ಹೃದಯಾಘಾತದ ಮುನ್ಸೂಚನೆ ಸ್ವತಃ ತಿಳಿಯುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಹತ್ತನೇ ತರಗತಿ ಬಾಲಕ

Update: 2017-03-06 07:27 GMT

ಹೊಸದಿಲ್ಲಿ, ಮಾ.6 : ದೇಹದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಸಂಭವಿಸುವ ಹೃದಯಾಘಾತದ ಮುನ್ಸೂಚನೆಯನ್ನು ಜನರು ಸ್ವತಃ ತಿಳಿಯಬಲ್ಲ ತಂತ್ರಜ್ಞಾನವನ್ನು ತಮಿಳುನಾಡಿನ 10ನೇ ತರಗತಿ ಬಾಲಕನೊಬ್ಬ ಅಭಿವೃದ್ಧಿ ಪಡಿಸಿದ್ದು ಈ ತಂತ್ರಜ್ಞಾನ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಜನರ ಪಾಲಿನ ಸಂಜೀವಿನಿಯಾಗುವ ಸಾಧ್ಯತೆಯಿದೆ.

ಸದ್ಯ ಈ ಪ್ರತಿಭಾನ್ವಿತ ಬಾಲಕ ಆಕಾಶ್ ಮನೋಜ್ 'ಇನ್ನೊವೇಶನ್ ಸ್ಕಾಲರ್ಸ್‌ ಇನ್-ರೆಸಿಡೆನ್ಸ್' ಕಾರ್ಯಕ್ರಮದನ್ವಯ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅತಿಥಿಯಾಗಿ ರಾಷ್ಟ್ರಪತಿ ಭವನದಲ್ಲಿ ವಾಸಿಸುತ್ತಿದ್ದಾನೆ. ಆತನ ಆವಿಷ್ಕಾರ ‘‘ನಾನ್-ಇನ್ವೇಸಿವ್ ಸೆಲ್ಫ್ ಡಯಾಗ್ನೋಸಿಸ್ ಆಫ್ ಸೈಲೆಂಟ್ ಹಾರ್ಟ್ ಅಟ್ಯಾಕ್’ ಗುರುತಿಸಿ ಆತನಿಗೆ ರಾಷ್ಟ್ರಪತಿಗಳೊಂದಿಗೆ ಉಳಿದುಕೊಳ್ಳುವ ಭಾಗ್ಯ ದೊರೆತಿದೆ.

‘‘ಯಾವುದೇ ಮುನ್ಸೂಚನೆ ನೀಡದೇ ಇತ್ತೀಚೆಗೆ ಹಲವಾರು ಹೃದಯಾಘಾತಗಳು ಸಂಭವಿಸುತ್ತಿವೆ ಹಾಗೂ ಇವು ಮಾರಣಾಂತಿಕವಾಗಿವೆ. ಇಂತಹ ಸಂದರ್ಭಗಳಲ್ಲಿ ಜನರು ಆರೋಗ್ಯವಂತರಾಗಿರುವಂತೆಯೇ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಆರೋಗ್ಯವಂತರಾಗಿದ್ದ ನನ್ನ ಅಜ್ಜ ಕೂಡ ಒಂದು ದಿನ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದರು’’ ಎಂದು ರಾಷ್ಟ್ರಪತಿ ಭವನದಲ್ಲಿ ನಡೆದ ಫೆಸ್ಟಿವಲ್ ಆಫ್ ಇನ್ನೊವೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮನೋಜ್ ಹೇಳಿದ್ದಾನೆ.

ಈ ಘಟನೆಯೇ ಆತ ತನ್ನ ಈ ವಿಶಿಷ್ಟ ಸಾಧನವನ್ನು ಅಭಿವೃದ್ಧಿ ಪಡಿಸಲು ಪ್ರೇರಣೆಯಾಗಿದೆ. ಚರ್ಮದಲ್ಲಿ ಯಾವುದೇ ತೂತು ಮಾಡದೆ ಎಫ್‌ಎಬಿಪಿ3-ಹೃದಯಾಘಾತದ ರಕ್ತ ಬಯೋಮಾರ್ಕರ್ ಅನ್ನು ಈ ತಂತ್ರಜ್ಞಾನದ ಮೂಲಕ ಸತತ ಪರಿಶೀಲಿಸಲಾಗುತ್ತದೆ.

ಮನೋಜ್ ಅಭಿವೃದ್ಧಿ ಪಡಿಸಿರುವ ಸಾಧನದಲ್ಲಿ ಅತಿನೇರಳೆ ವಿಕಿರಣಗಳನ್ನು ಎಫ್‌ಎಬಿಪಿ3 ಸಂಗ್ರಹವಾಗಿರುವ ಚರ್ಮದ ಮೂಲಕ ಹಾಯಿಸಿದಾಗ ಅಲ್ಲಿರುವ ಪ್ರೊಟೀನ್ ಪ್ರಮಾಣವನ್ನು ಸೆನ್ಸರ್ ಗುರುತಿಸುತ್ತದೆ.

ಮನೋಜ್ ಗೆ ಮುಂದೆ ಹೃದ್ರೋಗ ತಜ್ಞನಾಗುವ ಗುರಿಯಿದ್ದು ತಾನು ಅಭಿವೃದ್ಧಿಪಡಿಸಿದ ಸಾಧನದ ಪ್ರಯೋಜನವನ್ನು ಗ್ರಾಮೀಣ ಪ್ರದೇಶಗಳ ಜನರು ಪಡೆಯಬೇಕೆನ್ನುವುದು ಆತನ ಇಚ್ಛೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News