ಜೇನುನೊಣ ಹೂವಿನ ಮೇಲೆ ಕುಳಿತಾಗ ಪರಾಗಕಣ ಅದಕ್ಕೆ ಅಂಟಿಕೊಳ್ಳುವುದು ಹೇಗೆ?

Update: 2017-02-28 04:56 GMT

ಜೇನುನೊಣಗಳು ಪರಾಗವನ್ನು ಹೂವಿನಿಂದ ಹೂವಿಗೆ ಸಾಗಿಸಿ ಪರಾಗಸ್ಪರ್ಶ ಕ್ರಿಯೆಗೆ ನೆರವಾಗುತ್ತವೆ.ಈ ಪ್ರಕ್ರಿಯೆಯಲ್ಲಿ ಪರಾಗವು ಹಾರಿ ಜೇನುನೊಣದ ಕಾಲುಗಳಿಗೆ ಅಂಟಿಕೊಳ್ಳುತ್ತದೆ....ಹೇಗೆ?

ಇದು ಆಕಸ್ಮಿಕವಾಗಿ ಸಂಭವಿಸುವುದಲ್ಲ. ಜೇನುನೊಣ ತಾನಾಗಿಯೇ ಹೂವಿನ ಪರಾಗವನ್ನು ಸೋಕುವುದಿಲ್ಲ. ಅದು ಹೂವಿನ ಮಕರಂದವನ್ನು ಹೀರುವಾಗ ಹಾರಿ ಅದರ ಕಾಲುಗಳಿಗೆ ಅಂಟಿಕೊಳ್ಳುವ ಪರಾಗವು ಅದು ಇನ್ನೊಂದು ಹೂವಿನ ಮೇಲೆ ಕುಳಿತಾಗ ಕಾಲುಗಳಿಂದ ಉದುರುತ್ತದೆ.

ಹೂವಿನ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪರಾಗವು ಹೂವಿನ ಪುರುಷ ಭಾಗದಿಂದ ಬಿಡುಗಡೆಗೊಂಡ ಸೂಕ್ಷ್ಮಕಣಗಳನ್ನು ಹೊಂದಿದ್ದು, ಇಂತಹ ಪ್ರತಿಕಣವೂ ವೀರ್ಯಾಂಶವನ್ನು ಹೊಂದಿರುತ್ತದೆ. ಇದು ಹೂವಿನ ಅಂಡಾಣುವಿನೊಂದಿಗೆ ಮಿಳಿತಗೊಳ್ಳುತ್ತದೆ. ಇದೇ ಉದ್ದೇಶಕ್ಕೆ ಪರಾಗವು ಗಾಳಿ,ಕೀಟಗಳು,ಜೇನುನೊಣಗಳು ಇತ್ಯಾದಿಗಳ ಮೂಲಕ ಹೂವಿಂದ ಹೂವಿಗೆ ರವಾನೆಯಾಗುತ್ತಿರುತ್ತದೆ.

 ಶಲಾಕಾಗ್ರ,ಅಂಡಾಣು,ಹೂವು ಅಥವಾ ಗಿಡಕ್ಕೆ ಪರಾಗವು ವರ್ಗಾವಣೆಗೊಂಡು ಸಂತಾನೋತ್ಪತ್ತಿಗೆ ಅಥವಾ ಹೊಸ ಬೀಜದ ಸೃಷ್ಟಿಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆಯೇ ಪರಾಗಸ್ಪರ್. ಹೂವುಗಳು ಇದಕ್ಕಾಗಿ ಜೇನುನೊಣಗಳನ್ನು ಅವಲಂಬಿಸುತ್ತವೆ.

  ಜೇನುನೊಣ ತನ್ನ ಗೂಡಿನಿಂದ ಹೊರಬಿದ್ದ ಬಳಿಕ ಗಾಳಿಯಲ್ಲಿ ಹಾರಾಟದ ಸಂದರ್ಭ ಅದು ಧನಾತ್ಮಕ ವಿದ್ಯುದ್ದೀಕರಣ ಹೊಂದಿರುತ್ತದೆ. ವಿದ್ಯುತ್ ತಟಸ್ಥತೆಯನ್ನು ಹೊಂದಿರುವ ಪರಾಗಕೋಶದ ಬಳಿ ಜೇನುನೊಣ ಸುಳಿದಾಡಿದಾಗ ಅದರಿಂದಾಗಿ ಸೃಷ್ಟಿಯಾದ ವಿದ್ಯುತ್ ಕ್ಷೇತ್ರದಿಂದಾಗಿ ಹೂವಿನ ಕೆಲವು ಪರಾಗ ಕಣಗಳಲ್ಲಿ ವಿದ್ಯುತ್ ಸಂಚಾರ ವಾಗುತ್ತದೆ. ಹೀಗಾದಾಗ ಅವು ಜೇನುನೊಣದತ್ತ ಆಕರ್ಷಿತಗೊಂಡು ಹಾರಿ ಅದರ ಕಾಲುಗಳಿಗೆ ಅಂಟಿಕೊಳ್ಳುತ್ತವೆ.

ಪರಾಗವನ್ನು ಹೊತ್ತ ನೊಣ ಮಕರಂದ ಹೀರಲು ಇನ್ನೊಂದು ಹೂವಿನ ಮೇಲೆ ಕುಳಿತಾಗ ಅದರ ವಿದ್ಯುತ್ ಕ್ಷೇತ್ರವು ಶಲಾಕಾಗ್ರದಲ್ಲಿನ ಇಲೆಕ್ಟ್ರಾನ್‌ಗಳನ್ನು ಎಷ್ಟು ಸಾಧ್ಯವೋ ಅಷ್ಟು ಹತ್ತಿರಕ್ಕೆ ಸೆಳೆಯುತ್ತದೆ. ಇದರಿಂದಾಗಿ ಶಲಾಕಾಗ್ರದ ಮೇಲ್ಭಾಗದಲ್ಲಿ ಋಣ ವಿದ್ಯುತ್ ಸಂಚಾರವಾಗುತ್ತದೆ ಮತ್ತು ಜೇನುನೊಣದ ಕಾಲುಗಳಿಗೆ ಅಂಟಿಕೊಂಡಿರುವ ಪರಾಗಕಣಗಳು ಅದರಿಂದ ಆಕರ್ಷಿತಗೊಂಡು ನೊಣದ ಕಾಲುಗಳಿಂದ ಬೇರ್ಪಡುತ್ತವೆ ಮತ್ತು ಶಲಾಕಾಗ್ರದ ಮೇಲೆ ಸಂಗ್ರಹಗೊಂಡು ಪರಾಗಸ್ಪರ್ಶ ಕ್ರಿಯೆಗೆ ನಾಂದಿ ಹಾಡುತ್ತವೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News