ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ 100 ಮಿಲಿಯಕ್ಕೂ ಹೆಚ್ಚು

Update: 2017-03-05 17:08 GMT

ರೋಮ್, ಮಾ.5: ವಿಶ್ವದಾದ್ಯಂತ 100 ಮಿಲಿಯಕ್ಕೂ ಹೆಚ್ಚಿನ ಜನರು ಹಸಿವಿನಿಂದ ಬಳಲುತ್ತಿದ್ದು ಇವರಿಗೆ ಮಾನವೀಯ ನೆರವು ನೀಡದಿದ್ದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವವಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ವಿಶ್ವದಾದ್ಯಂತ 2016ರ ವೇಳೆ 102 ಮಿಲಿಯನ್ ಜನರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. 2015ರಲ್ಲಿ ಈ ಸಂಖ್ಯೆ 80 ಮಿಲಿಯನ್ ಆಗಿತ್ತು. ಇದರರ್ಥ ಇವರೆಲ್ಲಾ ಹಸಿವಿನಿಂದ ಬಳಲುವ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಖಾದ್ಯ ಮತ್ತು ಕೃಷಿ ಸಂಘಟನೆಯ ತುರ್ತು ವಿಭಾಗದ ನಿರ್ದೇಶಕ ಡೊಮೊನಿಕ್ ಬರ್ಗೀನ್ ತಿಳಿಸಿದ್ದಾರೆ.

ಯೆಮನ್, ದಕ್ಷಿಣ ಸುಡಾನ್, ನೈಜೀರಿಯಾ ಮತ್ತು ಸೊಮಾಲಿಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟು ಇದಕ್ಕೆ ಕಾರಣವಾಗಿದೆ. ಈ ದೇಶದಲ್ಲಿ ಸಂಘರ್ಷ ಮತ್ತು ಬರಪರಿಸ್ಥಿತಿಯ ಕಾರಣ ಆಹಾರ ಉತ್ಪಾದನೆ ಕುಂಠಿತವಾಗಿದೆ. ಮಾನವೀಯ ಸಹಕಾರದಿಂದ ಇದುವರೆಗೆ ಈ ದೇಶಗಳಲ್ಲಿ ಬಹಳಷ್ಟು ಮಂದಿ ಇನ್ನೂ ಬದುಕಿದ್ದಾರೆ, ಆದರೆ ಅವರ ಆಹಾರ ಭದ್ರತೆ ಸ್ಥಿತಿ ಮಾತ್ರ ಕ್ಷೀಣಿಸುತ್ತಾ ಸಾಗುತ್ತಿದೆ ಎಂದು ‘ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್’ ಗೆ ನೀಡಿದ ಸಂದರ್ಶನದಲ್ಲಿ ಬರ್ಗಿನ್ ಹೇಳಿದ್ದಾರೆ.

ಇಲ್ಲಿ ಜನರು ಹೈನುಗಾರಿಕೆ ಮತ್ತು ಕೃಷಿ ಕಾರ್ಯದಲ್ಲಿ ತೊಡಗುವ ಮೂಲಕ ತಮ್ಮ ಆಹಾರವನ್ನು ತಾವೇ ಉತ್ಪಾದಿಸುವ ನಿಟ್ಟಿನಲ್ಲಿ ನೆರವು ನೀಡಲು ಹೆಚ್ಚಿನ ನಿಧಿಯ ಅಗತ್ಯವಿದೆ ಎಂದವರು ತಿಳಿಸಿದ್ದಾರೆ. ವಿಮಾನದಲ್ಲಿ ಬರುವ ನಾವು ಅವರಿಗೆ ಆಹಾರದ ನೆರವು ನೀಡುವ ಮೂಲಕ ಅವರನ್ನು ಬದುಕುಳಿಯುವಂತೆ ಮಾಡುತ್ತೇವೆ. ಆದರೆ ಈ ಜನರ ಜೀವನಾಧಾರಕ್ಕೆ ನೆರವಾಗುವ ನಿಟ್ಟಿನಲ್ಲಿ ನಾವು ಸಾಕಷ್ಟು ವಿನಿಯೋಗಿಸುತ್ತಿಲ್ಲ . ಬರಗಾಲದ ದವಡೆಗೆ ಸಿಲುಕದಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಆದರೆ ಆಹಾರ ಅಭದ್ರತೆಯ ಅಪಾಯದಿಂದ ಅವರನ್ನು ಹೊರಸೆಳೆಯಲು ನಾವು ಸಾಕಷ್ಟು ಕಾರ್ಯ ಮಾಡಿಲ್ಲ ಎಂದವರು ಹೇಳಿದರು.

 ಸುಮಾರು 20 ಮಿಲಿಯನ್ ಜನರು(ರೊಮೇನಿಯಾ ಮತ್ತು ಫ್ಲೊರಿಡಾದ ಜನಸಂಖ್ಯೆಗಿಂತಲೂ ಅಧಿಕ) ನಾಲ್ಕು ಪ್ರತ್ಯೇಕ ಕ್ಷಾಮದ ಕಾರಣ ಹಸಿವಿನಿಂದ ಸಾವಿಗೀಡಾಗುವ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ ವರದಿಯಲ್ಲಿ ತಿಳಿಸಲಾಗಿದೆ. ಯೆಮನ್, ನೈಜೀರಿಯಾದ ಈಶಾನ್ಯ ಪ್ರದೇಶ ಮತ್ತು ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಮನೆಗಳನ್ನು ಧ್ವಂಸ ಮಾಡಿದ್ದು ಬೆಲೆಗಳು ಗಗನ ಮುಖಿಯಾಗಲು ಕಾರಣವಾಗಿದೆ. ಪೂರ್ವ ಆಫ್ರಿಕಾದಲ್ಲಿ ಉಂಟಾಗಿರುವ ಭೀಕರ ಕ್ಷಾಮದಿಂದ ಕೃಷಿ ಅರ್ಥವ್ಯವಸ್ಥೆಯು ಸಂಪೂರ್ಣ ನಾಶಗೊಂಡಿದೆ. 2013ರಿಂದಲೂ ಅಂತರ್ಯುದ್ಧದ ಕಾರಣದಿಂದ ನಲುಗಿಹೋಗಿರುವ ದಕ್ಷಿಣ ಸುಡಾನ್‌ನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಕ್ಷಾಮದ ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.

 ಒಂದೊಮ್ಮೆ ನೈಜೀರಿಯಾದ ‘ಆಹಾರ ಕೇಂದ್ರ’ ಎಂದೇ ಕರೆಯಲ್ಪಡುತ್ತಿದ್ದ ಈಶಾನ್ಯ ಪ್ರದೇಶದಲ್ಲಿ ಬೊಕೊ ಹರಾಮ್ ಉಗ್ರರು ನಡೆಸಿರುವ ದಂಗೆಯಿಂದಾಗಿ ಸುಮಾರು 1.8 ಮಿಲಿಯನ್ ಜನರು ತಮ್ಮ ಕೃಷಿ ಕಾರ್ಯಕ್ಕೆ ತಿಲಾಂಜಲಿ ನೀಡುವ ಪರಿಸ್ಥಿತಿ ಎದುರಾಗಿದೆ. ಉಗ್ರರ ವಶದಲ್ಲಿದ್ದ ಬಹುತೇಕ ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ನಿರಾಶ್ರಿತರಾಗಿರುವ ಸಾವಿರಾರು ಮಂದಿ ತಮ್ಮ ಗ್ರಾಮಕ್ಕೆ ಮರಳಿ ಕೃಷಿ ಕಾರ್ಯ ಮುಂದುವರಿಸುವ ವಿಶ್ವಾಸದಲ್ಲಿದ್ದರೂ, ಇಲ್ಲಿ ಭದ್ರತೆಯ ವಿಷಯ ಕಳವಳಕ್ಕೆ ಕಾರಣವಾಗಿದೆ.

ಮುಂಬರುವ ಬೇಸಾಯದ ಅವಧಿಯಲ್ಲಿ ನೈಜೀರಿಯಾದ ಸುಮಾರು 2 ಮಿಲಿಯನ್ ರೈತರಿಗೆ ಅಗತ್ಯವಿರುವ 20 ಮಿಲಿಯನ್ ಡಾಲರ್‌ನ ಮೂರನೆ ಒಂದಂಶದಷ್ಟು ನಿಧಿಯನ್ನು ಮುಂದಿನ ಎರಡು ವಾರಗಳ ಒಳಗೆ ಸಂಗ್ರಹಿಸುವ ವಿಶ್ವಾಸವಿದೆ ಎಂದು ಬರ್ಗಿನ್ ತಿಳಿಸಿದ್ದಾರೆ. ಸಿರಿಯಾದಲ್ಲಿ ಆಹಾರ ಉತ್ಪಾದನೆಯು ಸಾರ್ವಕಾಲಿಕ ಕನಿಷ್ಠ ಮೊತ್ತಕ್ಕೆ ತಲುಪಿದ್ದು ಸಾಕಷ್ಟು ನಿಧಿಯ ಕೊರತೆಯ ಕಾರಣ ಇಲ್ಲಿ ಉದ್ದೇಶಿತ ಸಹಾಯ ಒದಗಿಸಲು ಅಸಾಧ್ಯವಾಗಿದೆ . ಆಹಾರ ಒದಗಿಸುವ ಹಲವು ಕಾರ್ಯಕ್ರಮ ನಡೆಯುತ್ತಿದೆ. ಆದರೆ ತಮ್ಮ ಕಾರ್ಯ ಮುಂದುವರಿಸಲು ಬಯಸುವ ಕೃಷಿಕರಿಗೆ ನೆರವಾಗುವ ಯಾವುದೇ ಕಾರ್ಯ ಬಹುತೇಕ ನಡೆಯುತ್ತಿಲ್ಲ. ಬಡತನ, ಹಸಿವು, ಕಾಯಿಲೆ, ಆರೋಗ್ಯ ಸ್ಥಿತಿ ಕ್ಷೀಣಿಸುವುದು.. ಮತ್ತು ಯಾವುದೇ ಪ್ರತಿರೋಧಕ ಶಕ್ತಿಯಿಲ್ಲದ ಮಕ್ಕಳನ್ನು ಹೊಂದಿರುವುದು- ಇದು ಅಧಿಕ ಬಳಲುವಿಕೆ ಮತ್ತು ಸಾವಿಗೆ ಕಾರಣವಾಗುತ್ತವೆ. ಈ ಸೂಕ್ಷ್ಮ ವಿಷಯದ ಬಗ್ಗೆ ಜಾಗತಿಕ ಸಂಘಟನೆಗಳು ಗಮನ ಹರಿಸುವ ಅಗತ್ಯವಿದೆ.

 ಬೀಜಗಳನ್ನು , ರಸಗೊಬ್ಬರ, ಟ್ರಾಕ್ಟರ್‌ಗೆ ಇಂಧನ ಒದಗಿಸುವುದು- ಮುಂತಾದ ಸಕಾಲಿಕ ನೆರವಿನಿಂದ ಕೃಷಿಕರ ಬಾಳಿನಲ್ಲಿ ಮತ್ತೊಮ್ಮೆ ನಗು ಅರಳಿಸಲು ಸಾಧ್ಯ. ಬದುಕುಳಿಯುವುದೇ ಮುಖ್ಯವಲ್ಲ. ಅವರಿಗೆ ತಮ್ಮ ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಲು ಸಹಾಯ ಮಾಡಿ ಭವಿಷ್ಯವನ್ನು ಉಜ್ವಲಗೊಳಿಸುವ ಕಾರ್ಯ ಆಗಬೇಕಿದೆ ಎಂದು ಬರ್ಗಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News