ಮಿನರಲ್ ವಾಟರ್‌ಗೆ ಹೆಚ್ಚಿನ ಬೆಲೆ ಕೊಡಬೇಕಿಲ್ಲ: ಪಾಸ್ವಾನ್

Update: 2017-03-08 18:03 GMT

 ಹೊಸದಿಲ್ಲಿ,ಮಾ.8: ವಿಮಾನ ನಿಲ್ದಾಣಗಳು,ಸಿನಿಮಾ ಮಂದಿರಗಳು ಮತ್ತು ಮಾಲ್‌ಗಳಲ್ಲಿ ಹೆಚ್ಚಿನ ಬೆಲೆಗಳಲ್ಲಿ ಮಿನರಲ್ ವಾಟರ್ ಬಾಟ್ಲಿಗಳ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರವು ಮುಂದಾಗಿದೆ. ಮಿನರಲ್ ವಾಟರ್ ಬಾಟ್ಲಿಗಳನ್ನು ಭಾರತದಾದ್ಯಂತ ಏಕರೂಪ ಬೆಲೆಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ವಿವಿಧ ಗರಿಷ್ಠ ಮಾರಾಟ ಬೆಲೆ(ಎಂಆರ್‌ಪಿ)ಗಳಲ್ಲಿ ಖನಿಜ ಜಲವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿಗಳಿಂದ ವಿವರಣೆಯನ್ನು ಕೇಳಿರುವ ಸಚಿವರು, ಹೊಟೆಲ್‌ಗಳು,ಮಾಲ್‌ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ನೀರಿನ ಮಾರಾಟ ಬೆಲೆ ಏಕರೂಪದ್ದಾಗಿರಬೇಕು ಎಂದು ಹೇಳಿದ್ದಾರೆ.

ಕೋಕಾ ಕೋಲಾದಂತಹ ಮೃದುಪಾನೀಯಗಳನ್ನು ಚಿಲ್ಲರೆಯಾಗಿ ಹೆಚ್ಚಿನ ಬೆಲೆಗಳಲ್ಲಿ ಮಾರಾಟ ಮಡುತ್ತಿರುವುದು ಕೂಡ ಸರಕಾರದ ಗಮನಕ್ಕೆ ಬಂದಿದೆ ಎಂದಿರುವ ಅವರು, ಎಂಆರ್‌ಪಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಆದರೂ ಈ ಪ್ರವೃತ್ತಿ ಮುಂದುವರಿದಿದೆ. ಇದನ್ನು ನಿಲ್ಲಿಸುವ ಅಗತ್ಯವಿದೆ ಎಂದಿದ್ದಾರೆ.

ಕಾನೂನು ಉಲ್ಲಂಘಿಸಿದವರಿಗೆ ಒಂದು ಲ.ರೂ ವರೆಗೆ ದಂಡ ಅಥವಾ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News