ಮಣಿಪುರ: ಕೇವಲ 90 ಮತ ಪಡೆದ ಇರೋಮ್ ಶರ್ಮಿಳಾ !

Update: 2017-03-11 06:51 GMT

 ಇಂಫಾಲ್,ಮಾ.11: ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಥೌಬಾಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಒಕ್ರಂ ಇಬೋಬಿ ಸಿಂಗ್ ವಿರುದ್ಧ ಕಣಕ್ಕಿಳಿದು ಸುದ್ದಿ ಮಾಡಿದ್ದ ಮಾನವ ಹಕ್ಕುಗಳ ಕಾರ್ಯಕರ್ತೆ ಇರೋಮ್ ಶರ್ಮಿಳಾ ಅವರು ಹೀನಾಯ ಸೋಲನ್ನಪಿದ್ದು, ಅವರಿಗೆ ಕೇವಲ 90 ಮತಗಳು ಬಂದಿವೆ. ಇಬೋಬಿ ಸಿಂಗ್ 18,649 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರೆ,ಅವರ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಎಲ್. ಬಸಂತ ಅವರಿಗೆ 8,179 ಮತಗಳು ಬಿದ್ದಿವೆ.

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ) ಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ 16 ವರ್ಷಗಳ ಕಾಲ ನಿರಂತರ ನಿರಶನ ನಡೆಸಿದ್ದ ಶರ್ಮಿಳಾ ಕಳೆದ ವರ್ಷ ತನ್ನ ಸತ್ಯಾಗ್ರಹವನನು ಕೈಬಿಟ್ಟಿದ್ದರು. ಅಫ್‌ಸ್ಪಾ ವಿರುದ್ಧ ರಾಜಕೀಯವಾಗಿ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದ ಅವರು ತನ್ನದೇ ಆದ ನೂತನ ರಾಜಕೀಯ ಪಕ್ಷ ಪೀಪಲ್ಸ್ ರಿಸರ್ಜನ್ಸ್ ಆ್ಯಂಡ್ ಜಸ್ಟೀಸ್ ಅಲಯನ್ಸ್(ಪಿಆರ್‌ಜೆಎ) ಅನ್ನು ಹುಟ್ಟುಹಾಕಿದ್ದರು.

ಶರ್ಮಿಳಾ ಖುರೈ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದಾರಾದರೂ ಅಲ್ಲಿಯೂ ತೀರ ಹಿಂದುಳಿದಿದ್ದಾರೆ. ಆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಎನ್.ಬಿ.ಸಿಂಗ್ ಮುನ್ನಡೆಯಲ್ಲಿದ್ದಾರೆ.

ಚುನಾವಣೆಗೆ ಮುನ್ನ ಪಕ್ಷಕ್ಕೆ ನಿಧಿ ಸಂಗ್ರಹಿಸಲು ಪಿಆರ್‌ಜೆಎ ಆನ್‌ಲೈನ್ ಅಭಿಯಾನ ನಡೆಸಿತ್ತು. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಆಪ್ ನಾಯಕರು ಅಭಿಯಾನವನ್ನು ಬೆಂಬಲಿಸಿ ಹಣವನ್ನು ದೇಣಿಗೆಯಾಗಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News