ಮ್ಯಾನ್ ಹೋಲ್ ಹುತಾತ್ಮರನ್ನು ಗೌರವಿಸಲು ಕಲಿಯೋಣ
ಕರ್ನಾಟಕದ ಘನತೆ ಮಂಗಳವಾರ ಮ್ಯಾನ್‌ಹೋಲ್‌ನ ಚರಂಡಿ ನೀರಿನಲ್ಲಿ ಹೆಣವಾಗಿ ತೇಲುತ್ತಿತ್ತು ಮತ್ತು ಆ ಹೆಣಕ್ಕೆ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿ ನಮ್ಮ ಸರಕಾರ ಕೈ ತೊಳೆದುಕೊಳ್ಳ ಹೊರಟಿದೆ. ಕರ್ನಾಟಕದ ವರ್ಚಸ್ಸಿನ ಮೇಲೆ ಮೆತ್ತಿಕೊಂಡ ಆ ಕಳಂಕವನ್ನು ಕೇವಲ 10 ಲಕ್ಷ ರೂಪಾಯಿಯಲ್ಲಿ ಉಜ್ಜಿ ತೆಗೆಯುವುದು ಸಾಧ್ಯವಾಗುವ ಮಾತೇ? ‘ನಾಗರಿಕ’ರೆನಿಸಿಕೊಂಡ ನಾವು ಕಾಲಿಡಲೂ ಹೇಸುವ ಚರಂಡಿಯೊಳಗಿನ ನೀರಿಗೆ ಮೂವರು ಮನುಷ್ಯರನ್ನು ಆತನ ಜಾತಿ, ಬಡತನ ಇವುಗಳನ್ನು ಮುಂದಿಟ್ಟುಕೊಂಡು ತಳ್ಳಲಾಗಿದೆ. ಇದನ್ನು ಅವಘಡ ಎಂದು ಕರೆಯುವುದಕ್ಕಿಂದ ಕಗ್ಗೊಲೆ ಎನ್ನುವುದೇ ಹೆಚ್ಚು ಸರಿ.
ನ್ಯಾಯಾಲಯದ ತೀರ್ಪಿನ ಉಲ್ಲಂಘನೆಗಿಂತಲೂ ಮನುಷ್ಯ ಘನತೆಯ ಉಲ್ಲಂಘನೆಯೇ ಇಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಇದೀಗ ಸರಕಾರ ತನಿಖೆ ನಡೆಸುವ, ಅಪರಾಧಿಗಳಿಗೆ ಶಿಕ್ಷೆ ನೀಡುವ ಮಾತುಗಳನ್ನಾಡುತ್ತಿದೆ. ಆದರೆ ಇಂತಹ ಮಾತುಗಳನ್ನಾಡುತ್ತಾ ಬಂದಿರುವುದು ಇಂದು ನಿನ್ನೆಯಲ್ಲ. ಪ್ರತೀ ವರ್ಷ ಇಂತಹ ದುರಂತಗಳು ರಾಜ್ಯದಲ್ಲಿ ಎರಡು ಅಥವಾ ಮೂರಾದರೂ ನಡೆಯುತ್ತವೆ ಮತ್ತು ಸರಕಾರ ಪರಿಹಾರ, ತನಿಖೆ ಎಂಬ ಮಾತುಗಳನ್ನಾಡಿ ಕಳಂಕವನ್ನು ತೊಳೆದುಕೊಳ್ಳುವ ಯತ್ನ ಮಾಡುತ್ತದೆ. ಇಷ್ಟಕ್ಕೂ ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಮಾಧ್ಯಮಗಳಲ್ಲಿ ಚರ್ಚೆಗೆ ಬರಬೇಕಾದರೆ ಚರಂಡಿಯೊಳಗೆ ಹೆಣವಾಗುವುದು ಅತ್ಯಗತ್ಯ. ಇಲ್ಲವಾದರೆ ಈ ಕೃತ್ಯ ಚರ್ಚೆಗೆ ಅನರ್ಹವಾದ ವಸ್ತು. ಇದೇ ಸಂದರ್ಭದಲ್ಲಿ ಈ ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡುತ್ತಾ, ನೂರಾರು ಕಾಯಿಲೆಗಳನ್ನು ಮೈಗೆ ಅಂಟಿಸಿಕೊಂಡು, ಚರ್ಮರೋಗಗಳನ್ನು ಉಡುಗೊರೆಯಾಗಿ ಪಡೆದುಕೊಂಡು ಅಕಾಲದಲ್ಲಿ ಮರಣವಪ್ಪುವ ತರುಣರ ಬಗ್ಗೆ ಯಾರೂ ಮಾತನಾಡುವವರಿಲ್ಲ.
ದಿನನಿತ್ಯ ಸಣ್ಣ ವೇತನಕ್ಕೆ ಈ ಮರಣ ಗುಂಡಿಯಲ್ಲಿ ಹೊಲಸುಗಳನ್ನು ಕೈಯಲ್ಲಿ ಶುಚಿಗೊಳಿಸುತ್ತಾ ಪ್ರತಿ ದಿನ ಬದುಕಿಯೂ ಸತ್ತಂತಿರುವ ಇವರ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಒಂದು ರೀತಿಯಲ್ಲಿ ಬೆಕ್ಕು ಕಣ್ಣು ಮುಚ್ಚಿ ‘ಜಗತ್ತೆಲ್ಲ ಕತ್ತಲೆಯಾಗಿದೆ’ ಎಂದು ಹೇಳಿಕೊಂಡಂತೆ. ಮ್ಯಾನ್‌ಹೋಲ್‌ನಲ್ಲಿ ಯಾರೂ ಸಾಯದೇ ಇದ್ದರೆ, ಇಂತಹ ಹೀನ ಕೆಲಸಗಳು ತನ್ನ ಒಡಲಲ್ಲಿ ನಡೆಯುತ್ತಲೇ ಇಲ್ಲ ಎಂದು ಸರಕಾರ ನಿರ್ಧಾರಕ್ಕೆ ಬರುತ್ತದೆ. ಅವರು ಬಾಚುತ್ತಿರುವುದು ‘ನಾಗರಿಕ’ರೆಂದು ಕರೆಸಿಕೊಂಡಿರುವ ಜನರ ಹೊಲಸಾಗಿರುವುದರಿಂದ ಸಜ್ಜನರ ಬಾಯಿ ಈ ಕೃತ್ಯದ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಹೊಲಿದಿರುತ್ತದೆ. ನಗರಗಳು ದಟ್ಟವಾಗುತ್ತಾ ಹೋದ ಹಾಗೆಯೇ ಮ್ಯಾನ್‌ಹೋಲ್ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಕೋಲ್ಕತಾ, ದಿಲ್ಲಿ, ಮುಂಬೈಯಂತಹ ನಗರಗಳಲ್ಲಿ ಈ ಮ್ಯಾನ್‌ಹೋಲ್ ಕಾರ್ಮಿಕರಿಗೆ ನೀಡುವ ವೇತನ ತೀರಾ ಸಣ್ಣದು.
200 ರೂಪಾಯಿಗೆ ಇವರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಈ ಮರಣದ ಹೊಲಸು ಗುಂಡಿಗೆ ಇಳಿಯಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಹೊಲಸು ಗುಂಡಿಗೆ ಇಳಿಯುವಾಗ ಅವರಿಗೆ ಯಾವುದೇ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲಾಗುವುದಿಲ್ಲ. ವಿಪರ್ಯಾಸವೆಂದರೆ, ಕೈಗವಚವನ್ನೂ ಧರಿಸದೇ ಮ್ಯಾನ್‌ಹೋಲ್‌ಗಳಿಗೆ ಇಳಿಸುವ ಉದಾಹರಣೆಗಳಿವೆ. ಇಂತಹ ಕೆಲಸವನ್ನು ನಿರ್ವಹಿಸುವವರ ಸರಾಸರಿ ಆಯುಸ್ಸು ಬರೇ 40 ವರ್ಷ. ಆನಂತರ ಬದುಕಿದರೂ ಸಕಲ ರೋಗಗಳ ಜೊತೆಗೆ ಅವರು ಬದುಕಬೇಕಾಗುತ್ತದೆ. ಟಿಬಿ, ಕ್ಷಯದಂತಹ ಮಾರಕ ರೋಗಗಳು ಇವರನ್ನು ಬಹುಬೇಗ ಆಶ್ರಯಿಸಿಕೊಳ್ಳುತ್ತದೆ. ಹಾಗೆಯೇ ಚರ್ಮರೋಗಗಳಿಂದ ಶಾಶ್ವತವಾಗಿ ಅಂಗವಿಕಲರಾಗುವ ಸಾಧ್ಯತೆಗಳೂ ಹೆಚ್ಚು. ಹೊಲಸು ಚರಂಡಿಗೆ ಇಳಿಯಬೇಕಾಗಿರುವುದರಿಂದ, ವಾಸನೆ ಸಹಿಸುವುದಕ್ಕಾಗಿ ಮದ್ಯ ಸೇವಿಸುವುದು ಇವರಿಗೆ ಅನಿವಾರ್ಯ.
ಆ ಹೊಲಸನ್ನು ಮರೆಯುವುದಕ್ಕಾಗಿಯೂ ಅವರು ಮದ್ಯವನ್ನೇ ಆಶ್ರಯಿಸಿಕೊಳ್ಳಬೇಕು. ಹೀಗೆ ಮದ್ಯ ಚಟಗಳಿಗೂ ಬಲಿಯಾಗಿ ಇವರು ತಮ್ಮ ಆರೋಗ್ಯ, ಹಣ ಎರಡನ್ನ್ನೂ ಕಳೆದುಕೊಳ್ಳುತ್ತಾರೆ. ಎಲ್ಲಕ್ಕಿಂತಲೂ ದೊಡ್ಡ ದುರಂತವೆಂದರೆ, ಸಾಮಾಜಿಕವಾಗಿ ಇವರು ತಮ್ಮ ವ್ಯಕ್ತಿತ್ವ, ಘನತೆಯನ್ನೇ ಕಳೆದುಕೊಂಡಿರುತ್ತಾರೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರನ್ನು ಉನ್ನತ ಸ್ಥಾನಕ್ಕೇರಿಸುವ ಪರ್ಯಾಯ ಅವಕಾಶವೂ ಅವರಿಗಿಲ್ಲ. ಅಸ್ಪಶ್ಯರಂತೆ ಅವರು ಸಮಾಜದಿಂದ ಹೊರಗೇ ಬದುಕಬೇಕಾಗುತ್ತದೆ. ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮನುಷ್ಯರೆಂದು ಸಮಾಜ ಸ್ವೀಕರಿಸಿದ್ದೇ ಇಲ್ಲ. ಇಂದು ಶುಚಿತ್ವದ ಕುರಿತು ದೇಶಾದ್ಯಂತ ಆಂದೋಲನ ನಡೆಯುತ್ತಿದೆ. ಅದಕ್ಕಾಗಿ ಕೋಟಿಗಟ್ಟಲೆ ಹಣವನ್ನು ಸುರಿಯಲಾಗುತ್ತಿದೆ. ಆದರೆ ಈ ಹಣ, ಯಾರು ಶುಚಿತ್ವದ ಕೆಲಸದಲ್ಲಿ ನೇರವಾಗಿ ಭಾಗಿಯಾಗುತ್ತಾರೋ ಅವರಿಗೆ ತಲುಪುತ್ತಿಲ್ಲ.
ಬದಲಿಗೆ ಅಧಿಕಾರಿಗಳು, ಜಾಹೀರಾತುದಾರರು, ಗುತ್ತಿಗೆದಾರರು ಹಣವನ್ನು ಲಪಟಾಯಿಸುತ್ತಿದ್ದಾರೆ. ತಮ್ಮ ಬದುಕನ್ನೇ ಬಲಿಕೊಟ್ಟು ಈ ನಾಡನ್ನು ಶುಚಿಯಾಗಿ, ಆರೋಗ್ಯಪೂರ್ಣವಾಗಿ ಕಾಪಾಡುತ್ತಿರುವ ಈ ಯೋಧರಿಗೆ ಸಿಗುವುದು ಒಂದು ದಿನದ ಊಟದ ಹಣ ಮಾತ್ರ. ಅದೂ ಆರೋಗ್ಯ ಇರುವವರೆಗೆ. ಆ ಬಳಿಕ ಇವರನ್ನು ಗಮನಿಸುವವರೂ ಇಲ್ಲ. ಇಂದು ನಾವು ಎಲ್ಲ ಕೆಲಸ ಕಾರ್ಯಗಳಿಗೂ ಯಂತ್ರಗಳನ್ನು ಬಳಸುತ್ತಿದ್ದೇವೆ. ಆದರೆ ಯಾಕೆ ಈ ಮ್ಯಾನ್‌ಹೋಲ್‌ಗಳ ಶುಚೀಕರಣಕ್ಕೆ ಯಂತ್ರಗಳನ್ನು ಬಳಸುವಲ್ಲಿ ವಿಫಲವಾಗಿದ್ದೇವೆ? ಈಗಾಗಲೇ ಚೀನಾ ಸೇರಿದಂತೆ ಹಲವು ದೇಶಗಳು ನಗರ ಶುಚೀಕರಣಕ್ಕೆ ಯಂತ್ರಗಳನ್ನೇ ನಂಬಿಕೊಂಡಿವೆ. ಆದರೆ ಭಾರತದಲ್ಲಿ ಯಂತ್ರ ದುಬಾರಿಯಾದುದು. ಮನುಷ್ಯನ ಜೀವ ಅಗ್ಗವಾದುದು. ಈ ದೇಶದಲ್ಲಿ ದಲಿತ ವರ್ಗಕ್ಕೆ ಮೋಕ್ಷ ಕಲ್ಪಿಸುವುದಕ್ಕಾಗಿಯೇ ಇಂತಹ ಕೆಲಸಗಳನ್ನು ನೀಡಲಾಗಿದೆ ಎಂದು ನಮ್ಮ ಪ್ರಧಾನಿಯವರೂ ನಂಬಿರುವಾಗ, ಮನುಷ್ಯನ ಘನತೆ ಮ್ಯಾನ್‌ಹೋಲ್‌ನಲ್ಲಿ ಹೆಣವಾಗಿ ತೇಲದೆ ಇನ್ನೇನಾದೀತು?
ಇರಲಿ. ಮ್ಯಾನ್‌ಹೋಲ್‌ಗಳಲ್ಲಿ ಮನುಷ್ಯರನ್ನು ಇಳಿಸುವ ಕೃತ್ಯಗಳನ್ನು ಸದ್ಯದಲ್ಲಂತೂ ಸರಕಾರಕ್ಕೆ ತಡೆಯುವುದಕ್ಕೆ ಸಾಧ್ಯವಿಲ್ಲ. ಆದುದರಿಂದ, ನಮ್ಮ ನಾಡನ್ನು, ಸಮಾಜವನ್ನು ರಕ್ಷಿಸುವುದಕ್ಕಾಗಿ ಗೊತ್ತಿದ್ದೂ ಮರಣಗುಂಡಿಗೆ ಇಳಿಯುವ ಈ ಯೋಧರ ಸೇವೆ, ತ್ಯಾಗವನ್ನಾದರೂ ಸರಕಾರ ಗೌರವಿಸಲು ಕಲಿಯಬೇಕಾಗಿದೆ. ಮುಖ್ಯವಾಗಿ ಇವರಿಗೆ ನೀಡುವ ವೇತನಗಳು ಗರಿಷ್ಠ ಪ್ರಮಾಣದಲ್ಲಿರಬೇಕು ಮಾತ್ರವಲ್ಲ, ಒಂದು ವೇಳೆ ಮ್ಯಾನ್‌ಹೋಲ್‌ನಲ್ಲಿ ಹುತಾತ್ಮರಾದರೆ ಅವರ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಸರಕಾರ ಹೊತ್ತುಕೊಳ್ಳಬೇಕು; ಜೊತೆಗೆ ಒಬ್ಬ ಸದಸ್ಯನಿಗೆ ಸರಕಾರಿ ಕೆಲಸವನ್ನು ನೀಡಬೇಕು. ಇಷ್ಟೇ ಅಲ್ಲ, ಮ್ಯಾನ್‌ಹೋಲ್‌ನಲ್ಲಿ ಹುತಾತ್ಮನಾಗುವ ಕಾರ್ಮಿಕನಿಗೂ, ಗಡಿಯಲ್ಲಿ ಶತ್ರುವಿನ ಜೊತೆಗೆ ಹೋರಾಡುತ್ತಾ ಹುತಾತ್ಮನಾಗುವ ಸೈನಿಕನಿಗೂ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರೂ ನಾಡಿಗಾಗಿಯೇ ಪ್ರಾಣ ಕೊಟ್ಟವರು.
ಆದುದರಿಂದ ಅವರನ್ನು ಅಧಿಕೃತವಾಗಿ ಹುತಾತ್ಮರು ಎಂದು ಘೋಷಿಸಬೇಕು ಮತ್ತು ಸೈನಿಕರಿಗೆ, ಹುತಾತ್ಮ ಪೊಲೀಸರಿಗೆ, ಹಿರಿಯ ರಾಜಕಾರಣಿಗಳಿಗೆ ಹೇಗೆ ಪೊಲೀಸ್ ಗೌರವ ರಕ್ಷೆಯೊಂದಿಗೆ ವಿದಾಯ ಹೇಳಲಾಗುತ್ತದೆಯೋ, ಅದೇ ರೀತಿಯಲ್ಲಿ ಮ್ಯಾನ್‌ಹೋಲ್ ಹುತಾತ್ಮರಿಗೂ ವಿದಾಯ ಹೇಳಬೇಕು. ಹೇಗೆ ಪೊಲೀಸರಿಗೆ, ಸೈನಿಕರಿಗೆ ಶೌರ್ಯ ಪದಕಗಳನ್ನು ನೀಡಲಾಗುತ್ತದೆಯೋ, ಈ ಸಮಾಜದ ಶುಚಿತ್ವಕ್ಕಾಗಿ ಪ್ರಾಣ ಕೊಟ್ಟ ಈ ಯೋಧರ ಕುಟುಂಬಕ್ಕೂ ಅಂತಹ ಪದಕಗಳನ್ನು ನೀಡಬೇಕು. ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ತಮ್ಮ ಪಾಲಕರನ್ನು ನೆನೆದು ಅವರ ಮಕ್ಕಳು ಅಸಹ್ಯ, ಕೀಳರಿಮೆ ಪಟ್ಟುಕೊಳ್ಳುವಂತಾಗದೆ, ಹೆಮ್ಮೆ ಪಟ್ಟುಕೊಳ್ಳುವಂತಾಗಬೇಕು. ಅಂತಹದೊಂದು ಮನಸ್ಥಿತಿಯನ್ನು, ವಾತಾವರಣವನ್ನು ನಿರ್ಮಾಣ ಮಾಡುವುದು ಸರಕಾರದ ಮತ್ತು ಸಮಾಜದ ಕರ್ತವ್ಯ. ಆ ಮೂಲಕ ನಮ್ಮನ್ನು ನಾವು ‘ಮನುಷ್ಯರು’ ಎಂದು ಜಗತ್ತಿಗೆ ಸಾಬೀತು ಪಡಿಸಬೇಕಾಗಿದೆ.