರೂ, ಅದರ ಬಾಲವನ್ನು ಅಲ್ಲಿನ ದಲಿತ ಮತ್ತು ಎಡಪಂಥೀಯ ನಾಯಕರು ಕತ್ತರಿಸುತ್ತಲೇ ಬಂದಿದ್ದಾರೆ. ಈಗ ಮಂಗಳೂರಿನಲ್ಲಿ ಸಂಘಪರಿವಾರ ಬಲವಾಗಿದೆ ಎಂಬ ಧೈರ್ಯದಲ್ಲಿ ಕೇರಳದ ಮುಖ್ಯಮಂತ್ರಿಯ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದರೆ, ನಾಳೆ ಕೇರಳಕ್ಕೆ ಬಿಜೆಪಿ ನಾಯಕರು ಕಾಲಿಟ್ಟಾಗ ಸಂಭವಿಸುವ ಅನಾಹುತಗಳಿಗೆ ಸ್ವಯಂ ಜವಾಬ್ದಾರರಾಗಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಎರಡೆರಡು ಬಾರಿ ಕೇರಳಕ್ಕೆ ಕಾಲಿಟ್ಟದ್ದನ್ನು ನೆನಪಿಸಬೇಕು. ಮುಂದೊಂದು ದಿನ ಪ್ರಧಾನಿಯವರೇ ಕೇರಳಕ್ಕೆ ಆಗಮಿಸುವುದು ಕಷ್ಟವಾಗಿ ಬಿಡಬಹುದು.

ಈಗಾಗಲೇ ಮಂಗಳೂರಿನ ಸಂಸದರು ಕೇರಳದ ಸಭೆಯೊಂದರಲ್ಲಿ ಉದ್ವಿಗ್ನಕಾರಿ ಭಾಷಣವನ್ನು ಮಾಡಿ ಬಂದಿದ್ದಾರೆ. ಕೇರಳದಲ್ಲಿ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಮ್ಯುನಿಸ್ಟ್ ಕಾರ್ಯಕರ್ತರನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ ಎಂದಿದ್ದಾರೆ. ಇದರ ಜೊತೆಗೆ ಮಂಗಳೂರಿಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಮಂಗಳೂರಿನಲ್ಲೇ ನಿಂತು ಆಡಿದ್ದಾರೆ. ಇಷ್ಟೆಲ್ಲ ಅವಾಂತರಗಳನ್ನು ಮಾಡಿ, ಇದೀಗ ಒಬ್ಬ ಮುಖ್ಯಮಂತ್ರಿಯ ವಿರುದ್ಧವೇ ಕಾರ್ಯಕರ್ತರನ್ನು ಎತ್ತಿಕಟ್ಟಿರುವುದು ಬಿಜೆಪಿ ಮಾನಸಿಕವಾಗಿ ಸಂಪೂರ್ಣ ಸ್ಥಿಮಿತ ಕಳೆದುಕೊಂಡಿದೆಯೇನೋ ಎಂದು ಅನುಮಾನಿಸುವಂತೆ ಮಾಡಿದೆ.

 ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಕಾವಿ ಧರಿಸಿ, ಜಪಮಾಲೆ ಕೈಯಲ್ಲಿ ಹಿಡಿದು, ಶಾಂತಿ ಮಂತ್ರಗಳನ್ನು ಪಠಿಸುತ್ತಾ ಇಲ್ಲ. ಆರೆಸ್ಸೆಸ್‌ನ ಹಲವು ಶಾಖೆಗಳಲ್ಲಿ ಬಾಂಬು ತಯಾರಿ ನಡೆದಿರುವ ಆರೋಪಗಳಿವೆ. ಮಾರಕಾಸ್ತ್ರಗಳನ್ನೂ ಅವರ ಕಚೇರಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಬಾಂಬುಗಳನ್ನು ಸಾಗಿಸುತ್ತಿದ್ದಾಗ ಅವರ ಕಾರ್ಯಕರ್ತರು ಸ್ಫೋಟಗೊಂಡು ಮೃತಪಟ್ಟ ವರದಿಗಳನ್ನು ಆಗಾಗ ನಾವು ಮಾಧ್ಯಮಗಳಲ್ಲಿ ಓದಿದ್ದೇವೆ. ಆರೆಸ್ಸೆಸ್ ಶಾಖೆಗಳಲ್ಲಿ ಬಾಂಬು, ಮಾರಕಾಸ್ತ್ರಗಳನ್ನು ಯಾಕೆ ಸಂಗ್ರಹಿಸಿಡಲಾಗುತ್ತದೆ? ಪಾಕಿಸ್ತಾನದ ಉಗ್ರವಾದಿಗಳನ್ನು ಎದುರಿಸುವುದಕ್ಕಾಗಿಯೇ? ಅಥವಾ ಚೀನಾದ ಮೇಲೆ ದಾಳಿ ಮಾಡುವುದಕ್ಕಾಗಿಯೇ? ಆರೆಸ್ಸೆಸ್‌ನಲ್ಲಿರುವ ಬಹುತೇಕ ಕಾರ್ಯಕರ್ತರು ಗೂಂಡಾ ಪಟ್ಟಿಯಲ್ಲಿ ಸೇರಿದ್ದಾರೆ. ಅವರ ರಕ್ತದಾಹಕ್ಕೆ ಕಮ್ಯುನಿಸ್ಟರು ಮಾತ್ರವಲ್ಲ, ಮುಸ್ಲಿಮರೂ ಬಲಿಯಾಗಿದ್ದಾರೆ.

ಅಂದರೆ, ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಕತ್ತಿ, ಬಾಂಬುಗಳನ್ನು ಹಿಡಿದು ಓಡಾಡುವಾಗ ಉಳಿದವರೆಲ್ಲ ಶರಣಾಗಿ ಅವರಿಗೆ ತಮ್ಮ ಕತ್ತನ್ನು ಒಪ್ಪಿಸಬೇಕು ಎಂದು ಇವರು ನಿರೀಕ್ಷಿಸುತ್ತಿದ್ದಾರೆಯೇ? ಇಷ್ಟಕ್ಕೂ ಆರೆಸ್ಸೆಸ್ ಮತ್ತು ಸಂಘಪರಿವಾರ ಕೊಂದಿರುವುದಾದರೂ ಯಾರನ್ನು? ಹಿಂದೂಗಳನ್ನೇ. ಹಿಂದೂ ತಂದೆ ತಾಯಿಯಂದಿರ ಮಕ್ಕಳನ್ನೇ. ಬೇರೆ ಪಕ್ಷದಲ್ಲಿ ಕೆಲಸ ಮಾಡುವವರಾಗಿದ್ದರೆ, ಅವರು ಹಿಂದೂಗಳಾಗಿದ್ದರೂ ಕೊಲ್ಲುವುದಕ್ಕೆ ಅರ್ಹರಾಗಿ ಬಿಡುತ್ತಾರೆಯೇ? ಅಲ್ಲಿ ನಡೆಯುತ್ತಿರುವುದು ರಾಜಕೀಯ ಹಿಂಸಾಚಾರವೇ ಹೊರತು, ಧಾರ್ಮಿಕ ಹಿಂಸಾಚಾರವಲ್ಲ. ಅದೆಲ್ಲ ಪಕ್ಕಕ್ಕಿರಲಿ. ಇತ್ತೀಚೆಗೆ ಉಡುಪಿಯಲ್ಲಿ ದನದ ವ್ಯಾಪಾರಿಯೊಬ್ಬರನ್ನು ಇದೇ ಸಂಘಪರಿವಾರ ಬರ್ಬರವಾಗಿ ಥಳಿಸಿ ಕೊಂದು ಹಾಕಿತು. ಅವರು ಹಿಂದೂ ಧರ್ಮಕ್ಕೆ ಸೇರಿರಲಿಲ್ಲವೇ? ಹಾಗಾದರೆ ಹಿಂದೂಗಳ ಮೊತ್ತ ಮೊದಲ ಶತ್ರುವೇ ಸಂಘಪರಿವಾರ ಎಂದಾಗಲಿಲ್ಲವೇ? ಹಾಗಾದರೆ ನಿಷೇಧಿಸಬೇಕಾದುದು ಯಾರನ್ನು? ಪಿಣರಾಯಿ ಒಂದು ರಾಜ್ಯದ ಮುಖ್ಯಮಂತ್ರಿ. ಅವರನ್ನು ಒಂದು ಜಿಲ್ಲೆಗೆ ಕಾಲಿಡಬಾರದು ಎಂದು ಆಕ್ಷೇಪಿಸುವವರು ದೇಶದ ಪ್ರಜಾಸತ್ತೆಯ ಮೇಲೆ ನಂಬಿಕೆಯನ್ನೇ ಹೊಂದಿಲ್ಲ. ಗುಜರಾತ್‌ನಲ್ಲಿ ಸಾವಿರಾರು ಮುಸ್ಲಿಮರನ್ನು ಕೊಲ್ಲುವುದಕ್ಕೆ ಪರೋಕ್ಷ ಕಾರಣವಾದ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮ್ ರಾಷ್ಟ್ರಗಳಲ್ಲಿ ಸುತ್ತಾಡಿ ಬಂದರು. ಅವರನ್ನು ಅತ್ಯಂತ ಸ್ನೇಹಪೂರ್ವವಾಗಿ ಕೊಲ್ಲಿರಾಷ್ಟ್ರಗಳು ಸ್ವೀಕರಿಸಿದವು.

ಯಾಕೆಂದರೆ, ಮೋದಿ ಒಂದು ದೇಶದ ಪ್ರಧಾನಿಯಾಗಿ ಆಗಮಿಸಿದ್ದಾರೆ. ಅವರಿಗಿರುವ ರಾಜಕೀಯ ಪ್ರಬುದ್ಧತೆಯಲ್ಲಿ, ಒಂದು ಸಣ್ಣ ಅಂಶ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರಿಗಿದ್ದಿದ್ದರೆ ಇಂತಹದೊಂದು ಸನ್ನಿವೇಶವನ್ನು ಸೃಷ್ಟಿಸಿ ನಗೆಪಾಟಲಿಗೀಡಾಗುತ್ತಿರಲಿಲ್ಲ. ಅದೇನೇ ಇರಲಿ. ಶನಿವಾರ ನಡೆಯುವ ಸಮಾವೇಶದ ಸಂದರ್ಭದಲ್ಲಿ ಸಂಘಪರಿವಾರ ಸಣ್ಣ ದಾಂಧಲೆಯನ್ನು ನಡೆಸಿದರೂ ಗಲಭೆ ಸ್ಫೋಟಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಬಂದ್ ಘೋಷಿಸಿದ ಮತ್ತು ಅದನ್ನು ಬೆಂಬಲಿಸಿದ ಎಲ್ಲ ನಾಯಕರ ಮೇಲೆ ಪೊಲೀಸರು ಕಠಿಣಕ್ರಮ ತೆಗೆದುಕೊಂಡು ಅವರನ್ನು ಬಳ್ಳಾರಿ ಜೈಲಿಗೆ ತಳ್ಳದೇ ಇದ್ದರೆ, ಪೊಲೀಸ್ ಇಲಾಖೆಯೇ ಮಂಗಳೂರಿಗೆ ಬೆಂಕಿ ಹಚ್ಚಲು ಸಂಘಪರಿವಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಹಾಗೇನಾದರೂ ಸಂಭವಿಸಿದರೆ, ರಾಜ್ಯ ಸರಕಾರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಗೃಹ ಸಚಿವರು ಈ ಸಂದರ್ಭದಲ್ಲಾದರೂ ನಿದ್ದೆಯಿಂದ ಎಚ್ಚೆತ್ತು, ತನ್ನ ಅಸ್ತಿತ್ವವನ್ನು ಸಾಬೀತುಪಡಿಸಬೇಕಾಗಿದೆ. ಪಿಣರಾಯಿ ದಕ್ಷಿಣಕನ್ನಡಕ್ಕೆ ಆಗಮಿಸುವ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅದು ದಕ್ಷಿಣಕನ್ನಡದ ವರ್ಚಸ್ಸಿನ ಮೇಲೆ ತೀವ್ರ ಪರಿಣಾಮ ಬೀರುವುದಂತೂ ಖಂಡಿತ. ದಕ್ಷಿಣಕನ್ನಡದ ಹಿರಿಮೆ, ಗರಿಮೆಯನ್ನು ಕಾಯುವ ಹೊಣೆಗಾರಿಕೆಯೂ ಈ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿರುವ ವಿವಿಧ ಸಂಘಟನೆಗಳ ಮುಖಂಡರದ್ದಾಗಿದೆ. ಸಂಘಪರಿವಾರದ ಸಂಚನ್ನು ವಿಫಲಗೊಳಿಸಲು ಇಡೀ ದಕ್ಷಿಣಕನ್ನಡ ಜಿಲ್ಲೆಯೇ ಒಂದಾಗಿ ನಿಲ್ಲಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News