ಪಂಜಾಬ್ ನಲ್ಲಿ ಆಪ್ ಮುಗ್ಗರಿಸಲು ಕಾರಣವಾದ 5 ಅಂಶಗಳು

Update: 2017-03-11 12:54 GMT

ಪಂಜಾಬ್‌ನಲ್ಲಿ ಯಶಸ್ಸು ಸಾಧಿಸುವ ಆಮ್ ಆದ್ಮಿ ಪಾರ್ಟಿ(ಆಪ್)ಯ ಬಯಕೆ ಈಡೇರಿಲ್ಲ. ಅಲ್ಲಿ ಅಧಿಕಾರದ ಗದ್ದುಗೆಯನ್ನೇರಲು ಸಜ್ಜಾಗಿರುವ ಕಾಂಗ್ರೆಸ್ 77 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಕೇವಲ 20 ಸ್ಥಾನಗಳಲ್ಲಿ ಗೆದ್ದಿರುವ ಆಪ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ದಿಲ್ಲಿಯಿಂದಲೇ ಪಂಜಾಬ್‌ನಲ್ಲಿ ಪಕ್ಷದ ಪ್ರಚಾರ ಕಾರ್ಯವನ್ನು ನಿಯಂತ್ರಿಸುತ್ತಿದ್ದ ನಾಯಕತ್ವವು ರಾಷ್ಟ್ರ ರಾಜಧಾನಿಯಿಂದ ಹೊರಗೆ ತನ್ನ ಛಾಪು ಮೂಡಿಸಲು ಪಕ್ಷವು ಹೊಂದಿದ್ದ ಬೃಹತ್ ಅವಕಾಶವನ್ನು ಹಾಳು ಮಾಡಿದಂತಿದೆ.

ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಪೋಷಿಸಿಕೊಂಡು ಬರುತ್ತಿರುವ ಮತ್ತು ಅವುಗಳನ್ನು ಈಡೇರಿಸಿಕೊಳ್ಳುವ ಅವಸರದಲ್ಲಿರುವ ಆಪ್ ಪಂಜಾಬ್‌ನಲ್ಲಿ ಮಾಡಿದ ತಪ್ಪುಗಳು ಅದರ ಪಾಲಿಗೆ ತುಂಬ ದುಬಾರಿಯಾಗಿ ಪರಿಣಮಿಸಿವೆ.

ಆಪ್ ಸೋಲಿಗೆ ಇಲ್ಲಿವೆ ಐದು ಕಾರಣಗಳು

ಹೊರಗಿನವರು ಎಂಬ ಹಣೆಪಟ್ಟಿ: ತನ್ನ ಪ್ರಾದೇಶಿಕ ನಾಯಕರ ದೂರುಗಳನ್ನು ಬಗೆಹರಿಸಲು ಆಪ್ ನಾಯಕತ್ವ ತಲೆ ಕೆಡಿಸಿಕೊಂಡಿರಲಿಲ್ಲ. ದಿಲ್ಲಿಯಲ್ಲಿನ ಆಪ್ ನಾಯಕರು ಪಕ್ಷದ ಪಂಜಾಬ್ ಸಂಚಾಲಕ ಸುಚಾ ಸಿಂಗ್ ಛೊತ್ತೆಪುರ್ ಅವರನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಉಚ್ಚಾಟಿಸಿದ್ದರು. ಪಕ್ಷದ ಹೈಕಮಾಂಡ್ ಕೇಂದ್ರ ನಾಯಕರಾದ ಸಂಜಯ ಸಿಂಗ್ ಮತ್ತು ದುರ್ಗೇಶ ಪಾಠಕ್ ಅವರನ್ನು ಪಕ್ಷದ ರಾಜ್ಯ ಘಟಕದ ಮೇಲೆ ಹೇರಿದ್ದರ ವಿರುದ್ಧ ಛೊತ್ತೆಪುರ್ ಮತ್ತು ಅವರ ಬೆಂಬಲಿಗರು ದೂರಿಕೊಂಡಿದ್ದರು.

ಈ ಇಬ್ಬರು ಸೇರಿಕೊಂಡು ಹೊರಗಿನವರನ್ನು ರಾಜ್ಯ ಘಟಕದ ಮೇಲೆ ಹೇರುತ್ತಿದ್ದಾರೆ ಎಂದು ಅವರು ಆಪಾದಿಸಿದ್ದರು. ಆಪ್‌ನ ಪ್ರಮುಖ ನಾಯಕರಾಧ ಮತ್ತು ಚುನಾವಣೆಯಲ್ಲಿ ‘ಸಿಖ್ ಮುಖಗಳು ’ಆಗಿದ್ದ ಎಚ್.ಎಸ್.ಫೂಲ್ಕಾ ಮತ್ತು ಜರ್ನೈಲ್ ಸಿಂಗ್ ಇಬ್ಬರೂ ಪಂಜಾಬ್‌ನವರಾಗಿರದೆ ದಿಲ್ಲಿಯವರಾಗಿದ್ದರು. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟ ತಮ್ಮ ಚುನಾವಣಾ ಪ್ರಚಾರದಲ್ಲಿ ಆಪ್ ವಿರುದ್ಧ ‘ಹೊರಗಿನವರು ’ಎಂಬ ಹಣೆಪಟ್ಟಿಯನ್ನು ಧಾರಾಳವಾಗಿ ಬಳಸಿಕೊಂಡಿದ್ದವು.

ಸ್ಥಳೀಯ ನಾಯಕತ್ವಕ್ಕೆ ಅಗೌರವ: ದಿಲ್ಲಿಯ ಆಪ್ ನಾಯಕರ ತಿರಸ್ಕಾರಕ್ಕೆ ಗುರಿ ಯಾಗಿದ್ದವರು ಛೊತ್ತೆಪುರ್ ಮತ್ತು ಅವರ ಬೆಂಬಲಿಗರು ಮಾತ್ರವಲ್ಲ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್‌ನಿಂದ ಆಯ್ಕೆಯಾಗಿದ್ದ ಪಕ್ಷದ ನಾಲ್ವರು ಸಂಸದರ ಪೈಕಿ ಧರ್ಮವೀರ ಗಾಂಧಿ (ಪಟಿಯಾಲಾ) ಮತ್ತು ಹರಿಂದರ್ ಸಿಂಗ್ ಖಾಲ್ಸಾ (ಫತೇಗಡ ಸಾಹಿಬ್) ಅವರನ್ನು ಕ್ಷುಲ್ಲಕ ಭಿನ್ನಾಬಿಪ್ರಾಯಗಳಿಂದಾಗಿ ಆಪ್ ಪಕ್ಷದಿಂದ ಅಮಾನತುಗೊಳಿಸಿತ್ತು. ಅವರು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆಪ್ ಆರೋಪಿಸಿದ್ದರೆ, ಕೇಂದ್ರ ನಾಯಕತ್ವವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ ಎದು ಅವರು ಪ್ರತ್ಯಾರೋಪಿಸಿದ್ದರು. ಕಾಂಗ್ರೆಸ್ ಪಕ್ಷವು ಅಮರಿಂದರ್ ಸಿಂಗ ಅವರ ನೇತೃತ್ವದ ತನ್ನ ಸ್ಥಳೀಯ ನಾಯಕತ್ವವನ್ನು ಸಂಪೂರ್ಣವಾಗಿ ಬೆಂಬಲಿಸಿ ಸಂಪೂರ್ಣ ಲಾಭವನ್ನು ಪಡೆದುಕೊಂಡಿದೆ.

ಮಾಲ್ವಾದ ಮೇಲೆ ಅತಿಯಾದ ಗಮನ: 69 ವಿಧಾನಸಭಾ ಕ್ಷೇತ್ರಗಳನ್ನೊಳಗೊಂ ಡಿರುವ ಮತ್ತು ಪಂಜಾಬ್‌ನಲ್ಲಿ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕವಾಗಿರುವ ಮಾಲ್ವಾ ಪ್ರದೇಶಕ್ಕೆ ಅತಿಯಾದ ಗಮನವನ್ನು ನೀಡಿದ್ದ ಆಪ್, ಒಟ್ಟು 48 (ಶೇ.40) ಸ್ಥಾನಗಳನ್ನು ಹೊಂದಿರುವ ಮಾಝಾ ಮತ್ತು ದೋಬಾ ಪ್ರದೇಶಗಳನ್ನು ಕಡೆಗಣಿಸಿತ್ತು. ಇದು ಪಕ್ಷದ ಸ್ಥಾನಗಳಿಕೆಯ ಮೇಲೆ ಪ್ರಭಾವ ಬೀರಿದೆ.

ಅಂತಃಕಲಹ: 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆದುಕೊಂಡಿದ್ದ ಆಪ್ 13 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2017ರ ಚುನಾವಣೆಗಾಗಿ ಆಪ್ ಆಗಿನಿಂದಲೇ ಪ್ರಚಾರ ಅಭಿಯಾನವನ್ನು ಆರಂಭಿಸಿದ್ದು, ಹೊಸ ಪಕ್ಷದಲ್ಲಿ ನಂಬಿಕೆ ಯಿರಿಸಲು ಪಂಜಾಬ್ ಕೂಡ ಒಲವು ತೋರಿಸಿತ್ತು. ಆದರೆ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷದಲ್ಲಿ ಅಂತಃಕಲಹಗಳು ಭುಗಿಲ್ಲೆದ್ದಿದ್ದವು.

ಸಿಧು ಜೊತೆ ಮೈತ್ರಿ ವೈಫಲ್ಯ: ಪಕ್ಷಕ್ಕೆ ಸೇರುವಂತೆ ಬಿಜೆಪಿ ನಾಯಕ ನವಜೋತ ಸಿಂಗ್ ಸಿಧು ಅವರನ್ನು ಓಲೈಸಿದ್ದ ಆಪ್ ಬಳಿಕ ಅವರನ್ನು ದೂರ ಮಾಡಿತ್ತು. ಸಿಧು ಜೊತೆಗೆ ಶಾಸಕರಾದ ನವಜೋತ್ ಕೌರ್ ಮತ್ತು ಪರ್ಗತ್ ಸಿಂಗ್ ಅವರನ್ನೂ ಆಪ್ ಕಳೆದುಕೊಂಡಿತ್ತು. ಸಿಧು ಜೊತೆ ಮೈತ್ರಿ ಸಾಧ್ಯವಾಗಿದ್ದರೆ ಅದು ಮಾಝಾ ಪ್ರದೇಶದಲ್ಲಿ ಆಪ್‌ಗೆ ಖಂಡಿತವಾಗಿಯೂ ನೆರವಾಗುತ್ತಿತ್ತು. ಮಾಝಾ ಪ್ರದೇಶದ ಅಮೃತಸರ ಕ್ಷೇತ್ರದಿಂದ ಸಿಧು ಮೂರು ಬಾರಿ ಗೆದ್ದಿದ್ದು, ಸಾಕಷ್ಟು ಪ್ರಭಾವ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News